ಬುಧವಾರ, ಆಗಸ್ಟ್ 10, 2022
25 °C

ವೈಭವದ ಪಟೌಡಿ ಅರಮನೆ ಚಿತ್ರಗಳು ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ಜನಪ್ರಿಯ ಜೋಡಿ ಸೈಫ್‌ ಆಲಿಖಾನ್‌– ಕರೀನಾ ಕಪೂರ್ ಅವರ ₹800 ಕೋಟಿ ಮೌಲ್ಯದ ಪಟೌಡಿ ಅರಮನೆ ವೈಭವ, ಐಷಾರಾಮಿ, ಶ್ರೀಮಂತಿಕೆಯಿಂದ ಬೆರಗುಗೊಳಿಸುತ್ತದೆ.

ಇಬ್ರಾಹಿಂ ಕೋಟೆ ಎಂದು ಪ್ರಸಿದ್ಧವಾಗಿರುವ ಈ ಎಸ್ಟೇಟ್‌, ಹರಿಯಾಣದ ಗುರುಗ್ರಾಮ ಜಿಲ್ಲೆಯಲ್ಲಿದೆ. ಈ ಅರಮನೆಯು ಶ್ರೀಮಂತ ಹಾಗೂ ಭವ್ಯವಾದ ಒಳಾಂಗಣ ವಿನ್ಯಾಸದಿಂದ ಕಣ್ಸೆಳೆಯುತ್ತಿದೆ. ದೊಡ್ಡ ದೊಡ್ಡ ಹಾಲ್‌ಗಳು, ಗೋಪುರಗಳು ಅರಮನೆಯ ಸೌಂದರ್ಯವನ್ನು ಹೆಚ್ಚಿಸಿವೆ. ಗೋಡೆಗಳಲ್ಲಿ ಪೇಟಿಂಗ್‌ ಹಾಗೂ ಅಪರೂಪದ ಕಲಾಕೃತಿಗಳು ಇವೆ. ಅರಮನೆಯ ಸುತ್ತಲೂ ಹಸಿರು ಉದ್ಯಾನ, ಈಜುಕೊಳ ಹೊಂದಿರುವ ಪಟೌಡಿ ಅರಮನೆಯ ಫೋಟೊಗಳು ಈಗ ಅಂತರ್ಜಾಲದಲ್ಲಿ ವೈರಲ್‌ ಆಗಿವೆ. 

ಈ ಅರಮನೆ 150 ಎಕರೆ ಪ್ರದೇಶದಲ್ಲಿದ್ದು, 150 ಕೋಣೆಗಳಿವೆ. ಇದರಲ್ಲಿ ಏಳು ಡ್ರೆಸ್ಸಿಂಗ್‌ ಕೋಣೆ, ಏಳು ಬೆಡ್‌ರೂಮ್‌, ಏಳು ಬಿಲಿಯರ್ಡ್ಸ್‌ ಕೋಣೆ, ಡ್ರಾಯಿಂಗ್‌, ಊಟದ ಕೋಣೆಗಳನ್ನು ಹೊಂದಿದೆ. ಈ ಆಸ್ತಿಯ ಮೌಲ್ಯ ₹800 ಕೋಟಿಗೂ ಅಧಿಕ ಎನ್ನಲಾಗಿದೆ.  ಈ ಅರಮನೆಯಲ್ಲಿ ಹಲವು ಚಿತ್ರಗಳ ಚಿತ್ರೀಕರಣವೂ ನಡೆದಿದೆ. ಪ್ರತಿವರ್ಷವೂ ಸೈಫ್‌ ಹಾಗೂ ಕರೀನಾ ತಮ್ಮ ಮಗನೊಂದಿಗೆ ಈ ಅರಮನೆಗೆ ಭೇಟಿ ಕೊಡುತ್ತಾರೆ. 

ಅಂದ ಹಾಗೆ, ಸೈಫ್‌ ಬಾಲಿವುಡ್‌ಗೆ ಪ್ರವೇಶಿಸುವ ಮೊದಲು, ಹಣಕಾಸು ಬಿಕ್ಕಟ್ಟಿನಿಂದಾಗಿ ಪಟೌಡಿ ಅರಮನೆಯನ್ನು ಪ್ರತಿಷ್ಠಿತ ಹೋಟೆಲ್‌ವೊಂದಕ್ಕೆ ಬಾಡಿಗೆಗೆ ನೀಡಿದ್ದರು. ಆದರೆ ಸೈಫ್‌ ಆಲಿಖಾನ್‌ ತಾವು ಸಿನಿಮಾದಲ್ಲಿ ದುಡಿದ ಹಣದಿಂದ ಅದನ್ನು ವಾಪಸ್‌ ಬಿಡಿಸಿಕೊಂಡರು. ಸೈಫ್‌ ತಂದೆ, ಕ್ರಿಕೆಟರ್‌ ಮನ್ಸೂರ್‌ ಆಲಿ ಖಾನ್‌ ಪಟೌಡಿ ತೀರಿಕೊಂಡ ನಂತರ ಸೈಫ್‌ ಈ ಅರಮನೆಯ ವಿನ್ಯಾಸವನ್ನು ನವೀಕರಣ ಮಾಡಿಸಿದರು.

‘ಇದು ನನಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿ. ಈ ಅರಮನೆಯಲ್ಲಿ ನಾವೆಲ್ಲ ಒಂದಾಗಿ ಈ ಹಿಂದಿನಂತೆ ಇರಲು ಸಾಧ್ಯವಿಲ್ಲ. ಆದರೆ ಇಲ್ಲಿ ನಮ್ಮ ವಂಶದ ಇತಿಹಾಸ, ಸಂಸ್ಕೃತಿ, ಸುಂದರ ಅಪರೂಪದ ಕಲಾಕೃತಿಯೂ ಇದೆ. ಹಾಗಾಗಿ ನಾನು ಇದನ್ನು ನಾನು ದುಡಿದ ಎಲ್ಲಾ ಹಣವನ್ನು ಒಟ್ಟುಗೂಡಿಸಿ ವಾಪಸ್‌ ಪಡೆದುಕೊಂಡೆ’ ಎಂದು ಸೈಫ್‌ ಅರಮನೆ ಮೇಲಿನ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು