ರವಿವರ್ಮನ ಕಲಾಕೃತಿಯಾದ ಸಮಂತಾ!

ಹೈದರಾಬಾದ್: ರಾಜಾ ರವಿವರ್ಮ ಭಾರತದ ಸುಪ್ರಸಿದ್ಧ ವರ್ಣಚಿತ್ರಕಾರ. ಆತ ರಚಿಸಿದ ಕಲಾಕೃತಿಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಯುವ ಕಲಾವಿದರಿಗೆ ಪ್ರೇರಣೆಯೂ ಆಗಿವೆ. ಆತನ ತೈಲಚಿತ್ರ ಕಲೆ ಕಣ್ಣಿಗೆ ಆನಂದ ಹಾಗೂ ಮನಸ್ಸಿಗೆ ಉಲ್ಲಾಸ ನೀಡುತ್ತದೆ.
ಖ್ಯಾತ ಸೆಲೆಬ್ರಿಟಿ ಫೋಟೊಗ್ರಾಫರ್ ಜಿ. ವೆಂಕಟ್ ರಾಮ್ ಅವರು ಈಗ ರವಿವರ್ಮನ ಕಲಾಕೃತಿಗಳ ಥೀಮ್ ಆಧರಿಸಿ 2020ರ ಕ್ಯಾಲೆಂಡರ್ ಹೊರತರಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಸಿನಿಮಾ ನಟಿಯರ ಫೋಟೊಶೂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಅವರ ಫೋಟೊ ಸೆರೆ ಹಿಡಿದಿದ್ದಾರೆ. ರವಿಮರ್ಮ ರಚಿಸಿರುವ ಹೆಂಗಸಿನ ಕಲಾಕೃತಿಯಂತೆಯೇ ಸಮಂತಾ ಶೃಂಗರಿಸಿಕೊಂಡು ಕ್ಯಾಮೆರಾಕ್ಕೆ ಪೋಸು ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೊ ಹಂಚಿಕೊಂಡಿದ್ದು, ಆಕೆ ನೀಡಿರುವ ಭಂಗಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಈ ಕ್ಯಾಲೆಂಡರ್‌ಗೆ ಸಮಂತಾ ಒಬ್ಬರೇ ಫೋಸು ನೀಡಿಲ್ಲ. ನಟಿಯರಾದ ಶ್ರುತಿ ಹಾಸನ್, ಖುಷ್ಬೂ, ಐಶ್ವರ್ಯ ರಾಜೇಶ್, ರಮ್ಯಾ ಕೃಷ್ಣ, ಲಕ್ಷ್ಮಿ ಮಂಚು ಅವರ ಫೋಟೊಶೂಟ್ ಕೂಡ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರು ಈ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಮಹಿಳೆಯರ ಮುಖಭಾವವನ್ನು ಅರ್ಥೈಸಿಕೊಂಡು ಅದಕ್ಕೆ ಕಲಾಕೃತಿಯ ರೂಪ ನೀಡುತ್ತಿದ್ದ ಭಾರತದ ಬೆರಳೆಣಿಕೆಯಷ್ಟು ಕಲಾವಿದರಲ್ಲಿ ರವಿಮರ್ಮ ಕೂಡ ಒಬ್ಬರು. ಹಾಗಾಗಿಯೇ, ಅವರ ಕಲಾಕೃತಿಗಳು ಇಂದಿಗೂ ಜನರ ಮೆಚ್ಚುಗೆಗೆ ಪಾತ್ರವಾಗಿವೆ.
ಈ ಅಪರೂಪದ ಫೋಟೊಶೂಟ್ ಸಮಂತಾ ಅವರಿಗೂ ಖುಷಿ ಕೊಟ್ಟಿದೆಯಂತೆ. ಪ್ರಸ್ತುತ ಆಕೆ ಪ್ರೇಮ್‌ಕುಮಾರ್ ನಿರ್ದೇಶನದ ‘ಜಾನು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ತಮಿಳಿನ ‘96’ ಚಿತ್ರದ ರಿಮೇಕ್. ಇದು ಫೆ. 7ರಂದು ತೆರೆ ಕಾಣುತ್ತಿದೆ.
ರವಿವರ್ಮಾ ಕಲಾಕೃತಿಯಾದ ಇತರೆ ತಾರೆಯರು...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.