ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಮ್ಯಾಕ್ಸ್‌-ಮನೆದೇವ್ರಾಣೆಗೂ ಅದಲ್ಲ! ಟ್ರೈಲರ್ ಬಗ್ಗೆ ನಿರ್ದೇಶಕರ ಮಾತು

Last Updated 21 ಸೆಪ್ಟೆಂಬರ್ 2021, 8:40 IST
ಅಕ್ಷರ ಗಾತ್ರ

‘ನೀರ್‌ದೋಸೆ’ ಸಿನಿಮಾದ ಟ್ರೇಲರ್‌ ಶೈಲಿಯನ್ನೇ ತಮ್ಮ ಹೊಸ ಸಿನಿಮಾ ‘ಪೆಟ್ರೋಮ್ಯಾಕ್ಸ್‌’ ಟ್ರೇಲರ್‌ನಲ್ಲೂ ನಿರ್ದೇಶಕ ವಿಜಯ್‌ ಪ್ರಸಾದ್‌ ಬಳಸಿಕೊಂಡಿದ್ದಾರೆ.

ನೀನಾಸಂ ಸತೀಶ್‌ ಹಾಗೂ ಹರಿಪ್ರಿಯಾ ಜೋಡಿಯ ಈ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಕುಚೇಷ್ಟೆಯ ಮಾತು, ಡಬಲ್‌ ಮೀನಿಂಗ್‌ ಡೈಲಾಗ್ಸ್‌ಗಳೇ ತುಂಬಿಕೊಂಡಿದೆ. ಈ ಶೈಲಿಗೆ ಒಂದಿಷ್ಟು ಜನ ವಿರೋಧಿಸಿದ್ದರೆ, ಮತ್ತೊಂದಿಷ್ಟು ಜನ ಹಿಂದಿನ ಚಿತ್ರಗಳಂತೇ ಇದೂ ಹಿಟ್ ಆಗಲಿ ಎಂದಿದ್ದಾರೆ.

‘ಸಿನಿಮಾದಲ್ಲಿ ಡಬಲ್‌ ಮೀನಿಂಗ್‌ ಡೈಲಾಗ್ಸ್‌ಗಳಿದ್ದರೆ ಒಕೆ ಆದರೆ ಡಬಲ್‌ ಮೀನಿಂಗ್‌ ಡೈಲಾಗ್ಸ್‌ಗಳೇ ಸಿನಿಮಾವಾದರೆ ಕಷ್ಟ’ ಎಂದೊಬ್ಬರು ಹೇಳಿದ್ದರೆ, ‘ಟ್ರೇಲರ್‌ ನೋಡಲು ಮುಜುಗರವಾಗುತ್ತೆ’ ಎಂದಿದ್ದಾರೆ ಮತ್ತೊಬ್ಬರು. ಈ ನಡುವೆ ಟ್ರೇಲರ್‌ನಲ್ಲಿ ಈ ಶೈಲಿಯನ್ನೇ ಅನುಸರಿಸುತ್ತಿರುವುದೇಕೆ ಎನ್ನುವುದರ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿರುವ ವಿಜಯ್‌ ಪ್ರಸಾದ್‌, ‘ಎರಡು ಉದ್ದೇಶದಿಂದ ಈ ಶೈಲಿಯನ್ನು ನಾನು ಅನುಸರಿಸುತ್ತೇನೆ. ಟೀಸರ್‌ ಮತ್ತು ಟ್ರೇಲರ್‌ ಪ್ರೇಕ್ಷಕರನ್ನು ಸೆಳೆಯುವ ಆಹ್ವಾನವಷ್ಟೇ. ಸಿನಿಮಾ ಎನ್ನುವುದು ಮನರಂಜನೆ ಹಾಗೂ ವ್ಯಾಪಾರ. ಮಾಸ್‌ ಹಾಗೂ ಕ್ಲಾಸ್‌ ಪ್ರೇಕ್ಷಕರು ನನ್ನ ಸಿನಿಮಾಗೆ ಬರಬೇಕು ಎನ್ನುವುದು ಇದರ ಹಿಂದಿನ ಉದ್ದೇಶ’ ಎಂದಿದ್ದಾರೆ.

‘ಕಲೆ ಮತ್ತು ವ್ಯಾಪಾರ ಹಳಿ ಇದ್ದ ಹಾಗೆ. ಜೊತೆಯಾಗಿ ಸಾಗುತ್ತವೆ ಆದರೆ ಒಟ್ಟಿಗೆ ಸೇರುವುದಿಲ್ಲ. ನಿರ್ಮಾಪಕರನ್ನು ಉಳಿಸಿದರೆ ಅವರು ಇನ್ನೊಂದು ಸಿನಿಮಾ ಮಾಡುತ್ತಾರೆ. ನಮಗೆ ಕಾಡುವ ಗಾಢವಾದ ಕಥೆಯನ್ನು ಹೇಳಲು ಈ ಶೈಲಿಯನ್ನು ಅನುಸರಿಸುತ್ತಿದ್ದೇನೆ. ಬರೀ ಚೇಷ್ಟೆ ಮಾತುಗಳಿಂದಲೇ ಸಿನಿಮಾ ಓಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ‘ನೀರ್‌ದೋಸೆ’. ಇದರಲ್ಲಿ ಗಾಢವಾದ ಕಥೆ ಇಲ್ಲದೇ ಹೋಗಿದ್ದರೆ, ಸಿನಿಮಾ ಅಟ್ಟರ್‌ಫ್ಲಾಪ್‌ ಆಗಿರುತ್ತಿತ್ತು. ಚೇಷ್ಟೆ ಮಾತುಗಳ ಮೂಲಕ, ಮನರಂಜನೆ ದೃಷ್ಟಿಯಿಂದ ಕಥೆ ಹೇಳುವ ಪ್ರಯತ್ನವನ್ನು ನಾನು ಮಾಡುತ್ತೇನೆ. ಇದರಿಂದ ಒಂದು ಸಿನಿಮಾ ಗೆಲ್ಲಲಿದೆ ಎನ್ನುವ ಭರವಸೆ ಇದೆ. ಹೀಗಾಗಿ ಈ ಶೈಲಿ ಅನುಸರಿಸುತ್ತೇನೆ. ಸಿನಿಮಾ ಬೇರೆ ಅಲ್ಲ. ಬದುಕು ಬೇರೆ ಅಲ್ಲ. ದೈನಂದಿನ ಜೀವನದಲ್ಲೂ ಈ ಚೇಷ್ಟೆ, ಪೋಲಿ ಎಲ್ಲವೂ ಇರುತ್ತದೆ. ಇದನ್ನೆಲ್ಲಾ ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ವಿಜಯ್‌ ಪ್ರಸಾದ್‌.

‘ನೀನಾಸಂ ಸತೀಶ್‌ ಹಾಗೂ ಹರಿಪ್ರಿಯಾ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಈ ಸಿನಿಮಾ ಮುಖಾಂತರ ಕಾಣಿಸಿಕೊಳ್ಳುತ್ತಿದೆ. ನನ್ನ ಸಿನಿಮಾದಲ್ಲಿ ಗಾಢವಾದ ಪಾತ್ರ ಇರಲಿದೆ ಎನ್ನುವ ನಂಬಿಕೆ ಹರಿಪ್ರಿಯಾ ಅವರಿಗೆ ಇದೆ. ನನ್ನ ಸಿನಿಮಾದ ಪಾತ್ರಗಳನ್ನು ಅವರು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಪೆಟ್ರೋಮ್ಯಾಕ್ಸ್‌ನಲ್ಲಿ ಅವರಿಗೆ ಬೋಲ್ಡ್‌ ಆಗಿರುವ ದೃಶ್ಯಗಳು, ಮಾತುಗಳು ಇವೆ. ಕಥೆಗೆ ಪೂರಕವಾಗಿರುವ ಕಾರಣ ಇದನ್ನು ಹರಿಪ್ರಿಯಾ ಒಪ್ಪಿದರು.ಚಿತ್ರದ ಪೋಸ್ಟರ್‌ನಲ್ಲೇ ಹೇಳಿರುವಂತೆ ಪೆಟ್ರೋಮ್ಯಾಕ್ಸ್‌ ಖಂಡಿತವಾಗಿಯೂ ‘ಅದಲ್ಲ’. ಬದುಕು ಮತ್ತು ಬೆಳಕು ಈ ಪೆಟ್ರೋಮ್ಯಾಕ್ಸ್‌. ದೀಪಾವಳಿ ಬೆಳಕಿನ ಹಬ್ಬ ಆಗಿರುವ ಕಾರಣ ದೀಪಾವಳಿಗೆ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಿದ್ದೇವೆ.ಸಿನಿಮಾದಲ್ಲಿ ಎರಡನೇ ಭಾಗದ ಸಣ್ಣ ಸುಳಿವು ನೀಡಿದ್ದೇವೆ. ಸಿನಿಮಾ ನೋಡಿದಾಗಲೇ ಅದು ತಿಳಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT