ಭಾನುವಾರ, ಆಗಸ್ಟ್ 14, 2022
19 °C

ಪ್ರೇಮ್‌ ಆತ್ಮವಿಶ್ವಾಸದ ಮಾತು: ಸಿನಿಮಾ ಸೋತಿರಬಹುದು, ನಾನು ಸೋತಿಲ್ಲ..

ಸಂದರ್ಶನ: ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

‘ಏರಿಳಿತ ಯಾವ ವ್ಯಕ್ತಿಯ ಬದುಕಿನಲ್ಲಿ ಅಥವಾ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ನಾವು ಮನೋರಂಜನೆ ಕ್ಷೇತ್ರದಲ್ಲಿ ಇರುವುದರಿಂದ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೇವೆ ಅಷ್ಟೇ. ಏರುಪೇರುಗಳು ಬರುತ್ತಾ- ಹೋಗುತ್ತಾ ಇರುತ್ತವೆ. ಕೊನೆಗೂ ಜನರಿಗೆ ಸಿನಿಮಾ ಇಷ್ಟ ಆದ್ರೆ ಸ್ವೀಕರಿಸುತ್ತಾರೆ. ಇಲ್ಲವಾದರೆ ಬಿಟ್ಟುಬಿಡುತ್ತಾರೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿಕೊಂಡು ಹೋಗ್ತಾ ಇರಬೇಕು ಅಷ್ಟೆ’

ಹೀಗೆಂದು ಸದ್ಯ ‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಬ್ಯುಸಿ ಆಗಿರುವ ಪ್ರೇಮ್‌ ಲವಲವಿಕೆಯಿಂದ ಆತ್ಮವಿಶ್ವಾಸದಿಂದ ಮಾತನಾಡಿದರು. ಕೆಲವು ಪ್ರಶ್ನೆಗಳಿಗಂತೂ ಅವರು ‘ನಿಮಗೇ ಮಾಹಿತಿ ಇಲ್ಲ ನಾನೇನು ಮಾಡ್ಲಿ?’ ಎಂದು ತೀಕ್ಷ್ಣವಾಗಿ ಕಾಲೆಳೆದದ್ದೂ ಆಯಿತು. ಈ ‘ನೆನಪಿರಲಿ’ ಪ್ರೇಮ್ ಜೊತೆಯಲಿ ‘ಪ್ರಜಾಪ್ಲಸ್‌’ ನಡೆಸಿದ ಮಾತುಕತೆಯ ಝಲಕ್‌ ಹೀಗಿದೆ...

ಪ್ರೇಮ್‌ ವೃತ್ತಿಬದುಕಿನ ಅವಲೋಕನ ಏನು?

ನಾನು ಬದಲಾಗಿಲ್ಲ. ನನ್ನ ಬದ್ಧತೆ ಹಾಗೆಯೇ ಇದೆ. ನನ್ನ ಮೊದಲ ಸಿನಿಮಾಕ್ಕೆ ನಾಳೆ ಮುಹೂರ್ತ ಎಂದಾದರೆ ಇಂದು ರಾತ್ರಿ ನನಗೆ ನಿದ್ದೆ ಬರುತ್ತಿರಲಿಲ್ಲ. ಆ ತವಕ, ಭಯ, ಬದ್ಧತೆ ನನ್ನಲ್ಲಿರುತ್ತಿತ್ತು. ಅದೇ ಬದ್ಧತೆ, ಮನಸ್ಥಿತಿ 25ನೇ ಚಿತ್ರದವರೆಗೂ ಇದೆ. ಕೆಲವು ಸಿನಿಮಾಗಳು ಸೋತಿರಬಹುದು. ಆದರೆ ಪ್ರೇಮ್‌ ಸೋತಿಲ್ಲ. ಸೋಲಿಗೆ ನಾಯಕನೊಬ್ಬನೇ ಕಾರಣವೂ ಅಲ್ಲ. 

ಪ್ರೇಮ್‌ ಅವರಿಗೆ ಪ್ರೀತಿ ಕಥಾವಸ್ತು ಇಷ್ಟವೇ?
ಹಾಗೇನಿಲ್ಲ. ಆಕ್ಷನ್‌ ಇರಬಹುದು, ಕಾಮಿಡಿ ಇರಬಹುದು. ಯಾವುದೇ ಸಬ್ಜೆಕ್ಟ್‌ ಇರಲಿ. ಅದು ಇಷ್ಟವಾದಾಗ ಅದನ್ನು ನಿಭಾಯಿಸುತ್ತೇನೆ. ಅದು ಸಾಬೀತಾಗಿದೆ ಕೂಡ. ಉದಾ: ‘ಚೌಕ’ದಲ್ಲಿ ಒಂದು ರಗಡ್‌ ಪಾತ್ರ. ಪ್ರೇಮ್‌ನಲ್ಲಿ ಈ ರೀತಿ ಸಾಮರ್ಥ್ಯ ಇದೆಯಾ ಅನ್ನುವ ಮಟ್ಟಕ್ಕೆ ಅದು ತಲುಪಿತು. ಒಂದು ಸಿನಿಮಾ ಯಾವುದಾದರೂ ಒಂದು ವರ್ಗದಲ್ಲಿ ಯಶಸ್ವಿಯಾಯಿತೆಂದರೆ ಸಾಮಾನ್ಯವಾಗಿ ಅದೇ ಮಾದರಿಯ ವಿಷಯ ಕೇಂದ್ರಿತ ಕಥಾವಸ್ತುಗಳನ್ನು ಹಿಡಿದುಕೊಂಡು ನಿರ್ಮಾಪಕರು, ನಿರ್ದೇಶಕರು ಬರುತ್ತಾರೆ. ‘ನೆನಪಿರಲಿ’ ಸೂಪರ್‌ ಹಿಟ್ ಆದಾಗ ಮುಂದೆ ‘ಜೊತೆಜೊತೆಯಲಿ...’ ಸಿನಿಮಾ ಬಂದಿತು. ‘ನೆನಪಿರಲಿ’ ಸಿನಿಮಾದ ಬಳಿಕ ನಾನೊಬ್ಬ ಫ್ಯಾಮಿಲಿ ಹೀರೋ ಎಂದು ಗುರುತಿಸಿಕೊಂಡೆ. ಹಾಗಾಗಿ ಅಂಥ ಕಥೆಗಳೇ ಬಂದವು. ‘ಲವರ್‌ ಬಾಯ್‌’ ಎಂಬ ಹೆಸರು ಅಂಟಿಕೊಂಡಿತು.

ಪ್ರೇಮ್‌ ಅವರು ಕೆಲಕಾಲ ಕಾಣಿಸಿಕೊಳ್ಳಲಿಲ್ಲ ಏಕೆ?
ಹಾಗೇನಿಲ್ಲವಲ್ಲ. 2019ರಲ್ಲಿ ನಮ್ಮ ಸಿನಿಮಾ ಸೆಟ್ಟೇರಿತು. ಬಳಿಕ ನಾವು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿದ್ದೆವು. ಜಾಹೀರಾತು ಕೊಡುತ್ತಿದ್ದೆವು. ನಮ್ಮ ಕೆಲಸಗಳ ಪ್ರತಿ ಅಪ್‌ಡೇಟ್‌ ಬರ್ತಾ ಇತ್ತು.

ಏನಿದು ಪ್ರೇಮಂ ಪೂಜ್ಯಂ?
‘ಪೇಮಂ ಪೂಜ್ಯಂ’ ಒಂದು ಪ್ರಯಾಣ. ಪ್ರತಿ ವ್ಯಕ್ತಿಯ ಜೀವನದಲ್ಲಿ ಒಂದು ಪ್ರಯಾಣ ಅಂತಿರುತ್ತದೆ. ಈ ತರಹವೂ ಒಂದು ಹುಡುಗ–ಹುಡುಗಿ ಪ್ರೀತಿಸಬಹುದಾ ಎಂಬುದನ್ನು ಈ ಚಿತ್ರ ಹೇಳಲು ಹೊರಟಿದೆ. ಈಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆದಿವೆ. ಚಿತ್ರವನ್ನು  ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು