ಬುಧವಾರ, ಜುಲೈ 6, 2022
23 °C
ವಿಜಯ್‌ ಅಭಿನಯದ ಕೊನೆಯ ಚಿತ್ರ ತಲೆದಂಡ ಏ.1ಕ್ಕೆ ಬಿಡುಗಡೆ

ಸಂಚಾರಿ ವಿಜಯ್‌ ನೆನೆದು ನಟಿ ಮಂಗಳಾ ಭಾವುಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಿವಂಗತ ನಟ ಸಂಚಾರಿ ವಿಜಯ್‌ ಅಭಿನಯಿಸಿದ ಕೊನೆಯ ಚಿತ್ರ, ಪ್ರವೀಣ್‌ ಕೃಪಾಕರ್‌ ನಿರ್ದೇಶನದ ‘ತಲೆದಂಡ’ ಏ.1ರಂದು ತೆರೆಕಾಣುತ್ತಿದೆ. ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭ ಗುರುವಾರ(ಮಾರ್ಚ್‌ 24) ರೇಣುಕಾಂಬ ಚಿತ್ರಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ, ಚಿತ್ರದಲ್ಲಿ ವಿಜಯ್‌ ತಾಯಿಯ ಪಾತ್ರದಲ್ಲಿ ನಟಿಸಿದ, ‘ಸಂಚಾರಿ’ ತಂಡದ ಮುಖ್ಯಸ್ಥೆ ಮಂಗಳಾ ಅವರು ವಿಜಯ್‌ ನೆನೆದು ಭಾವುಕರಾದರು. ‘ಈ ಸಿನಿಮಾ ಆಕಸ್ಮಿಕವಾಗಿ ದೊರಕಿತು. ‘ಕೇತಮ್ಮ’ನಾಗಿ ಸಂಚಾರಿ ವಿಜಯ್‌ ಅಮ್ಮನ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ನನಗೂ ವಿಜಯ್‌ಗೂ 13 ವರ್ಷದ ಪರಿಚಯ. ನನ್ನ ತಂಡಕ್ಕೆ ಬಂದ ವಿಜಯ್‌ನನ್ನು ನಾನು ಶಿಷ್ಯ ಎನ್ನುವುದಿಲ್ಲ. ಸ್ನೇಹಿತರಾಗಿ ನಾವು ಜೊತೆಗಿದ್ದೆವು. ಪ್ರತಿ ಸಿನಿಮಾದ ಅನುಭವವನ್ನೂ ನನ್ನ ಜೊತೆ ಆತ ಹಂಚಿಕೊಳ್ಳುತ್ತಿದ್ದ. ಈ ಸಿನಿಮಾದ ಕಥೆ ಕೇಳುವಾಗಲೂ ಸಂಚಾರಿ ವಿಜಯ್‌ ಈ ಸಿನಿಮಾದಲ್ಲಿ ಇದ್ದಾನೆ ಎನ್ನುವುದು ನನಗೆ ತಿಳಿದಿರಲಿಲ್ಲ. ಚಿತ್ರೀಕರಣದ ವೇಳೆ 35 ದಿನ ನಾನೂ ವಿಜಯ್‌ ಅಮ್ಮ ಮಗನ ಆಟ ಆಡಿದೆವು’ ಎಂದು ನೆನಪಿಸಿಕೊಂಡರು.

‘ನಾಗರಿಕ ಸಮಾಜ ವಿವೇಕವನ್ನು ಕಳೆದುಕೊಂಡು ಅಭಿವೃದ್ಧಿಯ ಕಡೆ ದಾಪುಗಾಲಿಟ್ಟಿರುವುದು, ಆದಿವಾಸಿ, ಬುಡಕಟ್ಟು ಜನಾಂಗಗಳು ತಮ್ಮ ನೆಲೆಯನ್ನು ಕಳೆದುಕೊಂಡು ವಲಸೆ ಹೋಗುತ್ತಿರುವ ವಿಷಯವನ್ನು ‘ತಲೆದಂಡ’ ಸಿನಿಮಾ ಮಾತನಾಡುತ್ತದೆ. ವಿಜಯ್‌ ಇವತ್ತು ಇರಬೇಕಿತ್ತು. ಈ ಸಿನಿಮಾಗಾಗಿ ಅಷ್ಟೇ ಅಲ್ಲ. ವಿಜಯ್‌ ಮಾಡಬೇಕಿದ್ದ ಕೆಲಸಗಳು ಇನ್ನಷ್ಟು ಇದ್ದವು. ಈಗಷ್ಟೇ ಹೆಜ್ಜೆ ಇಟ್ಟಿದ್ದ. ಅವನು ಇಷ್ಟು ಬೇಗ ನಮ್ಮನ್ನು ಅಗಲಬಾರದಿತ್ತು’ ಎಂದು ಭಾವುಕರಾದರು.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು