ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯನ್ನರಿಗೂ ಗೊತ್ತು ಮನೋಜ್

Last Updated 14 ಮೇ 2020, 19:30 IST
ಅಕ್ಷರ ಗಾತ್ರ

‘ನಾನು ಯಾವ ವೇದಿಕೆ ಮೂಲಕ ಅಭಿನಯಿಸುತ್ತೇನೆ ಎಂಬುದಕ್ಕಿಂತ, ಯಾವ ಪಾತ್ರವನ್ನು ನಿಭಾಯಿಸುತ್ತೇನೆ ಎನ್ನುವುದೇ ನನಗೆ ಯಾವಾಗಲೂ ಮುಖ್ಯವಾಗಿತ್ತು. ಆದರೆ, ಒಟಿಟಿ ವೇದಿಕೆಗಳು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದ ನಂತರ ಸೃಜನಶೀಲ ವ್ಯಕ್ತಿಗಳಿಗೆ ತಮ್ಮ ಗಡಿಗಳನ್ನು ವಿಸ್ತರಿಸಿಕೊಳ್ಳಲು ಅವಕಾಶವಾಗಿದೆ...’

ಹೀಗೆ ಹೇಳಿದವರು ‘ದಿ ಫ್ಯಾಮಿಲಿ ಮ್ಯಾನ್’ ಖ್ಯಾತಿಯ ನಟ ಮನೋಜ್ ಬಾಜಪೇಯಿ. ಇವರು ಈಚೆಗೆ ನೆಟ್‌ಫ್ಲಿಕ್ಸ್‌ನ ‘ಮಿಸ್ಟ್ರೆಸ್ ಸೀರಿಯಲ್ ಕಿಲ್ಲರ್’ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹೂರಣ ಚೆನ್ನಾಗಿ ಇದ್ದರೆ ಒಟಿಟಿಗಳಲ್ಲಿ ಇನ್ನಷ್ಟು ಪಾತ್ರಗಳನ್ನು ನಿಭಾಯಿಸಲು ಸಿದ್ಧ ಎನ್ನುತ್ತಾರೆ ಮನೋಜ್.

‘ಒಟಿಟಿಯಲ್ಲಿ ಮುಕ್ತ ವಾತಾವರಣ ಇದೆ. ಸಾಮರ್ಥ್ಯ ಇರುವ ಎಲ್ಲರಿಗೂ ಇಲ್ಲಿ ಒಂದೊಂದು ಸ್ಥಾನ ಇದೆ. ಸೃಜನಶೀಲ ಮನಸ್ಸು ಇರುವವರು ಈ ವೇದಿಕೆಗೆ ಬಂದು, ಒಂದಿಷ್ಟು ಪ್ರಯೋಗಗಳನ್ನು ಮಾಡಬೇಕು. ಇಲ್ಲಿ ನಿಮ್ಮ ಸಾಮರ್ಥ್ಯ ಅಳೆಯಲು ಗಲ್ಲಾಪೆಟ್ಟಿಗೆ ಇಲ್ಲ. ಯಾವುದೇ ವಿಮರ್ಶಕ ನೀಡುವ ಸ್ಟಾರ್‌ಗಳು ನಿಮ್ಮನ್ನು ತಡೆಯುವುದಿಲ್ಲ’ ಎಂದು ಮನೋಜ್ ಅವರು ಒಟಿಟಿ ಕುರಿತು ಮಾರ್ಮಿಕವಾಗಿ ಹೇಳಿದ್ದಾರೆ.

‘ನಾನು ಅಭಿನಯಿಸಿದ ದಿ ಫ್ಯಾಮಿಲಿ ಮ್ಯಾನ್ ಸರಣಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಕೆಲವು ತಿಂಗಳುಗಳ ಹಿಂದೆ ನಾನು ಆಸ್ಟ್ರೇಲಿಯಾದಲ್ಲಿ ಇದ್ದೆ. ಅಲ್ಲಿನ ಜನ ಕೂಡ ನನ್ನ ಗುರುತು ಹಿಡಿಯಲು ಆರಂಭಿಸಿದ್ದಾರೆ. ಅಂದರೆ ಒಟಿಟಿ ಎಂಬುದು ನಮ್ಮ ವೀಕ್ಷಕರ ನೆಲೆಯನ್ನು ಖಂಡಿತವಾಗಿಯೂ ವಿಸ್ತರಿಸಿದೆ’ ಎಂದು ಅವರು ಕಂಡುಕೊಂಡಿದ್ದಾರೆ.

‘ಮಿಸ್ಟ್ರೆಸ್ ಸೀರಿಯಲ್ ಕಿಲ್ಲರ್’ ಸಿನಿಮಾದಲ್ಲಿ ಮನೋಜ್ ಅವರು ಜಾಕ್ವೆಲಿನ್ ಫರ್ನಾಂಡೀಸ್ ಅವರ ಜೊತೆ ನಟಿಸಿದ್ದಾರೆ. ಈ ಸಿನಿಮಾದ ಕೆಲಸಗಳ ವೇಳೆ ತಮಗೆ ಜಾಕ್ವೆಲಿನ್ ಅವರಲ್ಲಿ ಅಧ್ಯಾತ್ಮದ ಕುರಿತು ಇರುವ ಸೆಳೆತವನ್ನು ಕಂಡುಕೊಳ್ಳಲು ಸಾಧ್ಯವಾಯಿತು ಎಂದು ಮನೋಜ್ ಹೇಳಿದ್ದಾರೆ.

ಇತ್ತ ಜಾಕ್ವೆಲಿನ್ ಅವರು ಮನೋಜ್ ಕುರಿತು ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ‘ಮನೋಜ್ ಜೊತೆ ಕೆಲಸ ಮಾಡಿದ್ದು ನೆನಪಿನಲ್ಲಿ ಉಳಿದುಕೊಳ್ಳುತ್ತದೆ. ಅವರು ನನಗೆ ನಿರಂತರವಾಗಿ ಬೆಂಬಲ ನೀಡಿದ್ದರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT