ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೂಪಾಯಿ’ಗೆ ನಿಜ ಮೌಲ್ಯ: ನಟ, ನಿರ್ದೇಶಕ ವಿಜಯ್‌ ಜಗದಾಳ್‌ ಸಂದರ್ಶನ

Last Updated 9 ಫೆಬ್ರುವರಿ 2023, 23:30 IST
ಅಕ್ಷರ ಗಾತ್ರ

ನಟನೆಯ ಆಸೆ ಹೊತ್ತು, ಆರ್ಥಿಕ ಭದ್ರತೆಯ ಕಾರಣಕ್ಕೆ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ದುಡಿದು ಈಗ ನಿರ್ದೇಶನಕ್ಕೆ ಇಳಿದಿದ್ದಾರೆ ವಿಜಯ್‌ ಜಗದಾಳ್‌. ಆ್ಯಕ್ಷನ್‌ ಕಟ್‌ ಹೇಳುವುದರ ಜೊತೆಗೆ ನಟನೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅವರ ‘ರೂಪಾಯಿ’ ಸಿನಿಮಾ ತೆರೆಕಂಡಿದ್ದು, ಚಿತ್ರದ ತಿರುಳು, ಮಾರುಕಟ್ಟೆಯ ಸವಾಲುಗಳನ್ನು ವಿಜಯ್‌ ತೆರೆದಿಟ್ಟದ್ದು ಹೀಗೆ...

ವಿಜಯ್‌ ಜಗದಾಳ್‌ ಯಾರು?

ನಾನು ಮೂಲತಃ ರಂಗಕರ್ಮಿ. ನಟನಾಗುವ ಆಸೆಯಿಂದಲೇ ಸಿನಿಮಾ ಕ್ಷೇತ್ರಕ್ಕೆ ಬಂದೆ. ಆದರೆ, ಯಾವುದೇ ನಟ, ನಿರ್ದೇಶಕನ ಯಶಸ್ಸಿನ ಹಿಂದೆ ಪಳಗಿದ ತಂತ್ರಜ್ಞ ಇರಲೇಬೇಕು. ಜೊತೆಗೆ ಆರ್ಥಿಕ ಸ್ಥಿರತೆಯೂ ಬೇಕಿತ್ತು. ಆ ಕಾರಣದಿಂದ ನಾನು ಸಿನಿಮಾ ನಿರ್ಮಾಣದ ತಾಂತ್ರಿಕ ವಿಭಾಗಕ್ಕೆ ಬಂದೆ. ಕೆಲಕಾಲ ನಟನೆಯನ್ನೂ ಕಲಿತೆ. ಅದರಿಂದೇನೂ ದೊಡ್ಡ ಪ್ರಯೋಜನ ಆಗಲಿಲ್ಲ. ಹೀಗೆ ಕೆಲಸ ಮಾಡಿದ ಸಿನಿಮಾಗಳ ಸಂಖ್ಯೆ ಎಂಟರಷ್ಟಿದೆ.

ನಿರ್ದೇಶಕರಾಗಿ ಹೇಗೆ ಗುರುತಿಸಿಕೊಂಡಿರಿ?

ನಾನು ಸಿನಿಮಾ ಮಾಡುತ್ತೇನೆ ಎಂದು ನಿರ್ಮಾಪಕರಿಗೆ ಕಥೆ ಹೇಳಿ ನಂಬಿಸಲು ಸಿದ್ಧನಿರಲಿಲ್ಲ. ಬದಲಾಗಿ ‘ಅಂಬಾನಿ ದಿ ಇನ್ವೆಸ್ಟರ್‌’ ಎನ್ನುವ ಕಿರುಚಿತ್ರ ಮಾಡಿದೆ. ಅದು ಸಾಕಷ್ಟು ಹೆಸರು ತಂದುಕೊಟ್ಟಿತು. ಈಗಲೂ ಆ ಕಿರುಚಿತ್ರವನ್ನು ನೋಡಿದವರು ನನ್ನ ಬಗ್ಗೆ ಗೌರವದಿಂದ ಮಾತನಾಡುತ್ತಾರೆ. ‘ರೂಪಾಯಿ’ ಕಿರುಚಿತ್ರ ಸಿದ್ಧವಾದಾಗ ನಾನೇ ವೆಚ್ಚ ಮಾಡಿ ಒಂದು ಪ್ರಮೋಷನಲ್‌ ವಿಡಿಯೊ ರೂಪಿಸಿದೆ. ಇವೆರಡನ್ನೂ ನೋಡಿದ ನಿರ್ಮಾಪಕರು ಮನಸ್ಸು ಮಾಡಿದರು. 2019ರ ಕೊನೆಯಲ್ಲಿ ಸೆಟ್ಟೇರಿದ ಚಿತ್ರವಿದು. ಈಗ ಬಿಡುಗಡೆಯಾಗುತ್ತಿದೆ.

ಇದುವರೆಗಿನ ಕೆಲಸಗಳಲ್ಲಿ ನನ್ನ ವಿಶೇಷ ಏನೆಂದರೆ ಒಂದು ಸಿನಿಮಾದ ಕೆಲಸ ಒಪ್ಪಿಕೊಂಡ ನಂತರ ಅದು ಮುಗಿಯುವವರೆಗೆ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಒಂದು ಚಿತ್ರದ ಪರಿಪೂರ್ಣತೆಗೆ ಶ್ರಮಿಸುತ್ತೇನೆ.

‘ರೂಪಾಯಿ’ಯ ಮೌಲ್ಯ ಏನು?

ಮೌಲ್ಯ ಎರಡು ರೂಪಾಯಿಗೂ ಇದೆ. ಕೋಟಿ ರೂಪಾಯಿಗೂ ಅದರದ್ದೇ ಮೌಲ್ಯ ಇದೆ. ಅದರ ಜೊತೆಗೆ ಬದುಕಿನ ಮೌಲ್ಯವನ್ನು ತುಂಬಾ ತಮಾಷೆಯಾಗಿ ಹೇಳುತ್ತಾ ಹೋಗಿದ್ದೇವೆ. ಸಿನಿಮಾ ಎಲ್ಲಿಯೂ ಬೋರ್‌ ಹೊಡೆಸುವುದಿಲ್ಲ. ಎಲ್ಲವೂ ಹೊಸ ಮುಖಗಳು ಇವೆ. ನನ್ನ ಜೊತೆ ರಾಮಚಂದ್ರನ್‌, ಮೈತ್ರೇಯಿ ಜಗದೀಶ್‌, ಕೃಷಿ ತಾಪಂಡ ಇದ್ದಾರೆ. ಒಬ್ಬ ನಿರ್ದೇಶಕನಾಗಿ ಇಲ್ಲಿ ಎಲ್ಲ ಐದು ಪಾತ್ರಗಳೂ ಸಮಾನವಾಗಿ ತೂಕ ಹೊಂದಿರುವಂತೆ ರೂಪಿಸಿದ್ದೇನೆ. ಹಾಗಾಗಿ ಅವನೇ ನಾಯಕ, ಇದೇ ಪ್ರಧಾನ ಪಾತ್ರ, ತಾರಾ ವರ್ಚಸ್ಸು ಇತ್ಯಾದಿ ಸಿದ್ಧ ಮಾದರಿಗಳಿಂದ ದೂರ ಉಳಿದಿದ್ದೇವೆ. ಇಡೀ ಚಿತ್ರ ಹೊರಾಂಗಣದಲ್ಲಿಯೇ ಚಿತ್ರೀಕರಣಗೊಂಡಿದೆ. ಪ್ರೇಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಈ ಪ್ರಯತ್ನ ಸಹಕಾರಿಯಾಗಿದೆ.

ಎರಡು ದಿನಗಳ ಅವಧಿಯಲ್ಲಿ ನಡೆಯುವ ಕಥೆಯಿದು. ಬಹುತೇಕ ಅವಧಿಯಲ್ಲಿ ಪಾತ್ರಗಳು ಒಂದೇ ಉಡುಗೆಯಲ್ಲಿರುವುದನ್ನು ಕಾಣಬಹುದು. ಹೀಗಾಗಿ ಕಥೆಯ ಹರಿವಿನಲ್ಲಿ ಅಡೆತಡೆಗಳಿರುವುದಿಲ್ಲ. ಹೀಗೆ ಹೊಸಬರ ಸಿನಿಮಾದಲ್ಲಿ ಒಂದಿಷ್ಟು ಹೊಸತನ ಕೊಡಲು ಪ್ರಯತ್ನಿಸಿದ್ದೇವೆ.

‘ರೂಪಾಯಿ’ ನೋಡಲು ಮೂರು ಕಾರಣಗಳು?

ಎಂಥದ್ದೇ ಗಂಭೀರ ವಿಷಯವೊಂದನ್ನು ನಗಿಸುತ್ತಲೇ ಹೇಳಿದ್ದೇವೆ. 2.20 ಗಂಟೆ ನಿಮ್ಮ ಮನಸ್ಸನ್ನು ಸಂಪೂರ್ಣ ಪ್ರಫುಲ್ಲಗೊಳಿಸುತ್ತದೆ. ಪ್ರತಿ ಚೌಕಟ್ಟಿನಲ್ಲೂ ಹೊಸ ವಿಷಯಗಳನ್ನು ಹೇಳುತ್ತಲೇ ಹೋಗಿದ್ದೇವೆ. ನಾನಂತೂ ಯಾವುದೇ ಸಂಕೋಚವಿಲ್ಲದೇ ಅಭಿನಯಿಸಿದ್ದೇನೆ.

ಸಿನಿಮಾಗೆ ಎದುರಾದ ಸವಾಲುಗಳು?

‘ರೂಪಾಯಿ’ಗೆ ರೂಪಾಯಿಗಳನ್ನು ಹೊಂದಿಸುವುದೇ ಬಹಳ ಕಷ್ಟವಾಯಿತು. ಟ್ರೈಲರ್‌ ನೋಡಿ ಇಷ್ಟಪಟ್ಟ ವಿತರಕರು ಸಿನಿಮಾ ವಿತರಣೆಗೆ ಮಾತ್ರ ಮುಂದಾಗಲೇ ಇಲ್ಲ. ಅವರವರ ಲೆಕ್ಕಾಚಾರ ಬೇರೆಯೇ ಇದೆ. ನಾವು ಹೊಸಬರಲ್ಲವೇ? ಇದೆಲ್ಲಾ ಸಹಜ. ಈಗ ನಾವೇ ಬಂಡವಾಳ ಹಾಕಿ ರಾಜ್ಯದಾದ್ಯಂತ ಬಿಡುಗಡೆಗೆ ಹೊರಟಿದ್ದೇವೆ. ಪ್ರೇಕ್ಷಕ ಕೈ ಹಿಡಿಯುತ್ತಾನೆ ಎಂಬ ನಂಬಿಕೆ ನಮಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT