ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಬಪ್ಪಿ ಲಹಿರಿ: ಯಾದ್‌ ಆ ರಹಾ ಹೈ ತೇರಾ ಪ್ಯಾರ್‌...

‘ಚಲ್ತೇ ಚಲ್ತೇ ಮೇರೆ ಏ ಗೀತ್‌ ಯಾದ್‌ ರಖನಾ’
Last Updated 16 ಫೆಬ್ರುವರಿ 2022, 10:34 IST
ಅಕ್ಷರ ಗಾತ್ರ

ಅದು 70ರ ದಶಕ. ಸಚಿನ್‌ ದೇವ್‌ ಬರ್ಮನ್‌, ರಾಹುಲ್‌ ದೇವ್‌ ಬರ್ಮನ್‌, ಕಲ್ಯಾಣ್‌ಜಿ– ಆನಂದ್‌ಜಿ, ಲಕ್ಷ್ಮೀಕಾಂತ್‌– ಪ್ಯಾರೇಲಾಲ್, ರಾಜೇಶ್‌ ರೋಶನ್‌, ರವೀಂದ್ರ ಜೈನ್‌ ಅವರಂಥ ದಿಗ್ಗಜ ಸಂಗೀತ ನಿರ್ದೇಶಕರು ಹಿಂದಿ ಚಿತ್ರರಂಗವನ್ನು ಆಳುತ್ತಿದ್ದ ಕಾಲ.

ಅವರೆಲ್ಲ ಒಬ್ಬರಿಗಿಂತ ಒಬ್ಬರು ಎಂಬಂತೆ, ಅನೇಕ ಸುಮಧುರ ಗೀತೆಗಳನ್ನು ಸಂಯೋಜಿಸುತ್ತ ಒಂದರ ಹಿಂದೊಂದು ಹಿಂದಿ ಚಿತ್ರಗಳ ಯಶಸ್ಸಿಗೆ ಕೊಡುಗೆ ನೀಡುತ್ತಿದ್ದರು. ಅಂಥ ಸ್ವರ ಸಾಮ್ರಾಟರ ನಡುವೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದೇ ದೊಡ್ಡ ಸಾಹಸ. ಅಕಸ್ಮಾತ್‌ ಅವಕಾಶ ಸಿಕ್ಕರೂ ಆ ಖ್ಯಾತನಾಮರಿಗಿಂತ ಭಿನ್ನ ಎಂದು ತೋರಿಸಿಕೊಂಡರೆ ಮಾತ್ರ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ.

ಈ ಸತ್ಯವನ್ನು ಅರಿತ ಯುವಕನೊಬ್ಬ, 70ರ ದಶಕದ ಆರಂಭದಲ್ಲಿ ತನ್ನ 21ನೇ ವಯಸ್ಸಿಗೇ ಬಾಲಿವುಡ್‌ ಪ್ರವೇಶಿಸಲು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಎಲ್ಲರೂ ಸೈ ಎನ್ನಿಸಿಕೊಳ್ಳುವಂತೆ ಸಂಗೀತ ನೀಡಿದ್ದು ಮಾತ್ರವಲ್ಲ, ಇಡೀ ಭಾರತದ ಯುವಪಡೆಯೇ ತನ್ನ ತಾಳಕ್ಕೆ ಕುಣಿಯುವಂತೆ ಮಾಡಿದ. ಬುಧವಾರ ಮುಂಬೈನ ಆಸ್ಪತ್ರೆಯೊಂದರಲ್ಲಿ ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದ ಬಪ್ಪಿ ಲಹಿರಿ ಅವರೇ ಆ ವಿಭಿನ್ನ ಗೀತ ಸಂಯೋಜನಕಾರ.

ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ (1952) ಜನಿಸಿದ ಅಲೋಕೇಶ್‌ ಲಹಿರಿ (ಮುಂದೆ ಖ್ಯಾತಿ ಪಡೆದಿದ್ದು ಬಪ್ಪಿ ಹೆಸರಲ್ಲಿ) ಸಂಗೀತದ ಹಿನ್ನೆಲೆಯ ಕುಟುಂಬದಿಂದಲೇ ಬಂದವರು. ತನ್ನ 3ನೇ ವಯಸ್ಸಿಗೆ ತಬಲಾದ ಮೇಲೆ ಕೈ, ಬೆರಳು ಆಡಿಸುತ್ತ ಕೇಳುಗರು ಆಲಿಸುವಂತೆ ಮಾಡಿದ್ದ ಈ ಹುಡುಗ ತಂದೆಯ ಸ್ನೇಹಿತರೊಬ್ಬರ ನೆರವಿನೊಂದಿಗೆ ಬಾಲಿವುಡ್‌ ಪ್ರವೇಶಿಸಿದ. 70ರ ದಶಕದಲ್ಲಿ ಕೆಲವೇ ಕೆಲವು ಚಿತ್ರಗಳಿಗೆ ಸಂಗೀತ ಸಂಯೋಜಿಸುವ ಅವಕಾಶ ಪಡೆದರೂ, ‘ನನ್ಹಾ ಶಿಕಾರಿ’, ‘ಝಕ್ಮಿ’, ಹಾಗೂ ಸಂಗೀತಮಯ ‘ಚಲ್ತೇ ಚಲ್ತೇ’ ಚಿತ್ರಗಳ ಹಾಡುಗಳಿಂದ ಛಾಪು ಮೂಡಿಸಿ ದಿಗ್ಗಜರ ನಡುವೆ ಹೆಸರು ಸಂಪಾದಿಸಿದ್ದು ದೊಡ್ಡ ಸಾಧನೆ. 80ರ ದಶಕದ ಆರಂಭದಲ್ಲಿ ‘ಡಿಸ್ಕೋ ಕಿಂಗ್‌’ ಎಂಬ ಖ್ಯಾತಿಗೆ ಒಳಗಾಗುವ ಮೂಲಕ ಹಲವು ನಟರ ಜನಪ್ರಿಯತೆ ಹೆಚ್ಚುವುದಕ್ಕೂ ನೆರವಾದರು.

ಇವರ ಸಂಗೀತ ಮಾಡಿದ ಮೋಡಿಯಿಂದಾಗಿ ಬಾಲಿವುಡ್‌ನಲ್ಲಿ ‘ಡಾನ್ಸ್‌ಸ್ಟಾರ್‌’ ಎಂದು ಕರೆಸಿಕೊಂಡಿದ್ದು ಮಿಥುನ್‌ ಚಕ್ರವರ್ತಿ. ಪಾಪ್‌ ಶೈಲಿಯ ಹಾಡುಗಳು ಮತ್ತು ಡಾನ್ಸ್‌ಗೆ ಹೆಚ್ಚು ಮಹತ್ವ ಇದ್ದ ‘ಡಿಸ್ಕೋ ಡಾನ್ಸರ್‌’, ‘ಡಾನ್ಸ್‌ಡಾನ್ಸ್‌’ ಹಾಗೂ ‘ಕಸಮ್‌ ಪೈದಾ ಕರ್‌ನೇ ವಾಲೇಕೀ’ ಚಿತ್ರಗಳು ಮಿಥುನ್‌ಗೆ ಸ್ಟಾರ್‌ ಪಟ್ಟ ನೀಡಿದವು. ಈ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದ ಬಿ.ಸುಭಾಷ್‌ ಆಗಲೇ ಕೋಟಿಕೋಟಿ ಬಾಚಿಕೊಂಡರು.

1982ರಲ್ಲಿ ತೆರೆಕಂಡ ‘ಡಿಸ್ಕೋ ಡಾನ್ಸರ್’ ಚಿತ್ರ ಅನಿರೀಕ್ಷಿತ ಯಶಸ್ಸು ದೊರೆಯಿತು. ವಿಭಿನ್ನ ಶೈಲಿಯ ಸಂಗೀತದಿಂದ ಮನೆಮಾತಾದ ಹಾಡುಗಳಿಂದಾಗಿ ಈ ಚಿತ್ರದ ಕ್ಯಾಸೆಟ್‌ಗಳು ದಾಖಲೆಯ ರೂಪದಲ್ಲಿ ಮಾರಾಟವಾದವು. ಅಷ್ಟೇ ಅಲ್ಲ, ರಾತ್ರಿ ಕಳೆದು ಬೆಳಗಾಗುವುದರೊಳಗೆ ನಟ ಮಿಥುನ್ ಚಕ್ರವರ್ತಿ ಅವರನ್ನು ಜನಸಾಮಾನ್ಯರ ತಾರೆಯಾಗಿ ರೂಪಿಸಿದ್ದು ಈ ಚಿತ್ರ.

ಈ ಚಿತ್ರದ ಸಂಗೀತವು ಬಪ್ಪಿ ದಾ (ಬಾಲಿವುಡ್‌ನಲ್ಲಿ ಅವರು ಹೀಗೆಯೇ ಪರಿಚಿತರು) ಅವರಿಗೆ ‘ಭಾರತದ ಡಿಸ್ಕೋ ಕಿಂಗ್‌’ ಎಂಬ ಖ್ಯಾತಿಯನ್ನು ನೀಡಿತು. ಮುಂದೆ, ‘ಡಾನ್ಸ್ ಡಾನ್ಸ್’ (1987), ‘ಗುರು’ (1989), ‘ಪ್ರೇಮ್ ಪ್ರತಿಜ್ಞಾ’ (1989), ‘ದಲಾಲ್’ (1993) ಸೇರಿದಂತೆ ಅನೇಕ ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಲು ಈ ಯಶಸ್ಸು ಪ್ರೇರೇಪಿಸಿತು. ‘ಡಿಸ್ಕೋ ಡಾನ್ಸರ್‌’ಗೆ ಮೊದಲು ‘ಸುರಕ್ಷಾ’ (1979) ಹಾಗೂ ವಾರ್ದಾತ್‌ (1981) ಚಿತ್ರಗಳಲ್ಲಿ ಮಿಥುನ್‌ ಜೊತೆ ಕೆಲಸ ಮಾಡಿದ್ದ ಬಪ್ಪಿ, ಆ ಹೊಸ ಹುಡುಗನಿಗೊಂದು ಇಮೇಜ್‌ ದೊರಕಿಸಿಕೊಡಬೇಕು ಎಂಬ ಸಂಕಲ್ಪ ಮಾಡಿಕೊಂಡಿದ್ದೇ ಕೆಲವು ಹಿಟ್ ಹಾಡುಗಳು ಹೊರಬರಲು ಕಾರಣವಾಯಿತು.

ಅಮಿತಾಭ್‌ ಬಚನ್‌ ಅಭಿನಯದ ಸೂಪರ್‌ ಹಿಟ್‌ ಚಿತ್ರಗಳಾದ ‘ನಮಕ್‌ ಹಲಾಲ್‌’, ‘ಶರಾಬಿ’ ಮತ್ತಿತರ ಚಿತ್ರಗಳ ಗೀತ ಸಂಯೋಜನೆಯೂ ಇವರದ್ದೇ. ತಮ್ಮ ವಿಭಿನ್ನ ಕೈಶ ವಿನ್ಯಾಸದೊಂದಿಗೆ ಯುವಜನರನ್ನು ಆಕರ್ಷಿಸಿದ ಬಪ್ಪಿ ಲಹಿರಿ, ಮೈಮೇಲೆ ಮಣಗಟ್ಟಲೇ ಚಿನ್ನದ ಆಭರಣ, ಕಣ್ಣಿಗೆ ಕಪ್ಪು ಬಣ್ಣದ ಕೂಲಿಂಗ್‌ ಗ್ಲಾಸ್‌ ಧರಿಸುವ ಮೂಲಕವೇ ತಮ್ಮದೊಂದು ಇಮೇಜ್‌ ರೂಪಿಸಿಕೊಂಡವರು.

‘1973ರಲ್ಲಿ ಬಿಡುಗಡೆಯಾದ ಮೊದಲ ಚಿತ್ರ ‘ನನ್ಹಾ ಶಿಕಾರಿ’ ಹಾಡುಗಳ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದೇ ತಡ. ಸ್ಪರ್ಧೆ ಎಷ್ಟೇ ಬಿರುಸಾಗಿರಲಿ, ಏನೇ ಎದುರಾಗಲಿ ಯಾವತ್ತೂ ಸಂಗೀತ ಸಂಯೋಜನೆಯನ್ನು ಬಿಡಕೂಡದು ಎಂಬ ಅಚಲ ನಿರ್ಧಾರ ಕೈಗೊಂಡೆ’ ಎಂದು ಸ್ವತಃ ಬಪ್ಪಿ ಹೇಳಿಕೊಂಡಿದ್ದರು.

‘ಚಲ್ತೇ ಚಲ್ತೇ’ ಚಿತ್ರದ ‘ಚಲ್ತೇ ಚಲ್ತೇ ಮೇರೆ ಏ ಗೀತ್‌ ಯಾದ್‌ ರಖನಾ ಕಭಿ ಅಲ್ವಿದಾ ನಾ ಕೆಹೆನಾ’, ‘ಪ್ಯಾರ್‌ ಮೆ ಕಭಿ ಕಭಿ ಐಸಾ ಹೋ ಜಾತಾ ಹೈ ಛೋಟೀ ಸಿ ಬಾತ್‌ ಕಾ ಫಸಾನಾ ಬನ್‌ ಜಾತಾ ಹೈ’, ‘ಜಾನಾ ಕಹಾ ಹೈ ಪ್ಯಾರ್‌ ಯಹಾ ಹೈ’, ‘ಝಕ್ಮೀ’ ಚಿತ್ರದ ’ಜಲ್್ತಾ ಹೈ ಜಿಯಾ ಮೇರಾ ಭೀಗಿ ಭೀಗಿ ರಾತೋಮೇ’, ‘ನಮಕ್‌ ಹಲಾಲ್‌’ ಚಿತ್ರದ ‘ರಾತ್‌ ಬಾಕಿ ಬಾತ್‌ ಬಾಕಿ ಹೋನಾ ಹೈ ಜೋ ಹೋ ಜಾನೆ ದೋ’ ಹಾಗೂ ‘ಕೆ ಪಗ ಗುಂಗರೂ ಬಾಂದ್‌ ಮೀರಾ ನಾಚ್ ಥೀ’ ‘ಶರಾಬಿ’ ಚಿತ್ರದ ‘ದೇ ದೇ ಪ್ಯಾರ್‌ ದೇ’ ಇವರ ಸಂಗೀತದಲ್ಲಿ ಮೂಡಿಬಂದ ಹಿಟ್‌ ಹಾಡುಗಳು.

ಡಿಸ್ಕೋ ಡಾನ್ಸರ್‌ ಚಿತ್ರದ ಕೋಯಿ ಯಹಾ ಅಹ ನಾಚೆ ನಾಚೆ’ (ಸಹಗಾಯಕಿ ಉಷಾ ಉತುಪ್‌), ‘ಯಾದ್‌ ಆ ರಹಾ ಹೈ ತೇರಾ ಪ್ಯಾರ್‌ ಹಾಗೂ ‘ಸಾಹೇಬ್‌’ ಚಿತ್ರದ ‘ಪ್ಯಾರ್‌ ಬಿನಾ ಚೈನ್‌ ಕಹಾ ರೇ’ (ಸಹಗಾಯಕಿ ಎಸ್‌.ಜಾನಕಿ), ‘ಸುರಕ್ಷಾ’ ಚಿತ್ರದ ‘ಮೌಸಮ್‌ ಹೈ ಗಾನೆ ಕಾ ಬಜಾನೆ ಕಾ ಸುನ್‌ನೇ ಕಾ ಸುನಾನೇ ಕಾ’ (ಸಹಗಾಯಕಿ ಅನೆಟ್‌ ಪಿಂಟೋ) ಗೀತೆಗಳ ಗಾಯನದಿಂದಲೂ ಇವರ ಕಂಠ ಚಿರಪರಿವಿತವಾಗಿದೆ.

ಸಂಗೀತ ನಿರ್ದೇಶನಕ್ಕಾಗಿ ಒಟ್ಟು ಆರು ಬಾರಿ ಫಿಲ್ಮ್‌ಫೇರ್ ಹಾಗೂ ಜೀವಮಾನ ಸಾಧನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿರುವ ಬಪ್ಪಿ, ರಾಜಕೀಯ ಪ್ರವೇಶಿಸಿ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.

2014ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಶ್ರೀರಾಮಪುರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಇವರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದರು.

ಶೈಲೇಂದ್ರ ಸಿಂಗ್‌, ಸುಲಕ್ಷಣಾ ಪಂಡಿತ್, ಉಷಾ ಉತುಪ್‌, ಅಲಿಶಾ ಚಿನಾಯ್‌, ವಿಜಯ್‌ ಬೆನೆಡಿಕ್ಟ್‌ ಒಳಗೊಂಡಂತೆ ಅನೇಕ ಯುವ ಗಾಯಕರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದವರು ಇವರು.

ಕನ್ನಡದ ‘ಆಫ್ರಿಕಾದಲ್ಲಿ ಶೀಲಾ’, ‘ಕೃಷ್ಣಾ ನೀ ಬೇಗನೆ ಬಾರೊ’ ಹಾಗೂ ‘ಪೊಲೀಸ್‌ ಮತ್ತು ದಾದಾ ಚಿತ್ರಗಳಿಗೆ ಸಂಗೀತ ನೀಡಿದ್ದ ಬಪ್ಪಿ ಕೆಲವು ಗುನುಗುನಿಸುವ ಹಾಡುಗಳನ್ನು ನೀಡಿದ್ದಾರೆ.

ತಮ್ಮ 69ನೇ ವಯಸ್ಸಿನಲ್ಲಿ ನಮ್ಮನ್ನಗಲಿರುವ ಬಪ್ಪಿ ದಾ ಅವರ ‘ಯಾದ್‌ ಆ ರಹಾ ಹೈ ತೇರಾ ಪ್ಯಾರ್‌’, ‘ಚಲ್ತೇ ಚಲ್ತೇ ಮೇರೆ ಏ ಗೀತ್‌ ಯಾದ್‌ ರಖನಾ’ ಹಾಡುಗಳು ಅವರನ್ನೇ ಕುರಿತು ರಚಿತವಾದವುಗಳೇನೋ ಎಂಬಂತೆ ಭಾಸವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT