ಶುಕ್ರವಾರ, ಸೆಪ್ಟೆಂಬರ್ 17, 2021
29 °C

ರಕ್ಷಿತ್ ಶೆಟ್ಟಿ ಹೊಸ ಹಾಡು 'ಸಪ್ತಸಾಗರದ ಆಚೆಯೆಲ್ಲೋ...'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2016ರಲ್ಲಿ ತೆರೆಕಂಡ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನೆನಪಿದೆಯಲ್ಲ? ಹೇಮಂತ್‌ ಎಂ. ರಾವ್ ನಿರ್ದೇಶನದಡಿ  ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ್ದ ಈ ಚಿತ್ರ ಸಿನಿಪ್ರೇಮಿಗಳ ಮನಗೆದ್ದಿತ್ತು. ಮತ್ತೆ ಈ ಜೋಡಿ ಇನ್ನೊಂದು ಸಿನಿಮಾ ಮಾಡಲು ಅಣಿಯಾಗಿದೆ. 

ಈ ಚಿತ್ರದ ಶೀರ್ಷಿಕೆ ‘ಸಪ್ತಸಾಗರದ ಆಚೆಯೆಲ್ಲೋ’. ಚಿತ್ರದ ಕಥೆಯನ್ನು ಹೇಮಂತ್‌ ಅವರೇ ಸಿದ್ಧಪಡಿಸಿದ್ದಾರೆ. ಚಿತ್ರಕಥೆಯ ಕೆಲಸಗಳಲ್ಲಿ ಅವರೊಟ್ಟಿಗೆ ಗುಂಡು ಶೆಟ್ಟಿ ಅವರು ಸೇರಿಕೊಂಡಿದ್ದಾರೆ.

‘ಗೋಧಿಬಣ್ಣ...’ ನಿರ್ಮಾಣಕ್ಕೆ ಕೈಜೋಡಿಸಿದ್ದ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಹೊಸ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇದರ ಚಿತ್ರೀಕರಣವು ಮೇ ತಿಂಗಳ ಕೊನೆಯ ವಾರದಲ್ಲಿ ಶುರುವಾಗುವ ನಿರೀಕ್ಷೆ ಇದೆ. ಇದೇ ವರ್ಷದ ಡಿಸೆಂಬರ್‌ 27ರಂದು ಚಿತ್ರವನ್ನು ವೀಕ್ಷಕರ ಎದುರು ತರಬೇಕು ಎಂಬುದು ಚಿತ್ರತಂಡದ ಉದ್ದೇಶ. ಅಂದಹಾಗೆ, ಡಿಸೆಂಬರ್‌ 27ನೆಯ ತಾರೀಕು ‘ಅವನೇ ಶ್ರೀಮನ್ನಾರಾಯಣ’ ಬಿಡುಗಡೆಯಾದ ದಿನವೂ ಹೌದು! ಈ ಚಿತ್ರಕ್ಕೂ ಮೊದಲು ರಕ್ಷಿತ್ ಅಭಿನಯದ ‘777 ಚಾರ್ಲಿ’ ತೆರೆಯ ಮೇಲೆ ಬರುವ ನಿರೀಕ್ಷೆಯಿದೆ.

ಹೊಸ ಚಿತ್ರದ ಬಹುತೇಕ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆಯಲಿದೆಯಂತೆ.

‘ಚಿತ್ರದಲ್ಲಿ ಇರುವುದು ಒಂದು ಪ್ರೇಮಕಥೆ. ಜೀವನದಲ್ಲಿ ಕೆಲವೊಮ್ಮೆ ನಮ್ಮ ತೀರ್ಮಾನ, ಸಂದರ್ಭಗಳ ಕಾರಣದಿಂದಾಗಿ ನಾವು ಅಂದುಕೊಂಡಿದ್ದು ಆಗುವುದಿಲ್ಲ. ಅಂದುಕೊಂಡಿದ್ದು ಆಗದೆ ಇದ್ದಾಗ, ಆ ಪರಿಸ್ಥಿತಿಯನ್ನು ನಾವು ಹೇಗೆ ನಿಭಾಯಿಸುತ್ತೇವೆ ಎಂಬುದೇ ಇದರ ಕಥೆಯ ತಿರುಳು’ ಎನ್ನುತ್ತಾರೆ ಹೇಮಂತ್.

ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ಈ ಚಿತ್ರಕ್ಕೆ ಇರಲಿದೆ. ಚಿತ್ರದ ನಾಯಕಿ ಸೇರಿದಂತೆ ಪಾತ್ರವರ್ಗ ಇನ್ನೂ ಅಂತಿಮಗೊಂಡಿಲ್ಲ.

ಹೇಮಂತ್ ಮತ್ತು ರಕ್ಷಿತ್ ಒಂದಾಗಿ ‘ತೆನಾಲಿ’ ಎಂಬ ಸಿನಿಮಾ ಮಾಡಬೇಕಿತ್ತು. ಇದರ ಕಥೆ ನಡೆಯುವುದು ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ. ಆದರೆ, ಆ ಚಿತ್ರಕ್ಕೂ ಮುನ್ನವೇ ಈ ಜೋಡಿ ‘ಸಪ್ತಸಾಗರದ ಆಚೆಯೆಲ್ಲೋ’ ಎನ್ನುತ್ತ ಹೊರಟಿದೆ!

‘ನಾನು ಹೊಸ ಚಿತ್ರದ ಕಥೆ ಹೇಳಿದಾಗ ರಕ್ಷಿತ್ ಇಷ್ಟಪಟ್ಟರು. ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳೂ ಶುರುವಾದವು’ ಎಂದರು ಹೇಮಂತ್.

ಇದನ್ನೂ ಓದಿ: ಬೇರೆ ಸಿನಿಮಾದಿಂದ ಸ್ಪೂರ್ತಿ ಪಡೆದು ಮತ್ತೆ ಸಿಕ್ಕಿಬಿದ್ದರೇ ರಕ್ಷಿತ್‌ ಶೆಟ್ಟಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು