ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಟ್ರೆಡಿಷನಲ್ ಹುಡುಗಿ: ಇದು ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಮನದ ಮಾತು

Last Updated 20 ಏಪ್ರಿಲ್ 2019, 5:56 IST
ಅಕ್ಷರ ಗಾತ್ರ

‘ಸೀತಾರಾಮ ಕಲ್ಯಾಣ’ ಒಪ್ಪಿಕೊಳ್ಳಲು ಕಾರಣ ಏನು?

ಮೊದಲು ನನಗೆ ಇಷ್ಟವಾಗಿದ್ದು ಟೈಟಲ್‌. ‘ಸೀತಾರಾಮ ಕಲ್ಯಾಣ’ ಎಂಬ ಹೆಸರು ಕೇಳಿದಾಗ ಅದು ಪೌರಾಣಿಕ ಕಥೆ ಅಂದ್ಕೊಂಡೆ. ಅದಾದಮೇಲೆ ಅದು ಪಕ್ಕಾ ಕಮರ್ಷಿಯಲ್‌ ಎಂಟರ್‌ಟೈನರ್‌ ಸಿನಿಮಾ ಅಂತ ಗೊತ್ತಾಯ್ತು. ಹೆಸರೇ ಹೇಳುವ ಹಾಗೆ ಇದು ಸೋಲೊ ಹೀರೊಯಿನ್‌ ಸಿನಿಮಾ. ಸಾಮಾನ್ಯವಾಗಿ ಹಲವು ಸಿನಿಮಾಗಳಲ್ಲಿ ಕಥೆಗೆ ಟ್ವಿಸ್ಟ್‌ ಕೊಡುವ ಸಲುವಾಗಿ ಇಬ್ಬರು ನಾಯಕಿಯರನ್ನು ಇಡುತ್ತಾರೆ. ಆದರೆ ಇಲ್ಲಿ ಒನ್‌ ಆ್ಯಂಡ್ ಓನ್ಲಿ ಹೀರೊಯಿನ್‌.

ನಿಮ್ಮ ಪಾತ್ರ ಹೇಗಿದೆ?

ಅಲ್ಟಿಮೇಟ್ ಪಾತ್ರ. ‘ಬುಲ್ ಬುಲ್’, ‘ರನ್ನ’ ಸಿನಿಮಾಗಳಲ್ಲಿ ನನ್ನ ಪಾತ್ರಕ್ಕೆ ಎಷ್ಟು ಮಹತ್ವ ಇತ್ತೋ ಈ ಚಿತ್ರದಲ್ಲಿಯೂ ಅಷ್ಟೇ ಮಹತ್ವ ಇದೆ. ಕಥೆಯೂ ಅದ್ಭುತವಾಗಿದೆ. ಅದು ಇದು ಅಂತಲ್ಲ, ಈ ಚಿತ್ರತಂಡದಲ್ಲಿ ಎಲ್ಲವೂ ಸೂಪರ್. ನನ್ನದು ಸಾಂಪ್ರದಾಯಿಕ ಹುಡುಗಿ ಪಾತ್ರ. ಇಡೀ ಸಿನಿಮಾದಲ್ಲಿ ಲಂಗ ದಾವಣಿಯಲ್ಲೇ ಇರುತ್ತೇನೆ. ಒಮ್ಮೆ ಮಾತ್ರ ಸೀರೆಯಲ್ಲಿ ಕಾಣಿಸಿಕೊಳ್ಳುತ್ತೇನೆ. ಕೈತುಂಬ ಬಳೆಗಳು, ಮುಡಿ ತುಂಬ ಹೂವು ಧರಿಸಿಕೊಂಡು, ಜಡೆ ಹಾಕಿಕೊಂಡೇ ಇರುವ ಹುಡುಗಿ. ನಾನು ನಿಜಜೀವನದಲ್ಲಿ ಜಾಸ್ತಿ ಹೂವು ಮುಡಿದವಳೇ ಅಲ್ಲ. ಆದರೆ ಈ ಸಿನಿಮಾ ಚಿತ್ರೀಕರಣದಲ್ಲಿ ಪ್ರತಿದಿನ 20 ಮಾರು ಹೂವು ತರಿಸಿಬಿಡುತ್ತಿದ್ದರು. ಬಿಸಿಲಿದ್ದಾಗ ಒಣಗಿಹೋಗುತ್ತದಲ್ಲ.

ತುಂಬ ಜನ, ‘ಈ ಥರದ ಪಾತ್ರಗಳಲ್ಲಿ ನಟಿಸುವುದಕ್ಕೆ ಬೋರ್ ಆಗುವುದಿಲ್ಲವೇ’ ಎಂದು ಕೇಳುತ್ತಿದ್ದರು. ಆದರೆ ನನಗೆ ಸಾಂಪ್ರದಾಯಿಕ ಪಾತ್ರಗಳೆಂದರೆ ಇಷ್ಟ. ಸಿನಿಮಾಗಳಲ್ಲಷ್ಟೇ ಅಲ್ಲ, ನಿಜಜೀವನದಲ್ಲಿಯೂ ನಾನು ಸಾಂಪ್ರದಾಯಿಕ ಹುಡುಗಿಯೇ.

ನಿರ್ದೇಶಕ ಎ. ಹರ್ಷ, ನಿಖಿಲ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಹರ್ಷ ಅವರ ‘ಭಜರಂಗಿ’ ಸಿನಿಮಾದಲ್ಲಿ ನಾನು ನಟಿಸಬೇಕಾಗಿತ್ತು. ಇನ್ನೂ ಕೆಲವು ಬಾರಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ತಪ್ಪಿಹೋಗಿತ್ತು. ನನ್ನ ಸಿನಿಮಾಗಳ ಹಾಡಿಗೆ ಅವರು ನೃತ್ಯಸಂಯೋಜನೆ ಮಾಡಿದ್ದಾರೆ. ಆಗೆಲ್ಲ ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಎಂದುಕೊಳ್ಳುತ್ತಿದ್ದೆವು. ‘ಸೀತಾರಾಮ ಕಲ್ಯಾಣ’ದಿಂದ ಅದು ಸಾಧ್ಯವಾಗಿದೆ. ಹರ್ಷ ತುಂಬ ತಾಳ್ಮೆ ಇರುವ ವ್ಯಕ್ತಿ. ನಿರ್ದೇಶಕನಿಗೆ ತಾಳ್ಮೆ ತುಂಬ ಮುಖ್ಯ. ಯಾಕೆಂದರೆ ಎಲ್ಲ ಸಲ, ಎಲ್ಲ ಕಲಾವಿದರೂ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದಕ್ಕಾಗುವುದಿಲ್ಲ. ಆಗೆಲ್ಲ ಅವರು ತುಂಬ ತಾಳ್ಮೆಯಿಂದ ತಿದ್ದುತ್ತಿದ್ದರು. ನನ್ನ ಮತ್ತು ನಿಖಿಲ್‌ ಇಬ್ಬರನ್ನೂ ಮಕ್ಕಳ ಥರ ಟ್ರೀಟ್ ಮಾಡುತ್ತಿದ್ದರು. ಎಲ್ಲರ ಫೇವರೆಟ್ ಮಾಸ್ಟರ್ ಅವರು.

ನಿಖಿಲ್‌ ದೊಡ್ಡ ಕುಟುಂಬದಿಂದ ಬಂದವರು; ಸೆಟ್‌ನಲ್ಲಿ ಹೇಗಿರುತ್ತಾರೋ ಎಂಬ ಕುತೂಹಲ ನನಗೂ ಇತ್ತು. ಆದರೆ ಅವರು ನಿಜಕ್ಕೂ ಜಂಟಲ್‌ಮೆನ್‌. ಎಲ್ಲರ ಜೊತೆಗೆ ತುಂಬ ಮರ್ಯಾದೆಯಿಂದ ಮಾತನಾಡುತ್ತಾರೆ. ಕಲಾವಿದರು–ತಂತ್ರಜ್ಞರಿಗೆ ಗೌರವ ಕೊಡುತ್ತಾರೆ. ಅವರದ್ದೇ ಬ್ಯಾನರ್ ಆಗಿದ್ದರಿಂದ ಎಲ್ಲ ಕಡೆಗೂ ಗಮನ ಹರಿಸುತ್ತ ಯಾರಿಗೂ ತೊಂದರೆ ಆಗದ ಹಾಗೆ ನೋಡಿಕೊಂಡರು.

ರಚಿತಾ ರಾಮ್‌ ಸ್ಟಾರ್‌ ನಟರ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ ಎಂಬ ಮಾತಿದೆಯಲ್ಲ..?

ಅದು ಹಳೆ ರೂಮರ್‌. ಆ ಥರ ಏನೂ ಇಲ್ಲ. ನಾನು ಕೆಲಸ ಮಾಡುತ್ತಿರುವ ಎಲ್ಲ ಹೀರೊಗಳೂ ಸ್ಟಾರ್‌ಗಳೇ. ನನಗೆ ಯಾವ ಭೇದಭಾವ ಇಲ್ಲ. ಯಾರ ಜತೆ ಕೆಲಸ ಮಾಡುವ ಋಣ ಇರುತ್ತದೆಯೋ ಅವರ ಜತೆ ಕೆಲಸ ಮಾಡುತ್ತೇನೆ. ನಾನು ಅವಕಾಶ ಕೇಳಿಕೊಂಡು ಯಾರ ಕಾಲಿಗೂ ಬಿದ್ದಿಲ್ಲ. ನನ್ನ ಅದೃಷ್ಟಕ್ಕೆ ಒಳ್ಳೆಯ ನಟರ ಜತೆಗೆ ಕೆಲಸ ಮಾಡುವ ಅವಕಾಶ ಬಂದಿದೆ. ಅದನ್ನು ತಿರಸ್ಕರಿಸಿದರೆ ನನ್ನಂಥ ದುರಹಂಕಾರಿ ಇರುವುದಿಲ್ಲ.

ನೀವು ಒಪ್ಪಿಕೊಳ್ಳುವ ಸಿನಿಮಾಗಳ ಸಂಖ್ಯೆಯೂ ಕಡಿಮೆ ಅಲ್ಲವೇ?

ಈಗ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಸೀತಾರಾಮ ಕಲ್ಯಾಣ, ನಟಸಾರ್ವಭೌಮ ಮತ್ತು ಐ ಲವ್ ಯೂ ಮೂರು ಸಿನಿಮಾಗಳು ಒಂದರ ಹಿಂದೆ ಒಂದು ಬಿಡುಗಡೆಯಾಗುತ್ತಿವೆ. ಇನ್ನಷ್ಟು ಕಥೆಗಳನ್ನು ಕೇಳುತ್ತಿದ್ದೇನೆ. ಈ ವರ್ಷವೂ ಹೆಚ್ಚು ಸಿನಿಮಾಗಳನ್ನು ಮಾಡುತ್ತೇನೆ.

(ಕೃಪೆ: ಸುಧಾ, ಜ.31ರ ಸಂಚಿಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT