ಕುತೂಹಲ ‘ಮಟಾಶ್‌’

7

ಕುತೂಹಲ ‘ಮಟಾಶ್‌’

Published:
Updated:
Prajavani

ಚಿತ್ರ: ಮಟಾಶ್‌

ನಿರ್ಮಾಣ, ನಿರ್ದೇಶನ ಮತ್ತು ಸಂಗೀತ: ಎಸ್‌.ಡಿ. ಅರವಿಂದ್‌

ತಾರಾಗಣ: ವಿ. ಮನೋಹರ್‌, ಸಮರ್ಥ್‌ ನರಸಿಂಹರಾಜು, ಐಶ್ವರ್ಯಾ ಶಿಂದೋಗಿ, ರಜನಿ ಭಾರದ್ವಾಜ್‌, ನಂದಗೋಪಾಲ್‌.

ಮನೆಯಲ್ಲಿ ಎರಡು ಕೋಟಿ ರೂಪಾಯಿ ನಗದು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯೊಬ್ಬನಿಗೆ, ಐದುನೂರು ಮತ್ತು ಸಾವಿರ ರೂಪಾಯಿಗಳ ನೋಟುಗಳನ್ನು ಅಚಾನಕ್ಕಾಗಿ ರದ್ದು ಮಾಡಿದ ಘಟನೆ ಶಾಕ್‌ ಕೊಡುತ್ತದೆ. ತನ್ನ ಹಣವನ್ನು ಹೇಗಾದರೂ ‘ಬಿಳಿಯಾಗಿಸಬೇಕು’ ಎಂದು ಆತ ಅಂಡರ್‌ ವರ್ಲ್ಡ್‌ ದೊರೆ ಮಾದೇಶನ (ನಂದಗೋಪಾಲ್‌) ನೆರವು ಕೇಳುತ್ತಾನೆ. ಮಾದೇಶನು ಮಟಾಶ್‌ ಸಹಕಾರ ಬ್ಯಾಂಕ್‌ನ ವ್ಯವಸ್ಥಾಪಕ ಜಗನ್ನಾಥ್‌ (ವಿ. ಮನೋಹರ್‌) ಜೊತೆ ವ್ಯವಹಾರ ಕುದುರಿಸುತ್ತಾನೆ.

ಇಂಥದ್ದೇ ಕಾಳ ದಂಧೆ ನಡೆಸುತ್ತಿದ್ದ ವಿಜಯಪುರ ಜಿಲ್ಲೆಯ ಜನಪ್ರತಿನಿಧಿಯೊಬ್ಬ ಪುತ್ತೂರಿನ ವ್ಯಕ್ತಿಯೊಬ್ಬನ ₹ 50ಲಕ್ಷ ನಗದನ್ನು ಬದಲಿಸಿ ಕೊಡುವ ವ್ಯವಹಾರ ಕುದುರಿಸುತ್ತಾನೆ. ಆದರೆ ಆ ನಗದನ್ನು ಪುತ್ತೂರಿನಿಂದ ವಿಜಯಪುರಕ್ಕೆ ತರುವುದು ಹೇಗೆ? ಹೇಗಾದರೂ ಒಂದಿಷ್ಟು ದುಡ್ಡು ಸಂಪಾದನೆ ಮಾಡಬೇಕು ಎಂದುಕೊಂಡು ಗೋಲ್‌ ಗುಂಬಜ್‌ ಅನ್ನೇ ಮಾರಾಟಕ್ಕಿಟ್ಟು ಜೈಲುಪಾಲಾದ ನಾಲ್ವರು ಯುವಕರನ್ನು ಜನಪ್ರತಿನಿಧಿಯು ಜೈಲಿನಿಂದ ಬಿಡಿಸಿ, ಪುತ್ತೂರಿನಿಂದ ಹಣ ತರಲು ಕಳುಹಿಸುತ್ತಾನೆ. ಆ ತಂಡವು ಹಣವನ್ನು ಲಪಟಾಯಿಸುವ ಯೋಜನೆ ರೂಪಿಸಿ, ಸಕಲೇಶಪುರದ ಹೋಮ್‌ ಸ್ಟೇ ಒಂದರಲ್ಲಿ ಉಳಿಯುತ್ತದೆ.

ಮೈಸೂರಿನಿಂದ ಪಿಕ್‌ನಿಕ್‌ ಹೊರಟ ನಾಲ್ವರು ಯುವಕರ ತಂಡವೊಂದು ಇದೇ ಹೋಮ್‌ ಸ್ಟೇಗೆ ಬರುತ್ತದೆ. ಹಣ ಬದಲಾಯಿಸುವ ದಂಧೆಯಲ್ಲಿರುವ ಮಾದೇಶನ ತಂಡವೂ ಆ ಹೋಮ್‌ ಸ್ಟೇಗೆ ಬಂದು ಸೇರುತ್ತದೆ. ಅಲ್ಲೇನು ನಡೆಯುತ್ತದೆ, ಎರಡು ಕೋಟಿ ರೂಪಾಯಿ ‘ಬಿಳಿಯಾಗಿ’ ವ್ಯಕ್ತಿಯ ಕೈ ಸೇರುತ್ತದೆಯೇ ಎಂಬುದೇ ಸಿನಿಮಾದ ಕಥೆ. ಸಿನಿಮಾದ ಹೆಸರೇ ‘ಮಟಾಶ್‌’ ಆಗಿರುವುದರಿಂದ ಹಣ ಏನಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಹೇಗೆ ಮಟಾಶ್‌ ಆಗುತ್ತದೆ ಎಂಬುದೇ ಪ್ರಶ್ನೆ. ಸಿನಿಮಾದಲ್ಲಿ ಹಣ ಮಟಾಶ್‌ ಆಗುವ ಸನ್ನಿವೇಶ ಮಾತ್ರ ಬಾಲಿಶವಾಗಿ ಕಾಣಿಸುತ್ತದೆ.

ಮಧ್ಯಂತರದವರೆಗೂ ಕಥೆ ನಿಧಾನವಾಗಿ ಸಾಗುತ್ತದೆ. ಪುನೀತ್‌ ಹಾಡಿರುವ ‘ಛಜ್ಜ ರೊಟ್ಟಿ ಚವಳಿಕಾಯಿ...’ ಹಾಡು ಮೊದಲಾರ್ಧದ ಹೈಲೈಟ್‌. ನಡುನಡುವೆ ಬರುವ ಒಂದೆರಡು ಹಾಸ್ಯದ ಸನ್ನಿವೇಶಗಳು ಕಚಗುಳಿ ಇಡುತ್ತವೆ.

ಮಧ್ಯಂತರದ ಬಳಿಕ ಸಿನಿಮಾ ವೇಗ ಪಡೆಯುತ್ತದೆ.  ಹೋಮ್‌ ಸ್ಟೇಗೆ ನಾಯಕಿ (ಐಶ್ವರ್ಯಾ ಶಿಂದೋಗಿ) ಹಾಗೂ ಆಕೆಯ ಗೆಳತಿ (ರಜನಿ ಭಾರದ್ವಾಜ್‌) ಬಂದ ನಂತರ ಕಥೆ ಪಡೆಯುವ ತಿರುವುಗಳು ಆಸಕ್ತಿ ಹುಟ್ಟಿಸುತ್ತವೆ. ವಿಲನ್‌ ಪಾತ್ರದಲ್ಲಿ ನಂದಗೋಪಾಲ್‌, ಹಾಗೂ ಮುಖ್ಯ ಪಾತ್ರದಲ್ಲಿ ಸಮರ್ಥ್‌ ನರಸಿಂಹರಾಜು ಗಮನ ಸೆಳೆಯುತ್ತಾರೆ. ಚಿತ್ರದಲ್ಲಿ ಹೊಸ ಕಲಾವಿದರ ತಂಡವೇ ಇದೆ. ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಶೀಘ್ರದಲ್ಲೇ ‘ಮಟಾಶ್‌ –2’ ಸಿನಿಮಾ ಬರಲಿದೆ ಎಂಬುದನ್ನೂ ನಿರ್ದೇಶಕರು ಕೊನೆಯಲ್ಲಿ ಘೋಷಿಸಿಬಿಟ್ಟಿದ್ದಾರೆ. ಆದರೆ ಸೀಕ್ವೆಲ್‌ ಬಗ್ಗೆ ಅಂತಹ ಕುತೂಹಲ ಹುಟ್ಟಿಸುವಂಥ ಅಂಶಗಳು ಈ ಸಿನಿಮಾದಲ್ಲಿ ಕಾಣಿಸುವುದಿಲ್ಲ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !