ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲಿ ಕಥೆ ಬರೆದ ಮಾನ್ವಿತಾ

Last Updated 22 ಮೇ 2020, 6:27 IST
ಅಕ್ಷರ ಗಾತ್ರ

‘ನಾವು ನಟಿಸುವ ಎಲ್ಲಾ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವುದಿಲ್ಲ. ಆದರೆ, ಕಲಾವಿದೆಯಾಗಿ ಸೋಲಬಾರದು ಎಂಬುದಷ್ಟೇ ನನ್ನ ನಿಲುವು. ಈಕೆ ಪಾತ್ರದಿಂದಲೇ ಚಿತ್ರ ಸೋತು ಹೋಯಿತೆಂದು ಪ್ರೇಕ್ಷಕರು ಹೇಳಬಾರದು’

–ಇಷ್ಟನ್ನು ಒಂದೇ ಉಸುರಿಗೆ ಹೇಳಿದರು ನಟಿ ಮಾನ್ವಿತಾ ಹರೀಶ್. ‘ಸಿನಿಮಾ ಗೆಲ್ಲಬೇಕೆಂಬುದು ಎಲ್ಲಾ ಕಲಾವಿದರ ಆಸೆ. ತಲೆಯಲ್ಲಿ ಆ ಆಲೋಚನೆ ಇಟ್ಟುಕೊಂಡೇ ನಟನೆ ಮಾಡುತ್ತೇನೆ’ ಎಂದು ಮಾತು ವಿಸ್ತರಿಸಿದರು.

ಒಂದಕ್ಕಿಂತ ಒಂದು ಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡ ಹಿರಿಮೆ ಅವರದ್ದು. ಮುಗ್ಧ ಹುಡುಗಿಯಾಗಿಯೇ ತೆರೆಯ ಮೇಲೆ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದ್ದ ಮಾನ್ವಿತಾ, ಧೀರೇನ್‌ ನಾಯಕನಾಗಿರುವ ‘ಶಿವ 143’ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟೀವ್‌ ಶೇಡ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಪೂರ್ಣಗೊಂಡಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

‘ನನ್ನ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ಇಂತಹ ಪಾತ್ರಕ್ಕೆ ಬಣ್ಣ ಹಚ್ಚಿರುವೆ. ಕೆಲವು ಸಿನಿಮಾಗಳ ಕಥೆ ಕೇಳುವಾಗ ಅದರ ಪಾತ್ರದ ಬಗ್ಗೆ ನಟ, ನಟಿಗೂ ಉತ್ಸಾಹವಿರುತ್ತದೆ. ಆ ಪಾತ್ರ ಸಿಗಬೇಕೆಂಬ ಹಂಬಲವೂ ಅವರಲ್ಲಿರುತ್ತದೆ. ‘ಶಿವ 143’ಯಲ್ಲಿ ಪಾತ್ರ ಸಿಕ್ಕಿದೆ. ನಟನೆಗೆ ಹೆಚ್ಚು ಒತ್ತು ನೀಡುವ ಸಿನಿಮಾ ಇದು’ ಎಂದು ವಿವರಿಸಿದರು.

ಕನ್ನಡ ಮತ್ತು ಮರಾಠಿಯಲ್ಲಿ ನಿರ್ಮಾಣವಾಗಿರುವ ‘ರಾಜಸ್ಥಾನ್ ಡೈರೀಸ್’ ಸಿನಿಮಾದಲ್ಲೂ ಮಾನ್ವಿತಾ ನಟಿಸಿದ್ದಾರೆ. ಮರಾಠಿ ಅವತರಣಿಕೆಯ ಪಾತ್ರಕ್ಕೆ ಅವರೇ ಡಬ್ಬಿಂಗ್‌ ಮಾಡಿದ್ದಾರಂತೆ. ‘ಈ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿರುವುದು ರಾಜಸ್ಥಾನದಲ್ಲಿಯೇ. ಅದು ವಿಭಿನ್ನ ಛಾಯೆಯ ಪಾತ್ರ. ಮಹತ್ವಾಕಾಂಕ್ಷೆಯ ಹುಡುಗಿಯಾಗಿ ನಟಿಸಿದ್ದೇನೆ’ ಎಂದರು.

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಅವರು ಮನೆಯಲ್ಲಿ ಸುಮ್ಮನೇ ಕುಳಿತಿಲ್ಲವಂತೆ. ಅವರ ಆಲೋಚನೆಗಳಿಗೆ ಕಥೆಯ ರೂಪ ನೀಡಿದ್ದಾರಂತೆ. ‘ಬರವಣಿಗೆ ಎಂದಿಗೂ ಅನುಪಯುಕ್ತವಲ್ಲ. ಭವಿಷ್ಯದಲ್ಲಿ ಉಪಯೋಗಕ್ಕೆ ಬಂದೇ ಬರುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಬರವಣಿಗೆಗೆ ಹೆಚ್ಚಿನ ಒತ್ತು ನೀಡಿದೆ. ಮನಸ್ಸಿನಲ್ಲಿ ಏನು ಹೊಳೆಯುತ್ತದೆಯೇ ಅದನ್ನು ಬರೆದಿಟ್ಟಿರುವೆ. ಎಲ್ಲಾ ಕಲಾವಿದರಿಗೂ ಭವಿಷ್ಯದಲ್ಲಿ ಸಿನಿಮಾ ನಿರ್ದೇಶಿಸಬೇಕು ಎಂಬ ಆಸೆ ಇರುತ್ತದೆ. ಅಲ್ಲದೇ ಈಗ ಬರೆದಿಡುವ ಕಂಟೆಂಟ್‌ ಮುಂದೆ ಒಟಿಟಿ ವೇದಿಕೆಯಲ್ಲೂ ಬಳಸಲು ಅವಕಾಶ ಸಿಗಬಹುದು’ ಎಂದರು ಮಾನ್ವಿತಾ.

ಲಾಕ್‌ಡೌನ್‌ ಅವಧಿಯಲ್ಲಿ ಅವರು ಸಾಕಷ್ಟು ಸ್ಕ್ರಿಪ್ಟ್‌ ಕೇಳಿದ್ದಾರೆ. ಆದರೆ, ಪರದೆ ಮೇಲೆ ಅದನ್ನು ತರಲು ಕೊರೊನಾ ಅಡ್ಡಿಪಡಿಸಿದೆ ಎಂಬುದು ಅವರ ಕೊರಗು. ‘ಪ್ರಸ್ತುತ ಚಿತ್ರೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಿನಿಮಾ ಶುರು ಮಾಡಲು ಆಗುವುದಿಲ್ಲ. ಕನ್ನಡದಲ್ಲಿಯೇ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಸಿನಿಮಾ ಮಾಡಲು ಬಹಳಷ್ಟು ಜನರಿಗೆ ಆಸಕ್ತಿ ಇದೆ. ಆದರೆ, ಎಲ್ಲದ್ದಕ್ಕೂ ಕೊರೊನಾ ಅಡ್ಡಿಪಡಿಸಿದೆ. ಹಾಗಾಗಿ, ಯಾರೊಬ್ಬರು ತೊಂದರೆ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.ನಿರ್ಮಾಪಕರಿಗೆ ಬಂಡವಾಳ ಹೂಡಲು ಕಷ್ಟವಾಗಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT