ಆನ್‌ಲೈನ್ ಜೂಜಾಟದ ವಿರುದ್ಧ ಧ್ವನಿ ಎತ್ತಿರುವ ‘ರಮ್ಮಿ ಆಟ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಟ್ರೇಲರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
‘ಜೂಜಾಟದಿಂದ ಮಹಾಭಾರತದಲ್ಲಿ ಯುದ್ಧವೇ ನಡೆಯಿತು. ಅನೇಕ ರಾಜಮಹಾರಾಜರು ಜೂಜಿನಿಂದ ಎಲ್ಲವನ್ನೂ ಕಳೆದುಕೊಂಡ ಸಾಕಷ್ಟು ನಿದರ್ಶನಗಳಿವೆ. ಇಂತಹ ರಮ್ಮಿ ಆಟವನ್ನು ಚಿತ್ರರಂಗ, ನಟನಟಿಯರು ಉತ್ತೇಜಿಸಬಾರದು. ಈ ಆಟದಿಂದಾಗುವ ಪರಿಣಾಮವನ್ನು ಚಿತ್ರದ ಮೂಲಕ ತಿಳಿಸಲು ಹೊಸ ತಂಡವೊಂದು ಹೊರಟಿದೆ. ಒಳಿತಾಗಲಿ’ ಎಂದರು ಉಮೇಶ್ ಬಣಕಾರ್.
ಉಮರ್ ಷರೀಫ್ ಚಿತ್ರದ ನಿರ್ದೇಶಕರು. ರಮೇಶ್ ಯಾದವ್ ಹಾಗೂ ಹನುಮೇಶ್ ಪಾಟೀಲ್ ಬಂಡವಾಳ ಹೂಡಿದ್ದಾರೆ. ‘ಇವತ್ತು ಆನ್‌ಲೈನ್ ಜೂಜು ಸಾಕಷ್ಟು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ. ಇಂತಹ ಆಟದ ಅಡ್ಡಪರಿಣಾಮಗಳನ್ನು ಹಾಸ್ಯದ ಮೂಲಕ ಹೇಳಿದ್ದೇವೆ. ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು.
ಈ ಚಿತ್ರಕ್ಕೆ ಕಾರ್ತೀಕ್ ಎಸ್ ಛಾಯಾಚಿತ್ರಗ್ರಹಣ, ಪ್ರಭು ಎಸ್.ಆರ್ ಸಂಗೀತವಿದೆ. ರಾಘವ ಸೂರ್ಯ ಹಾಗೂ ಸಯ್ಯದ್ ಇರ್ಫಾನ್ ಚಿತ್ರದ ನಾಯಕರು. ವಿನ್ಯಾ ಶೆಟ್ಟಿ, ಸ್ನೇಹ ರಾವ್, ಅಭಿ ಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.