ಶನಿವಾರ, ಜೂನ್ 6, 2020
27 °C

ಯಶ್‌ ಅದ್ಭುತ ನಟ ಎಂದು ಹೊಗಳಿದ ರವೀನಾ ಟಂಡನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಇಡೀ ಭಾರತೀಯ ಚಿತ್ರರಂಗವೇ ಬೆರಗುಗಣ್ಣಿನಿಂದ ಕನ್ನಡದತ್ತ ನೋಡುವಂತೆ ಮಾಡಿದ ಹೆಗ್ಗಳಿಕೆ ‘ಕೆಜಿಎಫ್ ಚಾಪ್ಟರ್‌ 1’ ಚಿತ್ರಕ್ಕೆ ಸಲ್ಲುತ್ತದೆ. ನಿರ್ದೇಶಕ ಪ್ರಶಾಂತ್‌ ನೀಲ್‌ ಮತ್ತು ಯಶ್‌ ಕಾಂಬಿನೇಷನ್‌ನಡಿ ತೆರೆಕಂಡ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದು ಎಲ್ಲರಿಗೂ ಗೊತ್ತು. ‘ಕೆಜಿಎಫ್‌ ಚಾಪ್ಟರ್ 2’ ಕೂಡ ಜನರಲ್ಲಿ ಕುತೂಹಲ ಹೆಚ್ಚಿಸಿರುವುದು ದಿಟ.

ಇದರ ಶೂಟಿಂಗ್‌ ಬಹುತೇಕ ಪೂರ್ಣಗೊಂಡಿದ್ದು, ಅಕ್ಟೋಬರ್‌ 23ರಂದು ಸಿನಿಮಾ ಬಿಡುಗಡೆಗೆ ಹೊಂಬಾಳೆ ಫಿಲ್ಸ್ಮ್ ನಿರ್ಧರಿಸಿದೆ. ಕೊರೊನಾ ಸೋಂಕಿನ ಭೀತಿ ಹೀಗೆಯೇ ಮುಂದುವರಿದರೆ ಬಿಡುಗಡೆಯ ದಿನಾಂಕ ಮತ್ತೆ ಮುಂದೂಡಿಕೆಯಾದರೂ ಅಚ್ಚರಿಪಡಬೇಕಿಲ್ಲ. ಇದರಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರವೀನಾ ಟಂಡನ್‌ ಅವರ ಪಾತ್ರದ ಹೆಸರು ರಮಿಕಾ ಸೇನ್.

ಕೊರೊನಾ ಸೋಂಕಿನ ಭೀತಿಯಿಂದ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಟ್ಟಿಗೆ ಸಿನಿಮಾದ ಶೂಟಿಂಗ್‌ ಅನುಭವಗಳನ್ನು ಹಂಚಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ರವೀನಾ ಟಂಡನ್‌ ಕೂಡ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಶೂಟಿಂಗ್‌ ಅನುಭವವನ್ನು ಹೇಳಿಕೊಂಡಿದ್ದಾರೆ. ಯಶ್‌ ಅವರ ವ್ಯಕ್ತಿತ್ವವನ್ನು ಅವರು ಕೊಂಡಾಡಿದ್ದಾರೆ.

‘ಯಶ್‌ ಅದ್ಭುತ ನಟ. ಸೆಟ್‌ನಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ನಡೆದುಕೊಳ್ಳುತ್ತಿದ್ದರು. ಅವರೊಟ್ಟಿಗೆ ನಟಿಸಿದ್ದು ವಿಶಿಷ್ಟ ಅನುಭವ’ ಎಂದಿದ್ದಾರೆ ರವೀನಾ.

‘ನನ್ನ ವೃತ್ತಿ ಬದುಕಿನಲ್ಲಿಯೇ ಕೆಜಿಎಫ್‌ ಚಾಪ್ಟರ್‌ 2 ಚಿತ್ರೀಕರಣದ ಅನುಭವ ಸ್ಮರಣೀಯವಾದುದು. ಇದರಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣಹಚ್ಚಿದ ಖುಷಿಯಿದೆ. ನನ್ನ ಪಾತ್ರ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಸುಲಭವಾಗಿ ನಿರ್ಣಯಿಸಲಾಗದು. ಸಾಕಷ್ಟು ಕುತೂಹಲ ಇರುವುದಂತೂ ದಿಟ. ಅತ್ಯುತ್ತಮವಾದ ಪಾತ್ರವನ್ನು ನಿಭಾಯಿಸಿದ ಖುಷಿಯಿದೆ’ ಎಂದಿದ್ದಾರೆ.

ಆದರೆ, ಅಪ್ಪಿತಪ್ಪಿಯೂ ಅವರು ತಮ್ಮ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರೀಕರಣದ ಸಂಜಯ್‌ ದತ್‌ ಜೊತೆಗಿನ ತುಂಟಾಟಗಳನ್ನು ಅವರು ಮೆಲುಕು ಹಾಕಿದ್ದಾರೆ. ‘ಕೊರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕೂ ಮೊದಲೇ ನನ್ನ ಭಾಗದ ಚಿತ್ರೀಕರಣ ಮುಕ್ತಾಯವಾಯಿತು. ಜೊತೆಗೆ, ಸಿನಿಮಾದ ಶೂಟಿಂಗ್‌ ಕೂಡ ಪೂರ್ಣಗೊಂಡಿತು’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು