ಡಾ.ರಾಜಕುಮಾರ್ ಅಭಿನಯದ ಮೂರು ತಲೆಮಾರು ಮೆಚ್ಚಿದ 11 ಚಿತ್ರಗಳು

ಭಾನುವಾರ, ಮೇ 19, 2019
33 °C

ಡಾ.ರಾಜಕುಮಾರ್ ಅಭಿನಯದ ಮೂರು ತಲೆಮಾರು ಮೆಚ್ಚಿದ 11 ಚಿತ್ರಗಳು

Published:
Updated:

ಕನ್ನಡ ಚಿತ್ರರಂಗ ಕಂಡ ಧೀಮಂತ ನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವಿಂದು. ಈ ಸಂದರ್ಭದಲ್ಲಿ ರಾಜಕುಮಾರ್ ಅಭಿನಯದ ಮೂರು ತಲೆಮಾರು ಮೆಚ್ಚಿದ 11 ಚಿತ್ರಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಸತ್ಯ ಹರಿಶ್ಚಂದ್ರ

ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ, ಡಾ.ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಸತ್ಯಹರಿಶ್ಚಂದ್ರ’. ಕೆ.ವಿ.ರೆಡ್ಡಿ ಅವರು ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ನಿರ್ಮಿಸಿರುವ ಈ ಸಿನಿಮಾ 1965ರಲ್ಲಿ ತೆರೆಕಂಡಿತು. ಪಂಡರೀಬಾಯಿ, ವಾಣಿಶ್ರೀ, ಉದಯಕುಮಾರ್, ಎಂ.ಪಿ.ಶಂಕರ್, ನರಸಿಂಹರಾಜು ಈ ಚಿತ್ರದಲ್ಲಿ ನಟಿಸಿರುವ ಇತರ ಪ್ರಮುಖ ನಟರು. ಇಂದಿಗೂ ಎಲ್ಲ ವಯಸ್ಸಿನವರೂ ಮೆಲುಕು ಹಾಕುವ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ...’ ಹಾಡು ಇದೇ ಸಿನಿಮಾದಲ್ಲಿದೆ. ಕಪ್ಪುಬಿಳುಪು ಸಿನಿಮಾ ಬಣ್ಣದಲ್ಲಿ ಈಚೆಗೆ ತೆರೆಕಂಡಿತ್ತು.

ಕಸ್ತೂರಿ ನಿವಾಸ

‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು...’ ಹಾಡು ನೆನಪಿದೆಯೇ? ಇದು ‘ಕಸ್ತೂರಿ ನಿವಾಸ’ ಸಿನಿಮಾದ ಹಾಡು. 1971ರಲ್ಲಿ ತೆರೆಕಂಡ ಈ ಚಿತ್ರವು ಜಿ. ಬಾಲಸುಬ್ರಮಣ್ಯಂ ಅವರ ಗಟ್ಟಿಕತೆ, ರಾಜಕುಮಾರ್ ಅವರ ಮನೋಜ್ಞ ಅಭಿನಯದಿಂದ ಜನಮನ್ನಣೆ ಗಳಿಸಿತ್ತು. ಉದ್ಯಮಿಯಾಗಿ, ಗೆಳೆಯನಾಗಿ, ಪತಿಯಾಗಿ, ಭಗ್ನಪ್ರೇಮಿಯಾಗಿ ಕಾಣಿಸಿಕೊಂಡಿರುವ ರಾಜ್‌ ಅವರ ಅಭಿನಯ ಚಿರಕಾಲ ಮನದಲ್ಲಿ ಉಳಿಯುವಂಥದ್ದು. ಜಯಂತಿ, ಆರತಿ ತಾರಾಗಣದಲ್ಲಿರುವ ಈ ಚಿತ್ರ 16 ಚಿತ್ರ ಮಂದಿರಗಳಲ್ಲಿ ನೂರು ದಿನ ಪೂರೈಸಿತ್ತು.

‘ಕಸ್ತೂರಿ ನಿವಾಸ’ದ ಹಾಡುಗಳಿಗೆ ಪಿ.ಬಿ.ಶ್ರೀನಿವಾಸ್, ಪಿ. ಸುಶೀಲ, ಎಲ್‌.ಆರ್‌. ಈಶ್ವರಿ ಅವರ ಹಿನ್ನೆಲೆ ಗಾಯನವಿದೆ. ಕಪ್ಪುಬಿಳುಪಿನಲ್ಲಿ ತೆರೆಕಂಡಿದ್ದ ಈ ಸಿನಿಮಾವನ್ನು 2014ರಲ್ಲಿ ನಿರ್ಮಾಪಕ ಕೆ.ಸಿ.ಎನ್. ಮೋಹನ್ ಅವರು ವರ್ಣಮಯ ಚಿತ್ರವನ್ನಾಗಿಸಿ ಮತ್ತೆ ಬಿಡುಗಡೆ ಮಾಡಿದ್ದರು.

ಚಂದ್ರಹಾಸ

‘ದೇವರನ್ನು ನಂಬಿದರೆ ಎಂಥ ಆಪತ್ತಿನ ಸನ್ನಿವೇಶಗಳಲ್ಲಿಯೂ ಶ್ರೇಯಸ್ಸೇ ನಮಗೆ ಸಿಗುತ್ತದೆ’ ಎನ್ನುವ ಆಶಯ ಹೊತ್ತ ಜನಪದ ಕಥೆಯನ್ನು ಸಿನಿಮಾ ಮಾಡಿದವರು ಬಿ.ಎಸ್.ರಂಗಾ. 1965ರಲ್ಲಿ ತೆರೆ ಕಂಡ ‘ಚಂದ್ರಹಾಸ’ ಇಂದಿಗೂ ರಾಜ್‌ಕುಮಾರ್ ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ. ವಿನೋದದಲ್ಲಿ, ಶೃಂಗಾರದಲ್ಲಿ, ಸಾಹಸ ದೃಶ್ಯಗಳಲ್ಲಿ ರಾಜ್ ಅಭಿನಯ ಮನಸೆಳೆಯುವಂತಿದೆ. ಲೀಲಾವತಿ, ಉದಯಕುಮಾರ್, ಸುದರ್ಶನ್ ತಾರಾಗಣದಲ್ಲಿರುವ ಈ ಸಿನಿಮಾಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶಿಸಿದ್ದಾರೆ.

ಕವಿರತ್ನ ಕಾಳಿದಾಸ

‘ಕವಿರತ್ನ ಕಾಳಿದಾಸ’, ಈ ಹೆಸರು ಕೇಳಿದ ಕೂಡಲೇ ನೆನಪಾಗುವುದು ಡಾ. ರಾಜ್‌ಕುಮಾರ್ ಅವರ ನಟನಾ ಕೌಶಲ. 1983ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕಾಳಿದಾಸನಾಗಿ ರಾಜ್‌ ನಟನೆಗೆ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗಿತ್ತು. ಈ ಸಿನಿಮಾಕ್ಕೆ ಚಿ. ಉದಯಶಂಕರ್ ಅವರು ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಎಂ.ರಂಗರಾಜ್ ಸಂಗೀತ ನಿರ್ದೇಶನವಿದೆ. ಡಾ.ರಾಜ್‍ಕುಮಾರ್, ಪಿ.ಬಿ.ಶ್ರೀನಿವಾಸ್, ವಾಣಿ ಜಯರಾಂ, ಪೂರ್ಣಚಂದ್ರರಾವ್ ಹಿನ್ನೆಲೆ ಗಾಯನವೂ ಮೋಡಿ ಮಾಡಿದೆ. ‘ಮಾಣಿಕ್ಯ ವೀಣಾ ಮುಫಲಾಲಯಂತೀಂ’ ಮತ್ತು ‘ಅಳ್‌ಬ್ಯಾಡ್ ಕಣೆ ಸುಮ್ಕಿರೆ’ ಹಾಡುಗಳು ಈ ಚಿತ್ರವನ್ನು ಕನ್ನಡ ಮನಸ್ಸುಗಳಲ್ಲಿ ಶಾಶ್ವತವಾಗಿ ನೆಲೆಗೊಳಿಸಿದವು.

ಬಂಗಾರದ ಮನುಷ್ಯ

‘ಆಗದು ಎಂದು ಕೈಕಟ್ಟಿ ಕುಳಿತರೆ’, ‘ಆಹಾ ಮೈಸೂರು ಮಲ್ಲಿಗೆ’, ‘ನಗುನಗುತಾ ನಲಿ ನಲಿ...’ ಪಿ.ಬಿ. ಶ್ರೀನಿವಾಸ್ ಅವರ ಮಧುರ ಕಂಠದಲ್ಲಿ ಮೂಡಿಬಂದ ಈ ಹಾಡುಗಳು ಇಂದಿಗೂ ಕೇಳುಗರನ್ನು ಸೆಳೆಯುತ್ತವೆ. ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಾಡುಗಳೆಂದೇ ಪ್ರಸಿದ್ಧಿಪಡೆದಿರುವ ಇವು ರಾಜ್ ನಟನೆಯ ‘ಬಂಗಾರದ ಮನುಷ್ಯ’ ಚಿತ್ರದ್ದು. 1972ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದದ್ದು ಚಿಕ್ಕಮಗಳೂರು ಮತ್ತು ಕಳಸಾಪುರದಲ್ಲಿ. ಆರ್‌.ಲಕ್ಷ್ಮಣ್ ಗಪಾಲ್ ನಿರ್ಮಿಸಿರುವ ಈ ಸಿನಿಮಾವನ್ನು ಸಿದ್ದಲಿಂಗಯ್ಯ ಅವರು ನಿರ್ದೇಶಿಸಿದ್ದಾರೆ. ಜಿ.ಕೆ.ವೆಂಕಟೇಶ್ ಅವರು ಸಂಗೀತ ನಿರ್ದೇಶಿಸಿದ್ದು ಎಲ್ಲ ಹಾಡುಗಳೂ ಹಿಟ್ ಆಗಿವೆ.‌

ಈ ಸಿನಿಮಾ ರಾಜ್‌ಕುಮಾರ್ ಅವರ ವೃತ್ತಿಜೀವನದ ಮೈಲಿಗಲ್ಲೂ ಹೌದು. ಭಾರತೀಯ ಚಿತ್ರರಂಗದ ಶತಮಾನೋತ್ಸವದ ವೇಳೆ ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿದ್ದ ‘ಭಾರತೀಯ ಸಿನಿಮಾದ 25 ಅತ್ಯುತ್ತಮ ನಟನಾ ಪ್ರದರ್ಶನ’ ಪಟ್ಟಿಯಲ್ಲಿ ರಾಜ್‌ಕುಮಾರ್ ಅವರೂ ಸ್ಥಾನ ಪಡೆದಿದ್ದರು. ‘ಬಂಗಾರದ ಮನುಷ್ಯ’ 1975ರಲ್ಲಿ ತೆಲುಗಿಗೆ ರಿಮೇಕ್ ಆಗಿದೆ. ಪಟ್ಟಣ ಸೇರಿದ್ದ ಸಾಕಷ್ಟು ಯುವಕರು ಈ ಚಿತ್ರ ನೋಡಿದ ನಂತರ ಹಳ್ಳಿಗಳಿಗೆ ಹಿಂದಿರುಗಿ ಕೃಷಿಯಲ್ಲಿ ನೆಲೆ ನಿಂತಿದ್ದು ಭಾರತ ಚಿತ್ರರಂಗದ ಅಪರೂಪದ ವಿದ್ಯಮಾನ ಎಂದೇ ದಾಖಲಾಗಿದೆ.

ಬೇಡರ ಕಣ್ಣಪ್ಪ

‘ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವ...’ ಎಲ್ಲ ಶಿವರಾತ್ರಿಗಳಲ್ಲೂ ಮೊಳಗುವ ಹಾಡು ಇದು. ಈ ಹಾಡು ‘ಬೇಡರ ಕಣ್ಣಪ್ಪ’ ಚಿತ್ರದ್ದು. ಅಂದಹಾಗೆ ಇದು ಡಾ.ರಾಜಕುಮಾರ್, ಪಂಢರಿಬಾಯಿ ಮತ್ತು ನರಸಿಂಹರಾಜು ಅವರಿಗೆ ತಾರಾಪಟ್ಟ ಕೊಟ್ಟ ಚಿತ್ರ. ಗುಬ್ಬಿ ಕಂಪೆನಿ ನಿರ್ಮಾಣದ ‘ಬೇಡರ ಕಣ್ಣಪ್ಪ’ 1954ರಲ್ಲಿ ತೆರೆ ಕಂಡಿತು. ಕನ್ನಡ ಚಿತ್ರರಂಗದ ದೆಸೆ ಬದಲಿಸಿದ ಚಿತ್ರವೆಂದೇ ಇದು ಪ್ರಖ್ಯಾತವಾಯಿತು.

ಭಕ್ತನೊಬ್ಬ ತನ್ನ ಆರಾಧ್ಯ ದೈವವಾದ ಶಿವನನ್ನು ಮೆಚ್ಚಿಸಲು ತನ್ನೆರಡು ಕಣ್ಣುಗಳನ್ನು ಕಿತ್ತುಕೊಡುವ ಕಥೆಯನ್ನು ಈ ಚಿತ್ರ ಹೊಂದಿದೆ. ಇದೇ ಚಿತ್ರ ನಂತರದ ದಿನಗಳಲ್ಲಿ ‘ಕಾಳಹಸ್ತಿ ಮಹಾತ್ಮ್ಯಂ’ ಹೆಸರಿನಿಂದ ತೆಲುಗಿನಲ್ಲೂ ರಿಮೇಕ್ ಆಯಿತು.

ರಣಧೀರ ಕಂಠೀರವ

ಮೈಸೂರಿನ ರಾಜಮನೆತನದಲ್ಲಿ ‘ರಣಧೀರ ಕಂಠೀರವ’ ಎಂದೇ ಪ್ರಸಿದ್ಧರಾಗಿದ್ದ ಕಂಠೀರವ ನರಸರಾಜ ವೊಡೆಯರ್ ಅವರ ಜೀವನ ಚರಿತ್ರೆ ಆಧಾರಿತ ಚಿತ್ರ ‘ರಣಧೀರ ಕಂಠೀರವ’. ಕನ್ನಡ ಚಲನಚಿತ್ರೋದ್ಯಮವು ಹಣಕಾಸು ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ನಟರಾದ ರಾಜ್‌ಕುಮಾರ್, ಬಾಲಕೃಷ್ಣ, ನರಸಿಂಹರಾಜು ಮತ್ತು ಖ್ಯಾತ ಲೇಖಕ ಜಿ.ವಿ. ಐಯ್ಯರ್ ಜತೆಗೂಡಿ ‘ಚಲನಚಿತ್ರ ಕಲಾವಿದರ ಸಂಘ’ದ ಮೂಲಕ ನಿರ್ಮಿಸಿದ ಚಿತ್ರವಿದು. ರಾಜ್‌ಕುಮಾರ್ ಅವರು ನಿರ್ಮಾಪಕರಾಗಿ ಗುರುತಿಸಿಕೊಂಡ ಮೊದಲ ಚಿತ್ರ.

ರಾಜ್ಯದ ಸಂಸ್ಕೃತಿ, ಇತಿಹಾಸ ಮತ್ತು ಚಲನಚಿತ್ರೋದ್ಯಮ ಇತಿಹಾಸದಲ್ಲಿ ಮುಖ್ಯ ಸ್ಥಾನ ಪಡೆದಿರುವ ಈ ಸಿನಿಮಾ 1960ರಲ್ಲಿ ತೆರೆಕಂಡಿತ್ತು. ಕಂಠೀರವನ ಪಾತ್ರದಲ್ಲಿ ರಾಜ್‌ಕುಮಾರ್ ನಟನೆ ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ಎನ್‌.ಸಿ. ರಾಜನ್ ನಿರ್ದೇಶನದ ಈ ಸಿನಿಮಾಕ್ಕೆ ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನವಿದೆ.

ಭಾಗ್ಯವಂತರು

‘ಭಾಗ್ಯವಂತರು’ 1977ರ ಮಾರ್ಚ್‌ 16ರಂದು ಬಿಡುಗಡೆಯಾದ ಚಿತ್ರ. ತೆಲುಗು ಸಿನಿಮಾ ‘ದೀರ್ಘ ಸುಮಂಗಲಿ’ಯಿಂದ ರಿಮೇಕ್ ಮಾಡಲಾಗಿದ್ದು, ದ್ವಾರಕೀಶ್ ಇದರ ನಿರ್ಮಾಪಕರು. ಚಿ. ಉದಯಶಂಕರ್ ಅವರು ಸಂಭಾಷಣೆ, ಚಿತ್ರ ಕಥೆ ಬರೆದಿದ್ದು, ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿ.ಸರೋಜಾ ದೇವಿ, ಅಶೋಕ್, ಬಾಲಕೃಷ್ಣ ಸಹ ನಟರಾಗಿ ಮೆರೆದಿದ್ದಾರೆ. ಬೆಳೆದ ಮಕ್ಕಳನ್ನು ನಿರ್ವಹಿಸುವಾಗ ಅಪ್ಪ ಎದುರಿಸುವ ಅಸಹಾಯಕತೆಯನ್ನು ಮನೋಜ್ಞವಾಗಿ ಕಟ್ಟಿಕೊಟ್ಟ ಅಭಿನಯ ಇದರ ವೈಶಿಷ್ಟ್ಯ. ಈ ಚಿತ್ರದ ಅಭಿನಯವನ್ನು ‘ಇದು ರಾಜ್‌ರಿಂದ ಮಾತ್ರ ಸಾಧ್ಯ’ ಎಂದೇ ಹಿರಿಯರು ನೆನೆಯುತ್ತಾರೆ.

ಭಕ್ತ ಕುಂಬಾರ

ರಾಜ್‌ಕುಮಾರ್ ಮತ್ತು ಲೀಲಾವತಿ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ತೆರೆ ಕಂಡಿದ್ದು 1974ರಲ್ಲಿ. ಭಾರತೀಯ ಭಕ್ತಿ ಪರಂಪರೆ, ಅದರಲ್ಲೂ ಪಂಡರಾಪುರ ವಿಟ್ಠಲನ ಭಕ್ತ ಪ್ರೇಮ, ಭಕ್ತರು ಮತ್ತು ಪರಮಾತ್ಮನ ನಡುವಣ ಸಂಬಂಧಗಳನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿರುವ ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ. ಚಿತ್ರ ಕಥೆ, ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನ ನೀಡಿದ್ದಾರೆ.

ಮಡಿಕೆ ಮಾಡಲು ಮಣ್ಣು ತುಳಿದು ಹಸನಾಗಿಸುತ್ತಿರುವ ಕುಂಬಾರನೊಬ್ಬ ದೇವರ ನಾಮಗಳನ್ನು, ಭಜನೆಗಳನ್ನು ಹಾಡುತ್ತಾ ಮೈಮರೆತು ಮಗುವೊವೊಂದನ್ನು ತುಳಿದು ಜೀವಂತ ಸಮಾಧಿ ಮಾಡುತ್ತಾನೆ. ನಂತರ ತಪ್ಪಿನ ಅರಿವಾಗಿ ಪರಮಾತ್ಮನಲ್ಲಿ ಮೊರೆ ಇಟ್ಟಾಗ ಪಂಡರಾಪುರ ವಿಟ್ಠಲನೇ ಸತ್ತ ಮಗುವನ್ನು ಬದುಕಿಸಿದ ಕಥೆಯೇ ಸಿನಿಮಾದ ಸಾರ. ಕುಂಬಾರನಾಗಿ ರಾಜ್‌ಕುಮಾರ್‌ ಅಭಿನಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿತ್ತು.

ನಾ ನಿನ್ನ ಮರೆಯಲಾರೆ

ಎ.ಆರ್. ಆನಂದ್ ಅವರ ‘ನೀನು ನಾನು ಜೋಡಿ’ ಕಥೆ ಆಧಾರಿತ ಚಿತ್ರ ‘ನಾ ನಿನ್ನ ಮರೆಯಲಾರೆ’ 1976ರಲ್ಲಿ ಬಿಡುಗಡೆಯಾಗಿತ್ತು. ರಾಜ್‌ಕುಮಾರ್ ಮತ್ತು ಲಕ್ಷ್ಮೀ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 25 ವಾರ ಭರ್ಜರಿ ಪ್ರದರ್ಶನ ಕಂಡಿತ್ತು. ಆ ಕಾಲದ ಯುವಕರಲ್ಲಿ ಬೈಕ್‌ ಕ್ರೇಜ್ ಹುಟ್ಟುಹಾಕಿದ್ದು ಈ ಚಿತ್ರದ ವೈಶಿಷ್ಟ್ಯ. ರಾಜನ್‌ ನಾಗೇಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೇ, ನನ್ನಾಸೆಯ ಹೂವೇ, ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು, ನಾ ನಿನ್ನ ಮರೆಯಲಾರೆ ಹಾಡುಗಳನ್ನು ಇಂದಿಗೂ ಜನರು ಮೆಲುಕು ಹಾಕುತ್ತಾರೆ.

ಎನ್‌. ವೀರಸ್ವಾಮಿ ಅವರು ನಿರ್ಮಿಸಿರುವ ಈ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದು. ಈ ಸಿನಿಮಾ ತಮಿಳಿಗೆ ರಿಮೇಕ್ ಆಗಿದ್ದು (ಪುದುಕವಿತೈ) ರಜನಿಕಾಂತ್ ನಟಿಸಿದ್ದಾರೆ. ನಂತರ ಹಿಂದಿಗೂ ರಿಮೇಕ್ ಆಗಿದೆ (ಪ್ಯಾರ್ ಕಿಯಾ ಹೈ ಪ್ಯಾರ್‌ ಕರೇಂಗೆ).

ಗಂಗೆ ಗೌರಿ

‘ಇಬ್ಬರು ಹೆಂಡತಿಯರನ್ನು ಮದುವೆಯಾಗಿ ಅನುಭವಿಸುವ ಸುಖ ಯಾರಿಗೂ ಬೇಡ’ ಎಂದು ಸಾಕ್ಷಾತ್ ಪರಶಿವನೂ ನಿಟ್ಟುಸಿರು ಬಿಡುವುದನ್ನು ಬಿಂಬಿಸುವ ಚಿತ್ರ ‘ಗಂಗೆ ಗೌರಿ’. ಜನಪ್ರಿಯ ಜಾನಪದ ಕಥೆಗಳನ್ನು ಆಧರಿಸಿ ಹೆಣೆದ ಚಿತ್ರಕಥೆಗೆ ಜೀವ ತುಂಬಿದವರು ನಿರ್ದೇಶಕ ಬಿ.ಆರ್.ಪಂತುಲು. 1967ರಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ಶಿವನಾಗಿ ಡಾ.ರಾಜಕುಮಾರ್, ಪಾರ್ವತಿಯಾಗಿ ಲೀಲಾವತಿ ಮತ್ತು ಗಂಗೆಯಾಗಿ ಭಾರತಿ ಅಭಿನಯಿಸಿರುವ ಚಿತ್ರವಿದು. ಎಸ್. ಜಾನಕಿ ದನಿಯ ಜನಪ್ರಿಯ ಗೀತೆ ‘ತುಂಗಭದ್ರ ಕಾವೇರಿ ಗಂಗೆ ಪೂಜೆ ಮಾಡೋಣ’ ಇದೇ ಚಿತ್ರದ್ದು. ಭಕ್ತಿರಸ ಪ್ರಧಾನ ಚಿತ್ರವಾದರೂ ಹಾಸ್ಯಕ್ಕೆ ಏನೂ ಕೊರತೆಯಿಲ್ಲ. ಶಿವರಾತ್ರಿಯಂದು ಮನೆಮಂದಿಯೆಲ್ಲಾ ಕಲೆತು, ನಕ್ಕು ನಲಿಯಲು ಈ ಚಿತ್ರ ನೋಡಬಹುದು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 55

  Happy
 • 2

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !