ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿರ: ತಾಜಾ, ಪ್ರ್ಯಾಕ್ಟಿಕಲ್ ಸಿನಿಮಾ

Last Updated 25 ಜುಲೈ 2019, 19:49 IST
ಅಕ್ಷರ ಗಾತ್ರ

ರಾಜ್‌ ಬಿ. ಶೆಟ್ಟಿ ಮತ್ತು ವರ್ಜಿನಿಯಾ ರಾಡ್ರಿಗಸ್‌ ಅಭಿನಯದ ‘ಮಹಿರ’ದ ಮೂಲಕ ಕನ್ನಡದ ವೀಕ್ಷಕರಿಗೆ ‘ತಾಜಾ ಹಾಗೂ ಪ್ರ್ಯಾಕ್ಟಿಕಲ್‌’ ಸಿನಿಮಾ ಕೊಡುವ ಹುಮ್ಮಸ್ಸಿನಲ್ಲಿ ಇದ್ದಾರೆ ನಿರ್ದೇಶಕ ಮಹೇಶ್ ಗೌಡ.

ಇದು ಇವರ ಮೊದಲ ಚಿತ್ರ. ಲಂಡನ್‌ ಫಿಲಂ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಮಹೇಶ್ ಅವರಿಗೆ ‘ಮಹಿರ’ ಕನಸಿನ ಕೂಸು ಕೂಡ ಹೌದು. ‘ಸಿನಿಮಾ ಪುರವಣಿ’ ಜೊತೆಗಿನ ಮಾತುಕತೆಯಲ್ಲಿ ಅವರು ‘ಮಹಿರ’ದ ತೆರೆಯ ಹಿಂದಿನ ಕಥೆಯನ್ನು ತೆರೆದಿಟ್ಟಿದ್ದಾರೆ.

‘ಚಿತ್ರದ ನಿರ್ಮಾಪಕ ವಿವೇಕ್‌ ಕೋಡಪ್ಪ 2010ರಿಂದಲೂ ನನ್ನ ಆತ್ಮೀಯರು ಗೆಳೆಯ. 2013ರಲ್ಲಿ ನಾನು ಲಂಡನ್ನಿನಲ್ಲಿ ಕೋರ್ಸ್‌ ಪೂರ್ಣಗೊಳಿಸಿ ಭಾರತಕ್ಕೆ ಮರಳುವ ಸಂದರ್ಭದಲ್ಲಿ ಅವರು ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದ್ದರು. ಆದರೆ ಆಗ ನನಗೆ ಸಿನಿಮಾ ಮಾಡುವ ಅನುಭವ ಇರಲಿಲ್ಲ. ಹಾಗಾಗಿ ತುಸು ಕಾಯೋಣ ಎಂದು ಹೇಳಿದ್ದೆ’ ಎನ್ನುತ್ತ ತಮ್ಮ ಸಿನಿಮಾದ ಆರಂಭದ ದಿನಗಳನ್ನು ನೆನಪಿಸಿಕೊಂಡರು.

ಮಹೇಶ್ ಅವರು ಭಾರತಕ್ಕೆ ಬಂದ ನಂತರ, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಜೊತೆ ಸಹಾಯಕ ಆಗಿ ಕೆಲಸ ಮಾಡಿದರು. ಸಿನಿಮಾ ಮಾಡುವ ಅನುಭವ ಸಂಪಾದಿಸಿಕೊಂಡರು. ನಂತರ ಕೆಲವು ಕಿರುಚಿತ್ರಗಳನ್ನು ಮಾಡಿದರು. ತಾವು ಒಂದು ಚಲನಚಿತ್ರ ನಿರ್ದೇಶನ ಮಾಡಬೇಕು ಎಂದು ತೀರ್ಮಾನಿಸಿದ ನಂತರ ಕೆಲವು ಕಥೆಗಳನ್ನು ಸಿದ್ಧಪಡಿಸಿಕೊಂಡು, ನಿರ್ಮಾಪಕರ ಭೇಟಿಯ ಕೆಲಸ ಶುರು ಮಾಡಿದರು. ಆದರೆ, ಯಾವುದೂ ಮುಂದೆ ಸಾಗಲಿಲ್ಲ. ಆ ಹೊತ್ತಿನಲ್ಲಿ ವಿವೇಕ್‌ ಜೊತೆ ಮಾತನಾಡಿ, ‘ಮಹಿರ’ ಸಿನಿಮಾ ನಿರ್ಮಾಣಕ್ಕೆ ಒಪ್ಪಿಸಿದರು.

‘ಈ ಕಥೆ ನನ್ನದೇ. ಆದರೆ ಇದರಲ್ಲಿ, ವಿವೇಕ್‌ ಅವರ ಸಲಹೆ, ಅನಿಸಿಕೆಗಳ ಪ್ರಭಾವ ಇದ್ದೇ ಇದೆ’ ಎಂದರು ಮಹೇಶ್.

ವರ್ಜಿನಿಯಾ ಮತ್ತು ರಾಜ್ ಆಯ್ಕೆ

ರಾಜ್‌ ಮತ್ತು ಮಹೇಶ್‌ ಆತ್ಮೀಯ ಗೆಳೆಯರು. ಆದರೆ ‘ಮಹಿರ’ ಕಥೆ ಸಿದ್ಧವಾದ ಸಂದರ್ಭದಲ್ಲಿ ಮಹೇಶ್ ಮನಸ್ಸಿನಲ್ಲಿ ರಾಜ್ ಇರಲಿಲ್ಲ. ‘ನಮ್ಮಲ್ಲಿ ಎರಡು ಬಗೆಯ ಅಭ್ಯಾಸಗಳಿವೆ. ಕಲಾವಿದರನ್ನು ಆಯ್ಕೆ ಮಾಡಿಕೊಂಡು, ಅವರಿಗೆ ಸೂಕ್ತವಾದ ಕಥೆ ಹೆಣೆಯುವುದು ಒಂದು. ಕಥೆಯನ್ನು ಅಂತಿಮಗೊಳಿಸಿಕೊಂಡು ಅದಕ್ಕೆ ಸೂಕ್ತವಾದ ಕಲಾವಿದರನ್ನು ಹುಡುಕುವುದು ಇನ್ನೊಂದು. ನಾವು ಹೊಸಬರಾದ ಕಾರಣ ದೊಡ್ಡ ಕಲಾವಿದರನ್ನು ಸೆಳೆಯುವುದರತ್ತ ಮುಖ ಮಾಡಲಿಲ್ಲ. ಕಥೆ ಸಿದ್ಧಪಡಿಸಿಕೊಂಡು, ಅದಕ್ಕೆ ಅಗತ್ಯವಿರುವ ಪಾತ್ರಧಾರಿಗಳನ್ನು ಹುಡುಕುವಾಗ, ರಾಜ್‌ ಅವರು ಒಂದು ಪಾತ್ರಕ್ಕೆ ಸೂಕ್ತ ವ್ಯಕ್ತಿ ಅನ್ನಿಸಿತು’ ಎಂದರು ಮಹೇಶ್.

ಆ ವೇಳೆಗೆ ರಾಜ್‌ ಅವರ ‘ಒಂದು ಮೊಟ್ಟೆಯ ಕಥೆ’ ಸಿನಿಮಾ ತೆರೆಗೆ ಬಂದು, ಯಶಸ್ಸು ಕಂಡಾಗಿತ್ತು. ಜನ ರಾಜ್ ಅವರ ಹೆಸರು ಪ್ರಸ್ತಾಪ ಆದ ತಕ್ಷಣ ‘ಮೊಟ್ಟೆಯ ಕಥೆ’ ಸಿನಿಮಾ ನೆನಪಿಸಿಕೊಳ್ಳುತ್ತಿದ್ದರು. ಆ ಸಿನಿಮಾದಲ್ಲಿ ರಾಜ್ ಕಟ್ಟಿಕೊಂಡಿದ್ದ ಇಮೇಜ್‌ಅನ್ನು ಮೀರಿ, ಈ ಸಿನಿಮಾದಲ್ಲಿ ಅವರ ಪಾತ್ರ ಕಟ್ಟಬೇಕಿತ್ತು. ‘ರಾಜ್ ಅವರು ಒಳ್ಳೆಯ ನಿರ್ದೇಶಕ ಹಾಗೂ ನಟ. ಅವರು ಬೇರೆ ಬೇರೆ ಬಗೆಯ ಪಾತ್ರಗಳನ್ನು ನಿಭಾಯಿಸಬಲ್ಲರು ಎಂಬುದನ್ನು ನಾನು ತೋರಿಸಬೇಕಿತ್ತು. ಹಾಗಾಗಿ, ಆ ಸಿನಿಮಾದ (ಮೊಟ್ಟೆಯ ಕಥೆ) ಯಾವ ಅಂಶಗಳನ್ನೂ ಬಳಸಿಕೊಳ್ಳದೆ, ದೈಹಿಕವಾಗಿ ಸಶಕ್ತನಲ್ಲದಿದ್ದರೂ ಬೌದ್ಧಿಕವಾಗಿ ಬಲಾಢ್ಯನಾದ ವ್ಯಕ್ತಿಯ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದೆ. ಅವರಿಗೆ ತುಸು ಬೇರೆಯ ಲುಕ್ ನೀಡಲಾಯಿತು’ ಎಂದು ನೆನಪಿಸಿಕೊಂಡರು ಮಹೇಶ್.

ರಂಗಭೂಮಿ ಕಲಾವಿದೆ ವರ್ಜಿನಿಯಾ ಅವರಿಗೂ ಮಹೇಶ್ ಅವರಿಗೂ ಪರಿಚಯ ಇರಲಿಲ್ಲ. ಮಹೇಶ್ ಅವರಿಗೆ ಸ್ನೇಹಿತರೊಬ್ಬರು ವರ್ಜಿನಿಯಾ ಬಗ್ಗೆ ತಿಳಿಸಿದರು. ವರ್ಜಿನಿಯಾ ಜೊತೆ ಮಾತುಕತೆ ನಡೆಸಿದ ನಂತರ, ಅವರೆದುರು ಕೆಲವು ಷರತ್ತುಗಳನ್ನು ಇರಿಸಲಾಯಿತು. ಆ್ಯಕ್ಷನ್‌ ದೃಶ್ಯಗಳನ್ನು ನಿಭಾಯಿಸಲು ತರಬೇತಿ ಪಡೆಯಬೇಕು, ಸ್ಟಂಟ್‌ಗಳನ್ನು ಅವರೇ ಮಾಡಬೇಕು. ತರಬೇತಿ ಎರಡು ತಿಂಗಳು ಇರುತ್ತದೆ ಎಂಬುದು ಆ ಷರತ್ತು. ಶ್ರಮಪಟ್ಟು ತರಬೇತಿ ಪಡೆದ ವರ್ಜಿನಿಯಾ, ಸಿನಿಮಾದಲ್ಲಿ ನಟಿಸಲು ಸಿದ್ಧರಾದರು. ಈ ಚಿತ್ರಕ್ಕಾಗಿ ಅವರಿಗೆ ಮಾರ್ಷಲ್‌ ಆರ್ಟ್ಸ್‌ ತರಬೇತಿ ಕೂಡ ನೀಡಲಾಗಿದೆ.

‘ಚಿತ್ರದ ಬಹುಪಾಲು ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಆದರೆ ಅದು ಬೆಂಗಳೂರಿನಲ್ಲಿ ನಡೆದಿದೆ ಎಂಬುದು ವೀಕ್ಷಕರಿಗೆ ಗೊತ್ತಾಗದಂತೆ ಮಾಡಿದ್ದೇವೆ. ಇವತ್ತಿನವರೆಗೆ ಯಾರೂ ಚಿತ್ರೀಕರಿಸದ ರಾಜ್ಯದ ಕೆಲವು ಜಾಗಗಳಿಗೆ ಹೋಗಿ ಚಿತ್ರೀಕರಣ ಮಾಡಿದ್ದೇವೆ’ ಎಂದು ತಮ್ಮ ಸಿನಿಮಾದ ಹೆಚ್ಚುಗಾರಿಕೆ ಬಗ್ಗೆ ಹೇಳಿದರು ಚಿತ್ರದ ಕಪ್ತಾನ.

ಇದು ಅಮ್ಮ–ಮಗಳ ಕಥೆ. ಆದರೆ, ಇದರಲ್ಲಿ ಭಾವುಕ ಕ್ಷಣಗಳು ಇಲ್ಲ. ಇಲ್ಲಿನ ಅಮ್ಮ ಮಾಜಿ ಗೂಢಚಾರಿಣಿ. ಚಿತ್ರದ ಕಥೆ ನಡೆಯುವುದು ಮೂರು ದಿನಗಳ ಅವಧಿಯಲ್ಲಿ. ಆ್ಯಕ್ಷನ್‌ ಇಲ್ಲಿ ಬಹಳಷ್ಟಿದೆ. ಆದರೆ ಕಮರ್ಷಿಯಲ್‌ ಫೈಟ್ಸ್‌ ಇಲ್ಲ. 40–42 ವರ್ಷ ವಯಸ್ಸಿನ ಅಮ್ಮ ತನ್ನಲ್ಲಿರುವ ಶಕ್ತಿ ಬಳಸಿ ಹೋರಾಟ ನಡೆಸುತ್ತಾಳೆ. ಸೇನೆಯವರು ನಡೆಸುವಂತಹ ಫೈಟ್‌ ದೃಶ್ಯಗಳು ಇಲ್ಲಿವೆ. ಮನುಷ್ಯನಿಂದ ಸಾಧ್ಯವಿಲ್ಲದ ಫೈಟ್‌ಗಳನ್ನು ಈ ಸಿನಿಮಾದ ಪಾತ್ರಗಳು ಮಾಡುವುದಿಲ್ಲ. ಇದರಲ್ಲಿ ವ್ಯಕ್ತಿಯನ್ನು ವೈಭವೀಕರಿಸುವ ಫೈಟ್‌ ದೃಶ್ಯ ಇಲ್ಲ. ಮನುಷ್ಯ ಮಾತ್ರಳಾದ ತಾಯಿ ತನ್ನ ಮಗಳಿಗಾಗಿ ಮಾಡುವ ಹೋರಾಟ ಇಲ್ಲಿದೆ.

‘ಆ್ಯಕ್ಷನ್‌ ದೃಶ್ಯಗಳು, ಅಮ್ಮ–ಮಗಳ ವಿಭಿನ್ನ ಚಿತ್ರಕಥೆ ನಮ್ಮ ಸಿನಿಮಾದ ಪ್ರಮುಖ ಅಂಶಗಳು. ಇದರಲ್ಲಿನ ಬಹುತೇಕರು ಹೊಸಬರು. ಹೊಸ ತಂಡವೊಂದು ಕಾರ್ಪೊರೇಟ್‌ ಜಗತ್ತಿನಲ್ಲಿ ಕೆಲಸ ಮಾಡುವಂತೆ ಈ ಸಿನಿಮಾ ಮಾಡಿದೆ. ಇದು ಕೂಡ ಒಂದು ವಿಶೇಷ. ಸಿನಿಮಾ ತಾಜಾ ಆಗಿದೆ, ಬಹಳ ಪ್ರ್ಯಾಕ್ಟಿಕಲ್‌ ಸಿನಿಮಾ ಇದು’ ಎಂದರು ಮಹೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT