ಶನಿವಾರ, ಜುಲೈ 31, 2021
28 °C
ನಾಗತಿಹಳ್ಳಿ ನಿರ್ದೇಶನದಲ್ಲಿ ಹೊಸ ಸಿನಿಮಾ ರೆಡಿ

ಅಮೂಲ್ಯ ವಸ್ತು ಬೆನ್ನತ್ತಿದ ಪ್ರೇಮಕಥೆ!

ಕೆ.ಎಂ.ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮತ್ತು ನಿರ್ಮಾಪಕ ವೈ.ಎನ್‌. ಶಂಕರೇಗೌಡ ಅವರ ಜೋಡಿ ‘ಇಷ್ಟಕಾಮ್ಯ’ದ ನಂತರ ಏನು ಮಾಡುತ್ತಿದೆ ಎನ್ನುವ ಪ್ರಶ್ನೆಗೆ ಈಗ ಗಾಂಧಿನಗರದಿಂದ ಚಿತ್ರರಸಿಕರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಅದೇನಪ್ಪಾ ಅಂದರೆ, ಈ ಜೋಡಿ ಸದ್ದಿಲ್ಲದೇ ಮತ್ತೊಂದು ಬಿಗ್‌ ಬಜೆಟ್‌ನ ಸಿನಿಮಾ ನಿರ್ಮಿಸಿದೆ.

ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಅವತರಣಿಕೆಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇಂಗ್ಲಿಷ್‌ ಅವತರಣಿಕೆಗೆ ‘ಲಾಟಿಟ್ಯೂಡ್‌ ಲಾಂಗಿಟ್ಯೂಡ್‌’ ಶೀರ್ಷಿಕೆ ಇಡಲಾಗಿದೆ. ಕನ್ನಡ ಅವತರಣಿಕೆಗೆ ಇಟ್ಟಿರುವ ಶೀರ್ಷಿಕೆ ಇನ್ನೂ ಅಂತಿಮಗೊಳಿಸಿಲ್ಲವಂತೆ, ಟೈಟಲ್‌ ಬದಲಾಗುವ ನಿರೀಕ್ಷೆ ಇದ್ದು, ಈ ಸಿನಿಮಾ ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲಿದೆಯಂತೆ. ‘ಕೆಜಿಎಫ್‌’ ಸಿನಿಮಾದಂತೆಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಿನಿಮಾ ಕೂಡ ಸದ್ದು ಮಾಡಲಿದೆ ಎನ್ನುವುದು ಚಿತ್ರತಂಡದ ನಿರೀಕ್ಷೆ.

ಈ ಸಿನಿಮಾದ ಮೂಲಕಥೆ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಪುತ್ರಿ ಕನಸು ನಾಗತಿಹಳ್ಳಿ ಅವರದ್ದು. ಕನಸು ಅವರು ಇಂಗ್ಲೆಂಡ್‌ನಲ್ಲಿ ಓದುವಾಗ ಬರೆದ ಕಥೆಯಾಗಿದ್ದು, ಇದಕ್ಕೆ ಸಂಸದ ಮತ್ತು ಸಾಹಿತಿ ಶಶಿ ತರೂರ್‌ ಅವರ ‘ಆ್ಯನ್‌ ಇರಾ ಆಫ್‌ ಡಾರ್ಕ್‌ನೆಸ್‌: ಇನ್‌ ಬ್ರಿಟಿಷ್‌ ಎಂಪೈರ್‌ ಇನ್‌ ಇಂಡಿಯಾ’ ಕೃತಿಯ ಸ್ಫೂರ್ತಿ ಇದೆಯಂತೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರು ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿರುವ ಜತೆಗೆ, ಆ್ಯಕ್ಷನ್‌ ಕಟ್‌ ಕೂಡ ಹೇಳಿದ್ದಾರೆ.

ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ನಾಯಕ, ಮಾನ್ವಿತಾ ಹರೀಶ್‌ ನಾಯಕಿಯಾಗಿ ನಟಿಸಿದ್ದಾರೆ. ಜತೆಗೆ ಅನಂತ್‌ ನಾಗ್‌, ಪ್ರಕಾಶ್‌ ಬೆಳವಾಡಿ, ಸುಮಲತಾ, ಸಾಧುಕೋಕಿಲ ಅವರಂತಹ ದೊಡ್ಡ ತಾರಾಬಳಗವೇ ಇದೆಯಂತೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಡಿ ಸಿನಿಮಾ ನಿರ್ಮಿಸಿದ್ದು, ಇದೇ ಬ್ಯಾನರ್‌ನಡಿಯೇ ದೇಶದಾದ್ಯಂತ ಸಿನಿಮಾ ಬಿಡುಗಡೆಗೆ ತಯಾರಿ ನಡೆದಿದೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರ ಅನಿವಾಸಿ ಭಾರತೀಯ ಸ್ನೇಹಿತರ ಬಳಗದಲ್ಲಿರುವ ವೈದ್ಯರು, ಎಂಜಿನಿಯರ್‌ಗಳ ತಂಡ ಈ ಸಿನಿಮಾ ಬಿಡುಗಡೆಯ ವೇಳೆ ಇಂಗ್ಲೆಂಡ್‌ನಲ್ಲಿ ಅದ್ದೂರಿ ಪ್ರೀಮಿಯರ್‌ ಷೋ ಕೂಡ ಆಯೋಜಿಸಿದೆಯಂತೆ.


ನಾಗತಿಹಳ್ಳಿ ಚಂದ್ರಶೇಖರ್‌

ಇತಿಹಾಸದಲ್ಲಿ ನಡೆದು ಹೋದ ಭಾರತ ಮತ್ತು ಬ್ರಿಟನ್ನಿನ ನಡುವಿನ ವಾಗ್ವಾದದ ಪ್ರಸಂಗವೊಂದವನ್ನು ನಿರ್ದೇಶಕರು ತೆರೆ ಮೇಲೆ ತಂದಿದ್ದಾರಂತೆ. ಇತಿಹಾಸವನ್ನು ಹಿಂದೆ ನಿಂತು ಅವಲೋಕಿಸುವ ಪ್ರಯತ್ನ ಇದರಲ್ಲಿದೆಯಂತೆ. ದೇಶದಿಂದ ಕಾಣೆಯಾಗಿದ್ದ ಅಪರೂಪದ ವಸ್ತುವೊಂದನ್ನು ರೂಪಕವಾಗಿಟ್ಟುಕೊಂಡು ಅದರ ಜತೆಗೆ ಒಂದು ಪ್ರೇಮಕತೆ, ಕ್ರೈಂ, ಸಸ್ಪೆನ್ಸ್‌, ಥ್ರಿಲ್ಲರ್‌ ಬೆರೆಸಿ ಚಿತ್ರಕಥೆ ಹೆಣೆಯಲಾಗಿದೆ. ಜತೆಗೆ ಐದು ಹಾಡುಗಳೂ ಇರಲಿವೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಮೂಡಿ ಬಂದಿರುವ ಎರಡು ದೊಡ್ಡ ಆ್ಯಕ್ಷನ್‌ ದೃಶ್ಯಗಳು ಈ ಸಿನಿಮಾಕ್ಕೆ ಮತ್ತಷ್ಟು ಮೆರುಗು ನೀಡಿವಿಯಂತೆ.

ಇಂಗ್ಲೆಂಡ್‌ನಲ್ಲಿ ಚಿತ್ರೀಕರಣ

ಚಿತ್ರದ ಶೇ 50 ಭಾಗ ಇಂಗ್ಲೆಂಡ್‌ನಲ್ಲಿ ಚಿತ್ರೀಕರಿಸಿದ್ದು, ಉಳಿದ ಭಾಗವನ್ನು ವಾಘಾ ಗಡಿ, ದೆಹಲಿ, ಅಮೃತಸರ, ಜೈಪುರ ಹಾಗೂ ಉತ್ತರ ಭಾರತದ ಹಲವು ರಮ್ಯ ತಾಣಗಳಲ್ಲಿ ಚಿತ್ರೀಕರಣ ಮಾಲಾಗಿದೆ. 80 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಎರಡು ವರ್ಷಗಳ ಹಿಂದೆಯೇ ಈ ಸಿನಿಮಾ ತಯಾರಿ ಆರಂಭವಾಗಿದ್ದು, ಬಹಳಷ್ಟು ಸಂಶೋಧನಾ ಕೆಲಸ ಮಾಡಿರುವುದರಿಂದ ಇಷ್ಟೊಂದು ದೀರ್ಘಸಮಯ ಬೇಕಾಯಿತು. ಚಿತ್ರ ಪೂರ್ಣಗೊಂಡಿದ್ದು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕಾನ್‌ ಚಿತ್ರೋತ್ಸವದ ವೇಳೆ ‘ಇಂಡಿಯನ್‌ ಪೆವಿಲಿಯನ್‌’ನಲ್ಲಿ ಚಿತ್ರದ ಟೀಸರ್‌ ಕೂಡ ಬಿಡುಗಡೆ ಮಾಡಲಾಗಿದೆ ಎನ್ನುತ್ತವೆ ಚಿತ್ರತಂಡದ ಮೂಲಗಳು.

ವೈ.ಎನ್‌. ಶಂಕರೇಗೌಡ ಮತ್ತು ಮಿತ್ರರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕನ್ನಡ ಅವತರಣಿಕೆಗೆ ಸತ್ಯ ಹೆಗ್ಡೆ, ಎ.ವಿ. ಕೃಷ್ಣಮೂರ್ತಿ ಅವರ ಛಾಯಾಗ್ರಹಣವಿದ್ದು, ಇಂಗ್ಲಿಷ್‌ ಅವತರಣಿಕೆಯಲ್ಲಿ ಬ್ರಿಟಿಷ್‌ನ ವಿಲ್‌ ಪ್ರೈಜ್‌ ಅವರ ಛಾಯಾಗ್ರಹಣವಿದೆ. ಅರ್ಜುನ್‌ ಜನ್ಯ ಅವರು ಸಂಗೀತ ಸಂಯೋಜಿಸಿದ್ದಾರೆ. ಶ್ರೀಕಾಂತ್ ಸಂಕಲನ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು