ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಚಂದ್ರನ್‌ ಹೇಳಿದ ದುಡ್ಡಿನ ಪಾಠ

Last Updated 31 ಜುಲೈ 2019, 10:08 IST
ಅಕ್ಷರ ಗಾತ್ರ

‘ಸಿನಿಮಾದ ಸೋಲು, ಗೆಲುವಿನ ವಿಮರ್ಶೆ ಮಾಡುವ ವರ್ಗವೇ ಬೇರೆ. ಸೋಲು– ಗೆಲುವು ಎನ್ನುವುದು ಕಲೆಕ್ಷನ್‌ ಮೇಲೆ ನಿಂತಿಲ್ಲ. ಸಿನಿಮಾವನ್ನು ಲಾಭದ ತಕ್ಕಡಿಯಲ್ಲಿಟ್ಟು ತೂಗಬಾರದು. ನಾವು ಕಂಡ ಕನಸು ಪರದೆ ಮೇಲೆ ಬಂದಾಗ ಅದು ಗೆದ್ದಾಯಿತು ಎಂದರ್ಥ. ಆ ವಿಷಯದಲ್ಲಿ ನಾನು ಪ್ರತಿ ಬಾರಿಯೂ ಗೆದ್ದಿದ್ದೇನೆ’ ಎಂದು ಮಾತಿಗಿಳಿದರು ‘ಕ್ರೇಜಿಸ್ಟಾರ್‌’ ರವಿಚಂದ್ರನ್.

‘ದುಡ್ಡಿನ ಮೇಲೆಯೇ ಎಲ್ಲಾ ನಡೆಯುತ್ತದೆ ಎಂದುಕೊಳ್ಳುವುದು ನಿಮಗೆ ಬಿಟ್ಟದ್ದು. ನಾನು ಅಂದುಕೊಂಡಿದ್ದು ಪರದೆ ಮೇಲೆ ಚೆನ್ನಾಗಿ ಬರಬೇಕು ಎಂದಷ್ಟೇ ನಾನು ಆಸೆ ಪಡುತ್ತೇನೆ. ಅದೇ ನನಗೆ ಸಂತೋಷ. ಹಾಗಾಗಿ, ವೃತ್ತಿಬದುಕಿನಲ್ಲಿ ಸೋತಿದ್ದೇನೆ ಎಂದು ನನಗೆ ಎಂದಿಗೂ ಅನಿಸಿಲ್ಲ’ ಎಂದರು.

ಇಷ್ಟು ಹೇಳಿ ಕೊಂಚ ಸಾವರಿಸಿಕೊಂಡ ಅವರು, ದುಡ್ಡಿನ ಲೆಕ್ಕಾಚಾರಕ್ಕೂ ಇಳಿದರು. ‘ನನಗೆ ಯಾವತ್ತಿಗೂ ದುಡ್ಡು ಮಾಡಬೇಕು ಅನಿಸಿರಲಿಲ್ಲ. ಆದರೆ, ಮಗಳ ಮದುವೆ ಮಾಡುವಾಗ ದುಡ್ಡು ಮಾಡಬೇಕಿತ್ತು ಎಂದು ಅನಿಸಿತು. ಪ್ರತಿಯೊಂದು ಲೆಕ್ಕಾಚಾರ ನಡೆಯುವುದು ದುಡ್ಡಿನ ಮೇಲೆಯೇ. ಗುರಿ ಇಟ್ಟುಕೊಂಡು ದುಡ್ಡು ಮಾಡಬೇಕು ಅನಿಸಿದೆ. ಇನ್ನುಮುಂದೆ ದುಡ್ಡು ಮಾಡಿಯೇ ತೋರಿಸುತ್ತೇನೆ’ ಎಂದು ಪ್ರತಿಜ್ಞೆ ಮಾಡಿದರು.

ರವಿಚಂದ್ರನ್‌ ಅವರ ಈ ಮಾತುಗಳಿಗೆ ಸಾಕ್ಷಿಯಾಗಿದ್ದು,ಸಾಹಿತಿ ಬರಗೂರು ರಾಮಚಂದ್ರ ಅವರು ನಿರ್ದೇಶಿಸಿರುವ ‘ಬಯಲಾಟದ ಭೀಮಣ್ಣ’ ಸಿನಿಮಾದ ಆಡಿಯೊ ಬಿಡುಗಡೆಯ ವೇದಿಕೆ.

ಬರಗೂರು ರಾಮಚಂದ್ರಪ್ಪ ಅವರೊಂದಿಗಿನ ಒಡನಾಟವನ್ನೂ ರವಿಮಾಮ ತೆರೆದಿಟ್ಟರು. ‘30 ವರ್ಷದ ಹಿಂದಿನ ಪ್ರಸಂಗ ಇದು. ಆಗ ಅವರು ಇನ್ನೂ ನಿರ್ದೇಶಕರಾಗಿರಲಿಲ್ಲ. ನನಗೊಂದು ಕಥೆ ಮಾಡಿಕೊಂಡು ಮನೆಗೆ ಬಂದಿದ್ದರು. ಆ ಕಥೆಯ ಹೆಸರು ‘ಜನಪದ’. ಅವತ್ತು ಈ ಶೋಮ್ಯಾನ್‌ ತಲೆ ಬೇರೆ ತರವೇ ಓಡುತ್ತಿತ್ತು. ಹಾಗಾಗಿ, ನಾನು ಅದನ್ನು ಒಪ್ಪಿಕೊಳ್ಳಲಿಲ್ಲ. ಇವತ್ತು ಅಂತಹ ಕಥೆಗಳನ್ನು ಕೇಳುವ ಮನಸ್ಸು ಇದೆಯೇ ಎಂದು ನನಗೂ ಗೊತ್ತಿಲ್ಲ’ ಎಂದರು.

‘ಅವರು ಮೊದಲಿಗೆ ತಮ್ಮ ಹೆಸರು ಬದಲಾಯಿಸಿಕೊಳ್ಳಬೇಕು’ ಎಂದಾಗ ಸಭಿಕರು ಕ್ಷಣಕಾಲ ಅವಕ್ಕಾದರು. ಅವರನ್ನು ‘ಬರಹ+ ಗುರು’ ರಾಮಚಂದ್ರಪ್ಪ ಎಂದು ಕರೆಯಬೇಕು’ ಎಂದಾಗ ಎಲ್ಲರೂ ಗೊಳ್ಳೆಂದು ನಕ್ಕರು.

‘ಅವರ ಪ್ರತಿಯೊಂದು ಮಾತಿನಲ್ಲೂ ವ್ಯಂಗ್ಯ ಸೇರಿಕೊಂಡಿರುತ್ತದೆ. ಅದು ನಿಜವೂ ಆಗಿರುತ್ತದೆ. ಅವರ ಮಾತು ಮುಗಿಯಿತು ಎಂದುಕೊಳ್ಳುವಾಗಲೇ ಮತ್ತಷ್ಟು ಪದಗಳನ್ನು ಸೇರಿಸಿಕೊಂಡು ಮಾತು ಮುಂದುವರಿಯುತ್ತಾರೆ. ಅವುಗಳಿಗೆ ಅರ್ಥ ಹುಡುಕುವುದು ನಮಗೆ ಗೊತ್ತಾಗುವುದಿಲ್ಲ’ ಎಂದು ಹೇಳಿದರು.

‘ಬಯಲಾಟದ ಭೀಮಣ್ಣ’ನ ಸುತ್ತ ಸುತ್ತಿದ ಅವರ ಮಾತು ಕೊನೆಗೆ ಬದುಕಿನ ಫಿಲಾಸಫಿಯತ್ತ ಹೊರಳಿತು. ‘ಏನನ್ನಾದರೂ ಸಾಧನೆ ಮಾಡುತ್ತೇನೆ ಎಂದು ಹೇಳಿಕೊಂಡು ಚಿತ್ರರಂಗಕ್ಕೆ ನಾನು ಬಂದವನಲ್ಲ. ನಾಳೆ ಇದೇ ಆಗುತ್ತದೆ ಎಂದು ಊಹಿಸುವುದಿಲ್ಲ. ಪ್ರತಿ ಬಾರಿಯೂ ಯಾವುದೇ ಕೆಲಸ ಶುರು ಮಾಡುವಾಗ ಶ್ರದ್ಧೆ, ಪ್ರೀತಿಯಿಂದ ಮಾಡುತ್ತೇನೆ ಅಷ್ಟೇ’ ಎಂದರು.

‘ಎಲ್ಲರಿಗೂ ನಾಳೆಯ ಬಗ್ಗೆ ತಿಳಿದುಕೊಳ್ಳುವ ಆಸೆ ಇರುತ್ತದೆ. ನನಗೆ ‘ನಾನೇನು’ ಎಂದು ತಿಳಿದುಕೊಳ್ಳುವ ಆಸೆ. ನನ್ನ ಬಗ್ಗೆ ಸತ್ಯ ಮಾತನಾಡುವವರು ಬೇಕು. ಹೊಗಳುವವರು ನನಗೆ ಬೇಡ’ ಎಂದು ಖಡಕ್‌ ಆಗಿ ಹೇಳಿದರು.

ತಾವೇಕೆ ಸಿನಿಮಾ ಮುಹೂರ್ತ, ಆಡಿಯೊ ಬಿಡುಗಡೆ ಸಮಾರಂಭಕ್ಕೆ ಹೋಗುವುದಿಲ್ಲ ಎನ್ನುವುದಕ್ಕೆ ಕಾರಣವನ್ನೂ ಬಿಡಿಸಿಟ್ಟರು. ‘ನಾನು ಎರಡು ವರ್ಷದಿಂದ ಸಿನಿಮಾ ಮುಹೂರ್ತ, ಆಡಿಯೊ ಬಿಡುಗಡೆ ಸಮಾರಂಭಗಳಿಗೆ ಹೋಗುತ್ತಿಲ್ಲ. ಹೋದ ಕಡೆಯಲ್ಲೆಲ್ಲಾ ನಿಮ್ಮ ಅದೃಷ್ಟವನ್ನು ಕೊಟ್ಟು ಹೋಗಿ ಎನ್ನುತ್ತಾರೆ. ಎಲ್ಲರಿಗೂ ಅದೃಷ್ಟ ಕೊಟ್ಟರೆ ನನಗೇನು ಉಳಿಯುತ್ತದೆ. ಹಾಗಾಗಿ, ಯಾರು ಕರೆದರೂ ಹೋಗುವುದಿಲ್ಲ. ಬರಗೂರು ಕರೆದಾಗ ನನ್ನಿಂದ ಇಲ್ಲಾ ಎನ್ನಲಾಗಲಿಲ್ಲ’ ಎಂದು ನಕ್ಕರು.

‘ಬಯಲಾಟದ ಭೀಮಣ್ಣ ಚಿತ್ರದಲ್ಲಿ ಸುಂದರರಾಜ್‌ ಭೀಮಣ್ಣನಾಗಿ ನಟಿಸಿದ್ದಾರೆ. ಆದರೆ, ಅವರು ಮತ್ತು ಪ್ರಮೀಳಾ ಜೋಷಾಯ್‌ ಇಪ್ಪತ್ತೈದು ವರ್ಷಗಳ ಹಿಂದೆಯೇ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಬಯಲಾಟ ಆಡಿದ್ದಾರೆ’ ಎಂದು ಹಾಸ್ಯ ಚಟಾಕಿ ಹಾರಿದರು.

‘ನನಗೆ ವೀರಸ್ವಾಮಿ ಅವರೇ ಗಾಡ್‌ ಮತ್ತು ಪಾದರ್‌. ಕನಸು ಕಾಣುವುದಕ್ಕೆ ಬಡವ ಅಥವಾ ಶ್ರೀಮಂತ ಎಂಬ ಭೇದವಿಲ್ಲ. ಸಾಹುಕಾರರ ಕನಸು ಮಾತ್ರ ನೆರವೇರುತ್ತದೆ. ಬಡವರ ಕನಸು ಈಡೇರುವುದಿಲ್ಲ ಎಂಬ ಜಿಜ್ಞಾಸೆ ಬೇಡ. ಕನಸು ಕಾಣುವವರೇ ‘ಸಾಹುಕಾರರು’. ಆತನಿಗಿಂತ ದೊಡ್ಡ ಸಾಹುಕಾರ ಮತ್ತೊಬ್ಬನಿಲ್ಲ’ ಎಂದು ಹೇಳಿದ ‘ಕನಸುಗಾರ’ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT