ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಡಲ್‌ವುಡ್‌ನಲ್ಲಿ ಮಿಟೂ: ಚಿತ್ರರಂಗಕ್ಕೆ ಸಂಗೀತಾ ಭಟ್‌ ವಿದಾಯ!

Last Updated 15 ಅಕ್ಟೋಬರ್ 2018, 11:26 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ತಾವು ಅನುಭವಿಸಿರುವ ಕಷ್ಟಕೋಟಲೆಗಳನ್ನು ಮೂರು ಪುಟಗಳಲ್ಲಿ ಬರೆದು ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ ನಟಿ ಸಂಗೀತಾ ಭಟ್‌.

ಲೈಂಗಿಕ ಕಿರುಕುಳಕ್ಕೆ ಒಳಗಾದ ಅನೇಕರು ತಮ್ಮ ಮನಸಿಗೆ ಆಗಿರುವ ಘಾಸಿಯನ್ನು ‘ಮಿಟೂ’ ಆಂದೋಲನದ ಮೂಲಕ ಅಭಿವ್ಯಕ್ತಿಸುತ್ತಿದ್ದಾರೆ. ಬಾಲಿವುಡ್‌, ರಾಜಕೀಯ, ಕ್ರೀಡೆ, ರಾಷ್ಟ್ರೀಯ ಮಾಧ್ಯಮಗಳ ನಂತರ ಇದೀಗ ಕನ್ನಡ ಚಿತ್ರರಂಗದಲ್ಲಿ ಮೀಟೂ ಸದ್ದು ಮಾಡುತ್ತಿದೆ. ಚಿತ್ರರಂಗದಲ್ಲಿ ಈವರೆಗೆ ಅನುಭವಿಸಿದ ತೊಂದರೆಗಳನ್ನು ಒಟ್ಟುಗೂಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರ ಬಹಿರಂಗ ಪಡಿಸಿದ್ದಾರೆ ಸಂಗೀತಾ ಭಟ್‌.

ಪ್ರೀತಿ ಗೀತಿ ಇತ್ಯಾದಿ, ಎರಡನೇ ಸಲ, ದಯವಿಟ್ಟು ಗಮನಿಸಿ ಚಿತ್ರಗಳ ಅಭಿನಯದಿಂದ ಗುರುತಿಸಿಕೊಂಡಿರುವ ಸಂಗೀತಾ ಭಟ್‌, 10 ವರ್ಷಗಳ ನಂತರ ಚಿತ್ರರಂಗದಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ತಂದೆಯ ಸಾವಿನ ಬಳಿಕ ತನ್ನ 15ನೇ ವಯಸ್ಸಿನಲ್ಲಿ ಚಿತ್ರರಂಗದ ಬಾಗಿಲು ತಟ್ಟಿದ ನಟಿ, ಆಗಿನಿಂದ ಈವರೆಗೂ ಎದುರಿಸಿದ ಲೈಂಗಿಕ ಕಿರುಕುಳವನ್ನು 3 ಪುಟದಲ್ಲಿ ಇಳಿಸಿ ಜನರ ಮುಂದೆ ಇಟ್ಟಿದ್ದಾರೆ.

'ನಿರ್ದೇಶಕರು, ನಿರ್ಮಾಪಕರು, ನಟರು ಹಾಗೂ ತಂತ್ರಜ್ಞರ ವಿರುದ್ಧ ಆರೋಪಿಸಿದ್ದಾರೆ. ನಿರ್ದೇಶಕ ಮತ್ತು ಸಹಾಯ ನಿರ್ದೇಶಕರು ಪಾನಮತ್ತರಾಗಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದು, ಅವರಿಂದ ತಪ್ಪಿಸಿಕೊಳ್ಳಲು ಮನೆಗೆ ಮಹಡಿಯಲ್ಲಿ ಅವಿತುಕೊಳ್ಳುತ್ತಿದ್ದುದು, ಸ್ಟಾರ್‌ ನಟನ ಚಿತ್ರದಲ್ಲಿ ಅವಕಾಶ ನೀಡಲು ತನ್ನೊಂದಿಗೆ ಮಲಗುವಂತೆ ಪೀಡಿಸಿದ್ದ ನಿರ್ಮಾಪಕ, ಕಾಮಾಸಕ್ತಿ ತೋರಿದ್ದ ಮಹಿಳಾ ಹೇರ್‌ಡ್ರೆಸರ್‌, ರಾತ್ರಿ ಸಂದೇಶ ಕಳುಹಿಸಿ ಚಿತ್ರಗಳನ್ನು ಕಳುಹಿಸುವಂತೆ ಹೇಳುತ್ತಿದ್ದ ನಿರ್ದೇಶಕ, ಸಿನಿಮಾಗಳಲ್ಲಿ ಆತ್ಮೀಯ ದೃಶ್ಯಗಳಿಂದ ಕೇಳುವಂತಾದ ಮಾತುಗಳು,...’

ಸದ್ಯ ಖಿನ್ನತೆಯಿಂದ ಹೊರಬರಲು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಕಿರು ಚಿತ್ರಗಳು ಹಾಗೂ ನಾಟಕಗಳಲ್ಲಿನ ಅಭಿನಯ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.

ಮೂರು ಪುಟಗಳಲ್ಲಿ ಪ್ರಸ್ತಾಪಿಸಿರುವ ವಿವರ...

ಘಟನೆ 1: 2008– ಪ್ರಸಿದ್ಧ ಕಿರುತೆರೆ ನಟಿಯ ಮಾಜಿ ಪತಿ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದರು. ಹತ್ತನೆ ತರಗತಿ ಮುಗಿಸಿ, ನಟನೆಯನ್ನೇ ನಂಬಿ ಬಂದಿದ್ದ ಹುಡುಗಿ; ಸಿನಿಮಾ ಆಡಿಷನ್‌ನಲ್ಲಿ ಆಯ್ಕೆಯಾದಳು. ಸಿನಿಮಾಗೆ ಕಾಸ್ಟ್ಯೂಮ್‌ ನೋಡಿ ಬರಲು ತನ್ನ ಕಾರಿನಲ್ಲಿ ಕರೆದೊಯ್ದ ನಿರ್ಮಾಪಕ ಮಾರ್ಗ ಮಧ್ಯೆ ಕಾರು ನಿಲ್ಲಿಸಿದ, ಒತ್ತಾಯದಿಂದ ಹುಡುಗಿ ಮೈಮುಟ್ಟಿದ, ಅಸಭ್ಯವಾಗಿ ವರ್ತಿಸಿದ. ಚಿತ್ರೋದ್ಯಮದಲ್ಲಿ ಇದೆಲ್ಲ ಸರ್ವೇಸಾಮಾನ್ಯ, ಇಲ್ಲಿ ಏನೂ ಆಗಿಲ್ಲ ಎನ್ನುವ ಹಾಗೆ ಇರುವಂತೆ ಹೇಳಿದ. ಅದೇ ದಿನ ಚಿತ್ರದ ನಿರ್ದೇಶಕ ಕಾಸ್ಟ್ಯೂಮ್‌ ಸರಿಯಿದೆಯೇ ಎಂದು ಕೇಳುತ್ತ ಹುಡುಗಿ ಮುಂದೆ ಕುಳಿತ. ಎದ್ದು ನಡೆಯುತ್ತಾ ಹತ್ತಿರ ಬಂದು ಮೈಮುಟ್ಟಿದ. ಆಘಾತದಲ್ಲಿ ಹುಡುಗಿ ಹೊರಗೆ ಓಡಿದಳು...ಆ ಚಿತ್ರ ಎಂದಿಗೂ ಶುರುವಾಗಲೇ ಇಲ್ಲ.

ಘಟನೆ 2: 2009– ಹುಡುಗಿ ಅಭಿನಯಿಸಿದ ಮೊದಲ ಸಿನಿಮಾ. ಖ್ಯಾತ ನಟರೊಬ್ಬರು ಪ್ರಮುಖ ಪಾತ್ರದಲ್ಲಿದ್ದ ಸಿನಿಮಾ ಅದು. ಚಿತ್ರೀಕರಣ ಪೂರ್ಣಗೊಂಡ ನಂತರ ಹುಡುಗಿ ತಾಯಿ, ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರನ್ನು ಊಟಕ್ಕೆ ಕರೆದಿದ್ದರು. ಆ ನಿರ್ದೇಶಕ ಸದಾ ಮನೆ ಊಟ ಮಾಡುವ ಬಯಕೆ ವ್ಯಕ್ತಪಡಿಸುತ್ತಿದ್ದ. ಒಂದು ರಾತ್ರಿ ಮನೆಗೆ ಊಟಕ್ಕೆ ಬಂದ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರು ಪಾನಮತ್ತರಾಗಿದ್ದರು. ಹುಡುಗಿಯ ಕೊಠಡಿಗೆ ನುಗ್ಗಿ ಎಳೆದಾಡಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಹುಡುಗಿ ಮತ್ತು ತಾಯಿ ಮನೆಯ ಮಹಡಿಯಲ್ಲಿ ಅವಿತು ಕುಳಿತರು. ಆ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿತ್ತು, ಆದರೆ ಬಿಡುಗಡೆ ಆಗಲೇ ಇಲ್ಲ.

ಘಟನೆ 3: 2010– ಮತ್ತೊಂದು ಚಿತ್ರದ ಚಿತ್ರೀಕರಣದ ವೇಳೆ ಹೊಟೇಲ್‌ಒಂದರಲ್ಲಿ ನಟಿ ವಿರಾಮಕ್ಕಾಗಿ ಉಳಿದುಕೊಂಡಿದ್ದಾಗ ಹೇರ್‌ ಡ್ರೆಸರ್‌...ಹೆಂಗಸು... ಅಸಭ್ಯವಾಗಿ ವರ್ತಿಸಿದ್ದಳು. ಮೈ ಸವರಿ ಧಿರಿಸಿನೊಳಗೆ ಕೈ ಹಾಕಿದ್ದಳು. ಇದನ್ನು ವಿರೋಧಿಸಿ ನಟಿ ಕೊಠಡಿಯಿಂದ ಹೊರಬಂದಿದ್ದರು. ಆ ಹೆಂಗಸು ಕ್ಷಮೆಯಾಚಿಸಿದ್ದಳು. ಆದರೆ, ಅದಕ್ಕಾಗಿ ಪ್ರತೀಕಾರ ತೀರಿಸಿಕೊಂಡಳು!

ಮತ್ತೊಂದು ಚಿತ್ರಕ್ಕೆ ನಟಿಯ ಹೆಸರು ಸೂಚಿಸಿದ್ದಳು. ದೊಡ್ಡ ನಟ ಅಭಿನಯಿಸುತ್ತಿದ್ದ ಮತ್ತು ಪ್ರಸಿದ್ಧ ನಿರ್ದೇಶಕ(ಇತ್ತೀಚೆಗೆ ಕಾಸ್ಟಿಂಗ್‌ ಕೌಚ್‌ ವಿಚಾರದಲ್ಲಿ ಸುದ್ದಿಯಾಗಿದ್ದರು) ನಿರ್ದೇಶನದ ಸಿನಿಮಾ. ನಟಿಗೆ ಕರೆ ಮಾಡಿದ ನಿರ್ದೇಶಕ, ನಟನೆ ಅನುಭವ, ಸಿನಿಮಾ ಕಥೆ ಅಥವಾ ಪಾತ್ರದ ಬಗ್ಗೆ ಮಾತನಾಡದೆ ನೇರವಾಗಿ ‘ಹೊಟೇಲ್‌ಗೆ ಬಾ, ನಾನು ರೂಂ ನಂ.206’ರಲ್ಲಿ ಇದ್ದೇನೆ ಎಂದಿದ್ದ. ನಟಿ ಪ್ರಶ್ನೆ ಮಾಡಿದ್ದಕ್ಕೆ, ’ಹೇರ್‌ಡ್ರೆಸರ್‌ ನಿನ್ನ ಬಗ್ಗೆ ನನಗೆ ತಿಳಿಸಿದ್ದಾಳೆ, ಮುಗ್ದೆಯ ರೀತಿ ಮಾತಾಡೋದನ್ನ ಬಿಡು’ ಎಂದಿದ್ದ. ಆತನ ಪುತ್ರಿ ಈಗ ನಟಿ, ಆಕೆಗೆ ಇಂಥ ಸಂದರ್ಭ ಎದುರಾಗದಿರಲಿ.

ಘಟನೆ 4: 2012– ಚಿತ್ರರಂಗದಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಿದ್ದ ಇತರೆ ನಟಿಯರೊಂದಿಗೆ ನಟಿಯ ವಾಸ್ತವ್ಯ. ಪೊಲೀಸ್‌ ಕಥೆಗಳನ್ನು ಆಧರಿಸಿ ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕನೊಂದಿಗೆ ನಟಿಯ ರೂಂಮೇಟ್‌ ಓಡಾಡುತ್ತಿದ್ದಳು. ಆತನಿಗೆ ರಾಖಿ ಕಟ್ಟಿದ್ದ ನಟಿ ’ಅಣ್ಣ’ ಎಂದೇ ಕರೆಯುತ್ತಿದ್ದಳು. ಆದರೆ, ಅಣ್ಣ ಎಂದು ಕರೆಯದಂತೆ ಆತ ತಾಕೀತು ಮಾಡುತ್ತಿದ್ದ. ಒಂದು ದಿನ, ನಟಿಗೆ ತನ್ನೊಂದಿಗೆ ಒಮ್ಮೆ ಮಲಗುವಂತೆ ಒತ್ತಾಯಿಸಿದ. ಇದಕ್ಕೆ ಒಪ್ಪಿದರೆ ದೊಡ್ಡ ನಟನೊಂದಿಗೆ ಮುಂದಿನ ಪ್ರಾಜೆಕ್ಟ್‌ನಲ್ಲಿ ಅವಕಾಶ ನೀಡುವುದಾಗಿಯೂ ಹೇಳಿದ. ಅಷ್ಟೇ ಅಲ್ಲದೇ ಬೃಹತ್‌ ಉದ್ಯಮಿಗಳ ಸಂಪರ್ಕ ತನಗಿದ್ದು, ಅವರ ಸಂಪರ್ಕವನ್ನು ಸಹ ನೀಡುತ್ತೇನೆ. ಇದರಿಂದ ಶ್ರೀಮಂತಳಾಗಬಹುದು ಎಂದಿದ್ದ. ಇದನ್ನೆಲ್ಲ ನಟಿ ತನ್ನ ಜತೆಗಾತಿಗೆ ತಿಳಿಸಿದ್ದಳು. ಆದರೆ ಆಕೆ, ತನ್ನ ಮನೆ ಬಿಟ್ಟು ಓಡಿಸಿದಳು!

ಘಟನೆ 5: 2015–16– ಮತ್ತೊಬ್ಬ ಪ್ರಸಿದ್ಧ ನಿರ್ದೇಶಕ ನಿರ್ದೇಶಿಸುತ್ತಿದ್ದ ಸಿನಿಮಾದಲ್ಲಿ ನಟಿ ಅಭಿಯನ. ಚಿತ್ರಕ್ಕೆ ದೃಶ್ಯಗಳನ್ನು ಬರೆಯಲು ಸ್ಫೂರ್ತಿಗಾಗಿ ನಟಿಯ ಚಿತ್ರಗಳನ್ನು ಕಳುಹಿಸುವಂತೆ ತಡರಾತ್ರಿ ಸಂದೇಶ ಮಾಡುತ್ತಿದ್ದ ನಿರ್ದೇಶಕ. ಈಗ ಯಾವುದೇ ಬಟ್ಟೆ ಧರಿಸಿದ್ದರೂ ಅದೇ ಚಿತ್ರವನ್ನು ಕಳುಹಿಸುವಂತೆ ಹೇಳುತ್ತಿದ್ದ.

ಅದೇ ವರ್ಷ ಮತ್ತೊಂದು ಸಿನಿಮಾ, ಮುತ್ತು ನೀಡುವ ದೃಶ್ಯದಲ್ಲಿ ಅಭಿನಯಿಸಿದ್ದರು. ಪ್ರಮುಖ ಟಿವಿ ಕಾರ್ಯಕ್ರಮವೊಂದರಲ್ಲಿ ಕುಳಿತಿದ್ದ ಖ್ಯಾತ ನಟಿಯೊಬ್ಬರು, ಆ ಸಿನಿಮಾ ದೃಶ್ಯಗಳನ್ನು ನೋಡಿ–’ಈ ದೃಶ್ಯ ಸರಿಯಾಗಿ ಬರಲು ಅವರು ಬಹಳಷ್ಟು ಬಾರಿ ಅಭ್ಯಾಸ ನಡೆಸಿರಬೇಕು’ ಎಂದಿದ್ದರು. ಇಡೀ ಕನ್ನಡ ನಾಡಿನ ಜನತೆ ನೋಡುತ್ತಿದ್ದ ಕಾರ್ಯಕ್ರಮದಲ್ಲಿ ಮಹಿಳೆಯಾಗಿ, ವೃತ್ತಿ ಸಂಗತಿಗಳ ಬಗ್ಗೆ ಹಗುರ, ತಮಾಷೆ ಮಾಡಿದ್ದರು.

ಘಟನೆ 6: 2016– ತಮಿಳು ಚಿತ್ರವೊಂದಕ್ಕೆ ನಟಿ ಸಹಿ ಮಾಡಿದ್ದರು. ಕಿರುತೆರೆಯ ಪ್ರಸಿದ್ಧ ಹಾಸ್ಯಗಾರನೊಬ್ಬಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ. ನಟಿಯೊಂದಿಗೆ ಆತ ಸದಾ ಅಸಂಬದ್ಧ ಮಾತುಗಳನ್ನೇ ಆಡುತ್ತಿದ್ದ. ನಗುವಿನೊಂದಿಗೆ ಎಲ್ಲವನ್ನೂ ನಟಿ ತಳ್ಳಿ ಹಾಕುತ್ತಿದ್ದರು. ಬೈಕ್‌ನಲ್ಲಿ ಹೋಗುವ ದೃಶ್ಯದಲ್ಲಿ ಬ್ರೇಕ್‌ ಹಾಕಿ ನಿಲ್ಲಿಸಿದ ನಟ, ನಟಿಯ ಒಳ ಉಡುಪು ಮತ್ತು ಅಂಗಾಂಗದ ವಿವರಗಳ ಬಗ್ಗೆ ಮಾತನಾಡಿದ್ದ. ರೊಮ್ಯಾಂಟಿಕ್‌ ಕಥೆಯನ್ನು ಒಳಗೊಂಡ ಸಿನಿಮಾ ಆದ್ದರಿಂದ ಮುತ್ತಿಡುವ ದೃಶ್ಯಕ್ಕೆ ನಟಿ ಒಪ್ಪಿಗೆ ನೀಡಿದ್ದರು. ಆದರೆ, ಆ ನಟ ಅಗತ್ಯಕ್ಕಿಂತಲೂ ಹೆಚ್ಚು ಮುತ್ತಿಡುವ ದೃಶ್ಯಗಳನ್ನು ಸೇರಿಸಲು ನಿರ್ದೇಶಕರಿಗೆ ಒತ್ತಾಯಿಸುತ್ತಿದ್ದ. ದೃಶ್ಯದ ವೇಳೆ ನಟಿಯನ್ನು ಒತ್ತಾಯ ಪಡಿಸುತ್ತಿದ್ದ. ಈ ಬಗ್ಗೆ ನಿರ್ದೇಶಕರಲ್ಲಿ ನಟಿ ತಕರಾರು ಮಾಡಿದರೂ, ನಟನ ನಿರ್ಧಾರವೇ ಅಲ್ಲಿ ಅಂತಿಮವಾಗಿತ್ತು. ಟ್ಯಾಬ್ಲಾಯ್ಡ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ನಟ, ಚಿತ್ರದಲ್ಲಿ ಹತ್ತಕ್ಕೂ ಹೆಚ್ಚು ಚುಂಬನ ದೃಶ್ಯಗಳಿವೆ ಎಂದು ಪ್ರಚಾರ ಪಡೆದುಕೊಂಡಿದ್ದ.

ಘಟನೆ 7: 2017– ತೆಲುಗು ಚಿತ್ರವೊಂದರ ರಿಮೇಕ್‌ ಕನ್ನಡದ ಸೆಟ್ಟೇರಿತ್ತು. ಆ ಚಿತ್ರ ಅರ್ಧಕ್ಕೆ ನಿಂತು ಒಂದೂವರೆ ವರ್ಷಗಳೇ ಕಳೆದಿವೆ. ಆ ಚಿತ್ರದ ಪ್ರಮುಖ ನಟ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್‌ ಮಾಡಿ ನಟಿಯ ಮೊಬೈಲ್‌ ಸಂಖ್ಯೆ ಪಡೆದು ಸಂದೇಶ ಮಾಡುತ್ತಿದ್ದ. ನಟಿಯೂ ಸಂದೇಶ ಮುಂದುವರಿಸಿದ್ದರು, ಒಮ್ಮೆ ಆತ ನಟಿಯ ಕನ್ಯತ್ವದ ಪ್ರಶ್ನೆ ಮಾಡಿದ್ದ. ಆಘಾತಕಾರಿ ಮಾತನ್ನು ಪ್ರಶ್ನಿಸಿದ್ದಕ್ಕೆ, ಆತ ’...ತನ್ನದನ್ನು ಕಳೆದುಕೊಳ್ಳಲು ಸಹಕರಿಸುವೆಯೇ’ ಎಂದು ಕೇಳಿದ್ದ. ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ್ದ ನಟಿ, ನಾನು ಆಗಲೇ ಮತ್ತೊಬ್ಬರೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿದ್ದರು.

ಕುಟುಂಬದಲ್ಲೇ ಹರಿಯುತ್ತಿದೆ..

ಆ ನಟನ ಕುಟುಂಬದವರೇ ಆದ ಮತ್ತೊಬ್ಬ ಪ್ರಸಿದ್ಧ ನಟ ಹಿಂದೆ ನಟಿಗೆ ಸಂದೇಶ ಕಳುಹಿಸುತ್ತಿದ್ದ. ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಹೊಟೇಲ್‌ಗೆ ಬರುವಂತೆ, ತನ್ನೊಂದಿಗೆ ಮಲಗುವಂತೆ ಕೇಳುತ್ತಿದ್ದ. ಇದನ್ನು ನಟಿ ನಿರಾಕರಿಸಿದ್ದಕ್ಕೆ ಸಿಟ್ಟಾದ ಆತ,’ನಾನು ಎಷ್ಟು ಮಂದಿ ನಟಿಯರೊಂದಿಗೆ ಮಲಗಿರುವೆ ಗೊತ್ತಾ ನಿನಗೆ? ನಾನು ಒಂದು ಮಿಸ್ಡ್ ಕಾಲ್ ನೀಡಿದರೆ ಸಾಕು, ಅವರು ಓಡೋಡಿ ನನ್ನಲ್ಲಿಗೆ ಬರುತ್ತಾರೆ’. ಆ ನಟನ ಚಿತ್ರಗಳನ್ನೇ ನೋಡಿ ಬೆಳೆದಿದ್ದಳು ನಟಿ!

ಅದೇ ಚಿತ್ರದ ನಿರ್ದೇಶಕ ಚಿತ್ರೀಕರಣದ ವೇಳೆ ಅತ್ಯಂತ ಕೆಟ್ಟ ಶಬ್ದಗಳನ್ನು ಬಳಸಿ ನಟಿಯನ್ನು ನಿಂದಿಸಿದ್ದ. ನಟಿ ಅಳುತ್ತ ಮರಳಿದ್ದಳು. ಆನಂತರ ನಿರ್ದೇಶಕ ಇದೆಲ್ಲ ಸಾಮಾನ್ಯ ಕೆಲಸದ ಒತ್ತಡದಲ್ಲಿ, ಇದನ್ನು ತೆಗೆದುಕೊಳ್ಳುವುದನ್ನು ಕಲಿಯಬೇಕು ಎಂದಿದ್ದ. ಆದರೆ, ಕ್ಷಮೆಯಾಚಿಸಲಿಲ್ಲ. ಆತನಿಗೆ ಅದೊಂದು ಮರ್ಯಾದೆ ಪ್ರಶ್ನೆಯೇ ಆಗಿರಲಿಲ್ಲ.

(ಚಿತ್ರ ಕೃಪೆ: ಸಂಗೀತಾ ಭಟ್‌ ಟ್ವಿಟರ್‌ ಖಾತೆ)

ಸಂಗೀತಾ ಭಟ್‌ ಬರಹಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳ ಪ್ರತಿಕ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT