4

ರಿಷಬ್ ಶೆಟ್ಟಿ ಈಗ ‘ನಾಥೂರಾಮ್’

Published:
Updated:

‘ನಾಥೂರಾಮ್‌’ ಎಂಬ ಹೆಸರು ಹೇಳಿದರೆ ಸಾಕು! ಕೇಳುವ ಕಿವಿ ಇನ್ನಷ್ಟು ಚುರುಕಾಗುತ್ತದೆ, ಕೇಳಿಸಿಕೊಂಡ ವ್ಯಕ್ತಿ ‘ಆ್ಞಂ, ಏನು’ ಎನ್ನುತ್ತಾನೆ. ಅಂದಹಾಗೆ, ಇಷ್ಟನ್ನು ಹೇಳಿದುದರ ಉದ್ದೇಶ ಇಷ್ಟೇ – ನಾಥೂರಾಮ್ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಹೊಸ ಚಿತ್ರವೊಂದರ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ.

ವಿನು ಬಳಂಜ ಅವರು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಫೇಸ್‌ಬುಕ್‌ ಗೋಡೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ. ‘ರಂಗಿತರಂಗ’ ಚಿತ್ರವನ್ನು ನಿರ್ಮಿಸಿದ್ದ ಎಚ್.ಕೆ. ಪ್ರಕಾಶ್ ಅವರೇ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ‘ನಾಥೂರಾಮ್‌ ಎಂಬುದು ಸಿನಿಮಾದ ನಾಯಕನ ಹೆಸರೂ ಹೌದು’ ಎಂದರು ‘ಚಂದನವನ’ದ ಜೊತೆ ಮಾತನಾಡಿದ ವಿನು. ಆದರೆ, ಕಥೆಯ ಗುಟ್ಟು ಬಿಟ್ಟುಕೊಡಲಿಲ್ಲ! ಅಷ್ಟಕ್ಕೂ, ಕಥೆಯ ಗುಟ್ಟು ಬಿಟ್ಟುಕೊಡುವುದು ನಿರ್ದೇಶಕನ ದೃಷ್ಟಿಯಲ್ಲಿ ಎಷ್ಟರಮಟ್ಟಿಗೆ ಸರಿ?!

ಚಿತ್ರದ ನಾಯಕ ಕನ್ನಡ ಉಪನ್ಯಾಸಕ ಆಗಿರುತ್ತಾನೆ. ಚಿತ್ರೀಕರಣ ಬೆಂಗಳೂರು ಅಥವಾ ಮೈಸೂರಿನಲ್ಲಿ ನಡೆಯಲಿದೆ. ಸೆಪ್ಟೆಂಬರ್‌ ಅಥವಾ ಅದಕ್ಕೂ ಮೊದಲೇ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾದ ಕೆಲವು ಪಾತ್ರಗಳನ್ನು ಯಾರು ನಿಭಾಯಿಸಬೇಕು ಎಂಬುದು ಅಂತಿಮಗೊಳ್ಳುತ್ತಿದೆ. ಆದರೆ, ನಾಯಕಿಯ ಪಾತ್ರಕ್ಕೆ ಯಾರು ಸೂಕ್ತ ಎಂಬುದು ಇನ್ನೂ ತೀರ್ಮಾನ ಆಗಿಲ್ಲ ಎಂದು ವಿನು ತಿಳಿಸಿದರು. ಇಷ್ಟೇ ಅಲ್ಲ, ಇನ್ನೊಂದೆರಡು ದಿನಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡುವುದಾಗಿಯೂ ಹೇಳಿದರು.

ರಿಷಬ್‌ ಕೂಡ ಚಿತ್ರದ ಬಗ್ಗೆ ಹೆಚ್ಚಿನದೇನನ್ನೂ ಹೇಳಲಿಲ್ಲ. ‘ನನ್ನ ಜನ್ಮದಿನಾಚರಣೆಯಂದು ಈ ಚಿತ್ರದ ಘೋಷಣೆ ಆಗಿದೆ. ಬೆಲ್‌ ಬಾಟಮ್‌ ಚಿತ್ರದ ಕೆಲಸಗಳು ಮುಗಿದ ನಂತರ ನಾಥೂರಾಮ್‌ ಚಿತ್ರದ ಕೆಲಸ ಶುರು ಮಾಡುತ್ತೇವೆ’ ಎಂದರು.

‘ಇದು ನಾಥೂರಾಮ್‌ ಗೋಡ್ಸೆಯ ಕಥೆಯೇ’ ಎಂದು ಕೇಳಿದಾಗ, ‘ಹಾಗೇನೂ ಅಲ್ಲ. ಈ ಚಿತ್ರದ ಕಥೆ ಸಾಗುವುದು ಸಮಕಾಲೀನ ಜಗತ್ತಿನಲ್ಲಿ. ಕಥೆಯ ಎಳೆ ಏನು ಎಂಬುದನ್ನು ಇಷ್ಟು ಬೇಗನೆ ಹೇಳಲು ಆಗದು’ ಎಂದು ನಕ್ಕರು ಶೆಟ್ರು. ‘ನಾವು ಕಥೆಯ ಬಗ್ಗೆ ಸದ್ಯಕ್ಕಂತೂ ಬಾಯಿ ಬಿಡುವುದಿಲ್ಲ’ ಎಂದೂ ಹೇಳಿದರು. ಅಂದಹಾಗೆ, ಶೆಟ್ಟರ ಈ ಚಿತ್ರದ ಚಿತ್ರೀಕರಣ ಕುಂದಾಪುರ ಅಥವಾ ಉಡುಪಿ ಕಡೆ ನಡೆಯುವುದಿಲ್ಲವಂತೆ!

‘ಈ ಚಿತ್ರದಲ್ಲಿ ರಾಜಕೀಯದ ಪ್ರತಿಬಿಂಬ ಇರುತ್ತದೆಯೇ’ ಎಂದು ಪ್ರಶ್ನಿಸಿದಾಗ ಒಗಟಿನ ರೂಪದಲ್ಲಿ ಉತ್ತರ ನೀಡಿದರು! ‘ಇದರಲ್ಲಿ ಹಲವು ವಿಚಾರಗಳು ಒಂದಕ್ಕೊಂದು ಬೆಸೆದುಕೊಂಡಿವೆ. ನೀವು ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವುದೆಲ್ಲವೂ ಸುಳ್ಳಲ್ಲ. ಬೇರೆ ಬೇರೆ ವಿಷಯಗಳೂ ಇರುತ್ತವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !