ಗುರುವಾರ , ಜುಲೈ 7, 2022
20 °C

Interview| ಸಿನಿಮಾ–ರಾಜಕೀಯ ಪಯಣ: ನಿಖಿಲ್‌ ಕುಮಾರಸ್ವಾಮಿ ಜೊತೆ ಮಾತುಕತೆ

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

‘ಜಾಗ್ವಾರ್‌’ ಹತ್ತಿ ‘ಸೀತಾರಾಮ ಕಲ್ಯಾಣ’ ಮಾಡಿಕೊಂಡು ‘ರೈಡರ್‌’ ಆಗಿ ಸಿನಿಪಯಣದಲ್ಲಿ ರೈಡಿಂಗ್‌ ಮಾಡಲು ನಟ ನಿಖಿಲ್‌ ಕುಮಾರ್‌ ಸಜ್ಜಾಗಿದ್ದಾರೆ. ಇಂದು ರೈಡರ್‌ ಸಿನಿಮಾ ತೆರೆ ಕಾಣುತ್ತಿದ್ದು, ಸಿನಿಮಾ–ರಾಜಕೀಯ ಪಯಣದ ಬಗ್ಗೆ ‘ಸಿನಿಮಾ ಪುರವಣಿ’ ಜೊತೆಗೆ ಮಾತಿಗಿಳಿದ ನಿಖಿಲ್‌ ಹೀಗೆನ್ನುತ್ತಾರೆ...

***

ಸ್ಪೋರ್ಟ್ಸ್‌ ಆ್ಯಕ್ಷನ್‌ ಡ್ರಾಮಾ ರೈಡರ್‌ನಲ್ಲಿ ನಿಖಿಲ್‌ ರೈಡಿಂಗ್‌ ಹೇಗಿದೆ?

ನಾನು ಇಲ್ಲಿಯವರೆಗೂ ಪ್ರತಿಯೊಬ್ಬರಿಗೂ ಹಿಡಿಸುವ ಸಿನಿಮಾ ಮಾಡಿಕೊಂಡು ಬಂದಿದ್ದೇನೆ. ಪ್ರೇಕ್ಷಕರೂ ನನ್ನನ್ನು ಬೆಳೆಸಿದ್ದಾರೆ. ರೈಡರ್‌ ಪ್ರತಿ ವರ್ಗಕ್ಕೂ ಹಿಡಿಸುವ ಸಿನಿಮಾ. ಇಡೀ ತಂಡ ಒಂದು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಊಟಿಯಲ್ಲಿ ‘ಸೀತಾರಾಮ ಕಲ್ಯಾಣ’ ಚಿತ್ರೀಕರಣದ ವೇಳೆಯೇ ರೈಡರ್‌ ಸಿನಿಮಾದ ಎಳೆ ಹುಟ್ಟಿಕೊಂಡಿತ್ತು. ಚಿತ್ರದ ನಿರ್ಮಾಪಕರಾದ ಚಂದ್ರು ಹಾಗೂ ಸುನಿಲ್‌ ಅವರು ವಿಜಯ್‌ ಕುಮಾರ್‌ ಕೊಂಡ ಎನ್ನುವ ನಿರ್ದೇಶಕರ ಹೆಸರು ಪ್ರಸ್ತಾಪ ಮಾಡಿದ್ದರು. ಅಲ್ಲಿಂದ ಶುರುವಾದ ಈ ಪಯಣ ಇಲ್ಲಿಯವರೆಗೆ ಬಂದು ನಿಂತಿದೆ. ಚಿತ್ರ ಬಿಡುಗಡೆಗಾಗಿ ಸುಮಾರು ಎರಡು ವರ್ಷ ಕಾದಿದ್ದೇವೆ. ಇದೀಗ ರೈಡಿಂಗ್‌ ಹೊರಡಲು ನಮ್ಮ ಸರದಿ ಬಂದಿದೆ. ಈ ಸಿನಿಮಾ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಈ ಬಗ್ಗೆ ನಾನು ಹೇಳಬಾರದು. ಪ್ರೇಕ್ಷಕರೇ ವೀಕ್ಷಿಸಿ ಅಭಿಪ್ರಾಯ ನೀಡಬೇಕು.

ಮೊನ್ನೆ ಮೊನ್ನೆ ಮಚ್ಚು, ಲಾಂಗು ಹಿಡಿಸ್ತಿಲ್ಲ ಎಂದು ಬೇಜಾರ್‌ ಮಾಡ್ಕೊಂಡಿದ್ರಲ್ಲ?

(ನಗುತ್ತಾ..) ಬೇಜಾರಲ್ಲ. ತಮಾಷೆಗೆ ಹೇಳಿದ್ದೆ. ಒಬ್ಬ ಕಲಾವಿದನಿಗೆ ಅನೇಕ ಪಾತ್ರಗಳನ್ನು ಮಾಡಬೇಕು ಎನ್ನುವ ಕನಸು ಇರುತ್ತದೆ. ಇದೂ ನನ್ನ ಒಂದು ಕನಸು ಅಷ್ಟೆ. ನಾನು ಯಾವತ್ತೂ ಸಿನಿಮಾ ಮಾಡಿದರೂ ಒಂದೇ ವರ್ಗಕ್ಕೆ ಸೀಮಿತವಾದ ಸಿನಿಮಾ ಮಾಡುವುದಿಲ್ಲ. ‘ಸೀತಾರಾಮ ಕಲ್ಯಾಣ’ದಂಥ ಕೌಟುಂಬಿಕ ಚಿತ್ರಗಳಲ್ಲಿ ಪ್ರೇಕ್ಷಕರು ನನ್ನನ್ನು ಮೆಚ್ಚಿಕೊಳ್ಳುತ್ತಾರೆ. ಇದರ ಜೊತೆಗೆ ಮಾಸ್‌ ಎಲಿಮೆಂಟ್ಸ್‌ ಇರುವ, ಇಡೀ ಕುಟುಂಬ ಕುಳಿತು ನೋಡುವ ಸಿನಿಮಾಗಳನ್ನು ಮಾಡುತ್ತೇನೆ. ಜನರು ಯಾವ ಪಾತ್ರಗಳಲ್ಲಿ ನನ್ನನ್ನು ನೋಡಲು ಬಯಸುತ್ತಾರೆ ಎನ್ನುವ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು, ಸಿನಿಮಾ ಮಾಡಿಕೊಂಡು ಬಂದಿದ್ದೇನೆ. 

ರೈಡರ್‌ನಲ್ಲಿ ಆ್ಯಕ್ಷನ್‌, ಡ್ಯಾನ್ಸಿಂಗ್‌ನಲ್ಲಿ ಪಿ.ಯು ಪಾಸ್‌ ಆಗಿ ಡಿಗ್ರಿ ಪಡೆದಿರೋ ಹಾಗಿದೆ?

ಪ್ರತಿ ಚಿತ್ರವೂ ಹೊಸ ಅನುಭವ. ವಿಶೇಷವಾಗಿ ರೈಡರ್‌ ಚಿತ್ರದಲ್ಲಿರುವ ನನ್ನ ಪಾತ್ರವೂ ನನಗೆ ಹೊಸ ಅನುಭವ. ಇಲ್ಲಿಯವರೆಗೂ ಮಾಡಿರುವ ಸಿನಿಮಾಗಳ ಪಾತ್ರಕ್ಕೆ ಹೋಲಿಸಿದರೆ, ಇದು ಮನಸ್ಸಿಗೆ, ಹೃದಯಕ್ಕೆ ಬಹಳ ಹತ್ತಿರವಾಗಿರುವ ಪಾತ್ರ. ವಿಜಯ್‌ ಕುಮಾರ್‌ ಕೊಂಡ ಇಂಥ ಜಾನರ್‌ ಸಿನಿಮಾಗಳಲ್ಲಿ ಅದ್ಭುತ ಹಿಡಿತ ಸಾಧಿಸಿದ್ದಾರೆ. ಅರ್ಜುನ್‌ ಜನ್ಯ ಕನ್ನಡ ಚಿತ್ರರಂಗಕ್ಕೆ ಒಂದು ಕೊಡುಗೆ. ನಮ್ಮ ಚಿತ್ರಕ್ಕೆ ಅವರು ‘ಡವ್ವಾ ಡವ್ವಾ’ ಮತ್ತು ‘ಮೆಲ್ಲನೆ’ ಎಂಬ ಎರಡು ಉಡುಗೊರೆ ನೀಡಿದ್ದಾರೆ. ‘ಡವ್ವಾ ಡವ್ವಾ’ ಹಾಡು ಹಿಟ್‌ ಆಗಲು ಆ ಹುಕ್‌ ಲೈನ್‌ ಕಾರಣ.

ಪರ ಭಾಷೆಗಳ ಚಿತ್ರಗಳು ಕನ್ನಡದಲ್ಲಿ ಡಬ್‌ ಆದರೂ ಕರ್ನಾಟಕದಲ್ಲಿ ಪರ ಭಾಷೆಗಳಲ್ಲೇ ಸಿನಿಮಾ ಪ್ರದರ್ಶನ ಕಾಣುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ? 

ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ದೊಡ್ಡ ಸಿನಿಮಾಗಳು ಬಂದಾಗ ಕನ್ನಡ ಸಿನಿಮಾಗಳಿಗೆ ಆದ್ಯತೆ ಕೊಡುವುದು ತಪ್ಪುತ್ತಿದೆ. ಹೀಗೆ ಆಗಬಾರದು. ಕನ್ನಡ ಭಾಷೆ ಎಂದು ಬಂದಾಗ ಕನ್ನಡಿಗರು ಪರವಾಗಿ ನಿಂತುಕೊಳ್ಳುತ್ತಾರೆ. ಈ ರೀತಿ ನಿಂತ ಸನ್ನಿವೇಶಗಳನ್ನು ನೋಡಿದ್ದೇವೆ. ಡಬ್ಬಿಂಗ್‌ ವಿಚಾರದಲ್ಲಿ ನಾನು ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎನಿಸುತ್ತದೆ. ಈ ಬಗ್ಗೆ ಚರ್ಚಿಸಲು ಇನ್ನೂ ಹಿರಿಯ ಕಲಾವಿದರು ಇದ್ದಾರೆ.

ಕರ್ನಾಟಕ ಎಲ್ಲ ಭಾಷೆಯ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ. ಅಕ್ಕಪಕ್ಕದ ರಾಜ್ಯದಲ್ಲಿ ಸಿನಿಮಾ ಮಾಡುವವರಿಗೆ ಇದು ತಿಳಿದಿದೆ. ಅವರು ಇಂದು 250–300 ಕೋಟಿ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡುತ್ತಾರೆ. ಕನ್ನಡದಲ್ಲಿ ಅಷ್ಟು ಬಜೆಟ್‌ ಹಾಕಿ ಸಿನಿಮಾ ಮಾಡುವ ಸಾಧ್ಯತೆಗಳು ಬಹಳ ಕಡಿಮೆ. ಕೆಲವೇ ಹೀರೊಗಳಿಗೆ ಈ ಅವಕಾಶ ಸಿಗುತ್ತದೆ. ಹೀಗೆಂದ ಮಾತ್ರಕ್ಕೆ ₹ 500 ಕೋಟಿ ಬಜೆಟ್‌ ಸಿನಿಮಾ ಚೆನ್ನಾಗಿರುತ್ತದೆ, ₹ 50 ಲಕ್ಷದಲ್ಲಿ ಮಾಡಿದ ಸಿನಿಮಾ ಚೆನ್ನಾಗಿರುವುದಿಲ್ಲ ಎಂದಲ್ಲ. ಸಿನಿಮಾದ ವಿಷಯ ಚೆನ್ನಾಗಿದ್ದರೆ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ. ಚಿತ್ರತಂಡದ ಪ್ರಯತ್ನವನ್ನೂ ಅವರು ಪ್ರೋತ್ಸಾಹಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಂಥ ಸಿನಿಮಾಗಳನ್ನು ಮಾಡುತ್ತಿದ್ದಾರೆ. ದುಡ್ಡು ಹಾಕಿದ ಮಾತ್ರಕ್ಕೆ ಸಿನಿಮಾ ನೋಡುವುದಿಲ್ಲ.   

ಕುಮಾರಸ್ವಾಮಿ ಅವರಿಗೆ ಸಿನಿಮಾ ಹಿನ್ನೆಲೆಯೂ ಇದೆ. ರಾಜಕೀಯ ಬಿಟ್ಟು ಈ ಸಂದರ್ಭದಲ್ಲಿ ಅವರ ಜೊತೆ ಸಿನಿಮಾ ಚರ್ಚೆ ಮಾಡ್ತೀರಾ?

ಅಪ್ಪ, ರೈಡರ್‌ ಸಿನಿಮಾ ನೋಡಿದರು. ಬಹಳ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಸಿನಿಮಾ ಇಷ್ಟವಾಯಿತು. ನಾನು ಅವರನ್ನು ಹೆಚ್ಚು ಸಿನಿಮಾ ಕಡೆಗೆ ಎಳೆಯಲು ಇಷ್ಟಪಡುವುದಿಲ್ಲ. ರಾಜಕಾರಣದಲ್ಲಿ ಅವರು ಬಹಳ ಸಕ್ರಿಯರಾಗಿದ್ದಾರೆ. ಇದನ್ನು ಹೊರತುಪಡಿಸಿ ಕೆಲವೊಮ್ಮೆ ಸಿನಿಮಾ ಬಗ್ಗೆಯೂ ಚರ್ಚೆ ಮಾಡುತ್ತಿರುತ್ತೇನೆ. ಸಿನಿಮಾ ವಿಚಾರದಲ್ಲೂ ಅವರ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಿರುತ್ತೇನೆ.

ತಂದೆಯವರ ಸಿನಿಮಾ ಅನುಭವವನ್ನು ಬಳಸಿಕೊಂಡು ನಿರ್ಮಾಣ ಸಂಸ್ಥೆ ತೆರೆಯುವ ಚಿಂತನೆ ಏನಾದರೂ ಇದೆಯೇ?

ಇಲ್ಲಿಯವರೆಗೂ ಆರೇಳು ಸಿನಿಮಾಗಳನ್ನು ನಮ್ಮ ಸಂಸ್ಥೆ ನಿರ್ಮಾಣ ಮಾಡಿದೆ. ತಂದೆಯವರು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದ ಬಳಿಕ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಹೊಸ ಸಂಸ್ಥೆಯೊಂದನ್ನು ಹುಟ್ಟು ಹಾಕಲು ನಾನು ಈಗಾಗಲೇ ತೀರ್ಮಾನಿಸಿದ್ದೇನೆ. ನನ್ನ ಹೊಸ ಸಿನಿಮಾ ಮುಂದಿನ ತಿಂಗಳು ಸೆಟ್ಟೇರಲಿದೆ. ಹೀಗಾಗಿ ಸಂಸ್ಥೆ ಆರಂಭಕ್ಕೆ ಕೊಂಚ ಸಮಯ ತೆಗೆದುಕೊಳ್ಳುತ್ತಿದ್ದೇನೆ. ಯಾವುದೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಮಾಡಬೇಕು. ಪ್ರೊಡಕ್ಷನ್‌ ಎನ್ನುವುದು ಅಷ್ಟು ಸುಲಭವಾದ ವಿಚಾರವಲ್ಲ. ತುಂಬಾ ಗಮನಹರಿಸಬೇಕು. ಇದನ್ನು ನಿಭಾಯಿಸಲು ಸೂಕ್ತವಾದ ಜನರು ಬೇಕು. ಅಂಥವರನ್ನು ಆಯ್ಕೆ ಮಾಡಬೇಕು, ನಮ್ಮ ಪಾಲ್ಗೊಳ್ಳುವಿಕೆಯೂ ಅಷ್ಟೇ ಇರಬೇಕು. ವಿಷಯಾಧಾರಿತ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ, ಒಂದಷ್ಟು ಜನರಿಗೆ ಕೆಲಸ ಸಿಗುವ ಸಂಸ್ಥೆಯನ್ನು ಹುಟ್ಟುಹಾಕುವ ಕನಸಿನಲ್ಲಿ ನಾನಿದ್ದೇನೆ. 

ತಮಿಳುನಾಡಿನಲ್ಲಿ ರಾಜಕೀಯ–ಸಿನಿಮಾ ಎರಡರಲ್ಲೂ ಹಿಟ್‌ ಆದವರ ಪಟ್ಟಿಯೇ ಇದೆ. ನಿಖಿಲ್‌ ಹೀಗಾಗುತ್ತಾರಾ?

ಕರ್ನಾಟಕದ ಜನರು ಬಹಳ ಪ್ರ್ಯಾಕ್ಟಿಕಲ್‌. ಅವರು ಈ ರೀತಿ ಇರುವುದೂ ಒಳ್ಳೆಯದು. ಸಿನಿಮಾ ಮತ್ತು ರಾಜಕೀಯ ಸೂರ್ಯ ಚಂದ್ರ ಇದ್ದ ರೀತಿ. ಎರಡನ್ನೂ ಒಟ್ಟಿಗೆ ಮಾಡುವುದು ಸೂಕ್ತವಲ್ಲ. ಈ ರೀತಿಯ ಆಲೋಚನೆಗಳೂ ನನ್ನ ತಲೆಯಲ್ಲಿಲ್ಲ. ಅಂಥ ಭ್ರಮೆಯಲ್ಲೂ ಬದುಕುತ್ತಿಲ್ಲ. ಸಿನಿಮಾಗೆ ಬಂದಾಗ ಸಿನಿಮಾಗೆ ಸೀಮಿತವಾಗಿರುತ್ತೇನೆ. ರಾಜಕೀಯದಲ್ಲೂ ಹಾಗೇ. ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಇದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಪಕ್ಷ ಎಂದು ಬಂದಾಗ ಒಬ್ಬ ಕಾರ್ಯಕರ್ತನಾಗಿ ದುಡಿಯುತ್ತೇನೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು