ಭಾನುವಾರ, ನವೆಂಬರ್ 29, 2020
22 °C

ಸಂಚಾರಿಯ ‘ಅವಸ್ಥಾಂತರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಟನೆಯ ಹೊಸ ಚಿತ್ರ ‘ಅವಸ್ಥಾಂತರ’ ಸೆಟ್ಟೇರುತ್ತಿದೆ. ಜನವರಿ ಮೊದಲ ವಾರದಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ.  

‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಗರಡಿಯಲ್ಲಿ ಪಳಗಿರುವ ಜಿ.ದೀಪಕ್‌ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಇವರೇ ಹೊಸೆದಿದ್ದಾರೆ. ಬೆಳ್ಳಿತೆರೆಗೆ ನಿರ್ದೇಶಕನಾಗಿ ಪದಾರ್ಪಣೆ ಮಾಡುವ ಜತೆಗೆ ಈ ಚಿತ್ರದ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ.

ಹಣಕಾಸು ಸಂಸ್ಥೆಯೊಂದರಲ್ಲಿ ರಿಲೇಶನ್‌ಷಿಪ್ ಮ್ಯಾನೇಜರ್ ಆಗಿದ್ದ ದೀಪಕ್, ಮಾಲಿವುಡ್ ಸ್ಟಾರ್ ನಟರಾದ ಮುಮ್ಮಟಿ ಮತ್ತು ಮೋಹನ್‌ಲಾಲ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವಿ. ಅಲ್ಲದೆ, ಸಾಕ್ಷ್ಯಚಿತ್ರ, ಜಾಹೀರಾತುಗಳನ್ನು ನಿರ್ದೇಶಿಸುವ ಜತೆಗೆ ಕಾರ್ಪೋರೇಟ್ ಫಿಲಂ ಮೇಕರ್‌ ಕೂಡ ಆಗಿದ್ದರು. ಈ ಅನುಭವ ಬೆನ್ನಿಗಿಟ್ಟುಕೊಂಡು ಅವರು ‘ಅವಸ್ಥಾಂತರ’ ಕೈಗೆತ್ತಿಕೊಂಡಿದ್ದಾರೆ.

ಹದಿಹರೆಯದ ಯುವಕನೊಬ್ಬನಿಗೆ ಆತನ ಅರಿವಿಗೆ ಬಾರದೆ ಹುಟ್ಟುವ ಬಯಕೆಗಳು, ಕಾಮನೆಗಳು ಹೇಗೆ ಆತನನ್ನು ಅತಂತ್ರ ಸ್ಥಿತಿಗೆ ದೂಡುತ್ತವೆ, ಹಾಗೆಯೇ ಅದರಿಂದ ಏನೆಲ್ಲಾ ಕಷ್ಟಗಳು, ಅವಸ್ಥೆ, ಅನಾಹುತಗಳು ನಡೆಯುತ್ತವೆ ಎಂಬುದನ್ನು ತಿಳಿ ಹಾಸ್ಯದ ಮೂಲಕ ತೆರೆದಿಡುವ ಪ್ರಯತ್ನಕ್ಕೆ ದೀಪಕ್‌ ಕೈಹಾಕಿದ್ದಾರಂತೆ. ಜೊತೆಗೆ ಅರ್ಥಪೂರ್ಣವಾದ ಸಂದೇಶವೂ ಈ ಚಿತ್ರದಲ್ಲಿ ಇರಲಿದೆಯಂತೆ.

ಕನ್ನಡದ ಸೆನ್ಸಿಬಲ್‌ ನಟರಲ್ಲಿ ಒಬ್ಬರಾಗಿರುವ ಸಂಚಾರಿ ವಿಜಯ್‌ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ‘ನಾನು ಅವನಲ್ಲ...ಅವಳು’ ಚಿತ್ರದಲ್ಲಿ ವಿಜಯ್‌ ಅಭಿನಯಕ್ಕೆ ಸಿನಿಪ್ರಿಯರು ಅಕ್ಷರಶಃ ಮನಸೋತಿದ್ದಾರೆ. ಪ್ರಯೋಗಾತ್ಮಕ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡು ತಮ್ಮ ಪ್ರತಿಭೆಯನ್ನು ವಿಜಯ್‌ ಸಿನಿರಸಿಕರಿಗೆ ಪರಿಚಯಿಸಿದ ಪ್ರತಿಭಾವಂತ ನಟನೂ ಹೌದು. ಈ ಪಾತ್ರಕ್ಕೆ ವಿಜಯ್‌ ಅವರೇ ಸೂಕ್ತವೆಂದು ದೀಪಕ್‌ ‘ಅವಸ್ಥಾಂತರ’ದ ಹದಿಹರೆಯದ ಯುವಕನ ಪಾತ್ರವನ್ನು ವಿಜಯ್ ಕೈಗಿಟ್ಟಿದ್ದಾರೆ. ಹೊಸಬರನ್ನು ಹುರಿದುಂಬಿಸುವ, ಹೊಸ ಪ್ರತಿಭೆಗಳ ಜತೆಗೆ ಸದಾ ಕೈಜೋಡಿಸಿಕೊಂಡೇ ಬಂದಿರುವ ವಿಜಯ್‌ ಈ ಬಾರಿಯೂ ಹೊಸ ತಂಡದೊಂದಿಗೆ ಬೆನ್ನಾಗಿ ನಿಂತಿದ್ದಾರೆ.

‘ಅವಸ್ಥಾಂತರ’ದಲ್ಲಿ ವಿಜಯ್‌ಗೆ ಇಬ್ಬರು ನಾಯಕಿಯರು. ‘ಪುಟ್ಟಗೌರಿ’ ಮತ್ತು ‘ಕನ್ನಡತಿ’ ಧಾರಾವಾಹಿಗಳ ಖ್ಯಾತಿಯ ರಂಜನಿ ರಾಘವನ್ ಹಾಗೂ ‘ಆಡುವ ಗೊಂಬೆ’ಯಲ್ಲಿ ನಟಿಸಿದ್ದ ದಿಶಾ ಕೃಷ್ಣಯ್ಯ ನಾಯಕಿಯರಾಗಿ ಬಣ್ಣ ಹಚ್ಚಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರದ ಶೀರ್ಷಿಕೆಯ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು