ಶುಕ್ರವಾರ, ಫೆಬ್ರವರಿ 21, 2020
31 °C
‘ತಲೈವರ್‌ 168’ ಸಿನಿಮಾ ನಿರ್ಮಾಪಕರ ಪೇಚಾಟ

ರಜನಿಯ ಹೊಸ ಚಿತ್ರದ ಹೆಸರು 'ಮನ್ನವನ್‌’: ಇದು ಅಭಿಮಾನಿಗಳು ಕೊಟ್ಟ ಟೈಟಲ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸೂಪರ್‌ಸ್ಟಾರ್’ ರಜನಿಕಾಂತ್‌ ಅವರು ಪೆರಿಯಾರ್‌ ಕುರಿತು ನೀಡಿದ್ದ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿತ್ತು. ಈ ಹೇಳಿಕೆ ಸಂಬಂಧ ನಾನು ಕ್ಷಮೆ ಕೋರುವುದಿಲ್ಲ ಎಂದಿದ್ದರು ತಲೈವ. ಅವರ ನಿಲುವು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆಯೇ ಅವರು ‘ತಲೈವರ್ 168’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ರಜನಿಯ ಅಭಿಮಾನಿಗಳು ಸಿದ್ಧ‍‍ಪಡಿಸಿರುವ ಈ ಸಿನಿಮಾದ ಪೋಸ್ಟರ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಭಿಮಾನಿಗಳ ಈ ನಡೆಯು ಚಿತ್ರ ನಿರ್ಮಾಪಕರನ್ನು ಪೇಚಿಗೆ ಸಿಲುಕಿಸಿದೆ. ಅದು ಆಗಿರುವುದು ಇಷ್ಟೇ.

ಅಭಿಮಾನಿಗಳು ಆ ಪೋಸ್ಟರ್‌ನಲ್ಲಿ ಚಿತ್ರಕ್ಕೆ ‘ಮನ್ನವನ್‌’ ಎಂಬ ಟೈಟಲ್‌ ಇಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟೈಟಲ್‌ ವೈರಲ್‌ ಆಗಿರುವುದರಿಂದ ರಜನಿಯ ಸಿನಿಮಾಕ್ಕೆ ಚಿತ್ರತಂಡ ಇದೇ ಶೀರ್ಷಿಕೆಯನ್ನು ಅಂತಿಮಗೊಳಿಸಿದೆ ಎಂದು ಹಲವು ಜನರು ನಂಬಿಕೊಂಡಿದ್ದಾರಂತೆ. ಅಂದಹಾಗೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತಿರುವುದು ಸಿರುಥೈ ಶಿವ. ಈ ಹಿಂದೆ ಅವರು ತಮಿಳಿನ ‘ವಿಶ್ವಾಸಂ’ ಚಿತ್ರ ನಿರ್ದೇಶಿಸಿದ್ದರು. ಸನ್ ಪಿಕ್ಚರ್ಸ್ ಇದಕ್ಕೆ ಬಂಡವಾಳ ಹೂಡಿದೆ.

ಮೂಲಗಳ ಪ್ರಕಾರ ನಿರ್ಮಾಪಕರು ಈ ಚಿತ್ರಕ್ಕೆ ‘ಅನ್ನಥ’ ಎಂಬ ಶೀರ್ಷಿಕೆ ಇಡಲು ನಿರ್ಧರಿಸಿದ್ದರಂತೆ. ಇದು ತಮಿಳಿನ ಆಡುಮಾತಿನ ಪದ. ‘ಹಿರಿಯಣ್ಣ’ ಎಂಬುದು ಇದರರ್ಥ. ರಜನಿಯ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಬಿಡುಗಡೆ, ಟೈಟಲ್‌ ಬಗ್ಗೆ ಪ್ರಸ್ತಾಪಿಸಿದ್ದರೂ ನಿರ್ಮಾ‍ಪಕರು ಇದರ ಬಗ್ಗೆ ತುಟಿ ಬಿಚ್ಚಿಲ್ಲ. ಮತ್ತೊಂದೆಡೆ ಚಿತ್ರತಂಡ ಇನ್ನೂ ‘ತಲೈವರ್‌ 168’ ಚಿತ್ರದ ಶೀರ್ಷಿಕೆಯನ್ನು ಅಂತಿಮಗೊಳಿಸಿಲ್ಲ ಎಂಬ ಸುದ್ದಿಯೂ ಇದೆ. ಸೂಕ್ತ ಶೀರ್ಷಿಕೆಯ ಹುಡುಕಾಟದಲ್ಲಿ ಇದೆಯಂತೆ.

ಈಗಾಗಲೇ, ಚಿತ್ರದ ಶೂಟಿಂಗ್‌ ಆರಂಭಗೊಂಡಿದೆ. ಶೀಘ್ರವೇ, ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ. ಕೀರ್ತಿ ಸುರೇಶ್‌, ಮೀನಾ ಮತ್ತು ಖುಷ್ಬು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಕೀರ್ತಿ ಸುರೇಶ್‌ಗೆ ಜೋಡಿಯಾಗಿ ನಟ ಸಿದ್ಧಾರ್ಥ ಅವರನ್ನು ಕರೆತರುವ ಆಲೋಚನೆಯೂ ಚಿತ್ರತಂಡಕ್ಕೆ ಇದೆಯಂತೆ. ಆದರೆ, ಇದು ಇನ್ನೂ ಅಧಿಕೃತಗೊಂಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು