ಮಂಗಳವಾರ, ಜುಲೈ 27, 2021
24 °C
#boycottbollywood ಹ್ಯಾಷ್‌ಟ್ಯಾಗ್‌ ಅಭಿಯಾನ

ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ ಚರ್ಚೆ ಹುಟ್ಟು ಹಾಕಿದ ಸುಶಾಂತ್‌ ಸಾವು

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

ಸುಶಾಂತ್ ಸಿಂಗ್ ರಜಪೂತ್

ವಿಭಿನ್ನ ಶೈಲಿಯ ನಟನೆ, ನೃತ್ಯದ ಮೂಲಕ ಗಮನ ಸೆಳೆದವರು ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌. 

ಹನ್ನೊಂದು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಅಭಿನಯ ಕೌಶಲ ತೋರಿಸಿದ ಇಂಥ ಪ್ರತಿಭಾವಂತ ನಟ ಆತ್ಮಹತ್ಯೆ ಬೆನ್ನಲ್ಲೇ ಬಾಲಿವುಡ್‌ನಲ್ಲಿ ‘ಸ್ವಜನಪಕ್ಷಪಾತ’ದ ಆರೋಪ ಕೇಳಿಬಂದಿದೆ.

‘ಸುಶಾಂತ್‌, ಸ್ಪುರದ್ರೂಪಿ ನಟ. ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ನಟಿಸಿ, ಯಶಸ್ಸು ಕಂಡಿದ್ದ. ಇಷ್ಟೆಲ್ಲ ಗೆಲುವು ಅವರಿಗೆ ಖುಷಿ ತಂದುಕೊಡಲಿಲ್ಲ. ‘ನಾನು ಸಿನಿಮಾ ಕುಟುಂಬದವನಲ್ಲ ಎಂಬ ಅಳುಕು ಆತನಿಗಿತ್ತು’ ಎಂದು ಸುಶಾಂತ್‌ ಗೆಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.

#boycottbollywood ಹ್ಯಾಷ್‌ಟ್ಯಾಗ್ ಟ್ರೆಂಡ್‌

'ಬಾಲಿವುಡ್‌ ಮಂದಿ ತಮ್ಮ ಪಾರ್ಟಿ, ಮದುವೆ ಕಾರ್ಯಕ್ರಮಗಳಿಗೆ ಸುಶಾಂತ್‌ರನ್ನು ಆಹ್ವಾನಿಸುತ್ತಿರಲಿಲ್ಲ. ಹೀಗಾಗಿ ಅವರು ಎಲ್ಲರೊಂದಿಗೆ ಬೆರೆಯಲು ಆಗುತ್ತಿಲ್ಲ. ಇಂಥದ್ದೊಂದು ಅವಮಾನದ ಭಾವ ಅವರಲ್ಲಿತ್ತು' ಎಂದು ಅವರ ಗೆಳೆಯರು ಬರಹಗಳ ಮೂಲಕ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ‘ಇಂಥ ಖಿನ್ನತೆಯಿಂದಲೇ ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು' ಎಂಬ ಬೇಸರ ಸುಶಾಂತ್ ಸ್ನೇಹಿತರ ಬಳಗದಲ್ಲಿದೆ. 

‘ಬಿಹಾರ ಮೂಲದ ಸುಶಾಂತ್‌ಗೆ ಬಾಲಿವುಡ್‌ ಫ್ಯಾಮಿಲಿ ಒಳಗೆ ಒಬ್ಬನಾಗಲಿಲ್ಲ ಎನ್ನುವ ಕೊರಗು ಇತ್ತು' ಎನ್ನುವ ಗೆಳೆಯರು, ‘ಸ್ಟಾರ್‌ ಕಿಡ್‌ಗಳನ್ನೇ ಪ್ರಚಾರ ಮಾಡುತ್ತಾ ಗಾಡ್‌ಫಾದರ್‌ ಇಲ್ಲದೆ ಬರುವವರನ್ನು ದೂರ ತಳ್ಳುತ್ತಾರೆ' ಎಂಬ ಆಕ್ಷೇಪವನ್ನೂ ತಮ್ಮ ನೋವಿನ ಬರಹಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಸುಶಾಂತ್ ಸಾವು‌ ಸಿನಿಮಾ ರಂಗದಲ್ಲಿರುವ ಸ್ವಜನಪಕ್ಷಪಾತವನ್ನು ಮುನ್ನೆಲೆಗೆ ಬರುವಂತೆ ಮಾಡಿದೆ.

ಈಗ ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತ ಅತಿರೇಕಕ್ಕೆ ಹೋಗಿದೆ ಎಂದು ಅಭಿಮಾನಿಗಳು #boycottbollywood ಎಂಬ ಹ್ಯಾಶ್‌‌ ಟ್ಯಾಗ್‌ ಮೂಲಕ ಕೋಪ ಹೊರಹಾಕುತ್ತಿದ್ದಾರೆ.

ಇದು ಕೇವಲ ಅಭಿಮಾನಿಗಳ ಅಭಿಪ್ರಾಯಕ್ಕಷ್ಟೇ ಸೀಮಿತವಾಗಿಲ್ಲ. ಬಾಲಿವುಡ್‌ ನಟಿ ಕಂಗನಾ‌, ನಟ ಗುಲ್ಶನ್‌ ದೇವಯ್ಯ, ನಟಿ ಮೀರಾ ಚೋಪ್ರಾ ಅವರ ಹೇಳಿಕೆಗಳಿಂದ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. #boycottbollywood ಟ್ವಿಟ್ಟರ್‌ ಟ್ರೆಂಡ್‌ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಟ್ವೀಟ್‌ನಲ್ಲಷ್ಟೇ ಸಂತಾಪ ಸೂಚಿಸಲು ಸೀಮಿತರಾದ ಖ್ಯಾತ ನಟರ ವಿರುದ್ಧವೂ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೀರಾ ಚೋಪ್ರ ಟ್ವೀಟ್‌

ನಟಿ ಮೀರಾ ಚೋಪ್ರಾ, ಸುಶಾಂತ್‌ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದ ಬರಹ ಸಾಕಷ್ಟು ಚರ್ಚೆಗೆ ಬಂತು. ಅದರಲ್ಲಿ ಬಾಲಿವುಡ್‌ ದಿಗ್ಗಜ ಕುಟುಂಬಗಳು ಸುಶಾಂತ್‌ ಅವರನ್ನ ದೂರವಿಟ್ಟ ಬಗ್ಗೆ ಸೂಚ್ಯವಾಗಿ ತಿಳಿಸಿದ್ದರು. ‘ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದ  ಯುವ ನಟರ ಸಿನೆಮಾ ಫ್ಲಾಪ್‌ ಆದರೆ ಅವರನ್ನು ಅಸ್ಪೃಶ್ಯರಂತೆ ಕಾಣುತ್ತಾರೆ. ಹೊರಗಿನವರು ಹೊರಗೇ ಇರಬೇಕಾಗುತ್ತದೆ‘ ಎಂದು ಬರೆಯುವ ಮೂಲಕ ಮೀರಾ ಚೋಪ್ರಾ ಬಾಲಿವುಡ್‌ನಲ್ಲಿರುವ ಪಕ್ಷಪಾತವನ್ನು ತೆರೆದಿಟ್ಟಿದ್ದರು.

ಇದೇ ಟ್ವೀಟ್‌ ಅನ್ನು ಉಲ್ಲೇಖಿಸಿ ಬೆಂಗಳೂರು ಮೂಲದ ಬಾಲಿವುಡ್‌ ನಟ ಗುಲ್ಶನ್‌ ದೇವಯ್ಯ ಕೂಡಾ ಟ್ವೀಟ್‌ ಮಾಡಿದ್ದು, ‘ಬಾಲಿವುಡ್‌ ಅನ್ನೋದು ಒಂದು ಕುಟುಂಬವೇ ಅಲ್ಲ. ನಾವು ಹಾಗೇ  ಅಂದುಕೊಳ್ಳುತ್ತಿರುವುದೇ ಸಮಸ್ಯೆ. ಇದು ನಮ್ಮ ಕರ್ಮಭೂಮಿಯಷ್ಟೇ‘ ಎಂದಿದ್ದಾರೆ.

ಕಿಡಿಕಾರಿದ ಕಂಗನಾ

ಬಾಲಿವುಡ್‌ ಅಂಗಳದಲ್ಲಿ ನಡೆಯುವ ಅನ್ಯಾಯಗಳನ್ನು ಖಂಡಿಸುತ್ತಾ ಬಂದಿರುವ ಕಂಗನಾ ಕೂಡ ವಿಡಿಯೊ ಮೂಲಕ ಕಿಡಿ ಕಾರಿದ್ದಾರೆ. ’ಇದೊಂದು ಪೂರ್ವನಿಯೋಜಿತ ಕೊಲೆ’ ಎಂದೇ ಆರೋಪಿಸಿದ್ದಾರೆ. ಸುಶಾಂತ್‌ ತನ್ನ ಚಿತ್ರದ ಪ್ರಚಾರ ಸಮಯದಲ್ಲಿ ನೀಡಿದ್ದ ಹೇಳಿಕೆಯನ್ನೇ ಉಲ್ಲೇಖಿಸಿ ಮಾತನಾಡಿರುವ ಕಂಗನಾ, ’ಸುಶಾಂತ್‌ ಸಿನಿಮಾಗಳು ಪ್ರಶಸ್ತಿ ಪಡೆದಿದ್ದರೂ, ಅವರಿಗೆ ಹೆಚ್ಚಿನ ಮನ್ನಣೆ ನೀಡಲಿಲ್ಲ. ಬಾಲಿವುಡ್‌ ಅವರನ್ನು ಎಂದೂ ನಮ್ಮವರು ಎನ್ನುವ ಹಾಗೆ ಸ್ವೀಕರಿಸಿಲ್ಲ‘ ಎಂದಿದ್ದಾರೆ. 

