ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಪ್ತ ಸಾಗರದಾಚೆ’ ಮೇಲೊಂದು ಝಲಕ್

Last Updated 9 ಜೂನ್ 2020, 19:31 IST
ಅಕ್ಷರ ಗಾತ್ರ

ರಕ್ಷಿತ್ ಶೆಟ್ಟಿ ಅವರು ನಾಯಕನಾಗಿ ನಟಿಸುತ್ತಿರುವ ‘ಸಪ್ತ ಸಾಗರದಾಚೆಯೆಲ್ಲೋ...’ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಲಾಕ್‌ಡೌನ್‌ ಅವಧಿಯಲ್ಲಿ ನಡೆಯುತ್ತಿವೆ. ನಿರ್ದೇಶಕ ಹೇಮಂತ್ ರಾವ್ ಮತ್ತು ಅವರ ತಂಡ ಈ ಅವಧಿಯನ್ನು ಬಳಸಿಕೊಂಡು, ಸ್ಕ್ರಿಪ್ಟ್‌ಗೆ ಸಂಬಂಧಿಸಿದ ಒಂದಿಷ್ಟು ಕೆಲಸಗಳನ್ನೂ ಪೂರ್ಣಗೊಳಿಸಿಕೊಂಡಿದೆ.

ಚಿತ್ರದಲ್ಲಿ ರಕ್ಷಿತ್ ಅವರ ಪಾತ್ರ ಏನಿರುತ್ತದೆ ಎಂಬುದರ ಒಂದಿಷ್ಟು ಮಾಹಿತಿಯನ್ನು ಚಿತ್ರತಂಡ ನೀಡಿದೆ. ‘ಸಿನಿಮಾದಲ್ಲಿ ರಕ್ಷಿತ್ ಅವರ ಪಾತ್ರಕ್ಕೆ ಬಹಳ ಡೆಪ್ತ್‌ ಇದೆ. ಹಾಗಾಗಿ, ನಾನು ಒಂದೇ ಏಟಿಗೆ ಪಾತ್ರದ ಸ್ವಭಾವದ ಬಗ್ಗೆ ಪೂರ್ಣ ಮಾಹಿತಿ ಬಿಟ್ಟುಕೊಡುವುದಿಲ್ಲ. ಒಂದಿಷ್ಟು ವಿವರಗಳನ್ನು ಮಾತ್ರ ನೀಡಬಲ್ಲೆ’ ಎನ್ನುತ್ತಾರೆ ಹೇಮಂತ್.

ಚಿತ್ರದ ಒಂದು ಪೋಸ್ಟರ್‌, ನಾಯಕ ನಟನ ಬಂಧನ ಆಗಿರುವ ವಿಷಯವನ್ನು ತಿಳಿಸುತ್ತದೆ. ನಾಯಕನ ಹೆಸರು ಮನು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಕೆಲವು ಸೆಕ್ಷನ್ನುಗಳ ಅಡಿಯಲ್ಲಿ ಮನು ವಿರುದ್ಧ ಎಫ್‌ಐಆರ್‌ ದಾಖಲಾಗಿರುವ ವಿವರವನ್ನು ಪೋಸ್ಟರ್‌ ನೀಡುತ್ತದೆ.

ಇದು ಪಾತ್ರ ಹಾಗೂ ಸಿನಿಮಾ ಕಥೆಯ ಕುರಿತು ಒಂದಿಷ್ಟು ವಿವರಗಳು. ಎಲ್ಲವೂ ಅಂದುಕೊಂಡಂತೆ ನಡೆದರೆ, ಚಿತ್ರವು ಮುಂದಿನ ವರ್ಷ ಇದೇ ಹೊತ್ತಿನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ರಕ್ಷಿತ್ ಅವರು ‘ಚಾರ್ಲಿ 777’ ಚಿತ್ರದ ಕೆಲಸಗಳು ಮುಗಿದ ನಂತರ ಈ ಚಿತ್ರದ ಕೆಲಸಗಳನ್ನು ಆರಂಭಿಸಲಿದ್ದಾರೆ. ಈ ಚಿತ್ರಕ್ಕಾಗಿ ರಕ್ಷಿತ್ ಅವರ ಲುಕ್‌ನಲ್ಲಿ ಒಂದಿಷ್ಟು ಬದಲಾವಣೆಗಳು ಕೂಡ ಆಗಬೇಕಿವೆ. ಹಾಗಾಗಿ, ಅದಕ್ಕೆ ಒಂದಿಷ್ಟು ಸಮಯ ಬೇಕಾಗಬಹುದು ಎನ್ನುತ್ತವೆ ಮೂಲಗಳು.

ರಕ್ಷಿತ್ ಮತ್ತು ಹೇಮಂತ್ ಜೋಡಿಯ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ನಿರ್ಮಾಣಕ್ಕೆ ಕೈಜೋಡಿಸಿದ್ದ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಅವರೇ ‘ಸಪ್ತಸಾಗರದ...’ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇದೇ ವರ್ಷದ ಡಿಸೆಂಬರ್‌ 27ರಂದು ಚಿತ್ರವನ್ನು ವೀಕ್ಷಕರ ಎದುರು ತರಬೇಕು ಎಂಬ ಬಯಕೆ ಚಿತ್ರತಂಡಕ್ಕೆ ಇತ್ತು. ಆದರೆ ಕೊರೊನಾ ಕಾರಣದಿಂದಾಗಿ ಬಿಡುಗಡೆ ಗುರಿ ಬದಲಾಗಿದೆ. ಈ ಚಿತ್ರದ ಬಹುತೇಕ ಭಾಗಗಳ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆಯಲಿದೆಯಂತೆ.

‘ಚಿತ್ರದಲ್ಲಿ ಇರುವುದು ಒಂದು ಪ್ರೇಮಕಥೆ. ಜೀವನದಲ್ಲಿ ಕೆಲವೊಮ್ಮೆ ನಮ್ಮ ತೀರ್ಮಾನ, ಸಂದರ್ಭಗಳ ಕಾರಣದಿಂದಾಗಿ ನಾವು ಅಂದುಕೊಂಡಿದ್ದು ಆಗುವುದಿಲ್ಲ. ಅಂದುಕೊಂಡಿದ್ದು ಆಗದೆ ಇದ್ದಾಗ, ಆ ಪರಿಸ್ಥಿತಿಯನ್ನು ನಾವು ಹೇಗೆ ನಿಭಾಯಿಸುತ್ತೇವೆ ಎಂಬುದೇ ಕಥೆಯ ತಿರುಳು’ ಎಂದು ನಿರ್ದೇಶಕ ಹೇಮಂತ್ ಅವರು ಈ ಹಿಂದೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದರು. ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ಈ ಚಿತ್ರಕ್ಕೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT