ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್‌ ಮಾಕ್‌ಟೇಲ್‌ ಜನ ಮೆಚ್ಚಿದ್ದಾರೆ; ಥಿಯೇಟರ್ ಸಿಕ್ತಿಲ್ಲ

Last Updated 7 ಫೆಬ್ರುವರಿ 2020, 14:21 IST
ಅಕ್ಷರ ಗಾತ್ರ

ಕಳೆದ ವಾರ ಬಿಡುಗಡೆಯಾಗಿರುವ ಲವ್‌ಮಾಕ್‌ಟೇಲ್ ಸಿನಿಮಾವನ್ನು ಚಿತ್ರರಂಗದಲ್ಲಿ ಉಳಿಸಿಕೊಳ್ಳಲು ಪಡುತ್ತಿರುವ ಪಡಿಪಾಟಲಿನ ಬಗ್ಗೆ, ನಾಯಕಿ, ನಿರ್ಮಾಪಕಿ ಮಿಲನಾ ನಾಗರಾಜ್‌ ಇಲ್ಲಿ ಮಾತನಾಡಿದ್ದಾರೆ.

‘ನಮ್ಮ ಸಿನಿಮಾಗೆ ಬುಕ್ ಮೈ ಷೋದಲ್ಲಿ ಶೇ 90 ರಿವ್ಯೂ ಇದೆ. ನೋಡಿದ ಜನರೆಲ್ಲರೂ ತುಂಬ ಒಳ್ಳೆಯ ಸಿನಿಮಾ ಎಂದು ಹೊಗಳುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲಿಯೂ ಒಳ್ಳೆ ಸಿನಿಮಾ ಎಂಬ ವಿಮರ್ಶೆ ಬಂದಿದೆ. ಚಿತ್ರರಂಗದ ಹಲವು ಸ್ನೇಹಿತರು ಹೊಗಳುತ್ತಿದ್ದಾರೆ. ಆದರೆ ಈ ವಾರಾಂತ್ಯಕ್ಕೆ ನಮ್ಮ ಸಿನಿಮಾ ಉಳಿದುಕೊಂಡಿರುವುದು ಒಂದೇ ಚಿತ್ರಮಂದಿರದಲ್ಲಿ. ಈ ಪರಿಸ್ಥಿತಿಗೆ ಏನು ಹೇಳೋಣ ಹೇಳಿ?’

‘ಲವ್ ಮಾಕ್‌ಟೇಲ್’ ಚಿತ್ರದ ನಾಯಕಿ ಜೊತೆಗೆ ನಿರ್ಮಾಪಕಿಯೂ ಆಗಿರು ಮಿಲನಾ ನಾಗರಾಜ್ ಮಾತಿನಲ್ಲಿ ಬೇಸರವಿತ್ತು. ಜೊತೆಗೆ ಈ ಚಿತ್ರವನ್ನು ಇನ್ನಷ್ಟು ಜನರಿಗೆ ತಲುಪಿಸಿಯೇ ತಲುಪಿಸುತ್ತೇವೆ ಎಂಬ ವಿಶ್ವಾಸವೂ ಇತ್ತು.

ಆಗಿದ್ದಿಷ್ಟು. ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್‌ ಮಾಕ್‌ಟೇಲ್’ ಚಿತ್ರ ಕಳೆದ ವಾರ ರಾಜ್ಯದಾದ್ಯಂತ 140 ಷೋಗಳು ಸಿಕ್ಕಿದ್ದವು. ಆದರೆ ಈ ವಾರಾಂತ್ಯ ಕನ್ನಡದಲ್ಲಿಯೇ ಎಂಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಜೊತೆಗೆ ಪರಭಾಷಾ ಚಿತ್ರಗಳ ಅಬ್ಬರ ಬೇರೆ. ‘ಲವ್‌ಮಾಕ್‌ಟೇಲ್’ ಅನ್ನು ಎತ್ತಂಗಡಿ ಮಾಡಲಾಗಿದೆ. ಪರಿಣಾಮವಾಗಿ ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ಮಾತ್ರ ಲವ್‌ ಮಾಕ್‌ಟೇಲ್ ಉಳಿದುಕೊಂಡಿದೆ.

‘ನಾನು ಯಾರದೂ ತಪ್ಪು ಎಂದು ಹೇಳುತ್ತಿಲ್ಲ. ಈ ವಾರ ಬರುತ್ತಿರುವ ಎಂಟು ಸಿನಿಮಾಗಳೂ ನಮ್ಮಷ್ಟೇ ಕಷ್ಟಪಟ್ಟು ರೂಪಿಸಿದಂಥವು. ಸಿನಿಮಾಗಳ ಬಗ್ಗೆ ಜನರಿಗೆ ತಿಳಿದು ಅವರು ಚಿತ್ರಮಂದಿರಕ್ಕೆ ಬರಲು ಒಂದು ವಾರ ಬೇಕೇ ಬೇಕು. ಆದರೆ ಅಷ್ಟರಲ್ಲಿ ಚಿತ್ರ ಎತ್ತಂಗಡಿಯಾಗಿರುತ್ತದೆ’ ಎಂದು ಚಿತ್ರಮಂದಿರಗಳ ಸಮಸ್ಯೆಯ ಕುರಿತು ಮಾತಾಡುತ್ತಾರೆ.

ಹೀಗಿದ್ದೂ ಮಿಲನಾ ವಿಶ್ವಾಸ ಕುಂದಿಲ್ಲ. ‘ಈ ಚಿತ್ರವನ್ನು ನಾವು ಖಂಡಿತ ಕೈ ಬಿಡುವುದಿಲ್ಲ. ಕೆಲವು ದಿನಗಳ ನಂತರ ಮತ್ತೆ ನಮಗೆ ಷೋಗಳು ಸಿಗುತ್ತವೆ ಎಂಬ ವಿಶ್ವಾಸವಿದೆ. ಸಿನಿಮಾವೇ ಜೀವನ ಎಂದುಕೊಂಡವರು ನಾವು. ಹೋರಾಡುತ್ತೇವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT