ಭಾನುವಾರ, ಸೆಪ್ಟೆಂಬರ್ 19, 2021
27 °C

ಅಪಘಾತದಲ್ಲಿ ಗಾಯಗೊಂಡಿದ್ದ ನಟ ಸಾಯಿ ಧರ್ಮ್ ತೇಜ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಹೈದರಾಬಾದ್ ಜುಬಿಲಿ ಹಿಲ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲುಗು ನಟ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ಸಾಯಿ ಧರ್ಮ್ ತೇಜ್ ಅವರಿಗೆ ಯಶಸ್ವಿ ಪಕ್ಕೆಲಬು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಆಸ್ಪತ್ರೆ ಭಾನುವಾರ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಿದೆ.

ಸಾಯಿ ಧರ್ಮ ತೇಜ್‌ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇವತ್ತು ಕೂಡ ಅನೇಕ ಟಾಲಿವುಡ್ ನಟರ ದಂಡು ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದೆ. ಚಿರಂಜೀವಿ ಹಾಗೂ ಅವರ ಪತ್ನಿ ಸುರೇಖಾ ಹಾಗೂ ರಾಮ್‌ಚರಣ್ ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿದ್ದರು.

 

ಅಪಘಾತಕ್ಕೆ ಕಾರಣ ಏನು? 

‘ಶುಕ್ರವಾರ ರಾತ್ರಿ 8 ಗಂಟೆಗೆ ಮಾಧಾಪುರ್ ಕೇಬಲ್ ಸೇತುವೆ ಮೇಲೆ ತೇಜ್ ಚಲಾಯಿಸುತ್ತಿದ್ದ ಕ್ರೀಡಾ ಬೈಕ್ ಉರುಳಿ ಬಿದ್ದು, ಅವರಿಗೆ ಕೈಕಾಲು, ಪಕ್ಕೆಲುಬು ಸೇರಿದಂತೆ ದೇಹದ ನಾನಾ ಕಡೆ ಗಂಭೀರ ಗಾಯಗಳಾಗಿದ್ದವು. ಅವರು ಮಾಧಾಪುರ್ ಕೇಬಲ್ ಸೇತುವೆ ಮೇಲೆ ಬೈಕ್‌ನ್ನು ಗಂಟೆಗೆ 80 ಕಿಮೀ ವೇಗದಲ್ಲಿ ಚಲಾಯಿಸುತ್ತಿದ್ದದ್ದೇ ಅಪಘಾತವಾಗಲು ಕಾರಣ. ಈ ಸೇತುವೆ ಮೇಲೆ ಅಧಿಕ ವೇಗ ನಿಷೇಧಿಸಲಾಗಿದೆ. ಗಂಟೆಗೆ 40 ಕಿಮೀ ವೇಗದಲ್ಲಿ ವಾಹನ ಚಲಾಯಿಸಲು ಮಾತ್ರ ಅವಕಾಶ ಇದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

‘ಇದೊಂದು ದುರದೃಷ್ಟಕರ ಘಟನೆ, ನಿಗದಿತ ವೇಗಕ್ಕಿಂತ ತೇಜ್ ಅವರು ಅಧಿಕ ವೇಗದಲ್ಲಿ ಬೈಕ್ ಚಲಾಯಿಸಿದ್ದರು. ಅಲ್ಲದೇ ಹೆಲ್ಮೆಟ್‌ ಕೂಡ ಸರಿಯಾಗಿ ಹಾಕಿರಲಿಲ್ಲ‘ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಲಕ್ಷ್ಯತನದಿಂದ ವಾಹನ ಸವಾರಿ ಮಾಡಿದ್ದಕ್ಕೆ ಸಾಯಿ ಧರ್ಮ ತೇಜ್ ಅವರ ಮೇಲೆ ಐಪಿಸಿ ಕಲಂ 336 ಮತ್ತು 279 ಅಡಿ ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಪಿಲ್ಲಾ ನ್ನುವು ಲೇನು ಜೀವಿತಂ' ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿದ್ದ ತೇಜ್, ಇದುವರೆಗೆ 13 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಅವರು ‘ರಿಪಬ್ಲಿಕ್‘ ಎಂಬ ಸಿನಿಮಾಕ್ಕೆ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ: ಸಿನಿಪ್ರಿಯರಿಗೆ ನಿರಾಸೆ: ರಾಜಮೌಳಿಯ ‘ಆರ್‌ಆರ್‌ಆರ್‌‘ ಬಿಡುಗಡೆ ಮುಂದಕ್ಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು