ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರ ಕರ್ನಾಟಕ ಭಾಷೆಯಲ್ಲಿ ಒಂದು ಸಿನಿಮಾ ಮಾಡುವಾಸೆ...’

Last Updated 20 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

‘ಹುಬ್ಬಳ್ಳಿ ಜನರ ಜೊತೆ ಪಕ್ಕಾ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ. ಹೀಗೆ ಒಂದು ದಿನ ಉತ್ತರ ಕರ್ನಾಟಕದವರಂತೆ ಪ್ರಬುದ್ಧವಾಗಿ ಮಾತನಾಡುವ ಹಂಬಲ ನನ್ನದು’ ಎನ್ನುತ್ತಾ ಮಾತು ಪ್ರಾರಂಭಿಸಿದರು ನಟಿ ಶ್ರುತಿ ಹರಿಹರನ್.

‘ದಿ ಜ್ಯುವೆಲ್ಲರಿ ಷೋ’ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ನಟಿ ಶ್ರುತಿ ಹರಿಹರನ್ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನಲ್ಲಿ ನಡೆದ ಮೂರು ದಿನಗಳ ಭಾರತೀಯ ಆಭರಣ ಮೇಳದ ಉದ್ಘಾಟಕರಾಗಿ ಆಗಮಿಸಿದಾಗ ‘ಮೆಟ್ರೊ’ ಜೊತೆ ತಮ್ಮ ಸಿನಿ ಪಯಣ ಮತ್ತು ಉತ್ತರ ಕರ್ನಾಟಕದೊಂದಿಗೆ ಅವರಿಗಿರುವ ನಂಟನ್ನು ಬಿಚ್ಚಿಟ್ಟಿದ್ದಾರೆ.

* ಅಂಬಿ ನಿಂಗ್ ವಯಸ್ಸಾಯ್ತೋ ರಿಲೀಸ್ ಆಗಿದೆ. ಅದರ ರಿವಿವ್ ಹೇಗಿದೆ. ಅದರಲ್ಲಿ ನಿಮ್ಮ ಪಾತ್ರದ ಬಗ್ಗೆ ಏನ್ ಹೇಳ್ತಿರಾ?

-ಸಿನಿಮಾ ಖುಷಿ ಕೊಟ್ಟಿದೆ. ನಾನು ಈ ಚಿತ್ರದಲ್ಲಿ ಎಷ್ಟು ಬೇಗ ಕಾಣಿಸಿಕೊಳ್ತೀನೋ, ಅಷ್ಟೇ ಬೇಗ ಹೊರಟು ಹೋಗ್ತೀನಿ. ಆದರೆ ನನ್ನ ಪಾತ್ರ ಜನರ ಮನದಲ್ಲಿ ಉಳಿಯುವಂತದ್ದು.

* ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಏನ್ ಹೇಳ್ತಿರಾ?

–ಸದ್ಯಕ್ಕೆ ಬಿ. ಎಸ್. ಲಿಂಗದೇವರು ಅವರ ನಿರ್ದೇಶನದಲ್ಲಿ ನಟ ರಿಷಿ ಜೊತೆ ಒಂದು ಸಿನಿಮಾ ಸೈನ್ ಮಾಡಿದೀನಿ. ಜೊತೆಗೆ ಆಕಾಶ್ ಶ್ರೀವತ್ಸ್ ನಿರ್ದೇಶನದಲ್ಲಿ ನಟ ರಮೇಶ್ ಅರವಿಂದ್ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿರುವೆ. ಆದಿ ಒಂದು ಸಿನಿಮಾ ರಿಲೀಸ್‌ಗೆ ರೆಡಿಯಾಗ್ತಿದೆ. ಜೊತೆಗೆ ನಾತಿಚರಾಮಿ ಸಿನಿಮಾವನ್ನು ತುಂಬಾ ಇಷ್ಟ ಪಟ್ಟು, ಇಂಡಿಪೆಂಡೆಂಟ್ ಆಗಿ ಮಾಡುತ್ತಿದ್ದೇವೆ. ಆ ಸಿನಿಮಾ ಮಾಮಿನಲ್ಲಿ ಪ್ರದರ್ಶನಗೊಳ್ಳುತ್ತಿದೆ.ಅದಾದ ಮೇಲೆ ಕರ್ನಾಟಕದಲ್ಲಿ ರಿಲೀಸ್ ಆಗತ್ತೆ.

* ನಾತಿಚರಾಮಿ ಹೆಸರು ಮತ್ತು ಸಿನಿಮಾ ವಿಶೇಷತೆ ಏನು?

–ನಾತಿಚರಾಮಿ ಎನ್ನುವುದು ಒಂದು ಸಂಸ್ಕೃತ ಪದ. ಈ ಪದವನ್ನು ಮದುವೆಯ ಸಮಯದಲ್ಲಿ ತೆಗೆದುಕೊಳ್ಳುವ ಶಪಥ ಅಥವಾ ಪ್ರತಿಜ್ಞೆಯಲ್ಲಿ ಬಳಸಲಾಗುತ್ತದೆ. ಇದರ ಅರ್ಥ ನಾವು ಯಾವತ್ತು ಜೊತೆಯಾಗಿರೋಣ, ಎಂದಿಗೂ ದೂರಾಗಬಾರದು ಎಂದು ಮದುವೆಯಾಗುವ ಗಂಡು, ಹೆಣ್ಣು ಪರಸ್ಪರ ಹೇಳಿಕೊಳ್ಳುವ ಪದ. ಧರ್ಮೇಚ, ಕಾಮೇಚ, ಅರ್ಥೇಚ, ನಾತಿಚರಾಮಿ ಎನ್ನುವ ವಾಕ್ಯದಲ್ಲಿ ಬರುವಂತ ನಾತಿಚರಾಮಿ ಪದವನ್ನು ನನ್ನ ಮುಂದಿನ ಸಿನಿಮಾದಲ್ಲಿ ಬಳಸಲಾಗಿದೆ.

* ಹುಬ್ಬಳ್ಳಿ-ಧಾರವಾಡ ಎಂದರೆ ನಿಮಗೆ ನೆನಪಾಗುವುದು...

–ರಾಟೆ ಸಿನಿಮಾ. ನನಗೆ ಹುಬ್ಬಳ್ಳಿ-ಧಾರವಾಡ ಅಂದ ತಕ್ಷಣ ಥಟ್ ಅಂತ ತಲೇಲಿ ಹೊಳೆಯೋದು ಅಂದ್ರೆ ರಾಟೆ ಸಿನಿಮಾ ಶೂಟಿಂಗ್ ಮತ್ತು ಇಲ್ಲಿನ ಖಾನಾವಳಿ ಊಟ. ಅದರಲ್ಲೂ ಸ್ಪೇಷಲ್ ಆಗಿ ಖಡಕ್ ರೊಟ್ಟಿ ಮತ್ತು ಬದನೆಕಾಯಿ ಎಣ್ಣೆಗಾಯಿ ಅಂದ್ರೆ ಹೊಟ್ಟೆ ಎರಡಾಗುತ್ತೆ. ಇನ್ನೊಂದು ನೆನಪು ಹುಬ್ಬಳ್ಳಿ ಜೊತೆಗೆ ಅಂದ್ರೆ ನಾನು, ಶರಣ್ ಸರ್ ಮತ್ತು ಶುಭಾ ಪೂಂಜಾ ಮಾರುತಿ 800 ಪ್ರಮೋಷನ್‌ಗೆ ಬಂದಾಗ ಗಿರ್ಮಿಟ್ ತಿಂದಿದ್ದು ಮರೆಯೋಕಾಗಲ್ಲ. ಸೋ ಹುಬ್ಬಳ್ಳಿ ಅಂದ ತಕ್ಷಣ ನನಗೆ ಊಟದ ಪದಾರ್ಥಗಳೇ ನೆನಪಾಗೋದು ಹೆಚ್ಚು. ಅದನ್ನು ಬಿಟ್ಟರೆ ನಮ್ಮ 28 ದಿನದ ರಾಟೆ ಸಿನಿಮಾ ಶೂಟಿಂಗ್ ನೆನಪುಗಳು.

* ಬೆಂಗಳೂರಿನಲ್ಲಿದ್ದಾಗ ನಿಮಗೆ ಉತ್ತರ ಕರ್ನಾಟಕದ ಬೇಕು ಅನ್ನಿಸಿದ್ರೆ?

–ಬೆಂಗಳೂರಿನಲ್ಲಿ ‘ನವರಂಗ್’ ಪಕ್ಕ ನಳಪಾಕ ಅನ್ನೋ ಹೋಟೆಲ್‌. ಅಲ್ಲಿ ಪಕ್ಕಾ ಉತ್ತರ ಕರ್ನಾಟಕದ ಊಟ ಸಿಗುತ್ತೆ. ಅದಕ್ಕೆ ತಿನ್ಬೇಕು ಅಂತ ಅನ್ನಿಸಿದಾಗ ಸೀದಾ ಹೋಗೋದು ಅಲ್ಲಿಗೇನೆ.

* ಉತ್ತರ ಕರ್ನಾಟಕದ ಕಲಾವಿದರಿಗೆ ಚಂದನವನದಲ್ಲಿ ಅವಕಾಶಗಳು ತುಂಬಾ ಕಡಿಮೆ ಅನ್ನೋ ಆರೋಪ ಇದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

–ಮೊದಲನೆಯದಾಗಿ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರಲ್ಲ. ನಾವು ಅವುಗಳನ್ನು ಹುಡುಕಿಕೊಂಡು ಹೋಗ್ಬೇಕು. ಇಲ್ಲಿಂದ ಹೋದ ಕಲಾವಿದರು ಚಂದನವನದಲ್ಲಿದ್ದು ಅಲ್ಲಿ ಆಗು–ಹೋಗುವ ಪ್ರತಿಯೊಂದು ಅಂಶಗಳನ್ನು ಗ್ರಹಿಸಿ ಮುನ್ನಡೆಯದೇ ಇದ್ದರೆ ಅವರು ಬೆಳೆಯೋದು ಸ್ವಲ್ಪ ಕಷ್ಟ. ಆದರೆ ಈಗ ಕನ್ನಡ ಚಿತ್ರರಂಗದ ಚಿತ್ರಣವೇ ಬದಲಾಗಿದೆ. ಇಲ್ಲಿ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ತುಂಬಾ ಅವಕಾಶಗಳಿವೆ. ಪ್ರಸ್ತುತ ರೂಲ್ಸ್ ಆಫ್ ಬ್ಯೂಟಿ ಆಂಡ್ ಕಲರ್ ಹಾವ್ ಬಿನ್ ಚೆಂಜ್ಡ್. ನನ್ನ ಪ್ರಕಾರ ಉತ್ತರ ಕರ್ನಾಟಕದ ಮಹಿಳಾ ಮಣಿಗಳು ತುಂಬಾ ಸುಂದರವಾಗಿರ್ತಾರೆ. ಜೊತೆಗೆ ತುಂಬಾ ಸ್ಮಾರ್ಟ್ ಮತ್ತು ಬೋಲ್ಡ್ ಆಗಿರ್ತಾರೆ.ಅದಕ್ಕೆ ಅವಕಾಶಗಳು ಇಲ್ಲ ಅಂತ ಅಲ್ಲೇ ಕುಳಿತುಕೊಳ್ಳದೇ ಅವಕಾಶಗಳನ್ನು ಅರಸುತ್ತಾ ಮುಂದುವರಿಯಬೇಕು. ನಮ್ಮ ಇಂಡಸ್ಟ್ರಿ ಉತ್ತರ ಕರ್ನಾಟಕದ ಕಲಾವಿದರಿಗೆ ಸಪೋರ್ಟ್ ಮಾಡಬೇಕು, ಮಾಡೇ ಮಾಡುತ್ತೆ.

* ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್, ಇಷ್ಟವಾದ ಉಡುಪು...

–ಬಟ್ಟೆ ಯಾವುದೇ ಆಗಿರಲಿ, ಅದನ್ನು ಹಾಕಿಕೊಂಡ ಮೇಲೆ ನಮಗೆ ಕಂಫರ್ಟ್ ಆದ್ರೆ ಸಾಕು. ನಾನು ಹೊಸ ಟ್ರೆಂಡ್ ಫಾಲೋ ಮಾಡ್ತೀನಿ, ಆದರೆ ಅದು ನನಗೆ ಒಪ್ಪಿಗೆಯಾದ್ರೆ ಮಾತ್ರ. ಇಳಕಲ್ ಸೀರೆ ಅಂದ್ರೆ ತುಂಬಾ ಇಷ್ಟ. ಹೀಗಾಗಿ ಇತ್ತೀಚೆಗೆ ಇಳಕಲ್‌ಗೆ ಬಂದು, ಸೀರೆ ಖರೀದಿ ಮಾಡಿದ್ದು ಇದೆ.

* ಹ್ಯಾಂಡಲೂಮ್ ಬಗ್ಗೆ ನಿಮ್ಮ ಅಭಿಪ್ರಾಯ...

–ಇಳಕಲ್ ಸೀರೆಗೆ ಮೆರುಗು ತರುವ ಹ್ಯಾಂಡ್‌ಲೂಮ್ ಮತ್ತೆ ನೇಕಾರಿಕೆಯನ್ನು ವೃತ್ತಿಯನ್ನಾಗಿ ಆಯ್ದುಕೊಂಡ ಅನೇಕರ ಕಷ್ಟ, ದುಃಖವನ್ನು ನಾನು ಇಳಕಲ್‌ಗೆ ಹೋದಾಗ ಕಣ್ಣಾರೆ ಕಂಡಿದ್ದೇನೆ. ಪವರ್‌ಲೂಮ್ ಹ್ಯಾಂಡ್‌ಲೂಮ್ ಅನ್ನು ಪಕ್ಕಕ್ಕೆ ತಳ್ಳಿದೆ ಎನ್ನುವುದು ನಿಜ. ಆದರೆ ಹ್ಯಾಂಡ್‌ಲೂಮ್ ನೇಕಾರಿಕೆಯನ್ನು ಜೀವಂತವಾಗಿಡಲು ಪ್ರಯತ್ನಿಸುವ ಜನರು ಇನ್ನೂ ಇದ್ದಾರೆ. ಅವರನ್ನು ನೋಡಿದ್ರೆ ಹೆಮ್ಮೆ ಆಗತ್ತೆ.

* ಯಾವ ಯಾವ ಭಾಷೆ ಸಿನಿಮಾ ಮಾಡಲು ಇಷ್ಟಪಡ್ತೀರಾ?

–ನಾನು ಕನ್ನಡದಲ್ಲಿ ತುಂಬಾ ಕಂಫರ್ಟೆಬಲ್ ಮತ್ತು ಸಟಿಸ್‌ಫೈಡ್ ಆಗಿದೀನಿ. ಕನ್ನಡಕ್ಕಾಗಿಯೇ ಮೊದಲ ಆದ್ಯತೆ. ನನ್ನ ಮೂಲ ಭಾಷೆ ತಮಿಳು. ಅದಕ್ಕೆ ಅವಕಾಶ ಸಿಕ್ಕರೆ ಅಲ್ಲೂ ನಟಿಸಲು ರೆಡಿ.

* ನಿಮ್ಮ ಕನಸಿನ ಪಾತ್ರ...

–ನಾನು ಇಲ್ಲಿಯವರೆಗೂ ತುಂಬಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ನೆಗೆಟಿವ್ ಪಾತ್ರಗಳಿಗೂ ಜೀವ ತುಂಬಿದ್ದೇನೆ. ಆದರೆ ನನ್ನ ಕನಸಿನ ಪಾತ್ರ ಅಂದ್ರೆ ನಾನು ಅಂಗವಿಕಲೆಯಾಗಿ, ಆಸಿಡ್ ಅಟ್ಯಾಕ್ ಸರ್ವೈವರ್ ಆಗಿ ನಟಿಸಬೇಕು ಅನ್ನೋದು. ನಾನು ಯಾವಾಗಲು ಒಂದೇ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳೋಕೆ ಇಷ್ಟಪಡಲ್ಲ. ಹಾಗಾಗಿ ಮೋನೋಟೊನಿ ಯನ್ನು ಬ್ರೇಕ್ ಮಾಡೋಕೆ ಆಸೆ.

* ನಿಮಗೆ ತುಂಬಾ ಖುಷಿ ಕೊಟ್ಟಂತ ಸಿನಿಮಾ...

–ಬ್ಯೂಟಿಫುಲ್ ಮನಸುಗಳು ನನಗೆ ತುಂಬಾ ಖುಷಿ ಕೊಟ್ಟಿದೆ. ಒಬ್ಬ ಕಲಾವಿದೆಯಾಗಿ ನನಗೆ ಪ್ರಯೋಗಾತ್ಮಕ ಮತ್ತು ಚಾಲೆಂಜಿಂಗ್ ಪಾತ್ರಗಳು ತುಂಬಾ ಖುಷಿ ಕೊಡುತ್ತವೆ. ಹೀಗಾಗಿ ನಾನು ಅಂತಹ ಪಾತ್ರಗಳಿಗಾಗಿ ಕಾಯುವೆ.

* ನಿಮ್ಮ ಹವ್ಯಾಸಗಳು, ಫಿಟ್ನೆಸ್ ಮಂತ್ರ ಯಾವುದು?

ಡಾನ್ಸ್, ಸಿನಿಮಾ ನೋಡೋದು ಹವ್ಯಾಸ. ಡಯಟ್ ಫಾಲೋ ಮಾಡಲು ತುಂಬಾ ಪ್ರಯತ್ನ ಮಾಡ್ತೀನಿ. ಆದ್ರೆ ಕೆಲವೊಂದು ಸಾರಿ ನಾನೇ ಮೋಸ ಮಾಡ್ಕೋಳ್ಳೋದು. ನನ್ನ ಹೊಸ ಫಿಟ್ನೆಸ್ ಮಂತ್ರ ಬಾಕ್ಸಿಂಗ್. ಕಳೆದ 15 ದಿನಗಳಿಂದ ಚೆನ್ನೈನಲ್ಲಿ ಬಾಕ್ಸಿಂಗ್ ಟ್ರೈನಿಂಗ್ ತಗೋತಿದೀನಿ. ತುಂಬಾ ಖುಷಿಯಾಗ್ತಿದೆ.

* ಉತ್ತರ ಕರ್ನಾಟಕ ಭಾಷೆಯ ಸಿನಿಮಾ ಮಾಡೋಕೆ ಇಷ್ಟನಾ? ಅವಕಾಶ ಸಿಕ್ಕರೆ ಯಾರ ಜೊತೆ ನಟಿಸ್ತೀರಾ?

–ಅವಕಾಶ ಸಿಕ್ಕರೆ ಖಂಡಿತ ನಾನು ಉತ್ತರ ಕರ್ನಾಟಕ ಭಾಷೆಯಲ್ಲಿ ಸಿನಿಮಾ ಮಾಡುವೆ. ಅದಕ್ಕಾಗಿ ನಾನು ಇಲ್ಲಿಯ ಭಾಷೆಯನ್ನು ಕಲಿತೀನಿ. ಶ್ರುತಿ ಮೇಡಮ್ ಮತ್ತು ಶರಣ್ ಸರ್ ಜೊತೆ ತೆರೆ ಹಂಚಿಕೊಳ್ಳೋಕೆ ಇಷ್ಟ ಪಡುವೆ.

* ಉತ್ತರ ಕರ್ನಾಟಕದ ಕಲಾವಿದರಿಗೆ ನಿಮ್ಮ ಸಲಹೆ...

ಮೊದಲು ನಿಮ್ಮ ಕನಸುಗಳಿಗೆ ಜೀವ ತುಂಬಿ. ಇಂಡಸ್ಟ್ರಿಗೆ ಬನ್ನಿ. ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿ. ಯಾವತ್ತು ಎದೆಗುಂದದಿರಿ. ನಿಮ್ಮ ಹತ್ತಿರ ಒಳ್ಳೆ ಟ್ಯಾಲೆಂಟ್ ಇದ್ರೆ ಚಂದನವನ ನಿಮ್ಮನ್ನು ಅಪ್ಪಿಕೊಳ್ಳುತ್ತೆ. ಅವಕಾಶಗಳು ಸಿಗಲ್ಲ ಅಂತ ನೀವೇ ನಿರ್ಧಾರ ಮಾಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT