ಮಂಗಳವಾರ, ಸೆಪ್ಟೆಂಬರ್ 24, 2019
29 °C
ಪೈಲ್ವಾನ್ ಸಿನಿಮಾ ವಿಮರ್ಶೆ

ಕುಸ್ತಿ ಮತ್ತು ಬಾಕ್ಸಿಂಗ್‍ನ ಯಶಸ್ವಿ ‘ಲವ್ ಮ್ಯಾರೇಜ್’

Published:
Updated:
Prajavani

ಚಿತ್ರ: ಪೈಲ್ವಾನ್ (ಕನ್ನಡ)
ನಿರ್ಮಾಣ: ಸ್ವಪ್ನಾ ಕೃಷ್ಣ
ನಿರ್ದೇಶನ: ಕೃಷ್ಣ
ತಾರಾಗಣ: ಸುದೀಪ್‌, ಸುನಿಲ್‌ ಶೆಟ್ಟಿ, ಆಕಾಂಕ್ಷಾ ಸಿಂಗ್‌, ಕಬೀರ್‌ ದುಹಾನ್‌ ಸಿಂಗ್

ಸೂಪರ್‌ಸ್ಟಾರ್‌ಗಳು ಸಿನಿಮಾ ಮಾಡುವುದೇ ಅಭಿಮಾನಿಗಳಿಗಾಗಿ. ಇಂತಹ ಕಮರ್ಷಿಯಲ್ ಸಿನಿಮಾಗಳ ಚೌಕಟ್ಟಿನಲ್ಲಿ ತರ್ಕವನ್ನೂ ಮೀರುವ ವೈಭವೀಕರಣ ಇರುವುದು ಸಹಜ. ಚಿತ್ರರಂಗದ ಸಹಜ ಬೆಳವಣಿಗೆಯಿದು ಎಂದು ತಿಳಿದುಕೊಂಡು ನೋಡಿದರೆ, ‘ಪೈಲ್ವಾನ್’ ಚಿತ್ರ ನೋಡುಗರಿಗೆ ಇಷ್ಟವಾಗುತ್ತದೆ. ಆದರೆ, ಸಿನಿಮಾದ ವ್ಯಾಕರಣಗಳನ್ನು ಹುಡುಕುತ್ತಾ ಹೋದವರಿಗೆ, ಎಲ್ಲ ಬಗೆಯ ಸ್ವೀಟ್‍ಗಳನ್ನೂ ಬಳಸಿ ಮಾಡಿದ ಬೃಹತ್ ಕ್ರಿಸ್ಮಸ್ ಕೇಕ್‍ನಂತೆ ಚಿತ್ರ ಗೋಚರಿಸುತ್ತದೆ.

ಒಬ್ಬ ಅನಾಥ ಹುಡುಗ (ಸುದೀಪ್), ಅವನನ್ನು ಸಾಕಿ, ದೊಡ್ಡ ಕುಸ್ತಿಪಟುವನ್ನಾಗಿಸುವ ಪೈಲ್ವಾನ್‍ಗಳ ಗುರು ಸರಕಾರ್ (ಸುನಿಲ್ ಶೆಟ್ಟಿ), ಶ್ರೀಮಂತ ಉದ್ಯಮಿ ದೇಶಪಾಂಡೆ (ಅವಿನಾಶ್), ಆತನ ಮಗಳು ರುಕ್ಮಿಣಿ (ಆಕಾಂಕ್ಷಾ ಸಿಂಗ್), ವಿಜಯದುರ್ಗದ ಮಹಾರಾಜ ರಾಣಾ ಪ್ರತಾಪ್ (ಸುಶಾಂತ್ ಸಿಂಗ್) ಮತ್ತು ಬಾಕ್ಸಿಂಗ್ ಚಾಂಪಿಯನ್ ಟೋನಿ (ಕಬೀರ್ ದುಹಾನ್ ಸಿಂಗ್)- ಈ ಮುಖ್ಯ ಪಾತ್ರಗಳ ನಡುವೆ ಇಡೀ ಸಿನಿಮಾ ಕಥೆ ಸುತ್ತು ಹೊಡೆಯುತ್ತದೆ. ಕಥೆ ಎಲ್ಲೇ ಸುತ್ತು ಹೊಡೆದರೂ ಚಿತ್ರದಲ್ಲಿ ಸುದೀಪ್ ಪಾತ್ರವೇ ವಿಜೃಂಭಿಸುವುದು ವಿಶೇಷ. ಅದಕ್ಕೆ ತಕ್ಕಂತೆ ಚಿತ್ರಕಥೆಯನ್ನು ಹೆಣೆದಿದ್ದಾರೆ ನಿರ್ದೇಶಕ ಕೃಷ್ಣ.

ಇದನ್ನೂ ಓದಿ: ಅಭಿಮಾನಿಗಳೊಟ್ಟಿಗೆ ‘ಪೈಲ್ವಾನ್’ ವೀಕ್ಷಿಸಿದ ನಟ ಸುದೀಪ್

ಕ್ರೀಡೆಯನ್ನು, ಕ್ರೀಡಾಪಟುಗಳನ್ನು ಕೇಂದ್ರವಾಗಿಸಿಕೊಂಡು ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ, ಬರುತ್ತಿವೆ. ಮೇರಿ ಕೋಮ್, ಮಹೇಂದ್ರಸಿಂಗ್ ಧೋನಿ, ಮಿಲ್ಖಾ ಸಿಂಗ್ ಮುಂತಾಗಿ ನಿಜಜೀವನದ ಕ್ರೀಡಾಪಟುಗಳ ಜೀವನ ಆಧಾರಿತ ಚಿತ್ರಗಳಲ್ಲದೆ, ಕಾಲ್ಪನಿಕ ಕಥೆಗಳನ್ನು ಆಧರಿಸಿದ ಕ್ರೀಡಾಪಟುಗಳ ಚಿತ್ರಗಳೂ ಬಂದಿವೆ. ಈ ಮಾದರಿಯ ಬಹುತೇಕ ಚಿತ್ರಗಳೂ ಯಶಸ್ಸು ಕಂಡಿರುವುದನ್ನು ಮನಗಂಡಿರುವ ನಿರ್ದೇಶಕ ಕೃಷ್ಣ, ಯಾವ ಧಾವಂತವೂ ಇಲ್ಲದೆ ಇಲ್ಲಿ ಸಾವಧಾನವಾಗಿ ಕಥೆಯನ್ನು ನಿರೂಪಿಸಿದ್ದಾರೆ.

ಮಧ್ಯಂತರದವರೆಗೆ ಪಾತ್ರ ಪರಿಚಯವೇ ತೆರೆಯನ್ನು ಆವರಿಸಿದೆ. ನಿಜವಾದ ಕಥೆ ಆರಂಭವಾಗುವುದು ಮಧ್ಯಂತರದ ಬಳಿಕ. ಆದರೆ, ಫ್ಲಾಷ್‍ಬ್ಯಾಕ್‍ಗಳ ಜಾಣತನದ ಹೊಂದಾಣಿಕೆ ಮತ್ತು ಎಡಿಟಿಂಗ್ ಕೌಶಲ ಈ ಸಾವಧಾನವನ್ನು ಮರೆಸುತ್ತದೆ. ನಾಲ್ಕೈದು ಪಾತ್ರಗಳ ನಡುವಣ ವ್ಯಕ್ತಿಗತ ದ್ವೇಷ, ಪ್ರೀತಿಗಳ ತಿಕ್ಕಾಟದಂತೆ ಮೂಡಿಬಂದಿರುವ ಸಿನಿಮಾಕ್ಕೆ ಮುಕ್ಕಾಲು ಭಾಗ ಕಥೆ ಮುಗಿದ ಬಳಿಕ, ಒಂದು ಆದರ್ಶದ ಲೇಪ ಹಚ್ಚಲಾಗಿದೆ.

ಇದನ್ನೂ ಓದಿ: ಪೈಲ್ವಾನ್‌: ಕಿಚ್ಚನ ಕುಸ್ತಿಗೆ ಪ್ರೇಕ್ಷಕರು ಸುಸ್ತು

ಕುಸ್ತಿಪಟು ಕೃಷ್ಣ, ಬಾಕ್ಸಿಂಗ್ ಕಣಕ್ಕೆ ಧುಮುಕುತ್ತಾನೆ. ಬಾಲ್ಯದಲ್ಲಿ ಕ್ರೀಡಾಪ್ರತಿಭೆ ತೋರಿದರೂ ಬಡತನದಿಂದಾಗಿ ಕೆಲಸಕ್ಕೆ ಹೋಗುತ್ತಿರುವ ಮಕ್ಕಳನ್ನು ಕ್ರೀಡಾಪಟುಗಳನ್ನಾಗಿ ರೂಪಿಸುವ ಉದಾತ್ತ ಉದ್ದೇಶಕ್ಕಾಗಿ ಹಣ ಸಂಗ್ರಹಿಸಲು ನಾಯಕ ಜೀವದ ಹಂಗು ತೊರೆದು ಬಾಕ್ಸಿಂಗ್ ಮಾಡುತ್ತಾನೆ. ಕೊನೆಯಲ್ಲಿ ಮತ್ತೆ ಒಲಿಂಪಿಕ್‌  ಪದಕಕ್ಕಾಗಿ ಕುಸ್ತಿ ಕಣಕ್ಕೆ ಮರಳುತ್ತಾನೆ.

ಕೊನೆಯ 20 ನಿಮಿಷಗಳ ಬಾಕ್ಸಿಂಗ್ ದೃಶ್ಯಗಳ ಸಂಯೋಜನೆ ಇಡೀ ಚಿತ್ರವನ್ನು ಒಂದು ಕೊಲಾಜ್ ಕಲಾಕೃತಿಯಂತೆ ಕಾಣಿಸುತ್ತದೆ. ಸಾಹಸ ನಿರ್ದೇಶಕ ಲಾರ್ನೆಲ್ ಸ್ಟೋವಲ್ ಚಿತ್ರದ ತೆರೆಯ ಹಿಂದಿನ ಹೀರೊ. ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ಸ್ಟೈಲ್‍ ಅನ್ನು ಪ್ರದರ್ಶಿಸುವ ಸುದೀಪ್, ತೆರೆಯ ಮೇಲೆ ಹೊಡೆಯುವ ಡೈಲಾಗ್‍ಗಳು ತೆರೆಯ ಹೊರಗಿನ ವ್ಯಾಪ್ತಿಯನ್ನೂ ಪಡೆದುಕೊಂಡು ಅಭಿಮಾನಿಗಳ ಶಿಳ್ಳೆಗೆ ಕಾರಣವಾಗುತ್ತವೆ.

ಇಂಪಾದ ಹಾಡುಗಳಲ್ಲಿ (ಸಂಗೀತ ಅರ್ಜುನ್ ಜನ್ಯ) ನಾಯಕಿ ಆಕಾಂಕ್ಷಾ ಸಿಂಗ್‌ ಗ್ಲಾಮರ್‌ನಿಂದ ಗಮನ ಸೆಳೆದರೂ, ನಡುವೆ ಸಿಕ್ಕಿದ ಅಲ್ಪ ಅಭಿನಯದ ದೃಶ್ಯಗಳನ್ನೂ ನಿಸೂರಾಗಿ ನಿರ್ವಹಿಸಿದ್ದಾರೆ. ಲೋಹಿತಾಶ್ವ, ಅವಿನಾಶ್, ಅಪ್ಪಣ್ಣ, ಸುಶಾಂತ್, ಕಬೀರ್ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರತಿಯೊಂದು ಫ್ರೇಮನ್ನೂ ಕಣ್ಣಿಗೆ ಹಬ್ಬದಂತೆ ಕಟ್ಟಿಕೊಡುವ ಛಾಯಾಗ್ರಹಣ (ಕರುಣಾಕರ ಎ.) ಚಿತ್ರದ ನಿರೂಪಣೆಗೆ ಪೂರಕವಾಗಿದೆ.

ಇದನ್ನೂ ಓದಿ: 4 ಸಾವಿರ ಥಿಯೇಟರ್‌ಗೆ 'ಪೈಲ್ವಾನ್' ಲಗ್ಗೆ

‘ಬಲ ಇದೆ ಅಂತ ಹೊಡೆದಾಡೋನು ರೌಡಿ ಆಗ್ತಾನೆ, ಆದರೆ ಬಲವಾದ ಕಾರಣಕ್ಕಾಗಿ ಹೊಡೆದಾಡೋನು ಯೋಧ ಆಗ್ತಾನೆ’ ಎನ್ನುವ ಸರ್ಕಾರ್ (ಸುನಿಲ್ ಶೆಟ್ಟಿ) ಡೈಲಾಗ್, ಇಡೀ ಚಿತ್ರದ ಕಥೆಯನ್ನು ಒಂದೇ ವಾಕ್ಯದಲ್ಲಿ ಹೇಳಿಬಿಡುತ್ತದೆ. ಮಧ್ಯಂತರದ ಬಳಿಕ ಹಾಡುಗಳ ಭಾರ ಚಿತ್ರದ ಕೊನೆಯ ಓಟಕ್ಕೆ ತಡೆಯೊಡ್ಡುವುದು ನಿಜ. ಆದರೆ ಬಾಕ್ಸಿಂಗ್ ಕಣದ ವೈಭವೀಕೃತ ಚಿತ್ರಣ ಅದನ್ನು ಮರೆಸಿಬಿಡುತ್ತದೆ. ಹಾಗೆಯೇ ಪೈಲ್ವಾನ್ ಸಿನಿಮಾವನ್ನು ನೋಡುವಾಗ ನಿಮಗೆ, ಹಿಂದಿಯಲ್ಲಿ ಬಂದಿರುವ ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಚಿತ್ರ ಪದೇ ಪದೇ ನೆನಪಾದರೆ ಅದು ನಿಮ್ಮ ತಪ್ಪಲ್ಲ.

ಕನ್ನಡ ಸಿನಿಮಾಗಳು ಇತ್ತೀಚೆಗೆ ಸೀಮಿತ ಮಾರುಕಟ್ಟೆಯ ಸೂತ್ರಗಳನ್ನು ಉಲ್ಲಂಘಿಸಿ ದೇಶದಾದ್ಯಂತ ಗಮನ ಸೆಳೆಯುತ್ತಿವೆ ಎನ್ನುವ ಮಾತನ್ನು ನಿಜವಾಗಿಸುವಂತೆ ಈ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳ ಭಾಷೆಗಳಲ್ಲೂ ತೆರೆಗೆ ಬಂದಿದೆ. ಈಗಾಗಲೇ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ತನ್ನದೇ ಆದ ಪ್ರೇಕ್ಷಕ ವರ್ಗ ಹೊಂದಿರುವ ನಟ ಸುದೀಪ್ ನಾಯಕನಾಗಿರುವುದರಿಂದ, ನಿರ್ಮಾಪಕರ ಭಾರೀ ಬಜೆಟ್‍ನ ಹೂಡಿಕೆ, ಹೊರೆಯಾಗುವುದಿಲ್ಲ ಎನ್ನುವ ನಂಬಿಕೆಯೂ ಉಳಿಯುವಂತೆ ಕಾಣುತ್ತಿದೆ. 

Post Comments (+)