ಗುರುವಾರ , ನವೆಂಬರ್ 21, 2019
21 °C

ಮಹಿಳಾ ಅಭಿಮಾನಿ ಜತೆ ರಾನು ಮಂಡಲ್‌ ಕಿರಿಕ್‌!

Published:
Updated:

ರಾತ್ರೋರಾತ್ರಿ ಸ್ಟಾರ್‌ ಗಾಯಕಿಯಾದ ಇಂಟರ್‌ನೆಟ್‌ ಸೆನ್ಸೇಷನ್‌ ರಾನು ಮಂಡಲ್‌ ಈಗ ಸಾಮಾನ್ಯ ಹೆಣ್ಣು ಮಗಳಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಕೋಲ್ಕತ್ತದ ರಾಣಾಘಾಟ್‌ ರೈಲ್ವೆ ಪ್ಲಾಟ್‌ಫಾರಂನಲ್ಲಿ ಹಾಡುತ್ತಿದ್ದ ರಾನುಗೆ ಏಕಾಏಕಿ ಅದೃಷ್ಟದ ಬಾಗಿಲು ತೆರೆದು  ಬಾಲಿವುಡ್‌ ಗಾಯಕಿಯಾದ ಕತೆ ಎಲ್ಲರಿಗೂ ಗೊತ್ತಿದೆ. 

ಆದರೆ,ಸುದ್ದಿ ಅದಲ್ಲ. ಸೆಲ್ಫಿ ತೆಗೆಸಿಕೊಳ್ಳಲು ಬಂದ ಮಹಿಳಾ ಅಭಿಮಾನಿಯೊಂದಿಗೆ ರಾನು ಮಂಡಲ್‌ ಧಿಮಾಕಿನಿಂದ ವರ್ತಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾನು ಭುಜವನ್ನು ಮುಟ್ಟಿ ತನ್ನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಂತೆ ಮಹಿಳಾ ಅಭಿಮಾನಿ ಮನವಿ ಮಾಡಿದ್ದಾರೆ.

ಇದರಿಂದ ಹಠಾತ್ತನೇ ಕೆರಳಿದ ರಾನು, ಮೈ ಮುಟ್ಟಿ ಮಾತನಾಡಿಸದಂತೆ ಮಹಿಳಾ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ‘ಯಾರು ನನ್ನ ಮೈ ಮುಟ್ಟಿದ್ದು? ಹೀಗೆ ಮೈ ತಟ್ಟಿ ಮಾತನಾಡಿಸುವುದರ ಅರ್ಥವೇನು? ಇದು ಸರಿಯಲ್ಲ’ ಎಂದು ಸಾರ್ವಜನಿಕವಾಗಿ ಕೂಗಾಡಿದ್ದಾರೆ. ಇಂತಹ ವರ್ತನೆ ನಿರೀಕ್ಷಿಸದ ಮಹಿಳೆ ನಸುನಗುತ್ತಾ ನನಗೆ ಅವಮಾನ ಮಾಡಬೇಕು ಎಂಬ ಭಾವನೆ ಇರಲಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಆದರೆ, ರಾನು ಅದನ್ನು ಕಿವಿಗೆ ಹಾಕಿಕೊಳ್ಳದೆ ಬೈದು ಅವಮಾನಿಸಿದ್ದಾರೆ.  

ಕೆಲವು ದಿನಗಳ ಹಿಂದೆ ರಾನು ಕಂಠಸಿರಿಗೆ ಮನಸೋತು ಶ್ಲಾಘಿಸಿದ್ದ ಆಕೆಯ ಸಾವಿರಾರು ಅಭಿಮಾನಿಗಳಿಗೆ ಈ ವರ್ತನೆಯಿಂದ ಬೇಸರವಾಗಿದೆ. ‘ಹಣ ಮತ್ತು ಕೀರ್ತಿಯ ಶನಿ ಹೆಗಲೇರಿದರೆ ಮನುಷ್ಯ ಹೇಗೆ ವರ್ತಿಸಬಹುದು ಎಂಬುವುದಕ್ಕೆ ರಾನು ತಾಜಾ ಉದಾಹರಣೆ‘ ‘ಕೆಲವು ದಿನಗಳ ಹಿಂದೆ ರೈಲ್ವೆ ಫ್ಲಾಟ್‌ಫಾರಂನಲ್ಲಿ ಭಿಕ್ಷೆ ಬೇಡುತ್ತಿದ್ದದ್ದನ್ನು ಆಕೆ ಮರೆತಂತಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. 

ಇದನ್ನೂ ಓದಿ: ಭಿಕ್ಷೆಗಾಗಿ ಹಾಡುತ್ತಿದ್ದ ರಾನು ಮಂಡಲ್‌ ಯುಟ್ಯೂಬ್ ಟಾಪ್‌ ಟ್ರೆಂಡಿಂಗ್‌ನಲ್ಲಿ...

ಒಡಿಶಾದ ಹಾಸ್ಯ ನಟ ಪಪ್ಪು ಪಾಂಪಾಂ ಕೆಲವು ದಿನಗಳ ಹಿಂದೆ ರಾನು ಮಂಡಲ್‌ ಅವರನ್ನು ಮಿಮಿಕ್ರಿ ಮಾಡಿ ಅಪಹಾಸ್ಯ ಮಾಡಿದಾಗ  ಅಭಿಮಾನಿಗಳು ಕೆರಳಿ ಕೆಂಡವಾಗಿದ್ದರು. ರಾನು ಬೆಂಬಲಕ್ಕೆ ನಿಂತಿದ್ದ ಅಭಿಮಾನಿಗಳು ಪಪ್ಪು ಪಾಂಪಾಂ ಬೆಷರತ್‌ ಬೆಂಬಲಕ್ಕೆ ಪಟ್ಟು ಹಿಡಿದಿದ್ದರು. ಕೊನೆಗೆ ನಟ ಕ್ಷಮೆಯಾಚಿಸಿದ್ದ. ಈಗ ಅದೇ ಅಭಿಮಾನಿಗಳು ಇಂಟರ್‌ನೆಟ್‌ ಸೆನ್ಸೇಷನ್‌ ಚಳಿ ಬಿಡಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)