ಸೋಮವಾರ, ಮೇ 17, 2021
23 °C

ಪೀಚಲು ಯುವಕ ‘ಸಂಜು’ಗೆ ಸಜ್ಜಾದ ಬಗೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಪ್ರಾಸ್ತೆಟಿಕ್ ಕಲಾವಿದ (ಕೃತಕ ಅವಯವಗಳನ್ನು ಮನುಷ್ಯರ ದೇಹಕ್ಕೆ ಅಳವಡಿಸಬಲ್ಲ ಪರಿಣತ)ಡಾ. ಸುರೇಶ್ ಮುರ್ಕಿ ಹಾಗೂ ಹೇರ್ ಸ್ಟೈಲಿಸ್ಟ್ ಆಲೀಂ ಹಕೀಂ ಇಬ್ಬರೂ ರಣಬೀರ್ ಕಪೂರ್ ಅವರನ್ನು ನೋಡಿದರು. ರಣಬೀರ್ ಮುಖದ ಅಳತೆಯನ್ನು ಸುರೇಶ್ ತೆಗೆದುಕೊಂಡರು. ದವಡೆಯ ಭಾಗದ ಉದ್ದವೆಷ್ಟು, ಮೂಗಿನ ಅಳತೆಯೇನು ಎನ್ನುವುದೆಲ್ಲ ಅವರಿಗೆ ಮುಖ್ಯವಾಗಿತ್ತು.

ಅವರ ಕೈಲಿ ನಟ ಸಂಜಯ್ ದತ್ ಫೋಟೊಗಳಿದ್ದವು. ಆ ಚಹರೆಗೆ ಹೊಂದುವಂತೆ ರಣಬೀರ್ ಕಪೂರ್ ಮುಖವನ್ನು ಮಾರ್ಪಡಿಸುವ ಸವಾಲು. ದವಡೆಯ ಮೇಲ್ಭಾಗದಲ್ಲಿ ತುಸು ಉಬ್ಬುವಂತೆ ಮಾಡುವುದು, ಕಣ್ಣಿನ ಕೆಳಗಿನ ಭಾಗಗಳಲ್ಲಿ ಒಂದಿಷ್ಟು ಮಾಂಸಲವಾಗುವಂತೆ ಮಾಡುವುದು, ಕೆನ್ನೆಗಳನ್ನು ಹೆಚ್ಚು ಉಬ್ಬಿಸುವುದು ಇಂಥ ಸವಾಲುಗಳು ಅವರಿಗೆ. 

ಇನ್ನು ಆಲೀಂ ಹಕೀಂ ವಿಚಾರ. ಅವರು ಮೇಜಿನ ಮೇಲೆ ಕೆಲವು ಫೋಟೊಗಳನ್ನಿಟ್ಟರು. ಅದರಲ್ಲಿ ಸುನಿಲ್ ದತ್ ನಟರಾಗಿದ್ದ ಕಾಲದಲ್ಲಿ ಕೂದಲನ್ನು ಕತ್ತರಿಸಿದ ವ್ಯಕ್ತಿಯ ಫೋಟೊ ಇತ್ತು. ಅವರೇ ಆಲೀಂ ಹಕೀಂ ಅವರ ಅಪ್ಪ; ಹಕೀಂ ಕೈರಾನ್ವಿ. ಸಂಜಯ್ ದತ್ 1981ರಲ್ಲಿ ‘ರಾಕಿ’ ಸಿನಿಮಾದಲ್ಲಿ ನಟಿಸಿದ್ದರಲ್ಲ; ಆಗ ಅವರಿಗೂ ಹೇರ್ ಸ್ಟೈಲಿಸ್ಟ್ ಆಗಿದ್ದವರು ಹಕೀಂ ಕೈರಾನ್ವಿ ಇಂಥ ಹಿನ್ನೆಲೆಯ ಆಲೀಂ ಅವರಿಗೆ ಮತ್ತೆ ತಮ್ಮ ತಂದೆ ಮಾಡಿದ ಕೆಲಸವೇ ಒದಗಿಬಂದಾಗ ಏನೋ ಖುಷಿ. ‘ರಾಕಿ’ ಸಿನಿಮಾ ಕಾಲದ ನೀಳಕೂದಲನ್ನು ತಾವೇ ಬಿಡುವುದಾಗಿ ರಣಬೀರ್ ಕಪೂರ್ ಹೇಳಿದರು. ಉಳಿದ ಕಾಲಘಟ್ಟದ ಎಲ್ಲಾ ಕೇಶವಿನ್ಯಾಸಕ್ಕೂ ವಿಗ್‌ಗಳನ್ನು ತಯಾರಿಸಲು ಆಲೀಂ ಹಕೀಂ ಒಪ್ಪಿಕೊಂಡರು.

ಸುರೇಶ್ ಮುರ್ಕಿ ಅವರು ಸಂಜಯ್ ದತ್ ಅವರನ್ನು ಖುದ್ದು ನೋಡಿಯೇ ಇರಲಿಲ್ಲ. ಆದರೂ ರಣಬೀರ್ ಚಹರೆಯನ್ನು ಥೇಟ್ ಅವರಂತೆಯೇ ಬದಲಿಸಿಬಿಟ್ಟರು. ಮೂವತ್ತಕ್ಕೂ ಹೆಚ್ಚು ಜನರ ಶ್ರಮ ರಣಬೀರ್ ಚಹರೆ ಹಾಗೂ ಕೇಶ ಪರಿವರ್ತನೆಯಲ್ಲಿ ಇದೆ. ಆ ತಂಡಗಳ ಉಸ್ತುವಾರಿ ವಹಿಸಿದ್ದ ಆಲೀಂ ಹಾಗೂ ಸುರೇಶ್ ಮುರ್ಕಿ ಇಬ್ಬರೂ ಈಗ ಸುದ್ದಿಯಲ್ಲಿದ್ದಾರೆ.

ಮುಖದ ಕಥೆಯೇನೋ ಆಯಿತು. ದೇಹದ ಕಥೆಯೇನು? ತಮ್ಮ ಪಾತ್ರಕ್ಕೆ ರಣಬೀರ್ ಕಪೂರ್ ಆಯ್ಕೆಯಾಗಿದ್ದಾರೆ ಎಂಬ ವಿಷಯ ಗೊತ್ತಾದಾಗ ಸಂಜಯ್ ದತ್ ಹುಳ್ಳಗೆ ನಕ್ಕಿದ್ದರು. ಯಾಕೆಂದರೆ, ರಣಬೀರ್ ನೋಡಲು ಪೀಚು ಪೀಚಾಗಿದ್ದರು. ದೇಹತೂಕ 70 ಕೆ.ಜಿಗೂ ಕಡಿಮೆ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಆಗ ಕರೆಸಿದ್ದು ಕುನಾಲ್ ಗಿರ್ ಅವರನ್ನು. ಫಿಟ್‌ನೆಸ್ ತರಬೇತುದಾರ ಕುನಾಲ್ ಬಾಲಿವುಡ್ ನಟರ ದೇಹಗಳನ್ನು ಹುರಿಗಟ್ಟಿಸುವುದರಲ್ಲಿ, ದೇಹಾಕಾರ ಬದಲಿಸುವುದರಲ್ಲಿ ಸಿದ್ಧಹಸ್ತರು. ದೇಹಾಕಾರದ ಮಾರ್ಪಾಟಿಗೆ ಅಗತ್ಯ ಪಥ್ಯಾಹಾರದ ಅರಿವೂ ಅವರಿಗೆ ಇದೆ. ರಣಬೀರ್ 13 ಕೆ.ಜಿ. ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ಕೊಬ್ಬು ಕಡಿಮೆ, ಪ್ರೊಟೀನ್ ಜಾಸ್ತಿ ಇರುವ ಆಹಾರ ಸೇವನೆಯ ಪ್ರಮಾಣವನ್ನು ಹೆಚ್ಚಿಸಿದರು. ರಾತ್ರಿ 3 ಗಂಟೆಗೆ ಎದ್ದು ಒಂದು ಲೋಟ ಪ್ರೊಟೀನ್ ಪೇಯ ಕುಡಿಯುವುದೂ ಪಥ್ಯದ ಭಾಗ. ಕುನಾಲ್ ತಾವೇ ಫೋನ್ ಮಾಡಿ, ರಣಬೀರ್ ಕಪೂರ್ ಅವರನ್ನು ಅದಕ್ಕಾಗಿ ಎಬ್ಬಿಸುತ್ತಿದ್ದರು.

ಪ್ರತಿದಿನ ಒಂದೂವರೆ ತಾಸು ವ್ಯಾಯಾಮ ಮಾಡಿ, ಭುಜಗಳ ಆಕಾರ ಹಿಗ್ಗಿಸಿಕೊಂಡ ರಣಬೀರ್, ನಡೆ–ನುಡಿಯಲ್ಲೂ ಸಂಜಯ್ ದತ್ ಅವರನ್ನು ಅನುಕರಿಸಬೇಕಿತ್ತು. ಸುಮಾರು 200 ತಾಸುಗಳಷ್ಟು ರೆಕಾರ್ಡೆಡ್ ಮಾತನ್ನು ಆಲಿಸಿದರು. ಸಂಜಯ್ ದತ್ ಭಾಷೆ, ಶೈಲಿಯನ್ನು ತಲೆಯೊಳಗೆ ತುಂಬಿಕೊಳ್ಳಲು ಅದು ಅನಿವಾರ್ಯವಿತ್ತು.

‘ಸಂಜು’ ಹಿಂದಿ ಸಿನಿಮಾದ ಮೊದಲ ಟ್ರೇಲರ್ ಬಿಡುಗಡೆಯಾದ ಮೇಲೆ ಖುದ್ದು ಸಂಜಯ್ ದತ್ ಮುಖಭಾವ ಬದಲಾಯಿತು. ರಣಬೀರ್ ಕಪೂರ್ ನಡೆ–ನುಡಿ, ದೇಹಾಕಾರ ಅವರನ್ನೇ ಹೋಲುವಂತಾಗಿತ್ತು.

ಸಿನಿಮಾದ ಗಟ್ಟಿತನ–ಟೊಳ್ಳಿನ ವಿಷಯಗಳೇನೇ ಇರಲಿ; ನಟನೊಬ್ಬನ ಪಾತ್ರಪ್ರೀತಿಗೆ ಗಟ್ಟಿ ಉದಾಹರಣೆಯಾಗಿ ಈಗ ರಣಬೀರ್ ಕಪೂರ್ ಕಾಣುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು