ಭಾನುವಾರ, ಸೆಪ್ಟೆಂಬರ್ 22, 2019
27 °C

ಮುಂದಕ್ಕೆ ಸಾಗುವ ‘ರಿವೈಂಡ್’

Published:
Updated:
Prajavani

ಸಿಂಗಪುರದಲ್ಲಿ ವಿಜ್ಞಾನಿ ಆಗಿದ್ದುಕೊಂಡು, ಕೃತಕ ಬುದ್ಧಿಮತ್ತೆ ಕಾರುಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತೇಜ್‌ ಅವರು ತಾವೇ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ ನಟರಾಗಿ ಹೊಸ ಸಿನಿಮಾ ಸಿದ್ಧಪಡಿಸಿದ್ದಾರೆ. ಚಿತ್ರದ ಶೇಕಡ 35ರಷ್ಟು ಚಿತ್ರೀಕರಣ ಸಹ ಪೂರ್ಣಗೊಂಡಿದೆ.

ಚಿತ್ರದ ಹೆಸರು ‘ರಿವೈಂಡ್‌’. ಈ ಬಗ್ಗೆ ಮಾಹಿತಿ ನೀಡಲು ತೇಜ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಶೀರ್ಷಿಕೆ ‘ರಿವೈಂಡ್’ ಎಂದಿದ್ದರೂ, ಶೀರ್ಷಿಕೆಯಲ್ಲಿ ‘ಫಾರ್ವರ್ಡ್‌’ ಬಟನ್‌ ಚಿತ್ರ ಇದೆ! ಇದೇಕೆ ಹೀಗೆ ಎಂದು ಪ್ರಶ್ನಿಸಿದರೆ ತೇಜ್ ಅವರು, ‘ಜೀವನದಲ್ಲಿ ಮುಂದೆ ಸಾಗಬೇಕು ಎಂದಾದರೆ ನಾವು ಹಿಂದಕ್ಕೆ ಒಮ್ಮೆ ನೋಡಿಕೊಳ್ಳಬೇಕು. ಹಾಗಾಗಿ ರಿವೈಂಡ್ ಶೀರ್ಷಿಕೆಗೆ ಫಾರ್ವರ್ಡ್‌ ಬಟನ್‌ ಇದೆ’ ಎಂದು ಚೂಟಿ ಉತ್ತರ ನೀಡಿದರು.

ತೇಜ್ ಅವರು ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರ ಸಹೋದನ ಮಗ. ಅಷ್ಟೇ ಅಲ್ಲ, ತಮ್ಮ ಎಂಟನೆಯ ವಯಸ್ಸಿನಲ್ಲಿ ಶಂಕರ್ ನಾಗ್ ಅವರ ಸಿನಿಮಾದಲ್ಲಿ ಅಭಿನಯಿಸಿದ್ದರು. ‘ವಿಜ್ಞಾನ ಮತ್ತು ಕಲೆ ಒಟ್ಟೊಟ್ಟಿಗೇ ಸಾಗುತ್ತವೆ ಎಂಬ ಮಾತೊಂದು ಇದೆ. ಹಾಗಾಗಿ ನಾನು ವಿಜ್ಞಾನಿಯಾಗಿ ಕೆಲಸ ಮಾಡುತ್ತಲೇ, ಸಿನಿಮಾ ಕಲೆಯತ್ತ ಮುಖ ಮಾಡಿದೆ’ ಎಂದು ತೇಜ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿತ್ರವನ್ನು ಜರ್ಮನಿ ಸೇರಿದಂತೆ ಯುರೋಪಿನ ಕೆಲವೆಡೆ ಚಿತ್ರೀಕರಿಸಲಾಗಿದೆ. ಇದು 2020ರಲ್ಲಿ ತೆರೆಗೆ ಬರಲಿದೆ. ಎರಡು ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗುತ್ತಿರುವ ಕಾರಣ, ಕೆಲಸಗಳು ತುಸು ತಡವಾಗುತ್ತಿವೆ ಎಂದರು. ‘ಚಿತ್ರದ ನಾಯಕಿ ಚಂದನಾ. ಇವರು ನಾಯಕಿಯಾಗಿ ಮಾತ್ರವಲ್ಲದೆ, ನಿರ್ದೇಶನ ವಿಭಾಗದಲ್ಲಿ ಕೂಡ ಬಹಳ ನೆರವು ನೀಡುತ್ತಿದ್ದಾರೆ’ ಎಂದು ನಾಯಕಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ನಮ್ಮ ಜೀವನದಲ್ಲಿ ಈಗಾಗಲೇ ಆಗಿಹೋಗಿರುವ ಮಹತ್ವದ ಕಾಲಘಟ್ಟವನ್ನು ಇನ್ನೊಂದು ರೀತಿಯಲ್ಲಿ ನಿಭಾಯಿಸಲು ದೇವರು ನಮಗೆ ಹೊಸದೊಂದು ಅವಕಾಶ ಕೊಟ್ಟರೆ ಏನಾಗಬಹುದು? ಅದನ್ನು ನಾವು ಯಾವ ರೀತಿಯಲ್ಲಿ ನಿಭಾಯಿಸುತ್ತೇವೆ? ಇದು ಈ ಸಿನಿಮಾ ಪರಿಕಲ್ಪನೆಯ ಹಿಂದಿರುವ ಆಲೋಚನೆ. ಇದರಲ್ಲಿ ವಿಜ್ಞಾನ ಮಾತ್ರವೇ ಅಲ್ಲ, ಸಾಕಷ್ಟು ಮನರಂಜನೆ ಕೂಡ ಇದೆ. ನಾನು ಇದರಲ್ಲಿ ‍ಪತ್ರಕರ್ತನ ಪಾತ್ರ ನಿಭಾಯಿಸುತ್ತಿದ್ದೇನೆ’ ಎಂದು ಸಿನಿಮಾ ಕುರಿತು ವಿವರ ನೀಡಿದರು.

ಈಗಿನ ಕಾಲದ ಸಿನಿಮಾಗಳಲ್ಲಿ ‘ದೊಡ್ಡ’ ಸಿನಿಮಾಗಳು, ‘ಅತ್ಯುತ್ತಮ’ ಸಿನಿಮಾಗಳು ಎಂಬ ವರ್ಗ ಇದೆ. ‘ನಾನು ಅತ್ಯುತ್ತಮ ಸಿನಿಮಾ ಕೊಡಲು ಯತ್ನಿಸುವೆ’ ಎಂದೂ ಅವರು ಹೇಳಿದರು.

Post Comments (+)