ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಣ್ಯಸ್ಮರಣೆ’ಯಲ್ಲಿ ಅಪ್ಪು ಅಮರ: 11ನೇ ದಿನದ ಪುಣ್ಯಸ್ಮರಣೆ

Last Updated 8 ನವೆಂಬರ್ 2021, 18:50 IST
ಅಕ್ಷರ ಗಾತ್ರ

ಬೆಂಗಳೂರು: ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ 11ನೇ ದಿನದ ಪುಣ್ಯಸ್ಮರಣೆ ಸೋಮವಾರ ನಡೆಯಿತು. ಸದಾಶಿವನಗರದಲ್ಲಿರುವ ಪುನೀತ್‌ ಅವರ ನಿವಾಸದಲ್ಲಿ ಬೆಳಗ್ಗೆ ಪೂಜಾಕಾರ್ಯದ ಬಳಿಕ, ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್‌ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಿಳಿ ಹೂವುಗಳಿಂದ ಅಲಂಕರಿಸಿದ ಸಮಾಧಿಯ ಆವರಣದಲ್ಲಿ, ಕೆಂಪು ಗುಲಾಬಿಯ ಎಸಳುಗಳ ಚಾದರಡಿ ಅಪ್ಪು ಚಿರನಿದ್ರೆಯಲ್ಲಿದ್ದರು.ಪ್ರೀತಿಯ ಅಪ್ಪುವಿನ ಅಗಲಿಕೆಯ ನೋವಿನಿಂದ ಕುಟುಂಬ ಇನ್ನೂ ಹೊರಬಂದಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಇಡೀ ಕುಟುಂಬವೇ ದುಃಖದ ಮಡುವಿನಲ್ಲಿತ್ತು. ಅಪ್ಪನನ್ನು ಕಳೆದುಕೊಂಡ ನೋವು ಮಕ್ಕಳಾದ ವಂದಿತಾ ಹಾಗೂ ಧೃತಿ ಅವರ ಕಣ್ಣುಗಳಲ್ಲಿತ್ತು. ಪತ್ನಿ ಅಶ್ವಿನಿ ಮುಖದಲ್ಲೂ ನೋವು ಮಡುಗಟ್ಟಿತ್ತು. ಇವೆಲ್ಲವನ್ನೂ ನುಂಗಿಕೊಂಡೇ ನೆಚ್ಚಿನ ತಮ್ಮನಿಗೆ ಹಾಡೊಂದನ್ನು ಹೇಳುತ್ತಾ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಕುಟುಂಬದ ಸದಸ್ಯರು ಸಮಾಧಿಗೆ ಆರತಿ ಎತ್ತಿದರು. ಶಿವರಾಜ್‌ಕುಮಾರ್‌ ಹಾಗೂ ಅವರ ಹಿರಿಯ ಪುತ್ರಿ ನಿರುಪಮಾ ಅಪ್ಪುವನ್ನು ನೆನೆದು ಕಣ್ಣೀರಾದರು. ಸ್ಟುಡಿಯೊ ಒಳಗಡೆಗೆ ಪೂಜೆ ಸಮಯದಲ್ಲಿ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಆದರೆ ದೂರದಲ್ಲಿದ್ದರೂ ಸಾವಿರಾರು ಅಭಿಮಾನಿಗಳ ಜೈಕಾರ ಅಲ್ಲಿಗೆ ತಲುಪಿತ್ತು.

ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ನಟರಾದ ಶಿವರಾಜ್‌ಕುಮಾರ್‌ ಹಾಗೂ ಶ್ರೀಮುರುಳಿ, ಸ್ಟುಡಿಯೊದ ಹೊರಭಾಗದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಿದರು. ಅಪ್ಪು ಮೇಲಿನ ಪ್ರೀತಿಯಿಂದ ಸಮಾಧಿಗೆ ನಮನ ಸಲ್ಲಿಸಲು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಇನ್ನೂ ಹರಿದುಬರುತ್ತಿದ್ದರು.

ಪುನೀತ್‌ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸದಾಶಿವ ನಗರದಲ್ಲಿರುವ ಮನೆಯಲ್ಲಿ ಪುನೀತ್‌ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಭಾರವಾದ ಹೃದಯದಿಂದಲೇ ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಎಲ್ಲರನ್ನೂ ಬರಮಾಡಿಕೊಂಡರು. ಚಿತ್ರರಂಗದ ದೊಡ್ಡಣ್ಣ, ದತ್ತಣ್ಣ, ದೇವರಾಜ್‌, ಅವಿನಾಶ್‌, ಉಪೇಂದ್ರ, ದರ್ಶನ್‌, ಗಣೇಶ್‌, ದುನಿಯಾ ವಿಜಯ್‌, ಅಜಯ್ ರಾವ್‌, ರವಿಶಂಕರ್‌, ರಕ್ಷಿತ್‌ ಶೆಟ್ಟಿ, ಧ್ರುವ ಸರ್ಜಾ, ಸುಧಾರಾಣಿ, ಮೇಘನಾ ರಾಜ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಪುನೀತ್‌ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಕುಟುಂಬದ ಸದಸ್ಯರು, ಊರಿನ ಸ್ನೇಹಿತರೂ ಇದ್ದರು. ಪುನೀತ್‌ ಅವರ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಮೊದಲ ಪಂಕ್ತಿಯಲ್ಲೇ ಊಟ ಹಾಕಿದ ಕುಟುಂಬ ಸದಸ್ಯರು ದೊಡ್ಮನೆಯ ಗುಣವನ್ನು ಮತ್ತಷ್ಟು ಎತ್ತಿಹಿಡಿದರು.

‘ಅಪ್ಪು ಅಮರಶ್ರೀ’

ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎನ್ನುವ ಕೂಗು ಅಭಿಮಾನಿಗಳಿಂದ ಹಾಗೂ ರಾಜಕೀಯ ಮುಖಂಡರಿಗೆ ಕೇಳಿಬರುತ್ತಿರುವ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್‌ಕುಮಾರ್‌, ‘ಪದ್ಮಶ್ರೀ ಅಲ್ಲ ಯಾವ ಶ್ರೀ ಕೊಟ್ಟರೂ ಅಪ್ಪು ಅಮರಶ್ರೀ. ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾಗಿಲ್ಲ. ಅಪ್ಪು ಯಾವತ್ತಿದ್ದರೂ ಅಮರವಾಗಿರುತ್ತಾನೆ. ಪದ್ಮಶ್ರೀ ಅಥವಾ ಪದ್ಮವಿಭೂಷಣ, ಹೆಸರಿನ ಪಕ್ಕದಲ್ಲಿ ಇರುವ ಕೇವಲ ಒಂದು ಶೀರ್ಷಿಕೆಯಷ್ಟೇ. ಅಪ್ಪು ಎಲ್ಲರ ಆತ್ಮದಲ್ಲಿ ಶ್ರೀ ಆಗಿರುತ್ತಾನೆ’ ಎಂದಿದ್ದಾರೆ.

ಪುನೀತ್‌ ಸಮಾಧಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್‌, ‘ಅಪ್ಪುವನ್ನು ನೆನಸಿಕೊಂಡಾಗ ಪದಗಳೇ ಬರುವುದಿಲ್ಲ. ಅತ್ತು ದುಃಖ ಕಮ್ಮಿ ಮಾಡಿಕೊಳ್ಳಬಹುದು. ಆದರೆ ಈ ನೋವು ನಾನು ಜೀವಂತವಾಗಿರುವವರೆಗೂ ಇರುತ್ತದೆ. ಜೀವ ಹೋದ ಮೇಲೂ ಈ ನೋವು ಕಾಡಬಹುದು. ಅಂಥಹ ವ್ಯಕ್ತಿತ್ವ ಅಪ್ಪುವದ್ದು. ಚಿಕ್ಕವಯಸ್ಸಿನಿಂದಲೂ ನಾವೇ ಅವನನ್ನು ಆರಾಧಿಸಿದ್ದೇವೆ. ಅವನ ಬೆಳವಣಿಗೆಯನ್ನು ನೋಡಿ ಖುಷಿಪಟ್ಟವರು. ಇನ್ನು ಅಭಿಮಾನಿಗಳು ಇನ್ನೆಷ್ಟು ಆರಾಧಿಸಿರಬೇಡ. ಅಪ್ಪು ನಿಜವಾಗಲೂ ಸಂತೋಷದಿಂದ ಇರಬೇಕು ಎಂದರೆ ಅಭಿಮಾನಿಗಳು ಪ್ರಾಣ ಕಳೆದುಕೊಳ್ಳಬಾರದು. ಅವನ ಹೆಸರನ್ನು ಉಳಿಸಿಕೊಳ್ಳಲು ನೋಡಿ. ಅವನ ಜೀವ ಇನ್ನೂ ಅಮರವಾಗಿರಲಿ. ಅಪ್ಪು ದಾರಿಯನ್ನು ಮುಂದುವರಿಸಲು ನೋಡಿ. ನಿಮ್ಮ ಕೈಲಾದ ಸಹಾಯವನ್ನು ಮಾಡಿ’ ಎಂದರು.

ಅಪ್ಪುವಿಗೆ ನೆಚ್ಚಿನ ಖಾದ್ಯ

ಮಾಂಸದ ಖಾದ್ಯಗಳನ್ನು ಬಹಳ ಇಷ್ಟಪಡುತ್ತಿದ್ದ ಪುನೀತ್‌ ಅವರಿಗೆ ನೆಚ್ಚಿನ ಖಾದ್ಯಗಳು ತಯಾರಾಗಿದ್ದವು. ಸಮಾಧಿಯ ಮುಂದೆ ಅಪ್ಪುವಿನ ನೆಚ್ಚಿನ ಸಿಹಿ ತಿನಿಸುಗಳು, ತಟ್ಟೆ ಇಡ್ಲಿ, ಮುದ್ದೆ, ಮಟನ್‌ ಬಿರಿಯಾನಿ, ಕೈಮಾ ಉಂಡೆ, ಕಾಲ್‌ಸೂಪು, ಮಟನ್‌ ಕುರ್ಮ, ಕಬಾಬ್‌, ಬೇಯಿಸಿದ ಮೊಟ್ಟೆ ಸೇರಿದಂತೆ ಬಗೆಬಗೆಯ ಮಾಂಸದ ಖಾದ್ಯಗಳನ್ನು ತಯಾರಿಸಿ ಎಡೆ ಇಡಲಾಗಿತ್ತು.

ಇದೇ 16ರ ಬಳಿಕ ಕುಟುಂಬದ ಜೊತೆ ಚರ್ಚೆ

ಪುನೀತ್‌ ಅವರ ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಪುನೀತ್‌ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವಿದ್ದು, ಇದನ್ನು ಅಚ್ಚುಕಟ್ಟಾಗಿ ನಡೆಸಲು ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅವರು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಸರ್ಕಾರದ ಕಡೆಯಿಂದ ಆಗಬೇಕಾದ ಎಲ್ಲ ಸಹಕಾರ ನೀಡುತ್ತೇವೆ. ನ.16ರಂದು ಚಲನಚಿತ್ರ ವಾಣಿಜ್ಯ ಮಂಡಳಿಯು ‘ಪುನೀತ ನಮನ’ ಕಾರ್ಯಕ್ರಮ ನಡೆಸುತ್ತಿದ್ದು, ಇದಾದ ಬಳಿಕ ಕುಟುಂಬದ ಸದಸ್ಯರ ಜೊತೆಗೆ ಕುಳಿತು, ಅವರ ಅಭಿಲಾಷೆ ಏನಿದೆ? ಅಪ್ಪು ಸ್ಮರಣಾರ್ಥವಾಗಿ ನಡೆಸಬೇಕಾದ ಕಾರ್ಯಕ್ರಮಗಳೇನು? ಸರ್ಕಾರ ಏನು ಮಾಡಬೇಕು? ಬೇರೆ ಬೇರೆ ಕಡೆ ನಡೆಸುವ ಕಾರ್ಯಕ್ರಮದ ಕುರಿತು ಚರ್ಚಿಸುತ್ತೇನೆ’ ಎಂದರು.

ಭಾವುಕರಾದ ನಟ ಸಿದ್ದಾರ್ಥ್‌

‘ಪುನೀತ್‌ ಅಮರ. ಅವರು ಓರ್ವ ಪ್ರತಿಭಾನ್ವಿತ, ಸರಳ ವ್ಯಕ್ತಿ. ಪ್ರತಿ ಬಾರಿಯೂ ಅವರನ್ನು ಭೇಟಿಯಾದಾಗ ನಮ್ಮನ್ನು ಅವರಲ್ಲಿ ಒಬ್ಬರಂತೆ ಕಾಣುತ್ತಿದ್ದರು. ಎಲ್ಲರನ್ನೂ ಹೊಗಳುತ್ತಿದ್ದರು. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದ ಪುನೀತ್‌ ಅವರಂತೆ ಮತ್ತೊಬ್ಬರಿರಲು ಸಾಧ್ಯವಿಲ್ಲ’ ಎಂದ ತೆಲುಗು ನಟ ಸಿದ್ದಾರ್ಥ್‌ ‘ರೆಸ್ಟ್‌ ಇನ್‌ ಪವರ್‌ ಅಪ್ಪು’ ಎನ್ನುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT