ಸೋಮವಾರ, ಜುಲೈ 26, 2021
26 °C

ರಾಂಚಿ– ಮೈಸೂರು ಡೈರೀಸ್‌ ಒಟಿಟಿಯಲ್ಲಿ ರಿಲೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಪ್ರಭು ಮುಂಡ್ಕೂರು ನಾಯಕನಾಗಿ ನಟಿಸಿರುವ ‘ರಾಂಚಿ’ ಮತ್ತು ‘ಮೈಸೂರು ಡೈರೀಸ್‌’ ಚಿತ್ರಗಳು ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

‘ರಾಂಚಿ’ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಇದೇ ತಿಂಗಳು ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಚಿತ್ರದ ನಿರ್ಮಾಪಕರು ನೆಟ್‌ಫ್ಲಿಕ್ಸ್‌ ಕಂಪನಿಯ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ. ಚಿತ್ರದ ಹಕ್ಕನ್ನು ಖರೀದಿಸಲು ಅವರು ಪ್ರಸ್ತಾಪಿಸಿರುವ ಮೊತ್ತದ ಬಗ್ಗೆ ಹಗ್ಗಾಜಗ್ಗಾಟ ನಡೆಯುತ್ತಿದೆ. ಸದ್ಯದಲ್ಲೇ ಮಾತುಕತೆ ಅಂತಿಮ ಹಂತಕ್ಕೆ ಬರುವ ಸೂಚನೆ ಇದೆ. ಹಾಗೆಯೇ ‘ಮೈಸೂರು ಡೈರೀಸ್‌’ ಚಿತ್ರವು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್‌ ಪ್ರೈಮ್‌ ಜತೆಗೆ ಮಾತುಕತೆ ನಡೆಯುತ್ತಿದೆ. ಮಾತುಕತೆ ಅಂತಿಮ ರೂಪ ಪಡೆದುಕೊಂಡರೆ ಈ ಚಿತ್ರವು ಮುಂದಿನ ತಿಂಗಳೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಟ ಪ್ರಭು ಮುಂಡ್ಕೂರು.

‘ರಾಂಚಿ’ ಚಿತ್ರದಲ್ಲಿ ಪ್ರಭು ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ನಿರ್ದೇಶಕನ ಪಾತ್ರ ನಿಭಾಯಿಸಿದ್ದಾರಂತೆ. ಇದೊಂದು ನೈಜ ಘಟನೆ ಆಧರಿಸಿದ ಚಿತ್ರ. ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕರೊಬ್ಬರ ಜೀವನದಲ್ಲಿ ನಡೆದ ಸತ್ಯ ಘಟನೆಯೇ ಚಿತ್ರದ ಕಥಾಹಂದರವಂತೆ. ಸಿನಿಮಾ ಕಥೆಗೂ ರಾಂಚಿಗೂ ಹತ್ತಿರದ ನಂಟು ಇರುವುದರಿಂದಲೇ ಚಿತ್ರಕ್ಕೆ ‘ರಾಂಚಿ’ ಶೀರ್ಷಿಕೆ ಇಡಲಾಗಿದೆಯಂತೆ. ಈ ಚಿತ್ರಕ್ಕೆ ‘ಬಾಲ್‌ ಪೆನ್‌’ ಖ್ಯಾತಿಯ ಶಶಿಕಾಂತ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಚಿತ್ರ ಬಿಡುಗಡೆಗೂ ಮುನ್ನವೇ ಹಿಂದಿಗೆ ರಿಮೇಕ್‌ ಕೂಡ ಆಗುತ್ತಿರುವ ಖುಷಿಯನ್ನು ಚಿತ್ರತಂಡ ಇತ್ತೀಚೆಗಷ್ಟೇ ಹಂಚಿಕೊಂಡಿತ್ತು. ಈ ಚಿತ್ರಕ್ಕೆ ರುದ್ರ ಫಿಲಂ ಹಾಗೂ ಗಿರಿಜಾ ಟಾಕೀಸ್ ಬ್ಯಾನರ್ ಅಡಿ ಆನಂದ್ ಮತ್ತು ಅರುಣ್ ಬಂಡವಾಳ ಹೂಡಿದ್ದಾರೆ.

ಮೈಸೂರಿನ ಸೂಕ್ಷ್ಮತೆಗಳನ್ನು ಅನಾವರಣಗೊಳಿಸಲಿರುವ ‘ಮೈಸೂರು ಡೈರೀಸ್‌’ ಚಿತ್ರಕ್ಕೆ ಧನಂಜಯ್‌ ರಂಜನ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರಕ್ಕೆ ಚೇತನ್‌ ಕೃಷ್ಣ, ದೀಪಕ್‌ ಕೃಷ್ಣ ಬಂಡವಾಳ ಹೂಡಿದ್ದಾರೆ.

ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಚಿತ್ರಮಂದಿರಗಳು ಬಾಗಿಲು ತೆರೆಯುವುದು ವಿಳಂಬವಾಗುತ್ತಿರುವುದರಿಂದ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಒಟಿಟಿ ವೇದಿಕೆಯನ್ನು ಪರ್ಯಾಯ ಮಾರ್ಗವಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ಬಿಡಿಸಿಹೇಳಬೇಕಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು