ಸೋಮವಾರ, ನವೆಂಬರ್ 18, 2019
29 °C

ಮ್ಯೂಸಿಕಲ್‌ ಸಿನಿಮಾ ನಿರ್ಮಾಣಕ್ಕೆ ಸಜ್ಜಾದ ರವಿಚಂದ್ರನ್‌

Published:
Updated:
Prajavani

ಕನ್ನಡ ಚಿತ್ರರಂಗಕ್ಕೆ ‘ಏಕಾಂಗಿ’, ‘ಅಪೂರ್ವ’ದಂತಹ ಭಿನ್ನವಾದ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ‘ಕ್ರೇಜಿಸ್ಟಾರ್‌’ ರವಿಚಂದ್ರನ್‌ ಅವರದ್ದು. ಈಗ ಸಂಪೂರ್ಣ ಮ್ಯೂಸಿಕಲ್‌ ಸಿನಿಮಾ ಮಾಡಲು ಅವರು ದಿಟ್ಟಹೆಜ್ಜೆ ಇಟ್ಟಿದ್ದಾರೆ. ಅವರೊಳಗೆ ಮೂವತ್ತು ವರ್ಷಗಳ ಕಾಲ ಬೆಚ್ಚಗೆ ಅವಿತಿದ್ದ ಈ ಕನಸಿನ ಪಾರಿವಾಳ ಈಗ ರೆಕ್ಕೆ ಮೂಡಿಸಿಕೊಂಡು ಹಾರಲು ಸಜ್ಜಾಗಿದೆ. ಅದರ ಜೀವ ಪೋಷಣೆಗೆ ರವಿಮಾಮ ಟೊಂಕಕಟ್ಟಿ ನಿಂತಿದ್ದಾರೆ. ಸಿನಿಮಾದಲ್ಲಿನ ಡೈಲಾಗ್‌, ಹಾಡಿನಿಂದ ಹಿಡಿದು ಎಲ್ಲವನ್ನೂ ಹಾಡಿನ ಮೂಲಕವೇ ಕಟ್ಟಿಕೊಡುವ ಹಂಬಲ ಅವರದು.

‘ಪ್ರಜಾವಾಣಿ’ಯೊಂದಿಗೆ ಅವರು ತಮ್ಮ ಕನಸುಗಳನ್ನು ಹಂಚಿಕೊಂಡಿದ್ದು ಹೀಗೆ. 

‘ಮ್ಯೂಸಿಕಲ್‌ ಸಿನಿಮಾ ಮಾಡಬೇಕೆಂಬುದು ನನ್ನ ಮೂರು ದಶಕದ ಕನಸು. ಈ ಕನಸು ಚಿಗುರೊಡೆದಿದ್ದು ‘ಪ್ರೇಮಲೋಕ’ ಸಿನಿಮಾ ಮಾಡುವಾಗಲೇ. ನಾನು ಸಾಮಾನ್ಯವಾಗಿ ಯಾವುದೇ ವಿಷಯವನ್ನು ತಲೆಯಲ್ಲಿ ಫೀಡ್‌ ಮಾಡಿಕೊಂಡಿರುವುದಿಲ್ಲ. ನನ್ನ ಹೃದಯದಲ್ಲಿ ಫೀಡ್‌ ಮಾಡಿಕೊಂಡು ಬಿಡುತ್ತೇನೆ. ಅದು ಅಲ್ಲಿಯೇ ಬೆಚ್ಚಗೆ ಕುಳಿತುಕೊಂಡಿರುತ್ತದೆ. ಅಲ್ಲಿಯೇ ಚರ್ಚೆಯಾಗುತ್ತಿರುತ್ತದೆ. ಹಂಸಲೇಖ ಅವರನ್ನು ನಾನು ಇನ್ನೂ ಬಿಟ್ಟಿರಲಿಲ್ಲ. ಇಬ್ಬರೂ ಜೊತೆಯಾಗಿಯೇ ಇದ್ದೆವು. ಅಂದೊಂದು ದಿನ ನನಗೆ ಕನಸು ಬಿತ್ತು. ನಿದ್ದೆಯಿಂದ ಎದ್ದ ಬಳಿಕ ಒಂದು ಕಥೆ ಬರೆದೆ. ಅದು ಪ್ರೇಮ್‌ ಟು ಪ್ರೇಮ್‌ ಕಥೆ ಎಂದರೆ ನೀವು ಅಚ್ಚರಿಪಡಬೇಕು. ಅಂದು ನನ್ನ ಇಡೀ ಕೈಯಲ್ಲಿ ಬೆವರು ಸುರಿಯುತ್ತಿತ್ತು’ ಎಂದು ನೆನಪಿಸಿಕೊಳ್ಳತೊಡಗಿದರು.

‘ಆ ಕಥೆಯನ್ನೇ ಮ್ಯೂಸಿಕಲ್‌ ಸಿನಿಮಾ ಮಾಡಬೇಕು ಎನ್ನುವುದೇ ನನ್ನಾಸೆ. ಅದಕ್ಕಾಗಿಯೇ ಸ್ಟುಡಿಯೊ ಕಟ್ಟಿದೆ. ಮ್ಯೂಸಿಕ್‌ ಮಾಡಲು ಪ್ರಯತ್ನ ಮಾಡಿದ್ದು ಉಂಟು. ಅದಕ್ಕಾಗಿ ನನ್ನ ಸಂಗೀತ ಬಳಗದ ಎಲ್ಲರೂ ಸೇರಿ ಚರ್ಚಿಸಿದೆವು. ಆದರೆ, ನಾವು ಅಂದುಕೊಂಡಂತೆ ಆ ಕೆಲಸ ಆಗಲಿಲ್ಲ. ರೆಕಾರ್ಡ್‌ ಮಾಡುತ್ತಲೇ ಇದ್ದೆವು; ಅದಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಅದು ಒಂದು ಸ್ವರೂಪ ಪಡೆಯಲೇ ಇಲ್ಲ. ಹಾಗಾಗಿ, ಅದರ ಬಗ್ಗೆ ನಾನು ಯಾರಿಗೂ ಹೇಳಲಿಲ್ಲ’ ಎಂದು ವಿವರಿಸಿದರು.

‘ಇಡೀ ಸಿನಿಮಾ ಸೌಂಡ್‌ ಎಫೆಕ್ಟ್‌ನಿಂದಲೇ ರೆಕಾರ್ಡ್‌ ಆಗಬೇಕು. ಶೂಗಳ ಸೌಂಡ್‌ ಬರಬೇಕೆಂದರೆ ಅದೂ ಬರಬೇಕು. ನಾಲ್ಕು ಸ್ಟೆಫ್‌ ಹಾಕುತ್ತಾರೆ ಎಂದರೆ ಆ ಸೌಂಡ್‌ ಕೂಡ ಬರಬೇಕು. ನಾವು ಏನನ್ನು ಮಾಡಲು ಹೊರಟಿದ್ದೇವೆಯೋ ಅದು ಪ್ರೇಮ್‌ನಲ್ಲಿ ಇರಬೇಕು’ ಎಂದರು. 

‘ಕಳೆದ ಅಕ್ಟೋಬರ್‌ 18ರಂದು ನನ್ನ ಕನಸು ಒಂದು ಸ್ವರೂಪ ಪಡೆಯಿತು. ಸಿನಿಮಾ ಸ್ವರೂಪ ಪಡೆಯಿತು ಎಂದರೆ ಅದಕ್ಕೆ ಅರ್ಥ ಹೆಚ್ಚಿದೆ. ಅಂದು ನನ್ನ ಮಗಳ ಹುಟ್ಟುಹಬ್ಬವೂ ಆಗಿತ್ತು. ಅಂದೇ ನನಗೆ ಬೆಂಗಳೂರಿನ ದೇವನಹಳ್ಳಿಯ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಸಿ.ಎಂ.ಆರ್‌. ಯೂನಿವರ್ಸಿಟಿಯು ಗೌರವ ಡಾಕ್ಟರೇಟ್‌ ಕೂಡ ಘೋಷಿಸಿದ್ದು ಖುಷಿ ನೀಡಿತು. 1,500ಕ್ಕೂ ಹೆಚ್ಚು ಟ್ಯೂನ್‌ಗಳನ್ನು ಕಂಪೋಸ್‌ ಮಾಡಿಟ್ಟಿದ್ದೇನೆ. ಅಂದೇ ನನ್ನ ತಂಡದವರನ್ನು ಕರೆದುಕೊಂಡು ಹೋಗಿ ಬರೆಯಲು ಶುರು ಮಾಡಿದೆ. ಅಲ್ಲಿ ಕುಳಿತು ಚರ್ಚೆ ಮಾಡುತ್ತಿದ್ದ ವೇಳೆ ಬೆಳೆಯುತ್ತಾ ಬೆಳೆಯುತ್ತಾ ಅದು ಕಥೆಯಾಗಿ ಜೀವ ತಳೆಯಿತು’ ಎಂದು ವಿವರಿಸಿದರು. 

‘ಈಗ ಆ ಸಿನಿಮಾ ಮಾಡಲು ನನಗೊಂದು ಫಾರ್ಮೆಟ್‌ ಸಿಕ್ಕಿದೆ. ಆ ಸಿನಿಮಾಕ್ಕೆ ಹಾಡು ಬರೆಯಲೆಂದು ಕುಳಿತುಕೊಂಡೆ. ಒಂದೇ ಗಂಟೆಯಲ್ಲಿ ಆರು ಹಾಡುಗಳನ್ನು ಬರೆದುಬಿಟ್ಟೆ. ಚಿತ್ರದಲ್ಲಿ ಯಾರು ಮಾತನಾಡಿದರೂ ಅದು ಹಾಡಿನ ಸ್ವರೂಪದಲ್ಲಿಯೇ ಇರಬೇಕು. ಅಂದರೆ ಸಂಭಾಷಣೆ ಹಾಡಾಗಿಯೇ ಇರುತ್ತದೆ. ಅದರ ಮೂಲಕವೇ ಸಿನಿಮಾ ಹೇಳುವ ಇಚ್ಛೆ ನನ್ನದು. ಜೊತೆಗೆ, ಅದನ್ನು ನೋಡುವ ಪ್ರೇಕ್ಷಕರಿಗೆ ಎರಡು ಗಂಟೆ ಬೋರ್‌ ಹೊಡೆಯಬಾರದು. ಮ್ಯೂಸಿಕಲ್‌ ಆಗಿ ಆ ಕಥೆಯನ್ನು ಹೇಗೆ ಹೇಳುತ್ತೇವೆ ಎನ್ನುವುದು ಒಂದು ಪ್ರಶ್ನೆ. ಚಿತ್ರದ ಎಲ್ಲಾ ಚಟುವಟಿಕೆಯನ್ನೂ ಹಾಡಿನ ಮೂಲಕವೇ ಹೇಳಿಕೊಂಡು ಹೋಗುವುದು ಕೂಡ ಹೊಸ ಫಾರ್ಮೆಟ್‌’ ಎಂದು ಮಾಹಿತಿ ನೀಡಿದರು.

‘ರವಿ ಬೋಪಣ್ಣ’ ಮತ್ತು ‘ರಾಜೇಂದ್ರ ಪೊನ್ನಪ್ಪ’ ಸಿನಿಮಾ ಮುಗಿದ ಬಳಿಕ ಮ್ಯೂಸಿಕಲ್‌ ಸಿನಿಮಾವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದೇನೆ. ಜನವರಿಯ ಬಳಿಕ ಮ್ಯೂಸಿಕ್‌ ಮಾಡಲು ಕುಳಿತುಕೊಳ್ಳುತ್ತೇನೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಮಾಡುವುದು ನನ್ನ ಉದ್ದೇಶ. ಇದೊಂದು ಯೂನಿವರ್ಸಲ್‌ ಸ್ಕ್ರಿಪ್ಟ್‌’ ಎಂದು ಮಾತು ಮುಗಿಸಿದರು.

ಪ್ರತಿಕ್ರಿಯಿಸಿ (+)