ಸಿನಿಮಾ: ರೋಮ
ಅವಧಿ: 135 ನಿಮಿಷ
ನಿರ್ದೇಶನ: ಅಲ್ಫನ್ಸೊ ಕುರನ್
ಕ್ಲಿಯೊ ಪಾತ್ರಧಾರಿ: ಯಲಿಟ್ಜ ಅಪಾರಿಸಿಯೊ

ಎದೆಯಲ್ಲಿ ಅಲೆಗಳ ಆರ್ಭಟ ಜೋರಾಗಿದೆ, ಎದುರಿನ ಸಮುದ್ರದಲ್ಲಿ ನಿಂತು ಆಡುವ ಮನಸಿಲ್ಲ; ಯಾವತ್ತಿಗೂ ನೀರಿಗಿಳಿದು ಈಜಿದ ಅನುಭವವೂ ಇಲ್ಲ. ಜಗತ್ತನ್ನು ಕಾಣುವ ಮುನ್ನವೇ ಕಣ್ಣು ಮುಚ್ಚಿದ ಕಂದಮ್ಮನ ನೆನಪು ಒಡಲಲ್ಲಿ ಗಟ್ಟಿಯಾಗಿದೆ...ಅಲೆಗಳ ಆರ್ಭಟದ ಎದುರು ಇಳಿಯಲೇಬೇಕಿದೆ ಒಡತಿಯ ಮಕ್ಕಳನ್ನು ಉಳಿಸಲು. ತನ್ನನ್ನೇ ಮರೆತು ಮಕ್ಕಳನ್ನು ಉಳಿಸಿ ದಡ ಸೇರಿಸುತ್ತಾಳೆ, ಏರಿದ ಎದೆ ಬಡಿತದೊಂದಿಗೆ ಮಡುಗಟ್ಟಿರುವ ದುಃಖದ ಕಟ್ಟೆಯೊಡೆದು ಕಣ್ಣೀರಾಗುತ್ತದೆ...'ನನಗೆ ಅವಳು ಹುಟ್ಟುವುದು ಬೇಡವಾಗಿತ್ತು...ಬೇಡವಾಗಿತ್ತು...' ಅಲೆಗಳ ಸಪ್ಪಳದೊಂದಿಗೆ ಅವಳ ದನಿಯೂ ಜತೆಯಾಗುತ್ತದೆ. ಒಡತಿಯ ಅಪ್ಪುಗೆಯೂ ಸೇರುತ್ತದೆ.

ರೋಮ ಸಿನಿಮಾದ ಕ್ಲೈಮ್ಯಾಕ್ಸ್ ಪೂರ್ವದಲ್ಲಿ ನಡೆಯುವ ದೃಶ್ಯವಿದು. ಮೆಕ್ಸಿಕೊ ನಗರದ ರೋಮದಲ್ಲಿನ ಮೇಲು ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಮನೆಯ ಎಲ್ಲ ಕೆಲಸಗಳನ್ನು ಮಾಡುವ ಶಿಸ್ತುಗಾತಿ ಕ್ಲಿಯೊ. ಕೆಲಸದವಳೇ ಆದರೂ ಮನೆಯ ಮೂವರು ಮಕ್ಕಳು, ಮನೆಯೊಡತೆ ಸೇರಿ ಎಲ್ಲರಿಗೂ ಮೆಚ್ಚು. ಮನೆಯಿಂದ ಹೊರಗೆ ಬಿಡದ ನಾಯಿ ಜಾಗ ಸಿಕ್ಕಲೆಲ್ಲ ಹೇಸಿಗೆ ಮಾಡಿರುತ್ತೆ, ನಿತ್ಯವೂ ಅದನ್ನೆಲ್ಲ ತೆಗೆದು ನೀರು ಹಾಕಿ ತೊಳೆಯುವ ಹೊತ್ತಿಗೆ ವಿಮಾನವೊಂದು ಹಾದುಹೋಗುವುದು ಮಹಡಿಯ ಗಾಜಿನ ಕಿಂಡಿಯ ಬೆಳಕಿನಿಂದ ಪ್ರತಿಬಿಂಬವಾಗಿ ನೆಲದ ಮೇಲೆ ಚಲಿಸುತ್ತಿರುತ್ತದೆ. ಇದು ದಿನವೂ ತಪ್ಪದ ಕಾಯಕ....ವಿಮಾನ ಸಾಗುವ ಸಮಯ, ಕ್ಲಿಯೊ ನೆಲ ತೊಳೆಯುವುದು ಒಂದೇ ಸಮಯದಲ್ಲಿ. ಈ ದೃಶ್ಯ ಆಕೆಗೆ ಕೆಲಸದ ಮೇಲಿರುವ ಪ್ರೀತಿ ಮತ್ತು ಶಿಸ್ತಿನ ಪ್ರತೀಕದಂತೆ ಕಾಣುತ್ತದೆ.