’ಅಲ್ಲದೇ ಪತ್ರಕರ್ತರೂ ಆತನನ್ನು ಮಾನಸಿಕ ರೋಗಿ, ವ್ಯಸನಿ ಎಂದೆಲ್ಲಾ ಬರೆದಿದ್ದರು. ಆದರೆ ಸಂಜಯ್‌ ದತ್‌ ವ್ಯಸನಗಳು ನಿಮಗೆ ಇಷ್ಟವಾಗುವುದೇಕೆ?' ಎಂದು ಪ್ರಶ್ನಿಸಿದ್ದಾರೆ.

ಹಿಟ್ ಸಿನಿಮಾಗಳನ್ನು ನೀಡಿದ್ದರೂ ಸುಶಾಂತ್ ದೊಡ್ಡ ಅವಕಾಶಗಳನ್ನು ಕಳೆದುಕೊಂಡಿದ್ದರು. 'ಛಿಛೋರೆ‘ ಸಿನಿಮಾದ ಯಶಸ್ಸಿನ ಬಳಿಕ ಸುಶಾಂತ್ ಸುಮಾರು ಏಳು ಚಿತ್ರಗಳಿಗೆ ಸಹಿ ಹಾಕಿದ್ದರು. ಆದರೆ ಒಳ ರಾಜಕೀಯದಿಂದ ಆರು ತಿಂಗಳಲ್ಲಿ ಈ ಎಲ್ಲಾ ಸಿನಿಮಾಗಳನ್ನೂ ಅವರು ಕಳೆದುಕೊಂಡರು‘ ಎಂದು ರಾಜಕಾರಣಿ ಸಂಜಯ್ ನಿರುಪಮ್ ಕೂಡಾ ಆರೋಪಿಸಿದ್ದಾರೆ.

ಇನ್ನೂ ಸುಶಾಂತ್‌ ಅವರಿಗೆ ಆತ್ಮೀಯರಾದ ಶೇಖರ್ ಕಪೂರ್ ಅವರು ಟ್ವೀಟ್‌ ಮಾಡಿದ್ದು ’ನೀನು ಅನುಭವಿಸುತ್ತಿದ್ದ ನೋವು ನನಗೆ ತಿಳಿದಿತ್ತು. ನಿನ್ನನ್ನು ಕುಸಿಯುವಂತೆ ಮಾಡಿದ ಜನಗಳ ಕತೆ ನನಗೆ ಗೊತ್ತಿದೆ. ನೀನು ಎಷ್ಟೋ ಸಂದರ್ಭದಲ್ಲಿ ನನ್ನ ಹೆಗಲ ಮೇಲೆ ತಲೆ ಇಟ್ಟು ಅಳುತ್ತಿದ್ದೆ. ಕಳೆದ ಆರು ತಿಂಗಳಲ್ಲಿ ನಾನು ನಿನ್ನ ಜತೆಗಿರಬೇಕಿತ್ತು. ನೀನಾದರೂ ನನ್ನನ್ನು ಸಂಪರ್ಕಿಸಬೇಕಿತ್ತು‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಸೆಲೆಬ್ರಿಟಿಗಳ ಕೇಶ ವಿನ್ಯಾಸಕಿ ಸಪ್ನಾ ಭವಾನಿ ಕೂಡಾ ’ಇಲ್ಲಿ ಯಾರೊಬ್ಬರೂ ನಿನ್ನ ಗೆಳೆಯರಲ್ಲ.. ಸುಶಾಂತ್‌‘ ಅಂತಾ ಬರೆದುಕೊಂಡಿದ್ದಾರೆ. ನಟ ಅನುಭವ್‌ ಸಿನ್ಹಾ, ರಣವೀರ್ ಶೋರಿ, ನಿರ್ಮಾಪಕ ನಿಖಿಲ್‌ ದ್ವಿವೇದಿ ಕೂಡಾ ಬಾಲಿವುಡ್‌ ಒಳಗೆ ನಡೆಯುತ್ತಿರುವ ತಾರತಮ್ಯದ ಕುರಿತು ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು