ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರಾ’ ಸಿನಿಮಾ ರೂಪ

ತ್ರಿವಳಿ ತಲಾಖ್ ಕುರಿತ ಕಥೆ
Last Updated 17 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸಾರಾ ಅಬೂಬಕ್ಕರ್ ಬರೆದ ‘ವಜ್ರಗಳು’ ಕಾದಂಬರಿಯನ್ನು ಆಧರಿಸಿದ ಸಿನಿಮಾ ‘ಚಂದನವನ’ದಲ್ಲಿ ಸಿದ್ಧವಾಗುತ್ತಿದೆ. ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಕಥೆ ಹೊಂದಿರುವ ಈ ಚಿತ್ರಕ್ಕೆ ‘ಸಾರಾವಜ್ರ’ ಎಂಬ ಶೀರ್ಷಿಕೆ ಇಡಲಾಗಿದೆ. ಚಿತ್ರದ ನಿರ್ದೇಶನ ಆರ್ನಾ ಸಾದ್ಯಾ ಅವರದ್ದು.

ಚಿತ್ರದ ಕಥೆ ಶುರುವಾಗುವುದು 1989ರಲ್ಲಿ. ಆ ಇಸವಿಯಿಂದ ಪ್ರಸ್ತುತ ಕಾಲಘಟ್ಟದವರೆಗೆ ಬಂದು ನಿಲ್ಲುತ್ತದೆ. ತ್ರಿವಳಿ ತಲಾಖ್‌ನ ಪರಿಣಾಮವಾಗಿ ಹೆಣ್ಣುಮಗಳೊಬ್ಬಳು ಅನುಭವಿಸುವ ಸಂಕಟ ಈ ಚಿತ್ರದಲ್ಲಿನ ಕಥೆ ಎನ್ನುತ್ತಾರೆ ಆರ್ನಾ.

‘ಅನು ಪ್ರಭಾಕರ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ರಮೇಶ್ ಭಟ್, ಸುಧಾ ಬೆಳವಾಡಿ, ರೆಹಮಾನ್ ಹಾಸನ್, ಸುಹಾನಾ ಸೈಯದ್ ಅವರು ತಾರಾಬಳಗದಲ್ಲಿ ಇದ್ದಾರೆ. ಒಂದಿಷ್ಟು ಮಂದಿ ಹೊಸಬರೂ ಇದ್ದಾರೆ. ಮಂಗಳೂರು ಕಡೆ ಚಿತ್ರೀಕರಣ ಆಗಿದೆ’ ಎಂದು ‘ಪ್ರಜಾ ಪ್ಲಸ್‌’ ಜೊತೆ ಮಾತಿಗೆ ಸಿಕ್ಕಿದ್ದ ಆರ್ನಾ ಮಾಹಿತಿ ಹಂಚಿಕೊಂಡರು.

‘ಸಾರಾವಜ್ರ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಾರಾ ಅವರು ಬರೆದ ಕಥೆಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಸಿನಿಮ್ಯಾಟಿಕ್ ಆದ ಅಲ್ಪಸ್ವಲ್ಪ ಬದಲಾವಣೆಗಳು ಇವೆ’ ಎಂದು ಆರ್ನಾ ಹೇಳುತ್ತಾರೆ.

ಇವರು ಈ ಹಿಂದೆ ‘1098’, ‘ಮೂಢರಹಟ್ಟಿ’ ಎಂಬ ಸಿನಿಮಾಗಳನ್ನು ಮಾಡಿದವರು. ‘ಸಾರಾವಜ್ರ ಚಿತ್ರವನ್ನು ಕಮರ್ಷಿಯಲ್ ಅಥವಾ ಕಲಾತ್ಮಕ ಎಂದು ವಿಭಾಗ ಮಾಡುವ ಯತ್ನಕ್ಕೆ ಕೈಹಾಕಿಲ್ಲ. ಒಳ್ಳೆಯ ಕಥೆಯೊಂದನ್ನು ಸಿನಿಮಾ ರೂಪದಲ್ಲಿ ಹೇಳಿದ್ದೇವೆ.’ ಎಂಬ ಮಾತು ಸೇರಿಸಿದರು.

ತಮ್ಮ ಕಾದಂಬರಿ ಆಧರಿಸಿದ ಸಿನಿಮಾ ಮಾಡಲು ಸಾರಾ ಅಬೂಬಕ್ಕರ್ ಅವರು ಆರಂಭದಲ್ಲಿ ಒಪ್ಪಿಗೆ ನೀಡಲಿಲ್ಲ. ಆದರೆ, ‘ನಿಮ್ಮ ಕಾದಂಬರಿಯ ಕಥೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇವೆ’ ಎಂಬ ಭರವಸೆ ನೀಡಿದ ನಂತರ ಒಪ್ಪಿಕೊಂಡರಂತೆ. ಚಿತ್ರವನ್ನು ಯುಗಾದಿ ವೇಳೆಗೆ ತೆರೆಗೆ ತರಬೇಕು ಎಂಬ ಉದ್ದೇಶ ಸಿನಿಮಾ ತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT