ಸೋಮವಾರ, ಅಕ್ಟೋಬರ್ 21, 2019
21 °C

ಗೋವಾ ಫಿಲ್ಮ್‌ಫೆಸ್ಟಿವಲ್‌ಗೆ ಹೊರಟ ‘ರಂಗನಾಯಕಿ’

Published:
Updated:
Prajavani

ಮೂವತ್ತೆಂಟು ವರ್ಷದ ಹಿಂದೆ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ ‘ರಂಗನಾಯಕಿ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಅದೇ ಶೀರ್ಷಿಕೆಯನ್ನು ಮರುಬಳಕೆ ಮಾಡಿಕೊಂಡು ದಯಾಳ್‌ ಪದ್ಮನಾಭನ್‌ ನಿರ್ದೇಶಿಸಿರುವ ‘ರಂಗನಾಯಕಿ –ವರ್ಜಿನಿಟಿ ವಾಲ್ಯೂಮ್‌ 1’ ಸಿನಿಮಾವೂ ಹೊಸದೊಂದು ದಾಖಲೆ ಬರೆಯಲು ಸಿದ್ಧವಾಗಿದೆ. 

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ– 2019ರ ಇಂಡಿಯನ್ ಪನೋರಮ ವಿಭಾಗದ ‍ಪ್ರದರ್ಶನಕ್ಕೆ ಈ ಸಿನಿಮಾ ಆಯ್ಕೆಯಾಗಿದೆ.

ಎಸ್.ವಿ. ಎಂಟರ್‌ಟೈನ್‍ಮೆಂಟ್ ಲಾಂಛನದಡಿ ಎಸ್.ವಿ. ನಾರಾಯಣ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಈ ವರ್ಷ ಗೋಲ್ಡನ್ ಜ್ಯೂಬಿಲಿ ಎಡಿಷನ್ ಆಫ್‌ ದಿ ಫೆಸ್ಟಿವಲ್ ಆಗಿದ್ದು, ಈ ಸಮಯದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಸಿನಿಮಾ ಎಂಬುದು ಇದರ ಹೆಗ್ಗಳಿಕೆ.

‘ನವೆಂಬರ್‌ನಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆದಿದೆ. ಚಿತ್ರ ತೆರೆ ಕಾಣುವ ಮೊದಲೇ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ’ ಎಂದು ದಯಾಳ್‌ ಪದ್ಮನಾಭನ್‌ ತಿಳಿಸಿದ್ದಾರೆ.

ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರ ಇದು. ಅದಿತಿ ಪ್ರಭುದೇವ ಇದರ ನಾಯಕಿ. ಅತ್ಯಾಚಾರಕ್ಕೆ ತುತ್ತಾದ ಯುವತಿಯೊಬ್ಬಳು ಸಮಾಜವನ್ನು ಹೇಗೆ ಎದುರಿಸುತ್ತಾಳೆ ಎಂಬುದೇ ಇದರ ಹೂರಣ. ಅಂದಹಾಗೆ ತೆರೆಯ ಮೇಲೆ ಈ ಸಿನಿಮಾದ ಎರಡೇ ಭಾಗವನ್ನು ತರಲು ನಿರ್ಧರಿಸಿದ್ದಾರೆ ದಯಾಳ್.

ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಅವರ ಸಂಕಲನವಿದೆ. ನವೀನ್‍ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಅವಿನಾಶ್ ಯು. ಶೆಟ್ಟಿ ಇದರ ಕಾರ್ಯಕಾರಿ ನಿರ್ಮಾಪಕ.

ಎಂ.ಜಿ. ಶ್ರೀನಿವಾಸ್(ಶ್ರೀನಿ), ತ್ರಿವಿಕ್ರಮ್, ಶಿವಾರಾಂ, ಸುಚೇಂದ್ರ ಪ್ರಸಾದ್, ಸುಂದರ್, ವೀಣಾ ಸುಂದರ್, ಶ್ರುತಿ ನಾಯಕ್ ತಾರಾಗಣದಲ್ಲಿದ್ದಾರೆ.

Post Comments (+)