ಭಾನುವಾರ, ಜುಲೈ 25, 2021
25 °C

ಪಾರುಲ್‌ ಜನ್ಮದಿನ ಆಚರಿಸಲ್ಲವಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾಂಡಲ್‌ವುಡ್‌ ನಟಿ ಪಾರುಲ್‌ ಯಾದವ್‌ಗೆ ಶುಕ್ರವಾರ ಜನ್ಮದಿನದ ಸಂಭ್ರಮ. ಆದರೆ, ಅವರು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲವಂತೆ. ಕಾರಣ ಕೊರೊನಾ! ಅಂದರೆ, ಕೊರೊನಾ ಲಾಕ್‌ಡೌನ್‌ ಇರುವ ಕಾರಣಕ್ಕೆ ಜಗತ್ತಿನಾದ್ಯಂತ ಕೋಟ್ಯಂತರ ವಲಸಿಗರು ಹಸಿವಿನಿಂದ ನರಳುತ್ತಿದ್ದಾರೆ. ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಹಾಗೆಯೇ ಅಮೆರಿಕದಲ್ಲಿ ಕಪ್ಪುವರ್ಣಿಯರ ಮೇಲೆ ಜನಾಂಗೀಯ ಹಲ್ಲೆ ನಡೆಯುತ್ತಿದೆ. ಈ ಘಟನೆಗಳಿಂದ ನನ್ನ ಮನಸಿಗೆ ತುಂಬಾ ಘಾಸಿಯಾಗಿದೆ. ಈ ಕಾರಣಕ್ಕೆ ನನ್ನ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ ‍ಪಾರುಲ್‌.

ಪಾರುಲ್ ನಾಯಕಿಯಾಗಿ ನಟಿಸಿರುವ ‘ಬಟರ್ ಫ್ಲೈ’ ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಚಿತ್ರ ಬಿಡುಗಡೆಯೂ ಮುಂದಕ್ಕೆ ಹೋಗಿದೆ. ಹಿಂದಿಯ ‘ಕ್ವೀನ್‌’ ಚಿತ್ರದ ಕನ್ನಡ ರೂಪ ‘ಬಟರ್‌ಫ್ಲೈ’. ಇದರಲ್ಲಿ ಪಾರುಲ್ ಅವರದು ಗೋಕರ್ಣದ ಹುಡುಗಿಯ ಪಾತ್ರ. ಇದು ಪಾತರಗಿತ್ತಿಯಂತೆ ಸ್ವಚ್ಛಂದವಾಗಿ ಹಾರಲು ಬಯಸುವ ಹೆಣ್ಣಿನ ಕಥೆಯ ಚಿತ್ರ. ಹಿಂದಿಯಲ್ಲಿ ಕಂಗನಾ ರನೋಟ್ ನಿಭಾಯಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ನಿಭಾಯಿಸಿದ್ದಾರೆ. ಪಾರುಲ್ ಕನ್ನಡದಲ್ಲಿ ಈವರೆಗೆ ಇಂಥ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.

ನಟ ರಮೇಶ್ ಅರವಿಂದ್ ಅವರ ನಿರ್ದೇಶನದಲ್ಲಿ ಈ ಚಿತ್ರ ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ಸಿದ್ಧವಾಗಿದೆ.

‘ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿರುವ ಇನ್ನೊಂದು ಸ್ಕ್ರಿಪ್ಟ್‌ ಒಪ್ಪಿಕೊಂಡಿದ್ದೇನೆ. ಲಾಕ್‌ಡೌನ್‌ ಸಂಪೂರ್ಣ ತೆರವಾಗಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ನಂತರ ಈ ಹೊಸ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಅಭಿಮಾನಿಗಳ ಜತೆಗೆ ಹಂಚಿಕೊಳ್ಳುತ್ತೇನೆ’ ಎನ್ನುವ ಮಾತು ಸೇರಿಸಿದರು ಪಾರುಲ್‌.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು