ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥದ ಶಿಕಾರಿಯ ಕಥೆ

Last Updated 27 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬೇಟೆಗಾರರು ಕಾಡಿನಲ್ಲಿ ಪ್ರಾಣಿಗಳನ್ನು ಶಿಕಾರಿ ಮಾಡುತ್ತಾರೆ. ಸಮಾಜದಲ್ಲಿ ಸ್ವಾರ್ಥದ ಮೂಲಕ ಬೇರೊಬ್ಬರನ್ನು ಶಿಕಾರಿ ಮಾಡುವವರೂ ಇದ್ದಾರೆ. ಇಂತಹವರನ್ನು ಸಮಾಜ ಹೇಗೆ ನೋಡುತ್ತದೆ? ಇಂಥ ಎಳೆಯನ್ನು ಇಟ್ಟುಕೊಂಡು ಮಾಡಿದ ಚಿತ್ರವೇ ‘ಒಂದು ಶಿಕಾರಿಯ ಕಥೆ’.

ಪದವಿ ಶಿಕ್ಷಣ ಹಂತದಿಂದಲೂ ಮನಸ್ಸಿನಲ್ಲಿ ಬಣ್ಣದಲೋಕದ ಕನಸು ತುಂಬಿಕೊಂಡಿರುವ ಸಚಿನ್‌ ಶೆಟ್ಟಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಅವರೊಟ್ಟಿಗೆ ರಾಜೀವ್‌ ಶೆಟ್ಟಿ ಬಂಡವಾಳ ಹೂಡಿದ್ದಾರೆ.

ಟ್ರೇಲರ್‌ ತೋರಿಸಿ ಚಿತ್ರತಂಡ ಮಾತಿಗೆ ಕುಳಿತುಕೊಂಡಿತು. ನಾಯಕಿ ಸಿರಿ ಪ್ರಹ್ಲಾದ್ ತಂಡದ ಸದಸ್ಯರನ್ನು ಪರಿಚಯಿಸಿದರು. ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಕ್ಕೆ ಶಿಕಾರಿಯ ಕಥೆ ಆಯ್ಕೆಯಾಗಿರುವುದಕ್ಕೆ ಚಿತ್ರತಂಡ ಖುಷಿಯಾಗಿತ್ತು. ಕಥೆಗೆ ತಕ್ಕಂತೆ ಯಕ್ಷಗಾನವನ್ನೂ ಬಳಸಲಾಗಿದೆಯಂತೆ.

‘ನಾವು ಭಿಕ್ಷುಕರನ್ನು ನೋಡಿ ಮರುಗುತ್ತೇವೆ. ಆತನಿಗೆ ₹ 5 ಸಾವಿರ ಕೊಡಬೇಕು ಅನಿಸುತ್ತದೆ. ಆದರೆ, ನಾವು ಆತನಿಗೆ ನೀಡುವುದೇ ಐದು ರೂಪಾಯಿ. ನಾವು ಸ್ವಾರ್ಥದ ಮೂಲಕ ಎಲ್ಲರನ್ನು ಶಿಕಾರಿ ಮಾಡುತ್ತೇವೆ. ಚಿತ್ರದಲ್ಲಿ ಐದು ಪಾತ್ರಗಳಿವೆ. ಯಾರು ಯಾರನ್ನು ಶಿಕಾರಿ ಮಾಡುತ್ತಾರೆ ಎನ್ನುವುದೇ ಕಥಾಹಂದರ’ ಎಂದು ವಿವರಿಸಿದರು ಸಚಿನ್‌ ಶೆಟ್ಟಿ.

‘ಶೆಟ್ರು’ ಟ್ಯಾಗ್‌ಲೈನ್‌ನಿಂದ ಹೊರಬರುವ ಪ್ರಯತ್ನದಲ್ಲಿದ್ದಾಗ ಮತ್ತೆ ಆ ಟ್ಯಾಗ್‌ಲೈನ್‌ಗೆ ಅಂಟಿಕೊಂಡ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದರು ನಟ ಪ್ರಮೋದ್‌ ಶೆಟ್ಟಿ. ‘ನಾನು ಇದರಲ್ಲಿ ನಾಯಕನಲ್ಲ; ಪಾತ್ರಧಾರಿಯಷ್ಟೇ’ ಎಂದರು.

ನಟ ಅಭಿಮನ್ಯು ಪ್ರಜ್ವಲ್, ‘ಅಪ್ಪ ಪ್ರಸಿದ್ಧ ಬೇಟೆಗಾರ; ಮಗ ಅಹಿಂಸಾವಾದಿ. ಕೊನೆಗೆ ಆತನೂ ಗನ್‌ ಹಿಡಿಯಬೇಕಾಗುತ್ತದೆ. ಅದಕ್ಕೆ ಕಾರಣವೇನೆಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು’ ಎಂದು ತಮ್ಮ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದರು.

‘ಯುಗಳಗೀತೆ’ ಧಾರಾವಾಹಿಯಲ್ಲಿ ನಟಿಸಿದ್ದ ಸಿರಿ ಪ್ರಹ್ಲಾದ್‌ ಇದರಲ್ಲಿ ಹದಿಹರೆಯದ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರದ ಹೆಸರು ಉಮಾ. ಆಕೆ ಯಕ್ಷಗಾನದ ಪ್ರೇಮಿಯಂತೆ.

ಛಾಯಾಗ್ರಹಣ ಯೋಗೇಶ್‌ ಅವರದ್ದು. ಸನತ್‌ ಬಲ್ಕೂರ್‌ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT