ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಲ್ಲಿ ಹಾರುವ ತಟ್ಟೆ!

Last Updated 13 ಏಪ್ರಿಲ್ 2019, 12:11 IST
ಅಕ್ಷರ ಗಾತ್ರ

‘ಮೈಸೂರು ಮಸಾಲಾ’... ಈ ಹೆಸರು ಕೇಳಿದ ತಕ್ಷಣ ಆಹಾರಪ್ರಿಯರಿಗೆ ಮೈಸೂರಿನಲ್ಲಿ ಮಸಾಲೆ ದೋಸೆ ತಿಂದ ನೆನಪಾದರೆ, ಪಡ್ಡೆ ಹೈಕಳಿಗೆ ಯಾವುದೋ ವಯಸ್ಕರ ಚಿತ್ರದ ಹೆಸರು ಕೇಳಿದಂತೆ ಆಗಬಹುದು. ಆದರೆ ಈ ಎರಡು ಎಣಿಕೆಗಳೂ ತಪ್ಪು. ಮೈಸೂರು ಮಸಾಲಾದಲ್ಲಿ ಇರುವುದು ಹಾರುವ ತಟ್ಟೆಗಳು. ಅನ್ಯಗ್ರಹದ ಜೀವಿಗಳು! ಇದ್ಯಾವ ಮಸಾಲೆ ಎಂದು ಹುಬ್ಬೇರಿಸಬೇಡಿ. ಇದು ಅಜಯ್ ಸರ್ಪೇಶ್ಕರ್ ಎಂಬ ಯುವ ನಿರ್ದೇಶಕನ ಸಿನಿಮಾ ಹೆಸರು.

ಬೆಂಗಳೂರಿನಲ್ಲಿಯೇ ಹುಟ್ಟಿ ಅಮೆರಿಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹದಿನೈದು ವರ್ಷ ಕೆಲಸ ಮಾಡಿದ ಅನುಭವ ಇರುವ ಅಜಯ್‌, ಹವ್ಯಾಸವಾಗಿ ಫೋಟೊಗ್ರಫಿ ಆರಂಭಿಸಿದವರು. ನಂತರ ಕಿರುಚಿತ್ರ, ಜಾಹೀರಾತು ಚಿತ್ರಗಳಿಗೂ ಈ ಹವ್ಯಾಸ ವಿಸ್ತರಿಸಿಕೊಂಡಾಗಲೇ ಅವರಲ್ಲಿ ಸಿನಿಮಾ ಮಾಡುವ ಆಸಕ್ತಿ ಮೊಳೆತಿದ್ದು. ಆಗಲೇ ಒಂದು ಕಥೆಯನ್ನು ಬರೆದಿಟ್ಟುಕೊಂಡಿದ್ದರು. ಆ ಕಥೆಯೇ ಈಗ ‘ಮೈಸೂರು ಮಸಾಲಾ’ ಆಗಿ ಮೈದಾಳುತ್ತಿದೆ.

‘ಇದೊಂದು ಸೈನ್ಸ್‌ ಫಿಕ್ಷನ್‌ ಸಿನಿಮಾ. ಕನ್ನಡದಲ್ಲಿ ಇಂಥ ಪ್ರಯತ್ನ ನಡೆದಿಲ್ಲ. ರಿಯಲಿಸ್ಟಿಕ್‌ ಸೈನ್ಸ್‌ ಫಿಕ್ಷನ್‌ ಶೈಲಿಯಲ್ಲಿದೆ. ನಮ್ಮ ಬ್ರಹ್ಮಾಂಡದ ಬಗ್ಗೆ ಅನ್ಯಗ್ರಹದ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಇದೇ ಕುತೂಹಲವನ್ನೇ ಕಥೆಯ ಎಳೆಯಾಗಿ ಇಟ್ಟುಕೊಂಡು ಸಿನಿಮಾ ಕಟ್ಟಿದ್ದೇವೆ. ಯುವ ಪೀಳಿಗೆಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಸಿನಿಮಾದ ಬಗ್ಗೆ ವಿವರಿಸುತ್ತಾರೆ.

ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯುವ ಈ ಕಥೆಯಲ್ಲಿ ಹಾರುವ ತಟ್ಟೆಗಳೂ ಪ್ರಮುಖ ಪಾತ್ರ ವಹಿಸಿವೆಯಂತೆ. ಅಜಯ್‌ ಅವರ ಸ್ನೇಹಿತರು ಕುಟುಂಬದವರೇ ಸೇರಿಕೊಂಡು ಈ ಸಿನಿಮಾಗೆ ಹಣ ಹೂಡಿದ್ದಾರೆ. ಅನಂತ್‌ನಾಗ್‌, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಹೊರನಾಡು, ಸುಧಾ ಬೆಳವಾಡಿ, ಪ್ರಕಾಶ್‌ ಬೆಳವಾಡಿ, ಕಿರಣ್‌ ಶ್ರೀನಿವಾಸನ್‌ ಮುಖ್ಯಭೂಮಿಕೆಯಲ್ಲಿದ್ದಾರೆ.ಸದ್ಯಕ್ಕೆ ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ.

‘ಮೊದಲು ಒಂದು ಒಳ್ಳೆಯ ಸಿನಿಮಾ ಮಾಡಬೇಕು. ನಂತರ ಅದನ್ನು ಸಾಧ್ಯವಾದಷ್ಟೂ ಜನರಿಗೆ ತಲುಪಿಸಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿ ಯಾವುದೇ ರೀತಿಯ ಪ್ರಯೋಗಗಳನ್ನು, ಹೊಸ ಹೊಸ ತಂತ್ರಜ್ಞಾನದ ವೇದಿಕೆಗಳನ್ನುಬಳಸಿಕೊಳ್ಳುವ ಬಗ್ಗೆ ಮುಕ್ತವಾಗಿ ಯೋಚಿಸುತ್ತೇವೆ. ಈ ಸಿನಿಮಾ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆಯೋ ನೋಡೋಣ’ ಎಂದು ತಮ್ಮ ನಂಬಿಕೆಯನ್ನೂ ನಿರೀಕ್ಷೆಯನ್ನೂ ಒಟ್ಟೊಟ್ಟಿಗೇ ವ್ಯಕ್ತಪಡಿಸುತ್ತಾರೆ.

ಅಜಯ್‌ ಸರ್ಪೇಷ್ಕರ್‌
ಅಜಯ್‌ ಸರ್ಪೇಷ್ಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT