ಮಂಗಳವಾರ, ಜೂನ್ 2, 2020
27 °C

ಅಯ್ಯಪ್ಪನ್, ಕೋಶಿ ಮತ್ತು ಪ್ರತಿಷ್ಠೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ವಪ್ರತಿಷ್ಠೆ ಮನುಷ್ಯನ ಅಧೋಗತಿಗೆ ಕಾರಣವಾಗುವ ಕೆಟ್ಟ ಗುಣಗಳಲ್ಲೊಂದು. ಇದನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಮಾಣವಾಗಿರುವ ಎರಡು ಚಿತ್ರಗಳು ಇತ್ತೀಚೆಗೆ ಮಲಯಾಳ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿವೆ.

ಸಚ್ಚಿ ನಿರ್ದೇಶನದ ‘ಅಯ್ಯಪ್ಪನುಂ ಕೋಶಿಯುಂ’ ಮತ್ತು ಜೀನ್ ಪೌಲ್ ಲಾಲ್ ನಿರ್ದೇಶನದ ‘ಡ್ರೈವಿಂಗ್ ಲೈಸೆನ್ಸ್’ ಪ್ರೇಕ್ಷಕರ ಮನಗೆದ್ದಿರುವ ಚಿತ್ರಗಳಾಗಿವೆ. ಈ ಎರಡರಲ್ಲೂ ಪ್ರಧಾನ ಪಾತ್ರಗಳಲ್ಲಿ ನಟಿಸಿರುವುದು ಪೃಥ್ವಿರಾಜ್.  ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದಲ್ಲಿ ಬಿಜು ಮೆನನ್ ಹಾಗೂ ‘ಡ್ರೈವಿಂಗ್ ಲೈಸೆನ್ಸ್’ ಚಿತ್ರದಲ್ಲಿ ಸೂರಜ್ ವೆಂಞಾರಮೂಡು ಅವರು ಪೃಥ್ವಿರಾಜ್ ಅವರಷ್ಟೇ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಕಥಾವಸ್ತುವಿನ ದೃಷ್ಟಿಯಿಂದ ಈ ಚಿತ್ರಗಳು ಭಿನ್ನವಾಗಿ ಕಂಡುಬಂದರೂ ಇವು ಮನುಷ್ಯನ ಸ್ವಭಾವಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿವೆ. ಇವು ನಾಯಕ ಪ್ರಧಾನವಾದ ಚಿತ್ರಗಳಲ್ಲ. ಇದರಲ್ಲಿ ನಾಯಕ ಯಾರು? ಪ್ರತಿ ನಾಯಕ ಯಾರು ಎಂಬುದನ್ನು ಗೆರೆ ಎಳೆದು ಗುರುತಿಸಲೂ ಸಾಧ್ಯವಿಲ್ಲ‌.

ಇಲ್ಲಿ ಇಬ್ಬರು ವ್ಯಕ್ತಿಗಳ ಪ್ರತಿಷ್ಠೆಗಳ ನಡುವಿನ ಸಂಘರ್ಷವೇ ಮುಖ್ಯವಸ್ತು. ಇದಕ್ಕೆ ಪೂರಕವಾಗಿ ಇತರೇ ಸನ್ನಿವೇಶಗಳು ಮೂಡಿಬಂದಿವೆ.

‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದಲ್ಲಿ ಅಟ್ಟಪಾಡಿ ಎಂಬಲ್ಲಿನ ಪೊಲೀಸ್ ಅಧಿಕಾರಿ ಅಯ್ಯಪ್ಪನ್ ಪಾತ್ರದಲ್ಲಿ ಬಿಜು ಮೆನನ್ ಕಾಣಿಸಿಕೊಂಡಿದ್ದಾರೆ. ಕೋಶಿ ಎಂಬ ಧನಿಕನ ಪಾತ್ರಕ್ಕೆ ಪೃಥ್ವಿರಾಜ್ ಜೀವ ತುಂಬಿದ್ದಾರೆ.

ಮದ್ಯಪಾನ ಮಾಡಿ ಅಟ್ಟಪಾಡಿ ಅಭಯಾರಣ್ಯ ಪ್ರದೇಶದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೋಶಿಯನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಯ್ಯಪ್ಪನ್ ಬಂಧಿಸುತ್ತಾನೆ. ಅಲ್ಲಿಂದ ಕೋಶಿ ಮತ್ತು ಅಯ್ಯಪ್ಪನ್ ನಡುವೆ ಪ್ರತಿಷ್ಠೆಯ ಸಂಘರ್ಷ ಆರಂಭವಾಗುವುದೇ ಈ ಚಿತ್ರದ ಕಥಾಹಂದರ. ಈ ಸಿನಿಮಾ ಅರಣ್ಯದಂಚಿನಲ್ಲಿ ವಾಸಿಸುವ ಬುಡಕಟ್ಟು ಜನರ ಬದುಕಿನ ಮೇಲೂ ಬೆಳಕು ಚೆಲ್ಲುತ್ತದೆ.

‘ಡ್ರೈವಿಂಗ್ ಲೈಸೆನ್ಸ್’ ಚಿತ್ರ ಕೂಡ ಇಂಥದ್ದೇ ಕಥಾಹಂದರ ಹೊಂದಿದೆ. ಸ್ಟಾರ್ ಸಿನಿಮಾ ನಟನೊಬ್ಬ ತನ್ನ ಚಾಲನಾ ಪರವಾನಗಿ ಕಳೆದುಕೊಂಡಿರುತ್ತಾನೆ. ಚಿತ್ರೀಕರಣದ ಅಗತ್ಯಕ್ಕಾಗಿ ಆತ ಮತ್ತೆ ಪರವಾನಗಿ ಪಡೆಯಲು ಪ್ರಯತ್ನಿಸುತ್ತಾನೆ. ಆತನ ಬಹುದೊಡ್ಡ ಅಭಿಮಾನಿಯಾಗಿರುವ ಸಾರಿಗೆ ಅಧಿಕಾರಿಯ ಬಳಿಗೆ ಆತ ಪರವಾನಗಿ ಪಡೆಯಲು ತೆರಳಬೇಕಾಗುತ್ತದೆ. ಅಲ್ಲಿ ನಟನ ವರ್ತನೆಯಿಂದ ಸಾರಿಗೆ ಅಧಿಕಾರಿ ನೊಂದುಕೊಳ್ಳುತ್ತಾನೆ. ಅಲ್ಲಿಂದ ಅವರಿಬ್ಬರ ನಡುವೆ ಪ್ರತಿಷ್ಠೆಯ ಸಂಘರ್ಷ ಆರಂಭವಾಗುವುದು ಇದರ ಹೂರಣ. ಸಾರಿಗೆ ಅಧಿಕಾರಿಯ ಕಾರಣದಿಂದ ಚಾಲನಾ ಪರವಾನಗಿ ಪಡೆಯಲು ಪಡಿಪಾಟಲು ಪಡುವ ಸ್ಟಾರ್ ನಟನ ಬವಣೆಯನ್ನು ನಿರ್ದೇಶಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಹಣ, ಅಧಿಕಾರವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದು ಸುಳ್ಳು ಎಂಬ ಸಂದೇಶವನ್ನೂ ಈ ಎರಡು ಚಿತ್ರಗಳು ನೀಡುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು