ಪ್ರನೂತನ್‌ ಬೆಹ್ಲ್‌ ಅಜ್ಜಿ ನೆಟ್ಟ ಆಲದ ಮರ ಅಲ್ಲ!

ಶುಕ್ರವಾರ, ಮಾರ್ಚ್ 22, 2019
23 °C

ಪ್ರನೂತನ್‌ ಬೆಹ್ಲ್‌ ಅಜ್ಜಿ ನೆಟ್ಟ ಆಲದ ಮರ ಅಲ್ಲ!

Published:
Updated:

ಸರಿಯಾಗಿ ಒಂದು ವರ್ಷದ ಹಿಂದೆ, ಯುವತಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಎರಡು ಫೋಟೊ ಹಾಕಿದ್ದರು. ಒಂದು ಫೋಟೊ, 60 ಮತ್ತು 70ರ ದಶಕದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದ್ದ ಅಸಾಮಾನ್ಯ ಅಭಿನೇತ್ರಿ ನೂತನ್‌ ಅವರದ್ದು. ಹಾಗಾಗಿ, ಬಣ್ಣದ ಫೋಟೊ ಕೂಡಾ ನೂತನ್‌ ಅವರ ಯೌವ್ವನದ ದಿನಗಳದ್ದು ಎಂದು ಅನೇಕರು ಭಾವಿಸಿದ್ದರು.

ಮೊಮ್ಮಗಳು! 

ಹೌದು, ಆ ಫೋಟೊ ಹಾಕಿದ್ದು, ನೂತನ್‌ ಮೊಮ್ಮಗಳು ಪ್ರನೂತನ್‌. ‌ಕೆಲವು ಭಂಗಿಗಳಲ್ಲಿ ಅಜ್ಜಿಯದೇ ಪಡಿಯಚ್ಚಿನಂತೆ ಕಾಣುತ್ತಾಳೆ ಈ ಚೆಲುವೆ. ಹೆಸರಲ್ಲೇ ಅಜ್ಜಿಯ ಹೆಸರು ಇದ್ದರೂ ಆ ಹೆಸರಾಗಲಿ, ಆಕೆಯ ಪ್ರಸಿದ್ಧಿಯ ಪ್ರಭೆಯಾಗಲಿ ತನಗೆ ಪ್ರಭಾವ ಬೀರಬಾರದು ಎಂದು ಪಟ್ಟುಹಿಡಿದು ಹೇಳುತ್ತಲೇ ಇರುವ ಛಲಗಾತಿ ಪ್ರನೂತನ್‌.

‘ನೋಟ್‌ಬುಕ್‌’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾಳೆ. ಕೆಲದಿನಗಳ ಹಿಂದೆ ಬಿಡುಗಡೆಯಾದ ಅದರ ಹಾಡು ‘ಲೈಲಾ’ವನ್ನು ಯುವಜನರು ಗುನುಗುತ್ತಿದ್ದಾರೆ. ಕೆಲವು ದಶಕಗಳ ಹಿಂದೆ ಶಾಲಾ ಕ್ಯಾಂಪಸ್‌ನಲ್ಲಿ ಪ್ರೀತಿ ಪ್ರೇಮ ಹೇಗೆ ಅರಳುತ್ತಿತ್ತು ಮತ್ತು ಅದನ್ನು ಒಬ್ಬರಿಗೊಬ್ಬರು ಹೇಗೆ ವ್ಯಕ್ತಪಡಿಸಿಕೊಳ್ಳುತ್ತಿದ್ದರೋ ಹಾಗೇ ಇದೆ ಈ ಹಾಡಿನ ಸನ್ನಿವೇಶಗಳು. ಇದು, ನೂತನ್‌ ಕಾಲದ ದಿನಗಳನ್ನು ವೀಕ್ಷಕರಿಗೆ ನೆನಪಿಸಿಕೊಟ್ಟಿದೆ. ಸೀಮಾ, ಸುಜಾತಾ, ಬಾಂದಿನಿ, ಮಿಲನ್‌, ಮೇ ತುಲಸಿ ತೇರೆ ಅಂಗನ್ ಕಿ, ತೇರೆ ಘರ್‌ ಕೆ ಸಾಮ್‌ನೆ, ಸರಸ್ವತಿಚಂದ್ರ, ಅನುರಾಗ್‌, ಸೌದಾಗರ್‌ನಂತಹ ಚಿತ್ರಗಳಲ್ಲಿ ಅಪ್ರತಿಮ ಸೌಂದರ್ಯ ಮತ್ತು ನಟನೆಯಿಂದ ಜನಮಾನಸ ಗೆದ್ದ ನೂತನ್ ಅವರನ್ನು ಮರೆಯಲು ಸಾಧ್ಯವಿಲ್ಲವೆನ್ನಿ. ಇದೀಗ, ಮೊಮ್ಮಗಳ ನಟನೆಯಲ್ಲಿ ಜನ ತ‌ಮ್ಮ ನೆಚ್ಚಿನ ನಟಿಯನ್ನು ಕಂಡಿದ್ದಾರೆ!

ನೂತನ್‌ ಅವರ ಒಬ್ಬನೇ ಮಗ, ಹಿಂದಿಯ ನಟ ಮೊನೀಷ್‌ ಬೆಹ್ಲ್‌ ಮಗಳು, ಪ್ರನೂತನ್. ಅಜ್ಜಿ ನಟಿಸಿದ ಸುಜಾತಾ, ಬಾಂದಿನಿ ಮತ್ತು ಮಿಲನ್‌ ಸಿನಿಮಾಗಳೆಂದರೆ ಅಚ್ಚುಮೆಚ್ಚು. 25ನೇ ಹರೆಯದಲ್ಲೂ ಅಪ್ಪ–ಅಮ್ಮನ ಮುದ್ದಿನ ಕೂಸು. ತಾನು ಸಿನಿಮಾ ನಟರ ಕುಟುಂಬದಿಂದ ಬಂದವಳು ಎಂಬ ಟ್ರಂಪ್‌ಕಾರ್ಡ್‌ ಇಟ್ಟುಕೊಂಡು ಅವಕಾಶ ಗಿಟ್ಟಿಸಿಕೊಳ್ಳುವುದು ಬಿಲ್‌ಕುಲ್‌ ಇಷ್ಟವಿಲ್ಲ.

ಹಲವು ಹೊಸ ಮುಖಗಳನ್ನು ಬಾಲಿವುಡ್‌ಗೆ ಪರಿಚಯಿಸಿದ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಅವರೇ ಪ್ರನೂತನ್‌ಗೂ ಗಾಡ್‌ಫಾದರ್. ಸಲ್ಲೂ ನಟನೆಯ ಎಲ್ಲಾ ಚಿತ್ರಗಳನ್ನು ಮತ್ತೆ ಮತ್ತೆ ನೋಡುವಷ್ಟು ಫಿದಾ ಆಗಿಬಿಟ್ಟಿದ್ದಾರೆ. ಅಚ್ಚುಮೆಚ್ಚಿನ ನಾಯಕನಟಿಯರ ಪೈಕಿ ಕರೀನಾ ಕಪೂರ್‌ಗೆ ಅಗ್ರಸ್ಥಾನ. ತಂದೆಯ ಸೋಷಿಯಲ್‌ ಮೀಡಿಯಾ ಖಾತೆಗಳನ್ನೆಲ್ಲ ನಿಭಾಯಿಸುವುದು ಪ್ರನೂತನ್‌ ಜವಾಬ್ದಾರಿ. ಹಾಗಾಗಿ ತಮ್ಮ ಖಾತೆಯೊಂದಿಗೆ ಅಪ್ಪನ ಖಾತೆಯಲ್ಲೂ ಒಂದಷ್ಟು ಫೋಟೊಗಳನ್ನೂ, ಟಿಪ್ಪಣಿಗಳನ್ನೂ ಹಾಕುತ್ತಾ ಅಪ್‌ಡೇಟ್‌ ಆಗುತ್ತಿರುತ್ತಾರೆ.

ಕಾನೂನು ಪದವಿ ಓದುವಾಗಲೂ ಕರಿಕೋಟು ಧರಿಸಿ ಕೋರ್ಟ್‌ಗೆ ಹೋಗುವವಳು ತಾನಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಆದರೂ ಲಿಂಕ್ಡ್‌ಇನ್‌ನಲ್ಲಿ ಪ್ರೊಫೈಲ್‌ ಹಾಕಿಬಿಟ್ಟಿದ್ದಾರೆ, ತಮ್ಮ ಪದವಿಯನ್ನು ಪ್ರಮಾಣೀಕರಿಸುವಂತೆ!

ಸಲ್ಮಾನ್‌ ಖಾನ್‌ ನಿರ್ಮಾಣದ ‘ನೋಟ್‌ಬುಕ್‌’ ಮೂಲಕ ಬಿ ಟೌನ್‌ನಲ್ಲಿ ಹೆಜ್ಜೆ ಇಟ್ಟಿದ್ದಾರೆ ಈ ಸುಂದರಿ. ಸರಳ ಮತ್ತು ಸ್ನೇಹಪರ ನಡೆಯಿಂದ ಸೆಟ್‌ನಲ್ಲಿ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಪ್ರನೂತನ್‌ಗೆ ಸೆಲೆಬ್ರಿಟಿ ಎಂಬ ಹಮ್ಮಿಲ್ಲ. 5 ಅಡಿ 5 ಇಂಚು ಎತ್ತರದ ಈ ಚೆಲುವೆಗೆ, ಅಜ್ಜಿಯಂತೆ ಪ್ರೇಕ್ಷಕರು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುವಂತಹ ಪಾತ್ರ ಮಾಡುವಾಸೆ ಇದೆ. ‘ನೋಟ್‌ಬುಕ್‌’ನಲ್ಲಿ ಓಂಕಾರ  ಬರೆದಾಗಿದೆ, ಮುಂದೇನು ಎಂದು ಕೇಳಿದರೆ ಕಾಲವೇ ಉತ್ತರಿಸುತ್ತದೆ ಎಂದು ನಗುತ್ತಾರೆ!

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !