ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಣ್ಣನ ಸಿನಿಮಾಗಳಿಗೆ ಚಿತ್ರಪಟರೂಪ!

36 ವರ್ಷಗಳ ಕನಸು ನನಸು ಮಾಡಿದ ಕೋವಿಡ್‌ ಬಿಡುವು, ಹಳೆಯ ನೆನಪುಗಳಿಗೆ ಜೀವ
Last Updated 5 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ವರನಟ ಡಾ.ರಾಜ್‌ಕುಮಾರ್‌ ಅಭಿನಯಿಸಿರುವ ಎಲ್ಲಾ ಸಿನಿಮಾಗಳ ಚಿತ್ರಪಟ (ಚಿತ್ರಲೇಖನ) ರಚಿಸಬೇಕೆಂಬ ಮಂಡ್ಯದ ಕಲಾವಿದ ನರಸಿಂಹಾಚಾರ್‌ ಅವರ ಕನಸು ಈ ಕೋವಿಡ್‌ ಬಿಡುವಿನಲ್ಲಿ ನನಸಾಗಿದೆ. ‘ಬೇಡರ ಕಣ್ಣಪ್ಪ’ದಿಂದ ‘ಶಬ್ದವೇಧಿ’ವರೆಗೆ 209 ಚಲನಚಿತ್ರಗಳಿಗೆ ಅವರು ಬಣ್ಣಗೂಡಿಸಿದ್ದಾರೆ. ಮೂಲಕ್ಕೆ ಕೊಂಚವೂ ಧಕ್ಕೆಯಾಗದಂತೆ ಅದೇ ಮಾದರಿಯಲ್ಲಿ ಚಿತ್ರಪಟ ರಚಿಸಿ ಹಳೆಯ ನೆನಪುಗಳಿಗೆ ಜೀವ ತುಂಬಿದ್ದಾರೆ.

ರಾಜ್‌ಕುಮಾರ್‌ ಅಭಿನಯಿಸಿರುವ 50ಕ್ಕೂ ಹೆಚ್ಚು ಚಿತ್ರಗಳು ಕಪ್ಪು–ಬಿಳುಪು ಅವಧಿಯಲ್ಲೇ ತೆರೆಕಂಡಿವೆ. ಆ ಚಿತ್ರಪಟಗಳನ್ನು ಪೆನ್ಸಿಲ್‌ ಸ್ಕೆಚ್‌ ಮೂಲಕ ಜೀವ ತುಂಬಲಾಗಿದೆ. ಚಿತ್ರ ನೋಡುತ್ತಿದ್ದರೆ ಸಂಪೂರ್ಣ ಕತೆ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಐವತ್ತರ ದಶಕದಿಂದ 2000ದವರೆಗೆ ಡಾ.ರಾಜ್‌ಕುಮಾರ್‌ ಕನ್ನಡ ಚಿತ್ರರಂಗದಲ್ಲಿ ರಾರಾಜಿಸಿದ ಚಿತ್ರಪಟಗಳು ಮನಸ್ಸಿಗೆ ಮುದ ನೀಡುತ್ತವೆ.

ವಿಶೇಷವೆಂದರೆ ಕಲಾವಿದ ಕೆಲವು ಪಟಗಳಲ್ಲಿ ನಾಯಕನ ಜೊತೆಗೆ ನಾಯಕಿಯನ್ನೂ ಸೇರಿಸಿಕೊಂಡಿದ್ದಾರೆ. ಪ್ರತಿ ಚಿತ್ರದ ಮೇಲೆ ತೆರೆಕಂಡ ವರ್ಷ, ರಾಜಣ್ಣ ಅಭಿನಯಿಸಿದ ಚಿತ್ರದ ಸಂಖ್ಯೆ ದಾಖಲು ಮಾಡಿದ್ದಾರೆ.

ರಾಜ್‌ಕುಮಾರ್‌ ಚಿತ್ರಗಳ ಚಿತ್ರಪಟ ರಚಿಸಬೇಕೆಂಬ ನರಸಿಂಹಾಚಾರ್‌ ಕನಸು ಇಂದು ನಿನ್ನೆಯದಲ್ಲ. 36 ವರ್ಷಗಳ ಕನಸನ್ನು ಕೋವಿಡ್‌ ಅವಧಿಯ ಬಿಡುವು ಸಾಕಾರಗೊಳಿಸಿದೆ. ಮಂಡ್ಯ ತಾಲ್ಲೂಕಿನ ಸಂತೆಕಸಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಅವರು 20 ವರ್ಷದ ಹುಡುಗನಾಗಿದ್ದಾಗಲೇ ರಾಜಣ್ಣನ ಚಿತ್ರಪಟ ರಚನಾ ಕಾರ್ಯ ಆರಂಭಿಸಿದ್ದರು. ಹಿಂದೆಯೇ 100 ಚಿತ್ರಪಟ ರಚಿಸಿದ್ದರು. ಶಾಲಾ ಶಿಕ್ಷಕರಾದ ನಂತರ ಅವರ ಕಾರ್ಯಕ್ಕೆ ತಡೆ ಬಿದ್ದಿತ್ತು. ಮೊದಲೇ ರಚಿಸಿದ್ದ 100 ಚಿತ್ರಗಳಲ್ಲಿ ಕೆಲವು ನಾಪತ್ತೆಯಾಗಿ ಕೇವಲ 28 ಚಿತ್ರ ಉಳಿದಿದ್ದವು. ಈಗ 6 ತಿಂಗಳುಗಳಿಂದ ಕೋವಿಡ್‌ ರಜೆಯಲ್ಲಿ 28 ಚಿತ್ರಪಟಗಳ ಜೊತೆಗೆ ಉಳಿದ ಎಲ್ಲಾ ಚಿತ್ರ ರಚಿಸಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.

‘ನನಗೀಗ 53 ವರ್ಷ ವಯಸ್ಸು, ನಿವೃತ್ತಿ ಹೊಂದಿದ ನಂತರ ರಾಜಣ್ಣನ ಎಲ್ಲಾ ಚಿತ್ರಗಳ ಚಿತ್ರಪಟ ರಚಿಸುವ ನಿರ್ಧಾರ ಕೈಗೊಂಡಿದ್ದೆ. ಆದರೆ ನಿವೃತ್ತಿಗೆ 7 ವರ್ಷ ಇರುವಾಗಲೇ ಕನಸು ನನಸಾಗಿದೆ. ಕೋವಿಡ್ ಬಿಡುವಿನ ಅವಧಿ ನನ್ನ ಬಣ್ಣದ ಕನಸಿಗೆ ಜೀವ ತುಂಬಿದ್ದಕ್ಕೆ ಬಹಳ ಖುಷಿಯಾಗಿದೆ’ ಎಂದು ನರಸಿಂಹಾಚಾರ್‌ ತಿಳಿಸಿದರು.

1954ರಲ್ಲಿ ಡಾ.ರಾಜ್‌ ತಮ್ಮ ಮೊದಲ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಅಭಿನಯಿಸಿದರು. ಅದೇ ವರ್ಷ, ಅದೇ ಚಿತ್ರ ತೆಲುಗಿನಲ್ಲಿ ‘ಕಾಳಹಸ್ತಿ ಮಹಾತ್ಮೆ’ ಹೆಸರಿನಲ್ಲಿ ತಯಾರಾಯಿತು, ಅದರಲ್ಲಿ ರಾಜಣ್ಣನೇ ನಾಯಕ. ಅವರು ಅಭಿನಯಿಸಿದ ಮೊದಲ ಅನ್ಯಭಾಷೆಯ ಚಿತ್ರವಿದು, ಇದೇ ಕೊನೆ ಕೂಡ.

ರಾಜಣ್ಣ 206 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ನಾಡಿನ ಭಾಗ್ಯ, ಭಾಗ್ಯವಂತ ಹಾಗೂ ಶಿವಮೆಚ್ಚಿದ ಕಣ್ಣಪ್ಪ ಚಿತ್ರಗಳಲ್ಲಿ ಗೌರವ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. 206 ಚಿತ್ರಗಳ ಜೊತೆಗೆ ಗೌರವನಟರಾಗಿ ಅಭಿನಯಿಸಿದ ಮೂರು ಚಿತ್ರಗಳನ್ನೂ ಸೇರಿಸಿ ಒಟ್ಟು 209 ಸಿನಿಮಾಗಳ ಚಿತ್ರಪಟ ರಚಿಸಿದ್ದಾರೆ.

ಪ್ರತಿ ಚಿತ್ರದ ಮೂಲೆಯಲ್ಲಿ ‘ಎನ್‌ಸಿ– 36 ವರ್ಷಗಳ ಕನಸಿನ ಚಿತ್ರಕಲೆ’ ಎಂಬ ಹಾಲ್‌ಮಾರ್ಕ್‌ ಗುರುತು ಮಾಡಿದ್ದಾರೆ. ಮುಂದೆ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿ ನಾಡಹಬ್ಬಗಳ ಸಂದರ್ಭದಲ್ಲಿ ಚಿತ್ರಪಟ ಪ್ರದರ್ಶನ ಮಾಡುವ ಗುರಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT