ಮಂಗಳವಾರ, ಅಕ್ಟೋಬರ್ 15, 2019
26 °C

ನಿಶ್ಶಬ್ಧಂ: ಮಾಧವನ್‌ ಅಂಧ ಸಂಗೀತಗಾರ

Published:
Updated:
Prajavani

ಬಹುನಿರೀಕ್ಷಿತ ‘ನಿಶ್ಶಬ್ಧಂ’ ಚಿತ್ರದಲ್ಲಿ ನಟ ಆರ್‌. ಮಾಧವನ್‌ ಅವರು ಅಂಧ ಸೆಲೆಬ್ರಿಟಿ ಸಂಗೀತಗಾರನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಆರ್‌. ಮಾಧವನ್‌ ಅವರು ಹಸಿರು ಹುಲ್ಲಿನ ನಡುವೆ ಕುಳಿತು ಪಿಟೀಲು ನುಡಿಸುತ್ತಿದ್ದಾರೆ. ಕಣ್ಣಿಗೆ ಕಪ್ಪು ಕನ್ನಡಕ ಅವರು ಧರಿಸಿದ್ದಾರೆ.

ಈ ಚಿತ್ರವನ್ನು ಹೇಮಂತ್‌ ಮಧುಕರ್‌ ಅವರು ನಿರ್ದೇಶನ ಮಾಡಿದ್ದು, ಅನುಷ್ಕಾ ಶೆಟ್ಟಿ, ಅಂಜಲಿ, ಶಾಲಿನಿ ಪಾಂಡೆ, ಹಾಲಿವುಡ್‌ ನಟರಾದ ಮೈಕಲ್‌ ಮ್ಯಾಡ್ಸನ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ಮಾತು ಬಾರದ, ಕಿವಿ ಕೇಳದ ಪಾತ್ರದಲ್ಲಿ ನಟಿಸಿದ್ದು, ಮಾಧವನ್‌ ಅವರ ಪತಿಯಾಗಿ ನಟಿಸಿದ್ದಾರೆ. ಈ ಚಿತ್ರವು ಒಂದು ಕೊಲೆಯ ಸುತ್ತ ಸಾಗಲಿದ್ದು, ಕೊಲೆಗಾರನ  ಪತ್ತೆಹಚ್ಚುವಿಕೆ ಕುರಿತು ಚಿತ್ರ ಕತೆಯಿದೆ. ಚಿತ್ರದ ಪೂರ್ತಿ ಚಿತ್ರೀಕರಣವು ಅಮೆರಿಕದ ಸಿಯಾಟಲ್‌ನಲ್ಲಿ ನಡೆದಿದೆ.

ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ನಟಿ ಅಂಜಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಶೇಕಡ 60ಕ್ಕಿಂತಲೂ ಹೆಚ್ಚು ಜನ ಅಂತರರಾಷ್ಟ್ರೀಯ ನಟ– ನಟಿಯರು ನಟಿಸಿದ್ದಾರೆ. ಹಾಗಾಗಿ ಈ ಚಿತ್ರವನ್ನು ಇಂಗ್ಲಿಷ್‌ ಭಾಷೆಯಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.ಇಂಗ್ಲಿಷ್‌ನಲ್ಲಿ ‘ಸೈಲೆನ್ಸ್‌’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಈ ಚಿತ್ರವನ್ನು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಚಿತ್ರೀಕರಣ ನಡೆಸಿದ್ದು, ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲೂ ಬಿಡುಗಡೆ ಮಾಡಲಾಗುತ್ತದೆ. ಇದೇ ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ತಮಿಳಿಗೆ ಹಾರಿದ ಬುರ್ಲಿ

Post Comments (+)