ಭಾನುವಾರ, ಆಗಸ್ಟ್ 1, 2021
27 °C

ಚಂದನವನಕ್ಕೆ ಹೊಸ ನಾಯಕ ‘ಕಾರ್ತಿಕ್‌ ಹೆಬ್ಬಾರ್‌’

ಸುಮನಾ ಕೆ. Updated:

ಅಕ್ಷರ ಗಾತ್ರ : | |

ಹರಿಪ್ರಿಯಾ ಮತ್ತು ಸುಮಲತಾ ಅಂಬರೀಷ್‌ ಜತೆಯಾಗಿ ನಟಿಸಿರುವ ‘ಡಾಟರ್‌ ಆಫ್‌ ಪಾರ್ವತಮ್ಮ’ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದ ನಟ ಕಾರ್ತಿಕ್‌ ಹೆಬ್ಬಾರ್‌ಗೆ‌ ಆ ಚಿತ್ರವೇ ಚಂದನವನದಲ್ಲಿ ಅವಕಾಶದ ಬಾಗಿಲನ್ನು ತೆರೆಯಿತು. ಆ ಚಿತ್ರದಲ್ಲಿ ಅವರ ನಟನೆಯ ಖದರ್‌ಗೆ ಪ್ರಶಂಸೆ ವ್ಯಕ್ತವಾಗುವುದರ ಜೊತೆಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು. ಈಗ ಕಾರ್ತಿಕ್‌ ಕೈಯಲ್ಲಿ ಮೂರು ಸಿನಿಮಾಗಳಿದ್ದು, ಸದ್ಯದಲ್ಲೇ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪ್ರವೇಶಿಸಲಿದ್ದಾರೆ. 

ಕಾರ್ತಿಕ್‌ ಮೂಲತಃ ಕುಂದಾಪುರದ ತೆಕ್ಕಟ್ಟೆಯವರು. ಬೆಳೆದಿದ್ದು ಬೆಂಗಳೂರಿನಲ್ಲಿ. ಚಿಕ್ಕಂದಿನಿಂದಲೂ ಇವರಿಗೆ ಉಪೇಂದ್ರ ಅಭಿನಯದ ಸಿನಿಮಾಗಳೆಂದರೆ ಭಾರಿ ಇಷ್ಟ. 

ಕಾರ್ತಿಕ್‌ ಹೆಬ್ಬಾರ್‌ಗೆ ಸಿನಿ ಕ್ಷೇತ್ರದ ಕೆಲವರ ಪರಿಚಯವಿದ್ದರೂ, ಅವರಿಗೆ ಚಿತ್ರರಂಗದ ಪ್ರವೇಶ ಸುಲಭದ್ದಾಗಿರಲಿಲ್ಲ. 2017ರಲ್ಲಿ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಕೊನೆಕ್ಷಣದಲ್ಲಿ ಆ ಚಿತ್ರದಿಂದ ಅವರು ಹಿಂದೆ ಸರಿಯುವಂತಾಯಿತು. ಸಿನಿಮಾ ಕ್ಷೇತ್ರದಲ್ಲಿ ಆರಂಭದಲ್ಲಿ ಕಹಿಯುಂಡ ಅವರು, ನಂತರ ಮೂರು ವರ್ಷಗಳ ಕಾಲ ಸಿನಿಮಾ ಸಹವಾಸವೇ ಬೇಡ ಎಂದು ಸ್ವಂತ ಉದ್ಯಮದಲ್ಲಿ ಮುಂದುವರಿದರು. ವಾಪಸ್‌ ಅವರಲ್ಲಿ ಸಿನಿಮಾದ ಆಸೆಯನ್ನು ಚಿಗುರಿಸಿದ್ದು ‘ಕಿರಿಕ್‌ ಪಾರ್ಟಿ’ ಸಿನಿಮಾ.

ಹೀಗೆ ಪುನಃ ಸಿನಿಕ್ಷೇತ್ರದ ಕಡೆಗೆ ಮುಖ ಮಾಡಿದ ಕಾರ್ತಿಕ್‌ಗೆ ‘ಕಟ್ಟುಕತೆ’ ಸಿನಿಮಾದಲ್ಲಿ ಪೋಷಕ ಪಾತ್ರ ಸಿಕ್ಕಿತು. ಅವರ ಸಿನಿಮಾ ಆಸಕ್ತಿಯನ್ನು ಗುರುತಿಸಿದ ಸ್ನೇಹಿತ ಸೂರ್ಯ, ತಾವು ನಾಯಕನಾಗಿ ನಟಿಸುತ್ತಿರುವ ‘ಕಟ್ಟುಕತೆ’ ಸಿನಿಮಾದಲ್ಲಿ ಸಿಸಿಬಿ ಅಧಿಕಾರಿ ಪಾತ್ರವನ್ನು ಕೊಡಿಸಿದರು.

ಈ ಸಿನಿಮಾ ಮುಗಿಯುವಷ್ಟರಲ್ಲಿ ಕಾರ್ತಿಕ್‌ಗೆ ‘ಡಾಟರ್‌ ಆಫ್‌ ಪಾರ್ವತಮ್ಮ’ ಸಿನಿಮಾದಲ್ಲಿ  ಖಳನಾಯಕನಾಗಿ ನಟಿಸುವ ಅವಕಾಶ ಹುಡುಕಿಕೊಂಡು ಬಂತು. ಇದರಲ್ಲಿ ಹರಿಪ್ರಿಯಾ ತನಿಖಾಧಿಕಾರಿಯಾಗಿ ನಟಿಸಿದ್ದರೆ, ಅವರ ಜೊತೆ ವಿಲನ್‌ ಪಾತ್ರದಲ್ಲಿ ಕಾರ್ತಿಕ್ ಅಭಿನಯಿಸಿದರು.‌ ಇವರ ನಟನೆಗೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಯಿತು. ಈಗ ಚಂದನವನಕ್ಕೆ ನಾಯಕನಾಗಿ ಎಂಟ್ರಿ ಕೊಡಲು ಕಾರ್ತಿಕ್‌ ಸಿದ್ಧತೆ ನಡೆಸುತ್ತಿದ್ದಾರೆ. 

ಕಾರ್ತಿಕ್‌ ಮೊದಲ ಚಿತ್ರ ‘ಮ್ಯಾಡ್‌’

ಕಾರ್ತಿಕ್‌ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಚಿತ್ರದ ಹೆಸರು ‘ಮ್ಯಾಡ್‌’. ಈ ಚಿತ್ರದ ಶೀರ್ಷಿಕೆಯನ್ನು ಮಾರ್ಚ್‌ ತಿಂಗಳಿನಲ್ಲಿಯೇ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರದ ಕೆಲಸಗಳನ್ನು ಮುಂದೂಡಲಾಗಿದೆ.

‘ಮ್ಯಾಡ್’ನಲ್ಲಿ ತಮ್ಮ ಪಾತ್ರದ ಬಗ್ಗೆ ಕಾರ್ತಿಕ್‌ಗೆ ಸಾಕಷ್ಟು ನಿರೀಕ್ಷೆಯಿದೆ. ಇದರಲ್ಲಿ ಡ್ರಗ್‌ ಮಾಫಿಯಾ ನಾಯಕನಾಗಿ ನಟಿಸಿದ್ದಾರೆ. ‘ಮ್ಯಾಡ್’‌ ಚಿತ್ರದ ನಿರ್ದೇಶನದ ಹೊಣೆಯೂ ಕಾರ್ತಿಕ್‌ ಅವರದೇ. ಇದು ಸಿನಿಪ್ರಿಯರ ತಂಡದ ಚಿತ್ರ. ಸಮಾನ ಮನಸ್ಕ ಸಿನಿಪ್ರೇಮಿಗಳು ಈ ಚಿತ್ರದ ಸಂಗೀತ ನಿರ್ದೇಶನ, ಛಾಯಾಗ್ರಹಣ, ಪ್ರಚಾರ... ಎಲ್ಲಾ ಕೆಲಸಗಳನ್ನು ಹಂಚಿಕೊಂಡಿದ್ದಾರೆ. ‘ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಲಾಕ್‌ಡೌನ್‌ ತೆರವಾದ ನಂತರ ನಾಯಕಿಯ ಆಯ್ಕೆ ನಡೆಯಲಿದೆ’ ಎಂದು ಕಾರ್ತಿಕ್‌ ಮಾಹಿತಿ ನೀಡಿದರು. ಇದಕ್ಕೆ ಬಂಡವಾಳ ಹೂಡುತ್ತಿರುವುದು ವಿಘ್ನೇಶ್ವರ ಪಿಕ್ಚರ್ಸ್‌ ಮತ್ತು ಅಸ್ಮಿ ಎಂಟರ್‌ಟೇನ್‌ಮೆಂಟ್‌. 

ಪೊಲೀಸ್‌ ಅಧಿಕಾರಿ ಪಾತ್ರ

ಕಾರ್ತಿಕ್‌ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಹೊಸ ಚಿತ್ರದ ಶೀರ್ಷಿಕೆ ‘ಠಾಣೆ’. ಇದರಲ್ಲಿ ಅವರು ಪೊಲೀಸ್‌ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ‘ಇದು ನನ್ನ ಕನಸಿನ ಪಾತ್ರ. ಠಾಣೆಯೊಂದರ ಸುತ್ತ ಚಿತ್ರಕತೆ ಸಾಗುತ್ತದೆ’ ಎಂದು ಸಿನಿಮಾ ಕಥೆಯ ಎಳೆಯನ್ನು ಬಿಚ್ಚಿಟ್ಟರು. ಈ ಸಿನಿಮಾದ ಕೆಲಸ ನವೆಂಬರ್‌– ಡಿಸೆಂಬರ್‌ ತಿಂಗಳಲ್ಲಿ ಆರಂಭವಾಗಲಿದೆ. ಮೂರನೇ ಚಿತ್ರದಲ್ಲಿ ಅವರದು ದರೋಡೆಕೋರನ ಪಾತ್ರ. 

ಕಾರ್ತಿಕ್‌ ಹೆಬ್ಬಾರ್‌ ನಾಯಕ ಅಥವಾ ನಟನಾಗಬೇಕು ಎಂಬ ಕನಸಿಟ್ಟುಕೊಂಡು ಸಿನಿಕ್ಷೇತ್ರಕ್ಕೆ ಪ್ರವೇಶಿಸಿದವರಾದರೂ ನಿರ್ದೇಶನ, ಚಿತ್ರಕತೆ ಅವರ ಆಸಕ್ತಿಯ ವಿಷಯಗಳು. ಇದೇ ದಿಕ್ಕಿನಲ್ಲಿ ಪ್ರಥಮ ಹೆಜ್ಜೆ ಇಟ್ಟಿರುವ ಅವರು ಭವಿಷ್ಯದಲ್ಲಿ ಭಿನ್ನ ಮಾದರಿಯ ಸಿನಿಮಾಗಳ ಪ್ರಯೋಗಕ್ಕೆ ಇಳಿಯುವ ಹುಮ್ಮಸ್ಸಿನಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು