ಮಂಗಳವಾರ, ಸೆಪ್ಟೆಂಬರ್ 17, 2019
24 °C

‌‘ನನ್ನ ಪ್ರಕಾರ’ ಹಿಂದಿಗೆ ರಿಮೇಕ್‌

Published:
Updated:
Prajavani

ಪ್ರಿಯಾಮಣಿ ಮತ್ತು ಕಿಶೋರ್‌ ನಟನೆಯ ‘ನನ್ನ ಪ್ರಕಾರ’ ಸಿನಿಮಾ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈಗ ಬೇರೆ ಭಾಷೆಯಿಂದಲೂ ಡಬ್ಬಿಂಗ್‌ ಮತ್ತು ರಿಮೇಕ್‌ಗೆ ಬೇಡಿಕೆ ಸೃಷ್ಟಿಯಾಗಿದೆ. ಸದ್ಯ ಈ ಸಿನಿಮಾ ಹಿಂದಿಗೆ ರಿಮೇಕ್‌ ಆಗುತ್ತಿದೆ. ‘ನನ್ನ ಪ್ರಕಾರ ಭಾಗ–2’ ಸಿನಿಮಾ ಸದ್ಯದಲ್ಲೇ ಸೆಟ್ಟೇರುವ ನಿರೀಕ್ಷೆಯೂ ಇದೆಯಂತೆ.

ಈ ಸಂಭ್ರಮ ಹಂಚಿಕೊಳ್ಳಲು ಚಿತ್ರದ ನಿರ್ದೇಶಕ ವಿನಯ್‌ ಬಾಲಾಜಿ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

‘ಬೆಂಗಳೂರು, ಮೈಸೂರು, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಹಾಗೂ ಮಾಲ್‌ಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದರು.

ನಿರ್ಮಾಪಕ ಗುರುರಾಜ್‌, ‘ನನ್ನ ಪ್ರಕಾರ’ ಗಳಿಕೆ ವಿಷಯದಲ್ಲಿ ಸುರಕ್ಷಿತವಾಗಿದ್ದೇವೆ. ಸಿನಿಮಾಕ್ಕೆ ಹೂಡಿದ್ದ ಬಂಡವಾಳ ಡಬ್ಬಿಂಗ್‌ ಮತ್ತು ರಿಮೇಕ್‌ ಹಕ್ಕಿನಲ್ಲೇ ಬಂದಾಗಿದೆ. ಚಿತ್ರ ಯಶಸ್ವಿಯಾಗಿರುವುದು ಸಂತಸ ನೀಡಿದೆ ಎಂದರು.

ಯಾವುದೇ ಸಿನಿಮಾಗಳನ್ನು ನೇಟಿವಿಟಿಗೆ ತಕ್ಕಂತೆ ವಿಷಯಗಳನ್ನಿಟ್ಟುಕೊಂಡು ನಿರ್ಮಾಣ ಮಾಡಲಾಗಿರುತ್ತವೆ. ಬೇರೆ ಭಾಷೆಗೆ ಡಬ್ಬಿಂಗ್‌, ರಿಮೇಕ್‌ ಮಾಡುವಾಗ ವಿಷಯ ಬದಲಾಗುವುದಿಲ್ಲ, ಭಾಷೆ ಮಾತ್ರ ಬದಲಾಗುತ್ತದೆ. ಆದರೆ, ನಗರ ಕೇಂದ್ರಿತ ವಸ್ತುವಿಷಯ ಒಳಗೊಂಡಿರುವಾಗ ಅಂತಹ ಸಮಸ್ಯೆ ಎದುರಾಗುವುದಿಲ್ಲ. ನಗರ ಕೇಂದ್ರಿತ ವಸ್ತುವಿಷಯದ ‘ನನ್ನ ಪ್ರಕಾರ’ ಹಿಂದಿಗೆ ರಿಮೇಕ್‌ ಆಗುತ್ತಿರುವುದು ಸಂತೋಷದ ವಿಚಾರ. ಸಾಹೊ ಸಿನಿಮಾದ ಅಬ್ಬರದ ನಡುವೆಯೂ ನಮ್ಮ ಸಿನಿಮಾವನ್ನು ಜನರು ನೋಡಿ, ಕನ್ನಡ ಚಿತ್ರಗಳನ್ನು ಬೆಂಬಲಿಸುತ್ತಿರುವುದು ಖುಷಿಯ ವಿಚಾರ ಎನ್ನುವ ಮಾತನ್ನು ಸೇರಿಸಿದ್ದು ನಟ ಕಿಶೋರ್‌. 

ನಟ ಅರ್ಜುನ್‌ ಯೋಗೀಶ್‌ ರಾಜ್‌, ಒಳ್ಳೆಯ ಸಿನಿಮಾ ಮಾಡಿದಾಗ ಖಂಡಿತಾ ಪ್ರೇಕ್ಷಕರು ಬೆಂಬಲಿಸುತ್ತಾರೆ ಎನ್ನುವುದು ಈಗ ಸಾಬೀತಾಗಿದೆ. ನಿರ್ದೇಶಕರಿಗೆ ಇದು ಮೊದಲ ಸಿನಿಮಾ. ಎಲ್ಲಿಯೂ ಎಡವಿಲ್ಲ, ಚೆನ್ನಾಗಿ ಪಳಗಿದವರಂತೆಯೇ ಸಿನಿಮಾ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಟಿ ಮಯೂರಿ, ನಮ್ಮ ಸಿನಿಮಾದಲ್ಲಿ ಏನೋ ವಿಶೇಷತೆ ಇದೆ ಎನಿಸಿದ ಮೇಲೆಯೇ ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಬರಲಾರಂಭಿಸಿದ್ದಾರೆ. ಈಗಲೂ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಾನು ಎಂಟು ಬಾರಿ ಸಿನಿಮಾ ನೋಡಿದ್ದೇನೆ. ಎಂಟು ಬಾರಿಯೂ ಚಿತ್ರಮಂದಿರ ತುಂಬಿತ್ತು ಎಂದು ಖುಷಿ ಹಂಚಿಕೊಂಡರು.

ಕಡಿಮೆ ಬಂಡವಾಳದ ಸಿನಿಮಾಗಳನ್ನು ಪ್ರೇಕ್ಷಕರು ಬೆಂಬಲಿಸಬೇಕು. ಅಲ್ಲದೆ, ಹೊಸ ನಿರ್ದೇಶಕರು ಮತ್ತು ಹೊಸ ಕಲಾವಿದರಿಗೂ ಆ ಮೂಲಕ ಅವಕಾಶ ಮಾಡಿಕೊಡಬೇಕೆಂದು ನಟ ನಿರಂಜನ್‌ ದೇಶಪಾಂಡೆ ಮನವಿ ಮಾಡಿದರು.

ತಮ್ಮ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ನಿರಂಜನ್‌, ಪಾತ್ರಕ್ಕೆ ಹತ್ತಿರವಾಗುವಂತೆ ನಟಿಸಿದ್ದೇನೆ. ಯಾವುದೇ ಪಾತ್ರವಾಗಲಿ ಅದರ ಪರಕಾಯ ಪ್ರವೇಶ ಮಾಡುವುದು ನನ್ನ ಜಾಯಮಾನ ಎಂದು ಹೆಮ್ಮೆಯಿಂದಲೇ ಹೇಳಿಕೊಂಡರು.

Post Comments (+)