ಎಪ್ಪತ್ತರ ದಶಕದಲ್ಲಿನ ಮೆಕ್ಸಿಕೊ ನಗರ, ಅಲ್ಲಿನ ಕಾರುಗಳು, ಆಸ್ಪತ್ರೆ, ಶಾಲೆ, ಆಹಾರ, ನೀರು, ಕೆಲಸ, ಕಾರ್ಯಕ್ರಮ, ರಾಜಕೀಯ, ಹೆಣ್ಣಿನ ಸ್ಥಿತಿ, ಗಂಡಿನ ಧೋರಣೆ,...ಎಲ್ಲವನ್ನೂ ಬಹು ಸೂಕ್ಷ್ಮವಾಗಿ ನಿರ್ದೇಶಕರು ತೆರೆಗೆ ತಂದಿರುವುದನ್ನು ಅನುಭವಿಸಬಹುದು. ತನ್ನ ಬಾಲ್ಯದ ನೆನಪುಗಳನ್ನು ಹೊಸೆದು ಹಳ್ಳಿಯಿಂದ ಬಂದ ಮನೆಗೆಲಸದ ಯುವತಿಯರು, ನಗರದ ಮನೆಯೊಡೆತಿ ಹಾಗೂ ಕುಟುಂಬದಲ್ಲಿನ ತುಮುಲಗಳನ್ನು ಕಪ್ಪು ಬಿಳುಪಿನಲ್ಲಿ ಹೇಳಿದ್ದಾರೆ ನಿರ್ದೇಶಕ ಅಲ್ಫನ್ಸೊ ಕುರನ್.

ನಲವತ್ತೆಂಟು- ನಲವತ್ತೊಂಬತ್ತು ವರ್ಷ ಹಿಂದಿನ ಬದುಕನ್ನು ಸೊಗಸಾಗಿ ಮೂಡಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ರೋಮ ಸೆಳೆಯುವುದಿಲ್ಲ. ಕ್ಲಿಯೊ ಇಡೀ ಮನೆಯನ್ನು ಸುತ್ತಾಡಿ ಒಂದರಿಂದೊಂದು ಕೆಲಸಗಳನ್ನು ಪಟಪಟನೆ ಮಾಡಿ ಮುಗಿಸಿ ಪಾತ್ರೆಗಳನ್ನು ಸಿಂಕ್ ಒಳಗೆ ಸೇರಿಸುವ ವರೆಗೂ ಒಂದೇ ಶಾಟ್, ಪ್ಯಾನ್ ಆಗುತ್ತಲೇ ಪ್ರೇಕ್ಷಕರನ್ನೂ ಮನೆಯೊಳಗೇ ಸೇರಿಸಿಬಿಡುವ ಛಾಯಾಗ್ರಹಣದ ಅದ್ಭುತ ಕುಸರಿ ಸೆರೆಹಿಡಿಯದೆ ಇರದು. ಪಾತ್ರಗಳ ಭಾವದೊಂದಿಗೆ ಹಿನ್ನೆಲೆ ಸಂಗೀತದಲ್ಲಿ ತಲ್ಲೀನಗೊಳಿಸುವ ದೃಶ್ಯದಿಂದ ದಿಢೀರನೆ ವಾಸ್ತವಕ್ಕೆ ತರುವ ಎಡಿಟಿಂಗ್ ಕಾರ್ಯಕ್ಕೆ ಲೈವ್ ಸೌಂಡ್ ಸಹಕಾರಿಯಾಗಿದೆ. ಛಾಯಾಗ್ರಹಣ ಮತ್ತು ಸಂಕಲನ ಎರಡನ್ನೂ ನಿರ್ದೇಶಕರೇ ನಿರ್ವಹಿಸಿದ್ದಾರೆ.

ವೈದ್ಯನಾಗಿರುವ ಮನೆಯೊಡತಿ ಗಂಡ ಸಂಶೋಧನೆ ಹೆಸರಿನಲ್ಲಿ ಮನೆಗೆ ಬರುವುದೇ ಅಪರೂಪ. ತನ್ನ ಉದ್ದದ ಕಾರನ್ನು ಬಹು ನಾಜೂಕಾಗಿ, ಅತ್ಯಂತ ತಾಳ್ಮೆಯಿಂದ ಸಣ್ಣದೊಂದು ಗೆರೆ ಬೀಳದಂತೆ ಪಾರ್ಕ್ ಮಾಡುವನು. ಆದರೆ, ಮಕ್ಕಳಿರುವ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳು, ತೊಳೆದರೂ ಮತ್ತೆ ನಾಯಿಯಿಂದಾದ ಬಿದ್ದಿರುವ ಗಲೀಜು...ಇದನ್ನೆಲ್ಲ ಸಹಿಸದೆ ಹೆಂಡತಿ ಮೇಲೆ ಕೂಗಾಡಿ ಮಾರನೆಯ ದಿನವೇ ಮತ್ತೆಲ್ಲೊ ಹೊರಡುವನು. ಮನೆಯ ಜಂಜಡಗಳಿಂದ ದೂರ ಉಳಿಯುವ ಆತನಿಗೆ ಬೇರೆ ಯುವತಿಯರ ಸಹವಾಸವೂ ಉಂಟು. ಇದು ಹೀಗೆ ಮುಂದುವರಿದು ಮನೆಗೆ ಹಣ ಕಳಿಸುವುದನ್ನೇ ಕೊನೆ ಮಾಡುತ್ತಾನೆ ವೈದ್ಯ.

ಯಾರೊಂದಿಗೂ ಒಳಗಿನ ಸಂಕಟ ಹೇಳಿಕೊಳ್ಳಲಾಗದೆ ಒಡತಿ ಕ್ಲಿಯೊಗೆ, 'ಹೆಣ್ಣಿಗೆ ಹೆಣ್ಣೇ....ಯಾವಾಗಲೂ ನಾವು ಒಂಟಿ...' ಎಂದೆಲ್ಲ ಮತ್ತಿನಲ್ಲಿ ಹೇಳಿ ಒಳನಡೆಯುತ್ತಾಳೆ. ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದ ಪ್ರಿಯಕರನಿಂದ ಬಸಿರಾಗಿರುವ ಕ್ಲಿಯೊ; ಹುಡುಗನಿಗೆ ವಿಷಯ ತಲುಪಿಸುತ್ತಿದ್ದಂತೆ ನಾಪತ್ತೆಯಾಗಿರುತ್ತಾನೆ. ಹಳ್ಳಿಯ ನೆನಪು, ಅಲ್ಲಿನ ಘಮಲು ಹಾಗೂ ತಾಯಿಯನ್ನು ಕಾಣುವ ಬಯಕೆಯಾದರೂ....ಹೊಟ್ಟೆ ಮುಂದೆ ಬಂದ ಸ್ಥಿತಿಯಲ್ಲಿ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಾದರೂ ಹೇಗೆ? ನೋವು ನುಂಗಿಕೊಂಡೆ ಕೆಲಸ ಮುಂದುವರಿಸುತ್ತಾಳೆ.

ಮೆಕ್ಸಿಕೊದ ಆಗಿನ ರಾಜಕೀಯ ಅರಾಜಕತೆ ಪ್ರತಿ ವ್ಯಕ್ತಿಯ ಬದುಕಿನ ಮೇಲೆ ಆಗುತ್ತಿರುತ್ತದೆ. ಇಲ್ಲಿನ ಎಲ್ಲ ಪಾತ್ರಗಳು ಎದುರಿಸುವ ನೋವು ಕಷ್ಟಗಳಿಗೆ ವಯೋಸಹಜ ತಪ್ಪುಗಳ ಜತೆಗೆ ಅಧಿಕಾರದ ಉಳಿವಿಗೆ ರಾಜಕೀಯ ಪಕ್ಷಗಳು ನಡೆಸುವ ಕುತಂತ್ರಗಳೂ ಪ್ರಮುಖ ಕಾರಣವಾಗಿರುತ್ತವೆ. ಯುವಕರ ಗುಂಪಿಗೆ ಗುಟ್ಟಾಗಿ ತರಬೇತಿ ನೀಡುವ ಸರ್ಕಾರ, ಅವರನ್ನು ಬಳಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ವಿದ್ಯಾರ್ಥಿ ಸಮೂಹದ ಮೇಲೆ ಛೂ ಬಿಡಲಾಗುತ್ತದೆ. ಅದರಿಂದ ಮಾರಣಹೋಮವೇ ನಡೆದು ಹೋಗುತ್ತದೆ. ಇದರಲ್ಲಿ ಕ್ಲಿಯೊಳ ಪ್ರಿಯಕರನೂ ಪಿಸ್ತೂಲ್ ಹಿಡಿದು ಭಾಗಿಯಾಗಿರುತ್ತಾನೆ. ಆಘಾತದಿಂದ ಗರ್ಭಿಣಿಯ ಹೊಟ್ಟೆಯೊಳಗಿನ ದ್ರವವೆಲ್ಲ ಸುರಿದು ಹೋಗುತ್ತದೆ, ಹಲವು ಅಡೆತಡೆಗಳ ನಂತರ ಆಸ್ಪತ್ರೆ ತಲುಪುವ ಕ್ಲಿಯೊಗೆ ಮಗುವಿನ ಉಸಿರು, ಬೆಚ್ಚಗಿನ ಅಪ್ಪುಗೆ ಏನೊಂದು ಸಿಗುವುದಿಲ್ಲ. ಮದುವೆ, ಗಂಡ, ಮನೆ ಏನೊಂದು ಇಲ್ಲದೆ ಮಗು ಹೆರುವುದೂ ಕ್ಲಿಯೊಗೆ ಬೇಕಿರುವುದಿಲ್ಲ... ಒಬ್ಬ ತಾಯಿಯಾಗಿ ಕ್ಲಿಯೊಗೆ ತಾಯಿತನದ ಅನುಭವವೂ ದಕ್ಕುವುದಿಲ್ಲ.

ಬದುಕಿಗಾಗಿ ದುಡಿಯುವ ನಿರ್ಧಾರಕ್ಕೆ ಬರುವ ಒಡತಿ, ಕ್ಲಿಯೊಳನ್ನು ಮನೆಯ ಮಗಳಂತೆ ಆಲಂಗಿಸುತ್ತಾಳೆ. ಕ್ಲಿಯೊ ಮತ್ತೆ ಕೆಲಸಕ್ಕೆ ಮರಳುತ್ತಾಳೆ, ಅದೇ ಸಮಯಕ್ಕೆ ವಿಮಾನವೂ ಸಾಗುತ್ತಿದೆ. ಇಲ್ಲಿ ಮೆಕ್ಸಿಕೊ ಇತಿಹಾಸದ ನೈಜ ಘಟನೆಗಳಿವೆ, ಆಗಿನ ನೈಜ ಸ್ಥಿತಿಯಿದೆ, ಅಂದಿನ ಪಾತ್ರಗಳು ಇವೆ. ಅಂದಿನ ಪ್ರೀತಿ, ಭಾವನೆಗಳು ಇಂದಿಗೂ ಹಾಗೇ ಇವೆ.

ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ರೋಮ ಈ ಸಾಲಿನ ಆಸ್ಕರ್ ವಿದೇಶಿ ಸಿನಿಮಾ ವಿಭಾಗ, ಅತ್ಯುತ್ತಮ ಛಾಯಾಗ್ರಹಣ ಹಾಗೂ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಒಟ್ಟು ಹತ್ತು ವಿಭಾಗಗಳಲ್ಲಿ ಆಸ್ಕರ್ಗೆ ನಾಮನಿರ್ದೇಶನ ವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.