ಮಂಗಳವಾರ, ಡಿಸೆಂಬರ್ 7, 2021
27 °C

ಗೋವಿಂದನಿಗೊಬ್ಬಳು ಪದ್ಮಾವತಿ: ನಟಿ ಭಾವನಾ ಮೆನನ್‌ ಸಂದರ್ಶನ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

‘ಜಾಕಿ’ ಸಿನಿಮಾದ ಮೂಲಕ ಚಂದನವನ ಪ್ರವೇಶಿಸಿದ ಮಲಯಾಳಂ ತಾರೆ ಭಾವನಾ ಮೆನನ್‌ ಅವರಿಗೆ ಕನ್ನಡ ಚಿತ್ರಗಳಲ್ಲಿ ಸರಣಿ ಅವಕಾಶಗಳು ತೆರೆದಿವೆ. ಚಂದನವನದ ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆಯ ಅವರು, ಈಗ ‘ಗೋವಿಂದ ಗೋವಿಂದ’ದ ಪದ್ಮಾವತಿಯಾಗಿ ಮತ್ತೆ ಬಂದಿದ್ದಾರೆ. ಹೇಗಿದ್ದಾಳೆ ಈ ಪದ್ಮಾವತಿ ಎಂದು ತಿಳಿಯುವ ಕುತೂಹಲ ಸಿನಿಮಾ ಪುರವಣಿಯದ್ದು.

***

ಕಾರ್ತಿಕಾ ಮೆನನ್‌ನಿಂದ ಭಾವನಾ ಮೆನನ್‌ ಆದವರೆಗಿನ ಪ್ರಯಾಣ ನೆನಪಿಸುವುದಾದರೆ?
ಹೌದು, ಇದೊಂದು ದೀರ್ಘ ಪ್ರಯಾಣ. ಮಲಯಾಳಂನ ನಮ್ಮಳ್ ಸಿನಿಮಾದ ಬಳಿಕ ಸಾಕಷ್ಟು ಅವಕಾಶಗಳು ಬರುತ್ತಿದ್ದವು. ಆಗ ನನ್ನ ನಿರ್ದೇಶಕರು ತೆರೆಯ ಮೇಲಿನ ನನ್ನ ಹೆಸರನ್ನು ಬದಲಾಯಿಸಬೇಕು ಎಂದು ಬಯಸಿದರು. ಕೊನೆಗೆ ಎಲ್ಲರೂ ಭಾವನಾ ಎಂಬ ಹೆಸರನ್ನು ಇಷ್ಟಪಟ್ಟರು. ಹಾಗೆ ಭಾವನಾ ಹೆಸರು ಮುಂದುವರಿದಿದೆ. ಇದುವರೆಗೆ 83ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ.

‘ನಮ್ಮಳ್‌’ನ ಪರಿಮಳ ಪಾತ್ರದಿಂದ ‘ಗೋವಿಂದ ಗೋವಿಂದ’ದ ಪದ್ಮಾವತಿವರೆಗೆ ವೃತ್ತಿಬದುಕು ಹೇಗಿದೆ?
ಈ ಕ್ಷೇತ್ರದಲ್ಲಿ ಸಾಕಷ್ಟು ಕಲಿತಿದ್ದೇನೆ. ಒಳ್ಳೆಯ ಹೆಸರು, ಅವಕಾಶಗಳು ಬಂದಿವೆ. ಪ್ರಶಸ್ತಿಗಳೂ ಬಂದಿವೆ. ವೃತ್ತಿಬದುಕಿನಲ್ಲಿ ಏಳುಬೀಳು ಎರಡನ್ನೂ ಕಂಡಿದ್ದೇನೆ. ಅದೆಲ್ಲಾ ದೊಡ್ಡ ಕತೆಗಳು. ಎಲ್ಲರ ಬದುಕಿನಲ್ಲೂ ಇದ್ದದ್ದೇ ಅಲ್ವಾ?

ಕುಟುಂಬದ ಬೆಂಬಲ ಹೇಗಿದೆ?
ನನ್ನ ಅಪ್ಪ ಸಿನೆಮಾಟೋಗ್ರಾಫರ್‌ ಆಗಿದ್ದರು. ಅವರಿಗೆ ಈ ಕ್ಷೇತ್ರ ಚೆನ್ನಾಗಿ ಗೊತ್ತಿತ್ತು. ಅಪ್ಪ ಈಗ ಇಲ್ಲ. ಅಮ್ಮ, ಅಣ್ಣನ ಪ್ರೋತ್ಸಾಹ ನಿರಂತರವಾಗಿದೆ.

ಚಂದನವನದಲ್ಲಿ ವೃತ್ತಿ ಅನುಭವ ಹೇಗೆ?
ತುಂಬಾ ಒಳ್ಳೆಯ ಅನುಭವ ಕೊಟ್ಟಿದೆ. ಜಾಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದೆ. ದಿವಂಗತ ಪುನೀತ್‌ರಾಜ್‌ಕುಮಾರ್‌, ಶಿವಣ್ಣ, ಸುದೀಪ್‌ ಅವರಂಥ ಅನೇಕ ದೊಡ್ಡ ನಟರು ಇಲ್ಲಿ ಪಕ್ಕಾ ವೃತ್ತಿಪರರು. ತುಂಬಾ ಸಹೃದಯಿಗಳು ಇದ್ದಾರೆ. ಹಾಗಾಗಿ ಇಲ್ಲಿ ಕೆಲಸ ಮಾಡುವುದು ಸುಲಭವಾಯಿತು.

ಕನ್ನಡ ಎಷ್ಟು ಕಲಿತಿರಿ?
ಚಂದನವನಕ್ಕೆ ಬರಬೇಕಾದರೆ ಕನ್ನಡ ಕಲಿಯಬೇಕು. ಇನ್ನೂ ಕಲಿಯುತ್ತಿದ್ದೇನೆ. ಕನ್ನಡದಲ್ಲಿ ವ್ಯವಹರಿಸುವಷ್ಟು ಭಾಷಾಜ್ಞಾನ ಇದೆ. ಇನ್ನಷ್ಟು ಸುಧಾರಣೆ ಆಗಬೇಕು. ಸದ್ಯ ಕನ್ನಡದಲ್ಲಿ ನನ್ನ ಪಾತ್ರಕ್ಕೆ ಬೇರೆಯವರು ಕಂಠದಾನ ಮಾಡುತ್ತಿದ್ದಾರೆ.

ತುಂಬಾ ಖುಷಿಕೊಟ್ಟ ಪಾತ್ರ?
ಎಲ್ಲ ಪಾತ್ರಗಳನ್ನು ಪ್ರೀತಿಯಿಂದಲೇ ಇಷ್ಟಪಟ್ಟು ಮಾಡಿದ್ದೇನೆ. ಎಲ್ಲವೂ ಖುಷಿಕೊಟ್ಟಿವೆ. ಭಜರಂಗಿ 2ನ ಚಿನಿಮಿಂಕಿ, ಗೋವಿಂದ ಗೋವಿಂದದ ಪದ್ಮಾವತಿ ಹೀಗೆ ಎಲ್ಲವೂ ಖುಷಿಕೊಟ್ಟಿವೆ.

ಗೋವಿಂದ...ದ ಪದ್ಮಾವತಿ ಹೇಗಿದ್ದಾಳೆ?
ಪದ್ಮಾವತಿ ಒಂದು ಆಸಕ್ತಿಕರ ಪಾತ್ರ. ನಾಯಕಿಯಾದರೂ ಒಂದು ರೀತಿ ಅತಿಥಿ ಪಾತ್ರದ ರೀತಿ ಇದೆ. ಈ ಚಿತ್ರದಲ್ಲಿ ಪದ್ಮಾವತಿಯದು ಒಬ್ಬಳು ನಟಿಯ ಪಾತ್ರ. ತುಂಬಾ ಸರಳ ವ್ಯಕ್ತಿತ್ವದವಳು. ಎರಡು ಕವಲುಗಳಲ್ಲಿ ಕಥೆ ಸಾಗುತ್ತದೆ. ಉಳಿದ ಪಾತ್ರಗಳ ಜೊತೆ ಚಿತ್ರದಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗುತ್ತಾಳೆ. ರೂಪೇಶ್‌ ಶೆಟ್ಟಿಯವರದ್ದು ನಿರ್ದೇಶಕನ ಪಾತ್ರ. ಹೆಚ್ಚು ಮಾತುಕತೆ ನನ್ನ ಅವರ ನಡುವೆ ನಡೆಯುತ್ತದೆ. 

ಕನ್ನಡದಲ್ಲಿ ಮುಂದೆ ಆಫರ್‌ಗಳೇನಾದರೂ ಇವೆಯೇ?
ಕತೆಗಳನ್ನು ಕೇಳುತ್ತಿದ್ದೇನೆ. ಒಳ್ಳೆಯ ಸ್ಕ್ರಿಪ್ಟ್‌, ಪಾತ್ರ ಇದ್ದರೆ ಖಂಡಿತಾ ಅಭಿನಯಿಸುತ್ತೇನೆ. ಸದ್ಯ ‘ಗೋವಿಂದ ಗೋವಿಂದ...’ದ ಬಗ್ಗೆ ಒಳ್ಳೆಯ ನಿರೀಕ್ಷೆ ಇಟ್ಟುಕೊಂಡಿದ್ದೇನೆ.

ಮುಂದಿನ ಕನಸುಗಳು ಏನಿವೆ?
ಒಳ್ಳೆಯ ಪಾತ್ರಗಳನ್ನು ಇನ್ನಷ್ಟು ಚೆನ್ನಾಗಿ ಮಾಡಬೇಕು. ನಿರಂತರ ಕಲಿಕೆ ಇದೆ. ಆಸಕ್ತಿದಾಯಕ ಪಾತ್ರಗಳನ್ನು ನಿರೀಕ್ಷಿಸುತ್ತಿದ್ದೇನೆ. ಒಳ್ಳೆಯ ಸ್ಕ್ರಿಪ್ಟ್‌ಗಳು ಸಿಗಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು