ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕಿ ಬಾಯ್‌ ಬೈಕ್‌ ಮೇಲೆ ಕ್ರಷ್

Last Updated 21 ಡಿಸೆಂಬರ್ 2018, 10:32 IST
ಅಕ್ಷರ ಗಾತ್ರ

ಬೆಂಗಳೂರು:ನಟ ಯಶ್‌ ನಟನೆಯ ‘ಕೆಜಿಎಫ್‌’ ಚಿತ್ರ ನೋಡಿದವರಿಗೆ ಅದರಲ್ಲಿರುವ ಒಂದೊಂದು ವಿಷಯಗಳು ಇಷ್ಟವಾಗುತ್ತಿವೆ. ರಾಕಿಂಗ್‌ ಸ್ಟಾರ್‌ ಪೋಣಿಸುವ ಬಿಲ್ಡಪ್‌ ಡೈಲಾಗ್‌ಗಳು, ಸಾಹಸ ದೃಶ್ಯಗಳು, ಛಾಯಾಗ್ರಹಣ, ಸಿನಿಮಾದ ಸೆಟ್‌ ಇತ್ಯಾದಿ ಇಷ್ಟವಾಗುತ್ತವೆ. ಆದರೆ, ಪಡ್ಡೆಹುಡುಗರ ಕಣ್ಣು ಮಾತ್ರ ಯಶ್‌ ಬಳಸಿರುವ ಬೈಕ್‌ ಮೇಲೆ ಬಿದ್ದಿದೆ.

ಚಿತ್ರದಲ್ಲಿ ರಾಕಿ ಬಾಯ್‌ ಬಳಸಿರುವ ಬೈಕ್ ಅವರ ಅಭಿಮಾನಿಗಳು ಹಾಗೂ ಬೈಕ್‌ ಪ್ರಿಯರ ಕಣ್ಣು ಕುಕ್ಕುತ್ತಿರುವುದಂತು ಸತ್ಯ. ಈ ಬೈಕ್‌ನ ಹಿಂದೆಯೂ ಒಂದಷ್ಟು ಕುತೂಹಲದ ಕತೆಗಳಿವೆ. ಕೆಜಿಎಫ್‌ ಚಿತ್ರದ್ದು ಎಂಬತ್ತರ ದಶಕದಲ್ಲಿ ನಡೆಯುವ ಕಥೆ. ಹಾಗಾಗಿ, ಶೂಟಿಂಗ್‌ಗೆ ಆ ಕಾಲದ ಬೈಕ್ ಬಳಸಲು ಚಿತ್ರತಂಡಕ್ಕೆ ಸವಾಲು ಎದುರಾಗಿತ್ತು. ಆ ಕಾಲದಲ್ಲಿ ರಸ್ತೆಗಳ ಮೇಲೆ ದೂಳೆಬ್ಬಿಸುತ್ತಿದ್ದ ಬೈಕ್‌ಗಳು ಸಿಗುವುದು ಅಪರೂಪವಾಗಿತ್ತು.

ಅಂದಿನ ಕಾಲದ ಜಾವಾ, ಎಜ್ಡಿ ಬೈಕ್‌ಗಳು ಸಿಕ್ಕಿದರೂ ಅವುಗಳ ವೇಗ ಮತ್ತು ಸಾಮರ್ಥ್ಯ ಕಡಿಮೆ ಇರುವುದು ವಾಸ್ತವ. ಇದು ಚಿತ್ರತಂಡಕ್ಕೆ ನಿಜಕ್ಕೂ ಸವಾಲಾಗಿ ‍ಪರಿಣಮಿಸಿತ್ತು. ಕೊನೆಗೆ, ಹೊಸ ಬೈಕ್‌ಗೆ ಹಳೆಯ ರೂಪ ನೀಡಲು ತಂಡ ತೀರ್ಮಾನಿಸಿತು. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ಗೆ ಹಳೆಯ ರೂಪ ನೀಡಿ ರಾಕಿ ಬಾಯ್‌ಗೆ ಬೈಕ್ ಸಿದ್ಧ‍ಪಡಿಸಲಾಯಿತು.

ಚಿತ್ರದಲ್ಲಿ ರಾಕಿಬಾಯ್‌ ಮುಂಬೈನಲ್ಲಿ ಹವಾ ಎಬ್ಬಿಸುವಾಗಲೂ ಈ ಬೈಕ್‌ ಅನ್ನು ತೋರಿಸಲಾಗುತ್ತದೆ. ಸಿನಿಮಾದಲ್ಲಿ ಬೈಕ್‌ ತೋರಿಸಿದಾಗ ಪ್ರೇಕ್ಷಕರು ಕೇಕೆ ಹಾಕುತ್ತಾರೆ. ಇದರಿಂದ ಬೈಕ್‌ ಸೃಷ್ಟಿಸಿರುವ ಕ್ರೇಜ್‌ ಅರ್ಥವಾಗುತ್ತದೆ.

ಕೆಜಿಎಫ್‌ ಕೋಟೆಗೆ ರಾಕಿ ಬಾಯ್‌ ಲಗ್ಗೆ ಇಡುವುದು ಈ ಬೈಕ್‌ ಮೂಲಕವೇ. ಗಣಿ ಪ್ರದೇಶದಲ್ಲಿ ದೂಳೆಬ್ಬಿಸುತ್ತ ಬೈಕ್‌ನಲ್ಲಿ ಯಶ್‌ ಸಾಗುವಾಗ ಅಭಿಮಾನಿಗಳು ಚಪ್ಪಾಳೆ, ಕೇಕೆ ಹಾಕುತ್ತಾರೆ. ಈ ಬೈಕ್‌ ಕೇವಲ ಅಭಿಮಾನಿಗಳಿಗೆ ಮಾತ್ರ ಇಷ್ಟವಾಗಿಲ್ಲ. ಯಶ್‌ ಅವರಿಗೂ ಇಷ್ಟವಾಗಿದೆಯಂತೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲೂ ಇದೇ ಬೈಕ್‌ ಬಳಕೆಯಾಗಲಿದೆ.

‘ಈ ಬೈಕ್‌ ಕಂಡರೆ ನನಗಿಷ್ಟ. ಚಿತ್ರತಂಡದವರು ನನಗಾಗಿ ಇಷ್ಟಪಟ್ಟು ಈ ಬೈಕ್‌ ರೂಪಿಸಿದ್ದಾರೆ. ಚಿತ್ರ ಮುಗಿದ ಬಳಿಕ ಇದನ್ನು ಮಾರಾಟ ಮಾಡುವ ಉದ್ದೇಶ ನನಗಿಲ್ಲ. ಚಿತ್ರದ ನೆನಪಿಗಾಗಿ ನನ್ನ ಬಳಿಯೇ ಇದನ್ನು ಇಟ್ಟುಕೊಳ್ಳುತ್ತೇನೆ’ ಎಂದು ಬೈಕ್‌ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಯಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT