ಕಾಡುವ ‘ನಾತಿಚರಾಮಿ’ ಹಾಡು: ‘ಭಾವಲೋಕದ ಭ್ರಮೆಯೊಳಿರಲು ಸರಿಯದಾಗಿದೆ ಸಮಯ’

6
ಕಾಡುವ ’ನಾತಿಚರಾಮಿ‘ ಹಾಡು

ಕಾಡುವ ‘ನಾತಿಚರಾಮಿ’ ಹಾಡು: ‘ಭಾವಲೋಕದ ಭ್ರಮೆಯೊಳಿರಲು ಸರಿಯದಾಗಿದೆ ಸಮಯ’

Published:
Updated:

‘ರಂಗಾದ ರವಿಕೆ/ ರಂಗೇರೋ ಕ್ಷಣಕೆ/ ದಂಗಾಗಿ ಕುಳಿತೆ/ ಯೋಚಿಸುತ ಅರಿತೆ/ಎಲ್ಲಾ ಮುನ್ಸೂಚನೆ/ ಆಚರಿಸೊ ಜಗದ ಬಣ್ಣ ಹೀಗೇತಕೆ?’

– ಹೆಣ್ಣಿನ ಎದೆಯೊಳಗೆ ಕಾಮನೆಗಳು ಉದಯಿಸುವ ರೋಮಾಂಚನವನ್ನು ಮತ್ತು ಆ ಅಪ್ಪಟ ಖಾಸಗೀ ಅನುಭವವನ್ನು ಅರಿಯುವ ಗಳಿಗೆಗಳನ್ನು ಮತ್ತು ಸಹಜವಾದ ಆ ಭಾವಕ್ಕೆ ಕಟ್ಟು ಹಾಕಲು ಪ್ರಶ್ನಿಸುವ ಜಗದ ರಿವಾಜುಗಳನ್ನು ಪ್ರಶ್ನಿಸುವಂಥ ಈ ಸಾಲುಗಳು ‘ನಾತಿಚರಾಮಿ‘ ಸಿನಿಮಾದ ಹಾಡಿನ ಭಾಗ. 

ಭಿನ್ನವಾದ ಸ್ವರಸಂಯೋಜನೆ, ಬಿಂದುಮಾಲಿನಿ ಅವರ ಆರ್ದ್ರ ಧ್ವನಿ ಮತ್ತು ಅಷ್ಟೇ ಸಶಕ್ತವಾದ ಸಾಹಿತ್ಯದ ಮೂಲಕ ಈ ಹಾಡು ಮನಸೊಳಗೆ ಹೊಕ್ಕು ಗಾಢವಾಗಿ ಕಾಡುವ ಹಾಗಿದೆ. 

ಮಂಸೋರೆ ನಿರ್ದೇಶನದ ’ನಾತಿಚರಾಮಿ‘ ಚಿತ್ರ ಮಾಮಿ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನ ಕಂಡಿತ್ತು. ಡಿ. 28ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿ. 17ರಂದು ‘ಭಾವಲೋಕದ ಭ್ರಮೆಯಾ/ ಸುಳಿಯೊಲಿರಲು ಸರಿಯದಾಗಿದೆ ಸಮಯ‘ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. 

‘ಈ ಚಿತ್ರದಲ್ಲಿ ಹೊರಗೆ ಎದ್ದು ಕಾಣುವ, ಸದ್ದು ಮಾಡುವ ಎನರ್ಜಿ ಇಲ್ಲಿ. ಬದಲಿಗೆ ಒಳಗೊಳಗೇ ಅಂತರ್ವಾಹಿನಿಯಾಗಿ ಹರಿಯುವ ಚೈತನ್ಯ ಇದೆ. ನಾನು ಹಾಡುಗಳಿಗೆ ಸ್ವರ ಸಂಯೋಜಿಸುವಾಗಲೂ ಇದನ್ನು ಮನಸಲ್ಲಿಟ್ಟುಕೊಂಡಿದ್ದೆ. ಹಾಗಾಗಿಯೇ ಹೆಜ್ಜ ಹಾಕಿ ಕುಣಿಯುವಂಥ ಸಂಗೀತದ ಮಾದರಿಯನ್ನು ಬಿಟ್ಟು, ಕಣ್ಮುಚ್ಚಿಕೊಂಡು ಧ್ಯಾನದ ಹಾಗೆ ಹೇಳಿಸಿಕೊಳ್ಳುವಂಥ ಹಾಡು ಸಂಯೋಜಿಸಿದ್ದೇನೆ‘ ಎನ್ನುತ್ತಾರೆ ಸಂಗೀತ ಸಂಯೋಜಕಿ ಬಿಂದು ಮಾಲಿನಿ. ದ್ವಿಜವಂತಿ ರಾಗದಲ್ಲಿರುವ ಈ ಹಾಡನ್ನು ಹಾಡಿರುವುದೂ ಅವರೇ. ಅವರ ಜತೆಗೆ ಸಂಚಾರಿ ವಿಜಯ್ ಕೂಡ ಈ ಹಾಡಿಗೆ ಧ್ವನಿಯಾಗಿರುವುದು ವಿಶೇಷ. 

ವಿಶಿಷ್ಟವಾದ ಲಯದಿಂದಲೂ ಗುನುಗಿಕೊಳ್ಳುವಂತೆ ಮಾಡುವ ಈ ಹಾಡಿನ ಸಾಹಿತ್ಯ ಬರೆದಿರುವುದು ಕಿರಣ್‌ ಕಾವೇರಪ್ಪ. ‘ಇಡೀ ಚಿತ್ರದ ಕಥೆಯ ಆತ್ಮವನ್ನು ಅರುಹುವಂಥ ಹಾಡಿದು’ ಎನ್ನುತ್ತಾರೆ ಕಿರಣ್‌.

‘ಈ ಹಾಡಿನ ಸಾಲು ಸಾಲಿನಲ್ಲಿಯೂ ಪ್ರಶ್ನೆಗಳಿವೆ. ಚಿತ್ರದ ಮುಖ್ಯ ಪಾತ್ರವಾದ ಗೌರಿ ತನ್ನೊಳಗೆ ಹುಟ್ಟುವ ಪ್ರಶ್ನೆಗಳನ್ನು ಸುರೇಶ ಎಂಬ ಪಾತ್ರಕ್ಕೆ ಕೇಳುತ್ತಾಳೆ. ಅದಕ್ಕೆ ಅವನು ಉತ್ತರಿಸುತ್ತಾನೆ. ಈ ಬಗೆಯ ಜುಗಲ್‌ಬಂಧಿಯ ಮಾದರಿಯಲ್ಲಿಯೇ ಈ ಹಾಡನ್ನು ಕಟ್ಟಿದ್ದೇವೆ. ಗೌರಿಯ ಪಾತ್ರದ ಮೂಲಕ ಇಡೀ ಸ್ತ್ರೀ ಸಮುದಾಯವೇ ಸಮಾಜದ ಎದುರು ಕೆಲವು ಪ್ರಶ್ನೆಗಳನ್ನು ಮಂಡಿಸುವ ರೀತಿಯಲ್ಲಿ ಹಾಡು ಇದೆ’ ಎಂದು ಪದ್ಯದ ಅಂತರಾಳವನ್ನು ಬಿಚ್ಚಿಡುತ್ತಾರೆ ಕಿರಣ್‌. 


ಕಿರಣ್ ಕಾವೇರಪ್ಪ

ತಮ್ಮ ಮಾತುಗಳಿಗೆ ಪೂರಕವಾಗಿ ಅವರು ಹಾಡಿನ ಈ ಸಾಲುಗಳನ್ನು ನೆನಪಿಸಿಕೊಳ್ಳುತ್ತಾರೆ.

‘ಆಕ್ರಮಿಸಿ ಮಣಿಸೋ ನಿನ್ನ ಹಂಗೇತಕೆ/ ಹೂಂಕರಿಸಿ ಸರಿಸೋ ಮುನ್ನ ಆಲೋಚಿಸೆಯಾ?’

‘ಹಿಂದಿನಿಂದಲೂ ನಾವು ಹೆಣ್ಣನ್ನು ನೋಡುವ ರೀತಿ ಬೇರೆಯೇ ಆಗಿದೆ. ಇಂದು ನಮ್ಮ ಸುತ್ತಲೂ ನಡೆಯುತ್ತಿರುವ ಹಲವು ವಿದ್ಯಮಾನಗಳೂ ಇವನ್ನೇ ಪುಷ್ಠೀಕರಿಸುತ್ತವೆ. ನಮ್ಮ ಇಂದಿನ ನಡವಳಿಕೆಗೆ ನಾವಷ್ಟೇ ಕಾರಣ ಆಗಿರುವುದಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರ, ಸಮಾಜ, ಬೆಳೆದ ರೀತಿ ಎಲ್ಲವೂ ಕಾರಣ ಆಗಿರುತ್ತದೆ. ಹಾಗೆ ಸಿದ್ಧವಾದ ಮಾದರಿಯಲ್ಲಿ ಹೆಣ್ಣನ್ನು ನೋಡುವ ಬಗೆಯನ್ನು ಪ್ರಶ್ನಿಸುವ ಪ್ರಯತ್ನ ಈ ಹಾಡಿನಲ್ಲಿದೆ’ ಎಂದು ಕಿರಣ್ ವಿವರಿಸುತ್ತಾರೆ.

ತನ್ನ ಇದುವರೆಗಿನ ‘ನೋಟ’ಕ್ಕಾಗಿ ಗಂಡು ಕ್ಷಮೆ ಕೋರುವ ಸಾಲುಗಳೂ ಇಲ್ಲಿವೆ.

‘ಭೋರ್ಗರೆದಿರೋ ಕಡಲ/ ಮನದಾಳವ ಅರಿಯಬಂದಿರೋ ನದಿ ನಾ’, ‘ಸವಿಯಾಗಿ ನವಿರಾಗಿ ಅರಿ ನನ್ನ ಮನವ’ ಇವು ಪದ್ಯದ ಕೊನೆಯ ಸಾಲುಗಳು. ಗಂಡು– ಹೆಣ್ಣುಗಳು ಆತ್ಮಗೌರವ ಉಳಿಸಿಕೊಂಡು, ಪರಸ್ಪರ ಗೌರವ ಬೆಳೆಸಿಕೊಂಡು ಪ್ರೀತಿಯ ಬೆಳಕಲ್ಲಿ ಸಮಸಮನಾಗಿ ನಿಂತು ಅರಿಯಬೇಕಾದ ಆಶಯವನ್ನು ಸಾಲುವ ಈ ಸಾಲುಗಳು ಸಿನಿಮಾದ ಅಂತರಾತ್ಮದ ಧ್ವನಿಯೂ ಹೌದು. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !